421.40 ಕೋಟಿ ರೂ.ವ್ಯವಹಾರ; 1.24 ಕೋಟಿ ರೂ.ನಿವ್ವಳ ಲಾಭ, ಶೇ.9.5 ಡಿವಿಡೆಂಡ್ ಘೋಷಣೆ
ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ 63ನೇ ವರ್ಷದ ವಾರ್ಷಿಕ ಮಹಾಸಭೆ ಆ.25ರಂದು ಸಂಘದ ಪ್ರಧಾನ ಕಚೇರಿಯ ಕಲ್ಪವೃಕ್ಷ ಸಹಕಾರಿ ಸೌಧದ ‘ಕಾಮಧೇನು’ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆಯವರು ಸ್ವಾಗತಿಸಿ ಮಾತನಾಡಿ, ಸಂಘವು 25.87 ಕೋಟಿ ರೂ.ಠೇವಣಿ ಹೊಂದಿದ್ದು ವರದಿ ವರ್ಷದಲ್ಲಿ 64.89 ಕೋಟಿ ರೂ.,ಸಾಲ ಹೊಂದಿರುತ್ತದೆ. ವಿತರಿಸಿದ ಸಾಲದಲ್ಲಿ ಶೇ.99.54ಕ್ಕೂ ಮೇಲ್ಪಟ್ಟು ವಸೂಲಿ ಆಗಿರುತ್ತದೆ. 2021-22ನೇ ಸಾಲಿನಲ್ಲಿ ಸಂಘವು ಒಟ್ಟು 421.40 ಕೋಟಿ ರೂ., ವ್ಯವಹಾರ ಮಾಡಿದ್ದು 1.24 ಕೋಟಿ ರೂ.,ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರ ಬೇಡಿಕೆಯಂತೆ ಈ ವರ್ಷ 9.5 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.
ಸಂಘಕ್ಕೆ ಆರ್ಥಿಕವಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದ್ದರೂ ಕಾರ್ಯಕ್ಷೇತ್ರದ ಜನರಿಗೆ ಸಮರ್ಪಕವಾಗಿ ಪಡಿತರ ಸಾಮಾಗ್ರಿ ವಿತರಿಸಲಾಗುತ್ತಿದೆ. ರಾಸಾಯನಿಕ ಗೊಬ್ಬರ ಕಾರ್ಯಕ್ಷೇತ್ರದ ಎಲ್ಲಾ ಕೃಷಿಕರಿಗೆ ಸಿಗುವಂತೆ ಮಾಡಲು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ. ಸಂಘದ ಕೇಂದ್ರ ಕಚೇರಿ ಮತ್ತು ಗೋಳಿತ್ತೊಟ್ಟು ಶಾಖೆಯು ಸ್ವಂತ ಕಟ್ಟಡವನ್ನು ಹೊಂದಿದೆ. ಶಿರಾಡಿ ಶಾಖೆಯು ಬಾಡಿಗೆ ಕಟ್ಟಡದಲ್ಲಿ ವ್ಯವಹಾರ ನಡೆಸುತ್ತಿದ್ದು ಇದೀಗ ನಿವೇಶನ ದೊರೆತಿದ್ದು ಪ್ರಸ್ತುತ ವರ್ಷವೇ ಕಟ್ಟಡ ನಿರ್ಮಾಣ ಮಾಡುವ ಯೋಚನೆಯೂ ಇದೆ. ಸರಕಾರದ ಬೆಳೆ ವಿಮೆ ಯೋಜನೆಯ ಪ್ರಯೋಜನವನ್ನು ಎಲ್ಲಾ ಸದಸ್ಯರು ಪಡೆದುಕೊಳ್ಳಬೇಕೆಂದು ಹೇಳಿದ ಉಮೇಶ್ ಶೆಟ್ಟಿಯವರು, ಉತ್ತಮ ವ್ಯವಹಾರಕ್ಕಾಗಿ ಸಂಘವು ಕಳೆದ 4 ವರ್ಷಗಳಿಂದ ಡಿಸಿಸಿ ಬ್ಯಾಂಕ್‌ನಿಂದ ವಿಶೇಷ ಪ್ರೋತ್ಸಾಹ ಪ್ರಶಸ್ತಿ ಪಡೆದುಕೊಳ್ಳುತ್ತಿದೆ. 