ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ತನಿಖಾ ವರದಿ ಎನ್‌ಐಎಗೆ ಹಸ್ತಾಂತರ

0


ಪುತ್ತೂರು:ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಇದುವರೆಗಿನ ಎಲ್ಲಾ ತನಿಖಾ ವರದಿಯನ್ನು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯಿಂದ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ಆ.16ರಂದು ಹಸ್ತಾತರಿಸಲಾಗಿದೆ.
ಕಳೆದ 20 ದಿನಗಳಿಂದ ಈ ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿ ಆಲೋಕ್ ಕುಮಾರ್ ನೇತೃತ್ವದಲ್ಲಿ ಹಾಗೂ ದ.ಕ.ಜಿಲ್ಲಾ ಎಸ್‌ಪಿ ಋಷಿಕೇಶ್ ಸೋನವಾಣೆ, ಪ್ರಕರಣದ ತನಿಖಾಧಿಕಾರಿಯಾಗಿರುವ ಪುತ್ತೂರು ಡಿವೈಎಸ್‌ಪಿ ಡಾ.ಗಾನ ಪಿ ಕುಮಾರ್‌ರವರ ತಂಡ ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.ಪ್ರಮುಖ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ,ನ್ಯಾಯಾಲಯ ಆರೋಪಿಗಳಿಗೆ ಆ.24ರವರೆಗೆ ನ್ಯಾಯಾಂಗ ಬಂಧನದ ಆದೇಶವನ್ನು ನೀಡಿದ ಬಳಿಕ ಈ ಎಲ್ಲಾ ತನಿಖೆಗಳ ವರದಿಯನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.ಇನ್ನು ಮುಂದಿನ ವಿಚಾರಣೆಗಳು ಬೆಂಗಳೂರಿನಲ್ಲಿ ಎನ್‌ಐಎಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದ್ದು ಕೇಂದ್ರ ಮಟ್ಟದ ಅಧಿಕಾರಿಗಳು ಮುಂದಿನ ತನಿಖೆಯನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.ಜು.26ರಂದು ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದರು.ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಈ ನಡುವೆ, ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿಕೊಡಲಾಗಿದ್ದು ಈಗಾಗಲೇ ಎನ್‌ಐಎ ಎಫ್‌ಐಆರ್ ದಾಖಲಿಸಿ ನ್ಯಾಯಾಲಕ್ಕೆ ಸಲ್ಲಿಸಿದೆ.ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ತನಿಖಾ ವರದಿಯನ್ನು ದಾಖಲೆ ಸಮೇತವಾಗಿ ಪೊಲೀಸರು ಎನ್‌ಐಎಗೆ ಹಸ್ತಾಂತರಿಸಿದ್ದಾರೆ.

LEAVE A REPLY

Please enter your comment!
Please enter your name here