- ಸಭೆ ಬಹಿಷ್ಕರಿಸಿ ಹೊರ ನಡೆದ ಎಸ್.ಡಿ.ಎಂ.ಸಿ ಅಧ್ಯಕ್ಷ…!
ಪುತ್ತೂರು: ಮುಕ್ವೆ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಆ.೨೫ರಂದು ನಡೆದ ನರಿಮೊಗರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ `ಮಕ್ಕಳ ಹಬ್ಬ’ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಬೇಕಾಗಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಸಭೆ ಪ್ರಾರಂಭಗೊಳ್ಳುತ್ತಿದ್ದಂತೆ ಸಭೆ ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆದಿದೆ.
ಎಸ್‌ಡಿಎಂಸಿ ಅಧ್ಯಕ್ಷರಾದ ಅಬ್ದುಲ್ ಸಮೀರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಸಭಾ ವೇದಿಕೆಯಲ್ಲಿ ಗಣ್ಯರು ಆಸೀನರಾಗಿದ್ದರು. ಶಿಕ್ಷಕಿ ಸ್ವಾಗತ ಮಾಡುತ್ತಿದ್ದ ಸಂದರ್ಭದಲ್ಲಿ ಮೈಕ್ ಬಳಿ ಬಂದ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಸಮೀರ್ ಅವರು ನಾನು ಇಂದಿನ ಸಭೆಯ ಅಧ್ಯಕ್ಷತೆ ವಹಿಸುವುದಿಲ್ಲ. ಇಂದು ಈ ಶಾಲೆಯಲ್ಲಿ ಆಯೋಜನೆಯಾದ ಕಾರ್ಯಕ್ರಮ ಎಸ್‌ಡಿಎಂಸಿಯ ಗಮನಕ್ಕೆ ತಾರದೇ ಆಯೋಜಿಸಿದ್ದಾಗಿದೆ. ನಾನು ಈ ಶಾಲೆಯ ಅಭಿವೃದ್ಧಿಗೆ ಸಿದ್ದನಿದ್ದೇನೆ ಆದರೆ ಇಂದಿನ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಭೆಯಿಂದ ಹೊರನಡೆದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು.ಈ ಬಗ್ಗೆ ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್ ಮಾತನಾಡಿ ಎಸ್‌ಡಿಎಂಸಿ ಅಧ್ಯಕ್ಷರು ಸಭೆಯಿಂದ ಹೋಗಿರುವುದು ಬೇಸರ ತಂದಿದೆ. ಶಾಲಾ ಶಿಕ್ಷಕರು ಮತ್ತು ಎಸ್‌ಡಿಎಂಸಿಯವರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ಎಸ್‌ಡಿಎಂಸಿಯ ಪಾತ್ರ ಮಹತ್ವವಾದದ್ದು ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಂತಹ ಬೆಳವಣಿಗೆ ನಡೆಯಬಾರದು ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಮಟ್ಟದಲ್ಲಿ ಮುಕ್ವೆ ಶಾಲೆ ಗುರುತಿಸಿಕೊಳ್ಳಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಕ್ಕೆ ಮುನ್ನಡೆಯಬೇಕು ಎಂದು ಸುಧಾಕರ ಕುಲಾಲ್ ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ಕಾರ್ಮೇಲಸ್ ಅಂದ್ರಾದೆ ಮಾತನಾಡಿ ಇಲಾಖೆಯ ಆದೇಶದಂತೆ ಸಿಆರ್‌ಪಿಯವರು ಕೇಳಿಕೊಂಡಾಗ ನಮ್ಮ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಆಯೋಜನೆಗೆ ಒಪ್ಪಿಕೊಂಡಿದ್ದೆವು. ಶಿಕ್ಷಕರ, ಎಸ್‌ಡಿಎಂಸಿಯವರ ಸಭೆ ಕರೆದು ಎಲ್ಲರ ಸಹಕಾರ ಪಡೆದು ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಎಸ್‌ಡಿಎಂಸಿ ಅಧ್ಯಕ್ಷರು ನಿನ್ನೆಯ ವರೆಗೂ ಸಂಪರ್ಕದಲ್ಲಿದ್ದರು. ಇವತ್ತು ಅವರು ಹೇಳಿರುವುದು ನನಗೆ ಅರ್ಥವಾಗಿಲ್ಲ ಎಂದು ಹೇಳಿದರು.