2020ನೇ ಸಾಲಿನಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದಲ್ಲಿ ಸಂಘಕ್ಕೆ ಜಿಲ್ಲೆಯಲ್ಲಿಯೇ ಉತ್ತಮ ಕೃಷಿ ಪತ್ತಿನ ಸಹಕಾರ ಸಂಘ ಪ್ರಶಸ್ತಿಯನ್ನು ಸಹಕಾರ ಇಲಾಖೆ ನೀಡಿ ಗೌರವಿಸಿದೆ. ಕಳೆದ 28 ವರ್ಷಗಳಿಂದ ಸಂಘದ ಅಧ್ಯಕ್ಷನಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕೃಷಿಯೇತರ ಸಾಲಮಿತಿ ಹೆಚ್ಚಿಸಿ:
ಸೂಕ್ತ ಭದ್ರತೆ ಪಡೆದುಕೊಂಡು ಸಂಘದ ಸದಸ್ಯರಿಗೆ ಮದುವೆ ಸೇರಿದಂತೆ ಇನ್ನಿತರ ಕೃಷಿಯೇತರ ಉದ್ದೇಶಗಳಿಗೆ ಸಾಲ ನೀಡಬೇಕು. ಈಗಿರುವ ಸಾಲದ ಮಿತಿ ಹೆಚ್ಚಳಗೊಳಿಸಬೇಕು. ಇದರಿಂದ ಸಂಘದಲ್ಲಿರುವ ಹೆಚ್ಚುವರಿ ಠೇವಣಿಯೂ ಸದುಪಯೋಗ ಆಗಿ ಸಂಘಕ್ಕೆ ಲಾಭ ಆಗಲಿದೆ. ಸದಸ್ಯರಿಗೂ ಅನುಕೂಲವಾಗಲಿದೆ ಎಂದು ಸಂಘದ ಸದಸ್ಯ, ಕಾನೂನು ಸಲಹೆಗಾರರೂ ಆಗಿರುವ ನೋಟರಿ ವಕೀಲ ಶಿವಪ್ರಸಾದ್‌ರವರು ಹೇಳಿದರು.
ಡಿವಿಡೆಂಡ್ ಹೆಚ್ಚಳಕ್ಕೆ ಬೇಡಿಕೆ:
ಸದಸ್ಯ ಜನಾರ್ದನ ಬಾಣಜಾಲು ಅವರು ಮಾತನಾಡಿ, ಸಂಘ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಲಾಭಗಳಿಸಿದೆ. ಆದ್ದರಿಂದ ಶೇ.10ರಷ್ಟು ಡಿವಿಡೆಂಡ್ ನೀಡಬೇಕೆಂದು ಹೇಳಿದರು. ಸದಸ್ಯ ಸೆಬಾಸ್ಟಿನ್ ಕೆ.ಉದನೆ ಅವರೂ ಡಿವಿಡೆಂಡ್ ಹೆಚ್ಚಳ ಮಾಡುವಂತೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಉಮೇಶ್ ಶೆಟ್ಟಿಯವರು, ಶಿರಾಡಿ ಶಾಖೆಗೆ 12 ಸೆಂಟ್ಸ್ ಜಾಗ ಖರೀದಿಸಲಾಗಿದೆ. ಇಲ್ಲಿ ಈ ವರ್ಷವೇ ಕಟ್ಟಡ ನಿರ್ಮಾಣದ ಗುರಿ ಇಟ್ಟುಕೊಳ್ಳಲಾಗಿದೆ. ಆದ್ದರಿಂದ ಶೇ.9 ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಆದರೂ ಸದಸ್ಯರ ಬೇಡಿಕೆಯಂತೆ ಈ ವರ್ಷ ಶೇ. 9.5ರಷ್ಟು ಡಿವಿಡೆಂಡ್ ನೀಡುವುದಾಗಿ ಹೇಳಿದರು.
