ಕೌಕ್ರಾಡಿ ಗ್ರಾ.ಪಂ.: ’ಹರ್ ಘರ್ ತಿರಂಗಾ’ ಅಭಿಯಾನ ಪೂರ್ವಭಾವಿ ಸಭೆ

0

ನೆಲ್ಯಾಡಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿರುವ ’ಹರ್ ಘರ್ ತಿರಂಗಾ’ ಅಭಿಯಾನ ಹಾಗೂ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆ ಕೌಕ್ರಾಡಿ ಗ್ರಾಮ ಪಂಚಾಯತ್‌ನಲ್ಲಿ ಆ.11ರಂದು ಬೆಳಿಗ್ಗೆ ನಡೆಯಿತು.

ಗ್ರಾ.ಪಂ.  ಅಧ್ಯಕ್ಷೆ ವನಿತಾ ಎಂ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಮಹೇಶ್ ಜಿ.ಎನ್.  ಮಾಹಿತಿ ನೀಡಿ, ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಾಟಕ್ಕೆ ನಿರ್ದೇಶನ ಬಂದಿದೆ. ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರತಿ ಮನೆಯಲ್ಲೂ ಆ.13ರಿಂದ 15ರ ತನಕ ರಾಷ್ಟ್ರ ಧ್ವಜ ಹಾರಾಟ ಸಂಬಂಧ ಪ್ರತಿ ವಾರ್ಡ್‌ನ ಸದಸ್ಯರು ಜವಾಬ್ದಾರಿ ತೆಗೆದುಕೊಳ್ಳಬೇಕು. ಆ ವಾರ್ಡ್‌ನ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳೂ ಸಹಕಾರ ನೀಡಲಿದ್ದಾರೆ ಎಂದರು. ಸುಮಾರು 500ರಷ್ಟು ರಾಷ್ಟ್ರ ಧ್ವಜ ಗ್ರಾಮ ಪಂಚಾಯತ್‌ಗೆ ಬಂದಿದೆ. ಇದನ್ನು ವಾರ್ಡ್‌ವಾರು ಹಂಚಿಕೆ ಮಾಡಲಾಗುವುದು. ಧ್ವಜ ಹಾರಾಟದ ಸಂದರ್ಭದಲ್ಲಿ ಯಾವುದೇ ಲೋಪ ಆಗದಂತೆ ಸದಸ್ಯರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಪಿಡಿಒ ಮಹೇಶ್‌ರವರು ಹೇಳಿದರು.

ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಗ್ರಾ.ಪಂ. ಮಾಜಿ ಅಧ್ಯಕ್ಷ ಇಬ್ರಾಹಿಂ ಎಂ.ಕೆ., ಗ್ರಾಮಸ್ಥ ಸದಾನಂದ ಪಿ.,ರವರು ಸಲಹೆ ಸೂಚನೆ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಜಿ.ಭವಾನಿ, ಸದಸ್ಯರುಗಳಾದ ಮಹೇಶ್ ಪಿ., ಜನಾರ್ದನ ಎಂ., ಲೋಕೇಶ್ ಬಿ., ಸವಿತಾ ಎಸ್., ಸುಧಾಕರ ಜಿ., ಹನೀಫ್ ಎಂ., ಶೈಲ, ಉದಯಕುಮಾರ್ ಗೌಡ, ರತ್ನಾವತಿ ಎಸ್., ಡೈಸಿ ವರ್ಗೀಸ್, ಕುರಿಯಾಕೋಸ್ ಟಿ.ಎಂ.ಯಾನೆ ರೋಯಿ ಟಿ.ಎಂ., ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಪಿಡಿಒ ಮಹೇಶ್ ಜಿ.ಎನ್.,ಸ್ವಾಗತಿಸಿ, ಸದಸ್ಯ ಲೋಕೇಶ್ ಬಾಣಜಾಲು ವಂದಿಸಿದರು.

LEAVE A REPLY

Please enter your comment!
Please enter your name here