ಹಲವು ವರ್ಷಗಳ ಬೇಡಿಕೆ ಈಡೇರಿಕೆ – ಕುಕ್ಕಾಡಿ-ಬಾರಿಕೆ ರಸ್ತೆ ಕಾಂಕ್ರಿಟೀಕರಣ

0

ಪುತ್ತೂರು: ಅತ್ತ ನಡೆದುಕೊಂಡು ಹೋಗಲು ಸಾಧ್ಯವಾಗದೇ ಇತ್ತ ವಾಹನ ಸಂಚಾರಕ್ಕೂ ಕಷ್ಟ ಸಾಧ್ಯವಾಗಿದ್ದ ನಗರಸಭಾ ವ್ಯಾಪ್ತಿಯ ಆರ್ಯಾಪು ಗ್ರಾಮದ ಸಂಪ್ಯ ಉದಯಗಿರಿಯ ಕುಕ್ಕಾಡಿ-ಬಾರಿಕೆ ರಸ್ತೆಯು ಕಾಂಕ್ರಿಟೀಕರಣಗೊಂಡಿದ್ದು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಈಡೇರಿದ್ದು ಗ್ರಾಮಸ್ಥರಲ್ಲಿ ಹರ್ಷವನ್ನು ಮೂಡಿಸಿದೆ. ಅಗಲ ಕಿರಿದಾದ ರಸ್ತೆಯಾಗಿದ್ದು ಮಳೆಗಾಲದಲ್ಲಿ ಅಲ್ಲಲ್ಲಿ ನೀರಿನ ಒಸರು ತುಂಬಿಕೊಂಡಿದ್ದರಿಂದ ಕೆಸರುಮಯವಾಗುತ್ತಿತ್ತು ಇದರಿಂದ ವಾಹನ ಸಂಚಾರಕ್ಕೆ ಕಷ್ಟವಾಗುತ್ತಿತ್ತು. ಅನಾರೋಗ್ಯ ಪೀಡಿತರನ್ನು ಅರ್ಧ ದಾರಿ ತನಕ ಹೊತ್ತುಕೊಂಡೇ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ದುರಸ್ತಿಯೊಂದಿಗೆ ಕಾಂಕ್ರಿಟೀಕರಣ ಮಾಡಿಕೊಡುವಂತೆ ಈ ಭಾಗದ ಗ್ರಾಮಸ್ಥರು ಹಲವು ಭಾರಿ ಶಾಸಕರಿಗೆ, ನಗರಸಭಾ ಅಧ್ಯಕ್ಷರಿಗೆ ಹಾಗೂ ಸಂಬಂಧಪಟ್ಟವರಿಗೆ ಮನವಿ ಮಾಡುತ್ತಲೇ ಇದ್ದರು.

162 ಮೀಟರ್ ಕಾಂಕ್ರಿಟೀಕರಣ

ನಗರೋತ್ಥಾನ ಯೋಜನೆಯಡಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ 162 ಮೀಟರ್ ರಸ್ತೆಯು ಕಾಂಕ್ರಿಟೀಕರಣಗೊಂಡಿದೆ. ಅಗಲ ಕಿರಿದಾಗಿದ್ದ ಭಾಗದಲ್ಲಿ ಅಗಲೀಕರಣ ಮಾಡಲಾಗಿದೆ. ರಸ್ತೆ ಅಗಲೀಕರಣ ಸಮಯದಲ್ಲಿ ಕೆಲವು ಮಂದಿ ತಮ್ಮ ಜಾಗವನ್ನು ಬಿಟ್ಟುಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಒಟ್ಟಿನಲ್ಲಿ ಹಲವು ವರ್ಷಗಳ ಬೇಡಿಕೆ ಈಡೇರಿದ್ದು ಮಾತ್ರ ಈ ಭಾಗದ ಜನರಲ್ಲಿ ಸಂತಸವನ್ನು ಮೂಡಿಸಿದೆ. ಇನ್ನು ಕೆಲವು ಮೀಟರ್ ರಸ್ತೆ ಕಾಂಕ್ರಿಟೀಕರಣವಾಗಬೇಕಿದ್ದು ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುವ ಮೂಲಕ ಸಹಕಾರ ನೀಡುವಂತೆ ವಿನಂತಿಸಿಕೊಂಡಿದ್ದಾರೆ.