ಎನ್‌ಒಸಿಯಿಂದ ರಿಯಾಯಿತಿ ನೀಡಿ:
ಸಂಘದಿಂದ ಸದಸ್ಯರು ಸಾಲ ಪಡೆಯುವ ವೇಳೆ ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಎನ್‌ಒಸಿ ನೀಡಬೇಕಾಗುತ್ತದೆ. ಇದಕ್ಕೆ ಬ್ಯಾಂಕ್‌ಗೆ 150 ರೂ.,ಶುಲ್ಕವೂ ಪಾವತಿಸಬೇಕಾಗುತ್ತದೆ. ಆರ್‌ಟಿಸಿಯಲ್ಲಿಯೇ ಸಾಲದ ವಿವರ ದಾಖಲಾಗಿರುತ್ತದೆ. ಇಸಿಯಲ್ಲಿಯೂ ಸಾಲದ ವಿವರ ಇರುತ್ತದೆ. ಆದ್ದರಿಂದ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್‌ಗಳ ಎನ್‌ಒಸಿ ಕೇಳಬಾರದು ಎಂದು ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಮನವಿ ಮಾಡಿದರು. ಆರ್‌ಟಿಸಿಗಳಲ್ಲಿ ಸಾಲದ ವಿವರ ದಾಖಲಾಗಿರುವುದಿಲ್ಲ, ಎನ್‌ಒಸಿ ಇಲ್ಲದೇ ಇದ್ದರೆ ಸಮಸ್ಯೆಯಾಗಲಿದೆ ಎಂದು ಅಧ್ಯಕ್ಷ ಉಮೇಶ್ ಶೆಟ್ಟಿಯವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಘದ ಕಾನೂನು ಸಲಹೆಗಾರರೂ ಆದ ಶಿವಪ್ರಸಾದ್‌ರವರು, ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್‌ಗಳ ಎನ್‌ಒಸಿ ಅವಶ್ಯಕವಾಗಿ ಬೇಕಾಗುತ್ತದೆ. ಇದರ ಬದಲು ಶೀಘ್ರ ಎನ್‌ಒಸಿ ನೀಡುವಂತೆ ಹಾಗೂ ಇದಕ್ಕೆ ವಿಧಿಸುವ ಶುಲ್ಕ ಕಡಿಮೆ ಮಾಡುವಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮನವಿ ಮಾಡುವುದು ಒಳ್ಳೆಯದು ಎಂದು ಅಭಿಪ್ರಾಯಿಸಿದರು. ಇದಕ್ಕೆ ಇಸ್ಮಾಯಿಲ್‌ರವರು ಸಹಮತ ಸೂಚಿಸಿ, ಈ ಬಗ್ಗೆ ಆಡಳಿತ ಮಂಡಳಿ ಗಮನಹರಿಸುವಂತೆ ಮನವಿ ಮಾಡಿದರು. ಸಂಘದ ಸದಸ್ಯರೂ ಆಗಿರುವ ಯೂನಿಯನ್ ಬ್ಯಾಂಕ್‌ನ ನಿವೃತ್ತ ಮೇನೇಜರ್ ರಾಮಚಂದ್ರರವರು ಈ ಬಗ್ಗೆ ಪೂರಕವಾಗಿ ಮಾತನಾಡಿದರು.
ವಾಹನ ಸಾಲದ ಅವಧಿ ವಿಸ್ತರಿಸಿ:
ವಾಹನ ಸಾಲದ ಕಂತು ಪಾವತಿ ಅವಧಿ ಈಗ 5 ವರ್ಷ ಇದ್ದು ಈ ಅವಧಿಯನ್ನು ಹೆಚ್ಚಿಸಬೇಕೆಂದು ಇಸ್ಮಾಯಿಲ್ ನೆಲ್ಯಾಡಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಉಮೇಶ್ ಶೆಟ್ಟಿಯವರು, ಈ ಬಗ್ಗೆ ಬೈಲಾ ತಿದ್ದುಪಡಿ ಮಾಡಬೇಕಾಗುತ್ತದೆ. ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಪಡೆಯುವ ಸಾಲಕ್ಕೆ ವಿಮೆ ಇದೆ. ಅದೇ ಮಾದರಿಯಲ್ಲಿ ಸಹಕಾರಿ ಸಂಘದಿಂದ ಪಡೆಯುವ ಸಾಲಗಳಿಗೂ ವಿಮೆ ಮಾಡಬೇಕೆಂದು ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಉಮೇಶ್ ಶೆಟ್ಟಿಯವರು, ಬೆಳೆವಿಮೆ, ‘ ಪಾಯಸ್’ ಎಂಬ ಅಪಘಾತ ವಿಮೆ ಜಾರಿಯಲ್ಲಿದೆ. ಸದಸ್ಯರು ಪ್ರೀಮಿಯಂ ಮೊತ್ತ ಪಾವತಿಸಲು ಸಿದ್ಧರಿದ್ದಲ್ಲಿ ಸಾಲದ ಮೊತ್ತಕ್ಕೆ ವಿಮೆ ಮಾಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂದರು.
ಧ್ವಜಕಟ್ಟೆ, ಧ್ವಜಸ್ತಂಭ ಅಳವಡಿಸಿ:
ಸಂಘದ ಆವರಣದಲ್ಲಿ ಶಾಶ್ವತ ಧ್ವಜಕಟ್ಟೆ, ಧ್ವಜಸ್ತಂಭ ಮಾಡಬೇಕೆಂದು ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈಯವರು, ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಸಂಘದ ಸಭಾಂಗಣಕ್ಕೆ ಲಿಫ್ಟ್, ಇಲ್ಲವೇ ವಾಹನದಲ್ಲಿ ಬರಲು ಅನುಕೂಲವಾಗುವಂತಹ ವ್ಯವಸ್ಥೆ ಮಾಡಬೇಕೆಂದು ರತ್ನಾಕರ ರೈ ಕೊಲ್ಯೊಟ್ಟು ಹೇಳಿದರು.
