ಅಂಬಿಕಾ ವಿದ್ಯಾಲಯದಲ್ಲಿ ಯಕ್ಷಗಾನ, ಸಂಗೀತ, ಭರತನಾಟ್ಯ ತರಗತಿಗಳ ಉದ್ಘಾಟನೆ

0

ಪುತ್ತೂರು: ದೇವರನ್ನು ಒಲಿಸುವ ಕಲೆಗಳೇ ಯಕ್ಷಗಾನ. ಇದು ಮಾತುಗಾರಿಕೆ ವೇಷಭೂಷಣ ನೃತ್ಯ ಹಾಗೂ ಹಾಡುಗಾರಿಕೆಯನ್ನು ಒಳಗೊಂಡಿದ್ದು ಹಿಮ್ಮೇಳ ಪ್ರಮುಖವಾಗಿರುತ್ತದೆ. ಯಕ್ಷಗಾನ, ಸಂಗೀತ, ಭರತನಾಟ್ಯ ಈ ಮೂರರಲ್ಲಿ ಇರುವ ಉದ್ದೇಶ ಒಂದೇ ಆಗಿದೆ, ಅದು ದೇವತಾ ಆರಾಧನೆ. ಯಕ್ಷಗಾನ ಎಂಬುವುದು ಆರಾಧನಾ ಕಲೆ ಇದು ಮನರಂಜನೆ ಅಲ್ಲ ಮನ ಪರಿವರ್ತನಾ ಕಲೆ ಎಂದು ಬೊಳುವಾರು ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಭಾಸ್ಕರ್ ಭಾರ್ಯ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಯಲ್ಲಿ ಶೈಕ್ಷಣಿಕ ವರ್ಷ 2022-23 ರ ಸಂಗೀತ, ಭರತನಾಟ್ಯ ಹಾಗೂ ಯಕ್ಷಗಾನ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನಾವು ಭಾರತೀಯರು ಎಂದು ಗುರುತಿಸಿಕೊಳ್ಳಬೇಕಾದರೆ ಭಾರತದ ಒಂದು ಕಲೆಯ ಪರಿಚಯವಾದರೂ ನಮಗೆ ಇರಬೇಕು. ಇಡೀ ವಿಶ್ವಕ್ಕೆ ಈ ಭಾರತೀಯ ಕಲೆಗಳನ್ನು ಪರಿಚಯಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಹಾಗಾಗಿ ಮಕ್ಕಳು ಭಾರತೀಯ ಕಲೆಗಳ ರಾಯಭಾರಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಪ್ರಾಂಶುಪಾಲೆ ಮಾಲತಿ ಡಿ. ಭಟ್, ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್, ಸಂಗೀತ ಗುರುಗಳಾದ ವಿದುಷಿ ಶಿಲ್ಪಾ, ಯಕ್ಷಗಾನ ಗುರುಗ ಬಾಲಕೃಷ್ಣ ಪೂಜಾರಿ ಹಾಗೂ ನೃತ್ಯ ಗುರುಗಳಾದ ಅಂಬಿಕಾ ವಿದ್ಯಾಲಯದ ಕನ್ನಡ ಶಿಕ್ಷಕಿ ವಿದುಷಿ ಪ್ರಿಯಾಶ್ರೀ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಕ್ಷಾ ಪ್ರಾರ್ಥಿಸಿ, ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಕನ್ನಡ ಉಪನ್ಯಾಸಕ ಹಾಗೂ ಯಕ್ಷಗಾನ ಸಂಯೋಜಕ ಶಿಕ್ಷಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here