ಆ.28ರಂದು ನಡೆದ ಜನಪ್ರತಿನಿಧಿಗಳಿಗೆ ಅಭಿನಂದನೆ ಸಂದರ್ಭದಲ್ಲಿ ನಗರಸಭಾ ಸದಸ್ಯ ಶೀನಪ್ಪ ನಾಯ್ಕ, ಗ್ರಾಮಸ್ಥರುಗಳಾದ ದಯಾನಂದ ಗೌಡ ಕರಿಮೊಗರು, ಲಿಂಗಪ್ಪ ಶೆಟ್ಟಿ ಕರಿಮೊಗರು, ಬಿಜೆಪಿ ಕುಕ್ಕಾಡಿ ಬೂತ್ ಸಮಿತಿ ಅಧ್ಯಕ್ಷ ಉಮೇಶ್ ಆಚಾರ್ಯ, ದಯಾನಂದ ಶೆಟ್ಟಿ ಕರಿಮೊಗರು, ಉಮೇಶ್ ಎಸ್.ಕೆ, ವೆಂಕಟೇಶ್ ಶೆಟ್ಟಿ ಕರಿಮೊಗರು, ಧನ್ಯಶ್ರೀ ಶೆಟ್ಟಿ ಕರಿಮೊಗರು, ಹುಕ್ರ ಮೊಗೇರ, ಪುರುಷೋತ್ತಮ, ರಾಘವ, ಲೀಲಾವತಿ ಕರಿಮೊಗರು, ಶಶಿಧರ ಶೆಟ್ಟಿ ಕರಿಮೊಗರು, ಗಿರಿಜಾ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

‘ಸ್ಥಳೀಯ ಬೂತ್ ಸಮಿತಿ ಅಧ್ಯಕ್ಷ ಉಮೇಶ್ ಆಚಾರ್ಯರವರ ಮೂಲಕ ಶಾಸಕರಿಗೆ, ನಗರಸಭಾ ಅಧ್ಯಕ್ಷರಿಗೆ ಮನವಿ ಮಾಡಿದ ಬೆನ್ನಲ್ಲೆ ರಸ್ತೆ ಪರಿಶೀಲನೆ ನಡೆಸಿ ಅನುದಾನ ಒದಗಿಸುವ ಮೂಲಕ ರಸ್ತೆ ಕಾಂಕ್ರಿಟೀಕರಣ ಮಾಡಿಸಿಕೊಟ್ಟಿದ್ದಾರೆ. ನಮ್ಮ ಹಲವು ವರ್ಷಗಳ ಬೇಡಿಕೆ ಈಡೇರಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ.’

ದಯಾನಂದ ಶೆಟ್ಟಿ ಕರಿಮೊಗರು, ಗ್ರಾಮಸ್ಥರು

‘ ಮಳೆಗಾಲದಲ್ಲಿ ವಾಹನ ಸಂಚಾರ ಬಿಡಿ ನಡೆದುಕೊಂಡು ಹೋಗಲು ಕೂಡ ಕಷ್ಟಸಾಧ್ಯವಾಗಿದ್ದ ರಸ್ತೆಯನ್ನು ದುರಸ್ತಿ ಮಾಡಿಕೊಡಿ ಎಂದು ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದೇವು, ನಮ್ಮ ಹಲವು ವರ್ಷಗಳ ಬೇಡಿಕೆಗೆ ಈಗ ಫಲ ಸಿಕ್ಕಿದ್ದು ಖುಷಿ ತಂದಿದೆ.’

ಧನ್ಯಶ್ರೀ ಶೆಟ್ಟಿ ಕರಿಮೊಗರು , ವಿದ್ಯಾರ್ಥಿನಿ

‘ ಸುಮಾರು 20 ಕ್ಕೂ ಅಧಿಕ ಮನೆಗಳು ಈ ಭಾಗದಲ್ಲಿ ಇದ್ದು ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಕಷ್ಟವಾಗುತ್ತಿದ್ದು ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡೇ ಹೋಗಬೇಕಾದ ಅನಿವಾರ್ಯತೆ ಇತ್ತು. ಇದೀಗ ರಸ್ತೆ ಕಾಂಕ್ರಿಟೀಕರಣಗೊಂಡಿದ್ದು ಸಂತಸ ತಂದಿದೆ’

ಲಿಂಗಪ್ಪ ಶೆಟ್ಟಿ ಕರಿಮೊಗರು

LEAVE A REPLY

Please enter your comment!
Please enter your name here