ಕೊಣಾಲುನಲ್ಲಿ ಶಾಖೆ ಆರಂಭಿಸಿ:
ಕೊಣಾಲು ಗ್ರಾಮದಲ್ಲಿ ಸಂಘದ ಶಾಖೆ ತೆರೆಯಬೇಕೆಂದು ಸದಸ್ಯ ಡೊಂಬಯ್ಯ ಗೌಡ ಎಣ್ಣೆತ್ತೋಡಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಶಾಖೆ ತೆರೆಯಲು ಸಿಬ್ಬಂದಿ, ಕಟ್ಟಡ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಬೇಕಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಇದು ಕಷ್ಟ. ಹಂತ ಹಂತವಾಗಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸಿಬ್ಬಂದಿ ನೇಮಕಾತಿ ವೇಳೆ ಮಹಿಳೆಯರನ್ನೂ ನೇಮಕ ಮಾಡಿಕೊಳ್ಳಬೇಕೆಂದು ಸದಸ್ಯ ಕುಶಾಲಪ್ಪ ಗೌಡ ಅನಿಲ ಒತ್ತಾಯಿಸಿದರು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜೊತೆಗೆ ಸಂಘದ ವ್ಯಾಪ್ತಿಯಲ್ಲಿರುವ ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಗಳನ್ನೂ ಗೌರವಿಸಬೇಕು ಎಂದು ಸದಸ್ಯ ವರ್ಗೀಸ್ ಅಬ್ರಹಾಂ ಹೇಳಿದರು.
ಕೃಷಿ ಅಧಿಕಾರಿ ಭರಮಣ್ಣವರ, ಕ್ಯಾಂಪ್ಕೋ ಅಡಿಕೆ ವಿಭಾಗದ ಮಾರುಕಟ್ಟೆ ಅಧಿಕಾರಿ ಜನಾರ್ದನ ಕದ್ರರವರು ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಕಮಲಾಕ್ಷ ಗೌಡ, ನಿರ್ದೇಶಕರಾದ ಜಯಾನಂದ ಪಿ.,ಬಾಲಕೃಷ್ಣ ಬಿ.,ಸರ್ವೋತ್ತಮ ಗೌಡ, ಪ್ರಶಾಂತ ರೈ, ಸುದರ್ಶನ್, ಉಷಾ ಅಂಚನ್, ಸುಲೋಚನಾ ಡಿ., ಅಣ್ಣು ಬಿ., ಸುಮಿತ್ರಾ, ಗುರುರಾಜ ಭಟ್, ವಲಯ ಮೇಲ್ವಿಚಾರಕ ವಸಂತ ಯಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈಯವರು ವರದಿ ವಾಚಿಸಿದರು. ನಿರ್ದೇಶಕ ಬಾಲಕೃಷ್ಣ ಬಾಣಜಾಲು ವಂದಿಸಿದರು. ನಿರ್ದೇಶಕ ಜಯಾನಂದ ಬಂಟ್ರಿಯಾಲ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಮೇನೇಜರ್‌ಗಳಾದ ಪಿ.ಜೆ.ಸೆಬಾಸ್ಟಿನ್, ಪಿ.ರತ್ನಾಕರ, ರಮೇಶ ನಾಯ್ಕ, ಸಿಬ್ಬಂದಿಗಳಾದ ಯಂ.ಟಿ.ಮಹೇಶ, ಅನಿಶ್ ಕೆ.ಜೆ., ಸಂದೀಪ್ ಕುಮಾರ್, ಅಶೋಕ ಎಸ್., ಮುಕುಂದ ಪ್ರಸಾದ್ ಎಸ್., ರೋಶನ್ ಕುಮಾರ್ ಬಿ.ಜೆ., ಪಿ.ನಾಗೇಶ, ತಾರಾನಾಥ, ಪ್ರಮೋದ್, ಪಿಗ್ಮಿ ಸಂಗ್ರಾಹಕ ರಘುನಾಥ್‌ರವರು ಸಹಕರಿಸಿದರು.
