ಪುತ್ತೂರು:ಸಂಪ್ಯ ನವಚೇತನಾ ಯುವಕ ಮಂಡಲದ ವತಿಯಿಂದ ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿರುವ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.31 ಹಾಗೂ ಸೆ.1ರಂದು ವಿವಿಧ ಧಾರ್ಮಿಕ, ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಆ.31ರಂದು ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಬಳಿಕ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ಮುಕ್ರಂಪಾಡಿ ಸಾಯಿ ಭಗವಾನ್ ಫ್ಯೂಯೆಲ್ಸ್‌ನ ದಾಳಿಂಬ ಸೂರ್ಯನಾರಾಯಣ ರಾವ್, ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕಾರ್ಯಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ವಿ., ಸಂಪ್ಯ ಗ್ರಾಮಾಂತರ ಠಾಣಾ ಎಸ್.ಐ ಉದಯರವಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಳಿಕ ಸಭಾ ಕಾರ್ಯಕ್ರಮದ ಬಳಿಕ ಡಾ.ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾಕೇಂದ್ರದವರಿಂದ ಭಜನ್ ಸಂದ್ಯಾ-ವಿಭಿನ್ನ ಶೈಲಿಯ ಭಜನ್ ಪ್ರಸ್ತುತಿ ಮತ್ತು ಭಕ್ತಿ ಭಾವಾಂಜಲಿ ನಡೆಯಲಿದೆ.
ಸೆ.1ರಂದು ಬೆಳಿಗ್ಗೆ ಗಣಹೋಮ, ಶ್ರೀಸತ್ಯನಾರಾಯಣ ಪೂಜೆ, ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 3 ಗಂಟೆಯಿಂದ ಶ್ರೀಗಣೇಶನ ವಿಗ್ರಹ ವೈಭವದ ಶೋಭಾಯಾತ್ರೆ ನಡೆಯಲಿದೆ. ಶೋಭಾಯತ್ರೆಯು ಸಂಪ್ಯ ದೇವಸ್ಥಾನದಿಂದ ಹೊರಟು ಮುಕ್ರಂಪಾಡಿ, ಮೊಟ್ಟೆತ್ತಡ್ಕ ಮಾರ್ಗವಾಗಿ ಸಂಚರಿಸಿ, ಸಂಪ್ಯಕ್ಕೆ ಹಿಂತಿರುಗಿ ಸಂಪ್ಯ ಕೆರೆಯಲ್ಲಿ ಗಣೇಶನ ವಿಗ್ರಹದ ಜಲಸ್ಥಂಬನಗೊಳ್ಳಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.