ಮಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿಯವರ ಕಾರ್ಯಕ್ರಮಕ್ಕೆ ಪುತ್ತೂರಿನಿಂದ 15 ಸಾವಿರ ಕಾರ್ಯಕರ್ತರು, ಸಾರ್ವಜನಿಕರು

0

* ಕಾರ್ಯಕರ್ತರ ಹೊರತಾಗಿ ಕೇಂದ್ರದ ವಿವಿಧ ಯೋಜನೆಗಳ 10,000 ಫಲಾನುಭವಿಗಳೂ ಭಾಗಿ
* ಪ್ರತಿಬೂತ್‌ನಿಂದ ಕನಿಷ್ಠ 1 ಬಸ್ ಜನ
* ಫಲಾನುಭವಿಗಳಿಗೆ ಜಿಲ್ಲಾಡಳಿತದಿಂದ ಸೌಲಭ್ಯ
* ಮಠ ಮಂದಿರಗಳಿಂದ ಬೇಡಿಕೆ

ಪುತ್ತೂರು:ಮಂಗಳೂರಿನ ಕೂಳೂರಿನಲ್ಲಿ ಸೆ.2ರಂದು ನಡೆಯಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಸುಮಾರು 10 ಸಾವಿರ ಫಲಾನುಭವಿಗಳು ಹಾಗೂ 15 ಸಾವಿರ ಸಾರ್ವಜನಿಕರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ತೆರಳುವ ಫಲಾನುಭವಿಗಳಿಗೆ ವಾಹನ ಸೌಲಭ್ಯ ಹಾಗೂ ಊಟೋಪಚಾರಗಳನ್ನು ತಾಲೂಕು ಹಾಗೂ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಲಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ತೆರಳಲು ಪಕ್ಷದ ವತಿಯಿಂದ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪಕ್ಷದ ಕಚೇರಿಯಲ್ಲಿ ಆ.26ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನರೇಂದ್ರ ಮೋದಿಯವರು ಎರಡನೇ ಅವಧಿಗೆ ಪ್ರಧಾನಿ ಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ಜಿಲ್ಲೆಗೆ ಬರುತ್ತಿದ್ದಾರೆ. ಜಿಲ್ಲೆಯ ಜನ ಪ್ರಧಾನಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ. ಜಿಲ್ಲೆಗೆ ನೀಡಿದ ಕೊಡುಗೆಗಳನ್ನು ಸವಲತ್ತುಗಳನ್ನು ಪಡೆದ ಫಲಾನುಭವಿಗಳನ್ನು ಕಾರ್ಯಕ್ರಮದಲ್ಲಿ ಜೋಡಿಸಿಕೊಳ್ಳಲಾಗುವುದು. ಜಿಲ್ಲಾಡಳಿತ, ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಜನಪ್ರತಿನಿಧಿಗಳನ್ನು ಸೇರಿಕೊಂಡು ಸಿದ್ದತೆ ನಡೆಸಲಾಗಿದೆ.

ನವ ಮಂಗಳೂರು ಬಂದರಿನಲ್ಲಿ ಹಲವು ಯೋಜನೆಗಳ ಲೋಕಾರ್ಪಣೆ ಸಹಿತ ಕೇಂದ್ರ ಸರಕಾರ ವಿವಿಧ ಇಲಾಖೆಗಳಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಸಿ ಸಂದೇಶ ನೀಡಲಿದ್ದಾರೆ. ಇದಕ್ಕಾಗಿ ಮಂಗಳೂರು ಕೂಳೂರಿನ ಗೋಲ್ಡ್‌ಪಿಂಚ್ ಸಿಟಿಯ 90 ಎಕರೆ ಜಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ಕ್ಕೂ ಅಧಿಕ ಫಲಾನುಭವಿಗಳು ಸಾರ್ವಜನಿಕರು ಭಾಗವಹಿಸಲಿದ್ದು ಜಿಲ್ಲಾಡಳಿತ ಎಲ್ಲಾ ಸಿದ್ದತೆಗಳನ್ನು ವ್ಯವಸ್ಥಿತವಾಗಿ ನಡೆಸಲಿದೆ.

