ಬೆಟ್ಟಂಪಾಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಆ. 23 ರಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಂಗನಾಥ ರೈ ಗುತ್ತು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ‘ಬೆಟ್ಟಂಪಾಡಿ ಕಾಲೇಜಿಗೆ 30 ವರ್ಷಗಳ ವೈಶಿಷ್ಟ್ಯತೆ ಇದೆ. ಗ್ರಾಮೀಣ ಭಾಗದಲ್ಲಿ ನಮ್ಮ ಕಾಲೇಜಿನ ಸಾಧನೆ, ವ್ಯವಸ್ಥೆ, ಶಿಸ್ತು ಬೇರೆ ಕಾಲೇಜುಗಳಿಗೆ ಹೋಲಿಸಿದಾಗ ಅತ್ಯಂತ ಉತ್ಜೃಷ್ಟ ಮಟ್ಟದಲ್ಲಿದೆ. ಇಲ್ಲಿನ ಉಪನ್ಯಾಸಕರ ತಂಡವೂ ಅತ್ಯಂತ ಹುರುಪಿನಿಂದ ಕೆಲಸ ಮಾಡುತ್ತಿದೆ’ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕಾರ್ಕಳ ಡಾ. ಮಂಜುನಾಥ್ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಂಶುಪಾಲ ಶ್ರೀವರ್ಮ ಅಜ್ರಿಯವರು ‘ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಕೌಶಲ್ಯವನ್ನೂ ರೂಢಿಸಿಕೊಳ್ಳಲು ಒಂದಷ್ಟು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಕೊರೊನಾ ಬಾಧಿತ ಅವಧಿಯಲ್ಲಿ ಆಗಿರುವ ನೆಗೆಟಿವ್ ವಾತಾವರಣವನ್ನು ಪಾಸಿಟಿವ್ ಆಗಿ ಪರಿವರ್ತಿಸೋಣ ಎಂದು ಹೇಳಿ ಬೆಟ್ಟಂಪಾಡಿ ಕಾಲೇಜಿನ ಚಟುವಟಿಕೆಗಳನ್ನು ಶ್ಲಾಘಿಸಿದರು.
ದತ್ತಿನಿಧಿ ಪುರಸ್ಕಾರ, ಕ್ರೀಡಾ ಮತ್ತು ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಕಾಲೇಜಿನ ಸಾಧನೆಗಳ ವರದಿ ಮಂಡಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮಾರಣ್ಣ ಉಪಸ್ಥಿತರಿದ್ದರು.