ರಾಮಕುಂಜ: 18ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

0


ರಾಮಕುಂಜ: ಸಾರ್ವಜನಿಕ ವರಮಹಾಲಕ್ಷ್ಮೀ ಪೂಜಾ ಸಮಿತಿ ರಾಮಕುಂಜ-ಹಳೆನೇರೆಂಕಿ ಇದರ ಆಶ್ರಯದಲ್ಲಿ 18ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಮತ್ತು ಧಾರ್ಮಿಕ ಸಭೆ ಆ.5ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.

 


ಬೆಳಿಗ್ಗೆ ಸಮಿತಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ 9 ಗಂಟೆಗೆ ಕಲಶ ಪ್ರತಿಷ್ಠೆಗೊಂಡು ಶ್ರೀ ವರಮಹಾಲಕ್ಷ್ಮೀ ಪೂಜೆ ಪ್ರಾರಂಭಗೊಂಡಿತು. ಕೃಷ್ಣಪ್ರಸಾದ್ ನೂರಿತ್ತಾಯ ಹಾಗೂ ರಾಮಕುಂಜೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಉಡುಪರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

 


ಧಾರ್ಮಿಕ ಸಭೆ:
ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮರವರು ಧಾರ್ಮಿಕ ಉಪನ್ಯಾಸ ನೀಡಿದರು. ರಾಷ್ಟ್ರ, ಸಮಾಜ ಕಟ್ಟುವ ನಿಟ್ಟಿನಲ್ಲಿ ಸಂಘಟಿತರಾಗಿ ಯೋಚನೆ ಮಾಡಬೇಕಿದೆ. ಹಿಂದೂ ಧರ್ಮ, ಸಂಸ್ಕೃತಿ, ಭಾರತ ಮಾತೆಯ ಸಂರಕ್ಷಣೆಯ ದೃಷ್ಟಿಯಿಂದ ನಾವೆಲ್ಲರೂ ಸಂಘಟಿತರಾಗಬೇಕಿದೆ. ಸಾಮೂಹಿಕ ಆರಾಧನೆಗಳಿಂದ ದೇವರು, ದೇಶ, ಧರ್ಮ, ಸಂಸ್ಕೃತಿ ರೂಪಿಸಿಕೊಳ್ಳೋಣ, ನಾವೆಲ್ಲರೂ ಒಟ್ಟಾಗಿ ಬದುಕು ಕಟ್ಟಿಕೊಳ್ಳೋಣ ಎಂದು ನ.ಸೀತಾರಾಮರವರು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ನಾರಾಯಣ ಪೂಜಾರಿ, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶೈಲಜಾ ಬಾಲಕೃಷ್ಣ ಆಳ್ವ ಗುತ್ತುಮನೆಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ 18ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಮಂಜುಳಾ ಚಂದ್ರಶೇಖರ್ ಕಲ್ಲೇರಿಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ಸಮಿತಿ ಗೌರವ ಸಲಹೆಗಾರರಾದ ರತ್ನಾವತಿ ಬಟ್ಟೋಡಿ, ಸುಶೀಲಾ ವಳೆಂಜ, ಗೌರವಾಧ್ಯಕ್ಷೆ ಪ್ರಮೀಳಾ ಶಾರದಾನಗರ, ಜೊತೆ ಕಾರ್ಯದರ್ಶಿ ವಸಂತಿ ಕಣೆಮಾರುರವರು ಅತಿಥಿಗಳನ್ನು ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ವಿಮಲಕರುಣಾಕರ ಪೂಜಾರಿ ವರದಿ ಮಂಡಿಸಿದರು. ದೇವಕಿಶೇಖರ ಗೌಡ ಹಿರಿಂಜ ವಂದಿಸಿದರು. ಕೋಶಾಧಿಕಾರಿ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಕಡಬ ತಾ.ಪಂ.ಮಾಜಿ ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ರಾಮಕುಂಜ ಗ್ರಾ.ಪಂ.ಸದಸ್ಯ ಸೂರಪ್ಪ ಕುಲಾಲ್, ಲಕ್ಷ್ಮೀನಾರಾಯಣ ರಾವ್ ಆತೂರು, ಪೂವಪ್ಪ ಗೌಡ ಸಂಪ್ಯಾಡಿ, ಶೇಖರ ಗೌಡ ಕಟ್ಟಪುಣಿ, ವೀರೇಂದ್ರ ಪಾಲೆತ್ತಡ್ಡ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಮಿತಿ ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here