ಸನ್ಮಾನ:
ಕೌಕ್ರಾಡಿ ಗ್ರಾಮದ ಕುಂಡಡ್ಕ ನಿವಾಸಿ, ಸಂಘದ ನಿರ್ದೇಶಕಿಯಾಗಿರುವ ಉಷಾ ಅಂಚನ್ ಅವರ ಪುತ್ರಿ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ರಕ್ಷಾ ಅಂಚನ್ ಹಾಗೂ ಸಂಘದ ಸದಸ್ಯ ರತ್ನಾಕರ ಶೆಟ್ಟಿ ಕೊಲ್ಯೋಟ್ಟು ಅವರ ಪುತ್ರ, ಮೂಡಬಿದ್ರೆ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಆದರ್ಶ ಶೆಟ್ಟಿ ಅವರನ್ನು ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ರಕ್ಷಾ ಅಂಚನ್‌ರವರಿಗೆ ಶಾಲುಹಾಕಿ, ಸ್ಮರಣಿಕೆ, ಫಲತಾಂಬೂಲ ನೀಡಿ ಗೌರವಿಸಲಾಯಿತು. ಆದರ್ಶ ಶೆಟ್ಟಿಯವರ ಪರವಾಗಿ ಅವರ ತಂದೆ ರತ್ನಾಕರ ಶೆಟ್ಟಿಯವರು ಸನ್ಮಾನ ಸ್ವೀಕರಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈಯವರು ಸನ್ಮಾನಿತರನ್ನು ಪರಿಚಯಿಸಿದರು.
ವಿದ್ಯಾರ್ಥಿಗಳಿಗೆ ಸ್ಮರಣಿಕೆ, ನಗದು ಪುರಸ್ಕಾರ:
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಆನ್‌ಮರಿಯಾ ಜೋಸೆಫ್ ಶಿರಾಡಿ, ಸಮಿತ್ ಬಿ.ಎ.ಬೊಮಿತಡ್ಡ, ಶ್ರೀರಕ್ಷಾ ಪಟ್ಟೆ ದೋಂತಿಲ, ರಕ್ಷಿತಾ ಎನ್ ಕೆರ್ನಡ್ಕ, ಹಿತೇಶ್ ಆರ್.ಶೆಟ್ಟಿ ಬೀದಿ, ಅನ್ವಿಲ್ ಬಿಜುಜೋನ್ ಅಡ್ಡಹೊಳೆ, ಕೀರ್ತನಾ ವಿ.ಎಸ್. ನಿಡ್ಯಡ್ಕ, ಲಿಖಿತಾ ಮಿಯಾಳ ಕೌಕ್ರಾಡಿ, ದೀಪ್ತಿಮೋಹನ್ ಪಿ. ಶಿರಾಡಿ, ದೀಪ್ತಿ ಡಿ.ಎಸ್.ಡೆಬ್ಬೇಲಿ ಕೊಣಾಲು, ಕೀರ್ತಿ ಪಿ.ಪಂಜಿಗದ್ದೆ ಕೌಕ್ರಾಡಿ, ದಿವ್ಯಾಮೋಹನ್ ಪಿ. ಶಿರಾಡಿ, ಆದರ್ಶ ಶೆಟ್ಟಿ ಕೊಲ್ಯೋಟ್ಟು ಅವರಿಗೆ ಸ್ಮರಣಿಕೆ, ನಗದು ನೀಡಿ ಪುರಸ್ಕರಿಸಲಾಯಿತು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಕ್ಷಾ ಪರಂತಮೂಲೆ, ದ್ವಿತೀಯ ಸ್ಥಾನ ಪಡೆದ ದೀಕ್ಷಾ ಪಡ್ಪಗುಡ್ಬೆ, ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಲೀನಾ ಕೆ.ರಂಜನ್ ಕುಂಡಡ್ಕ, ದ್ವಿತೀಯ ಸ್ಥಾನ ಪಡೆದ ಶ್ರೇಯಾಸಂತೋಷ್ ಸೆಬಾಸ್ಟಿನ್ ನೆಲ್ಯಾಡಿ, ಕಲಾವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕಾವ್ಯ ಕೊಲ್ಯೊಟ್ಟು, ದ್ವಿತೀಯ ಸ್ಥಾನ ಪಡೆದ ಭವಿಷ್ಯ ಜೆ.ಕೆ.ಕುಡ್ತಾಜೆ ಅವರಿಗೆ ಸ್ಮರಣಿಕೆ, ನಗದು ನೀಡಿ ಪುರಸ್ಕರಿಸಲಾಯಿತು. ನಿರ್ದೇಶಕಿ ಉಷಾ ಅಂಚನ್‌ರವರು ವಿದ್ಯಾರ್ಥಿಗಳ ಹೆಸರು ವಾಚಿಸಿದರು.