ಪ್ರತಿಬೂತ್‌ನಿಂದ ಕನಿಷ್ಠ ೧ ಬಸ್ ಜನ:
ಪ್ರಧಾನಿಯವರ ಕಾರ್ಯಕ್ರಮಲ್ಲಿ ಫಲಾನುಭವಿಗಳ ಹೊರತಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರಗಳ ಪ್ರತಿ ಬೂತ್‌ಗಳಿಂದ ಕನಿಷ್ಠ 1 ಬಸ್ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಭಾಗವಹಿಸಲಿದಾರೆ. ಒಟ್ಟು 220 ಬೂತ್‌ಗಳಿಂದ ಕನಿಷ್ಠ 15,000 ಮಂದಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ನಾಯಕರನ್ನು ನೇಮಿಸಿಕೊಂಡು ಎಲ್ಲಾ ಸಿದ್ದತೆಗಳನ್ನು ನಡೆಸಲಾಗಿದೆ. 15,000 ಮಂದಿಗೆ 250 ಬಸ್‌ಗಳ ಆವಶ್ಯಕತೆಯಿದ್ದು, 75 ಖಾಸಗಿ ಬಸ್‌ಗಳು, 100 ಕೆಎಸ್‌ಆರ್‌ಟಿಸಿ ಬಸ್‌ಗಳು, ಮಿನಿ ಬಸ್‌ಗಳನ್ನು ಬಳಸಿಕೊಳ್ಳಲಾಗುವುದು. ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ 25 ಬಸ್‌ಗಳನ್ನು ನೀಡುವ ಭರವಸೆ ನೀಡಿದ್ದಾರೆ. ಜೊತೆಗೆ ಇತರ ಹಲವು ಖಾಸಗಿ ವಾಹನಗಳಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ವಾಹನ, ಊಟ ಸೌಲಭ್ಯ:
ಮಂಗಳೂರಿನ ಕೂಳೂರಿಗೆ ಪ್ರಧಾನಿಯವರ ಕಾರ್ಯಕ್ರಮಕ್ಕೆ ತೆರಳುವ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ವಾಹನ ಹಾಗೂ ಊಟದ ವ್ಯವಸ್ಥೆಗಳನ್ನು ಪಕ್ಷದಿಂದ ಕಲ್ಪಿಸಲಾಗುವುದು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಭವನ, ಕಲ್ಲೇಗ ಭಾರತ್ ಮಾತಾ ಸಮುದಾಯ ಭವನ, ವಿಟ್ಲದ ಅಕ್ಷಯ ಸಭಾ ಭವನ, ಮಿತ್ತೂರು ಸೀತಾ ರಾಮಾಂಜನೇಯ ಭಜನಾ ಮಂದಿರ ಹಾಗೂ ಪೆರ್ನೆಯಲ್ಲಿ ಊಟದ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಟ್ರಾಫಿಕ್ ಸೇರಿದಂತೆ ಯಾವುದೇ ತೊಂದರೆ ಆಗದಂತೆ ಎಲ್ಲಾ ಸಿದ್ದತೆಗಲು ನಡೆಸಿದೆ.

ಫಲಾನುಭವಿಗಳಿಗೆ ಜಿಲ್ಲಾಡಳಿತದಿಂದ ಸೌಲಭ್ಯ:
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 10,000ಮಂದಿ ವಿವಿಧ ಇಲಾಖೆಗಳ ಫಲಾನುಭವಿಗಳಿರುವುದಾಗಿ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ಈ ಫಲಾನುಭವಿಗಳಿಗೆ ಕಾರ್ಯಕ್ರಮಕ್ಕೆ ತೆರಳಲು ವಾಹನ ಹಾಗೂ ಊಟೋಪಚಾರಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆಗಳ ಮುಖಾಂತರ ಎಲ್ಲಾ ಸಿದ್ದತೆಗಳನ್ನು ನಡೆಸಲಿದ್ದಾರೆ. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು, ಸ್ಥಳೀಯಾಡಳಿತಗಳು, ಗ್ರಾಮ ಮಟ್ಟದಲ್ಲಿ ಪಿಡಿಓ ಹಾಗೂ ಗ್ರಾಮಕರಣಿಕರು ಸಂಯೋಜಿಸಲಿದ್ದಾರೆ.

ಮಠ ಮಂದಿಗಳಿಂದ ಬೇಡಿಕೆ:
ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಭರವಸೆ ಇಟ್ಟುಕೊಂಡಿದ್ದು, ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರು, ಮಠಮಂದಿರಗಳಿಂದ ಇಚ್ಛೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಣಿಲ ಶ್ರೀಧಾಮ ಕ್ಷೇತ್ರದ ಮೋಹನದಾಸ ಸ್ವಾಮಿಜಿ, ಶ್ರೀಕೃಷ್ಣ ಗುರೂಜಿ ಹಾಗೂ ಡಾ.ಎಂ.ಕೆಪ್ರಸಾದ್‌ರವರು ತಲಾ ಎರಡು ಬಸ್‌ಗಳನ್ನು ಒದಗಿಸುವಂತೆ ಬೇಡಿಕೆ ಸಲ್ಲಿಸಿದ್ದು, ಅವರಿಗೂ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕರು ತಿಳಿಸಿದರು.

ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್, ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ಎಪಿಎಂಸಿ ಸದಸ್ಯ ಬೂಡಿಯಾರ್ ರಾಧಾಕೃಷ್ಣ ರೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here