- ಸುಶ್ರಾವ್ಯ ಹಾಡಿಗೆ ಲಯಬದ್ಧ ಹೆಜ್ಜೆ ಹಾಕಿದ ಕುಣಿತ ಭಜನಾ ತಂಡ
ಉಪ್ಪಿನಂಗಡಿ: ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್‌ನ ವತಿಯಿಂದ ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಎರಡು ದಿನಗಳ ಕಾಲ ಪೂಜಿಸಲ್ಪಟ್ಟ ಶ್ರೀ ಗಣೇಶ ಮೂರ್ತಿಯ ಜಲಸ್ತಂಭನ ಶೋಭಯಾತ್ರೆಯು ಸೆ.೧ರಂದು ಸಂಜೆ ವಿಜೃಂಭಣೆಯಿಂದ ನಡೆಯಿತು.
ಪೆರಿಯಡ್ಕದ ಭಜನಾ ಮಂದಿರದಿಂದ ಶೋಭಯಾತ್ರೆಯಲ್ಲಿ ಹೊರಟ ಶ್ರೀ ಗಣೇಶ ಮೂರ್ತಿಯನ್ನು ಭಕ್ತಾದಿಗಳು ಅಲ್ಲಲ್ಲಿ ಆರತಿ ಬೆಳಗಿ ಪೂಜಿಸಿದರು. ಶೋಭಾಯಾತ್ರೆ ಸಾಗುವ ದಾರಿಯನ್ನು ತಳಿರು- ತೋರಣ, ಭಗವಾಧ್ವಜಗಳಿಂದ ಅಲಂಕರಿಸಲಾಗಿತ್ತು. ಭಾರತ ಮಾತೆ ಹಾಗೂ ವೀರ ಸಾವರ್ಕರ್ ಅವರ ಬೃಹತ್ ಭಾವಚಿತ್ರಗಳನ್ನಿಟ್ಟ ಅಲಂಕೃತ ವಾಹನ ಶೋಭಾಯಾತ್ರೆಯ ಮುಂಚೂಣಿಯಲ್ಲಿ ಸಾಗಿದರೆ, ಅದರ ಹಿಂದೆ ಠಾಸೆಯ ಪೆಟ್ಟಿಗೆ ಗಾಂಭೀರ್‍ಯದ ಹೆಜ್ಜೆ ಹಾಕಿ ಕುಣಿಯುತ್ತಾ, ಬೆಂಕಿಯ ಕಸರತ್ತುಗಳನ್ನಾಡುತ್ತಾ ಮುಂದೆ ಸಾಗುತ್ತಿದ್ದ ಹುಲಿ ವೇಷಧಾರಿಗಳ ತಂಡದ ಅಬ್ಬರ ಕಂಡು ಬಂತು. ಕೇರಳ ಚೆಂಡೆಯ ಬಡಿತವು ಜನರನ್ನು ಹೆಜ್ಜೆ ಹಾಕಿಸಿತು. ಡಿಜೆಯ ಅಬ್ಬರವಿಲ್ಲದೆ ಸುಶ್ರಾವ್ಯ ಕಂಠದಿಂದ ತಾಳಬದ್ಧವಾಗಿ ಕೇಳಿ ಬರುತ್ತಿದ್ದ ಭಜನಾ ಪದಗಳಿಗೆ ಕುಣಿತ ಭಜನಾ ತಂಡದ ಸದಸ್ಯರು ಲಯಬದ್ಧ ಹೆಜ್ಜೆ ಹಾಕುವುದರೊಂದಿಗೆ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿದರು. ಇದರೊಂದಿಗೆ ಬಣ್ಣ ಬಣ್ಣದ ಛತ್ರಿಗಳನ್ನು ಹಿಡಿದು ಮಕ್ಕಳು ಸಾಗಿದರೆ, ಅದರ ಹಿಂದೆ ಅಲ್ಲಲ್ಲಿ ಪೂಜೆ ಸ್ವೀಕರಿಸುತ್ತಾ ಸಾಗಿ ಬರುತ್ತಿದ್ದ ವಿಘ್ನ ನಿವಾರಕನನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಭಜನಾ ಮಂಡಳಿಯ ಸದಸ್ಯೆಯರು ತಿಳಿ ಕೇಸರಿ ಬಣ್ಣದ ಸಾರಿ ಹಾಗೂ ಕೇಸರಿ ಶಾಲು ಧರಿಸಿ ಬಂದರೆ, ಸದಸ್ಯರು ಬಿಳಿ ಲುಂಗಿ, ಶರ್ಟ್ ಹಾಗೂ ಕೇಸರಿ ಶಾಲನ್ನು ಧರಿಸಿ ಅಪ್ಪಟ ಭಾರತೀಯ ಸಂಸ್ಕೃತಿಯ ಉಡುಗೆ-ತೊಡುಗೆಯೊಂದಿಗೆ ಕಂಗೊಳಿಸಿದರು. ಶಿಸ್ತು ಬದ್ಧವಾಗಿ ನೂರಾರು ಭಕ್ತಾದಿಗಳ ಸಮ್ಮುಖದೊಂದಿಗೆ ಸಾಗಿದ ಮೆರವಣಿಗೆಯುದ್ದಕ್ಕೂ ಜಿಟಿ- ಜಿಟಿ ಮಳೆ ಸುರಿಸುವ ಮೂಲಕ ವರುಣನೂ ಕೃಪೆ ತೋರಿಸಿದ. ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಶೋಭಾಯಾತ್ರೆಯ ಮೂಲಕ ಸಾಗಿ ಬಂದ ಗಣಪತಿ ಮೂರ್ತಿಯು ಅಲ್ಲಿ ಪೂಜೆ, ಮಹಾಮಂಗಳಾರತಿ ಸ್ವೀಕರಿಸಿದ. ಬಳಿಕ ಭಕ್ತಾದಿಗಳ ದೇವರ ನಾಮದ ಉದ್ಘೋಷದೊಂದಿಗೆ ಗಣಪತಿ ಮೂರ್ತಿಯನ್ನು ಅಲ್ಲಿನ ಕೆರೆಯಲ್ಲಿ ಜಲಸ್ತಂಭನಗೊಳಿಸಲಾಯಿತು.
ಮಧ್ಯಾಹ್ನ ಭಜನಾ ಮಂದಿರದಲ್ಲಿ ಪೆರಿಯಡ್ಕದ ಸಾಂಸ್ಕೃತಿಕ ಕಲಾ ವೇದಿಕೆಯಿಂದ “ಸುಧನ್ವ ಮೋಕ್ಷ” ಎಂಬ ತಾಳೆಮದ್ದಳೆ ಕೂಟ ನಡೆಯಿತು. ಈ ಸಂದರ್ಭ ಯಕ್ಷಗಾನ ಕಲಾವಿದ, ನಿವೃತ್ತ ಉಪನ್ಯಾಸಕ ಕೆ. ಮಹಾಲಿಂಗೇಶ್ವರ ಭಟ್ ಅವರನ್ನು ಸನ್ಮಾನಿಲಾಯಿತು.
ಶೋಭಾಯಾತ್ರೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಸುರೇಶ್ ಗೌಂಡತ್ತಿಗೆ, ಕಾರ್ಯದರ್ಶಿ ಅವನೀಶ್ ಭಟ್ ಪೆರಿಯಡ್ಕ, ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯಶಂಕರ ಭಟ್ ಪದಾಳ, ಹಿರಿಯರಾದ ಶಂಕರನಾರಾಯಣ ಭಟ್, ಭಜನಾ ಮಂಡಳಿಯ ಪ್ರತಾಪ್ ಪೆರಿಯಡ್ಕ, ಪ್ರಸನ್ನ ಕುಮಾರ್ ಪೆರಿಯಡ್ಕ, ಸುರೇಶ್ ಅತ್ರೆಮಜಲು, ಸದಾನಂದ ಶೆಟ್ಟಿ ಕಿಂಡೋವು, ಜಗದೀಶ್ ರಾವ್ ಮಣಿಕ್ಕಳ, ವಸಂತ ನಾಯ್ಕ, ಪ್ರಶಾಂತ್ ಪೆರಿಯಡ್ಕ, ಹರೀಶ್ವರ ಮೊಗ್ರಾಲ್, ಪೃಥ್ವಿರಾಜ್ ಪೆರಿಯಡ್ಕ, ಪ್ರಹ್ಲಾದ್ ಪೆರಿಯಡ್ಕ, ಜತ್ತಪ್ಪ ನಾಯ್ಕ, ವಸಂತ ನಾಯ್ಕ, ಗಣೇಶ್ ಆಚಾರ್ಯ, ಚಿದಾನಂದ ಪಂಚೇರು, ಲಕ್ಷ್ಮಣ ಗೌಡ ನೆಡ್ಚಿಲ್, ಸುರೇಶ್ ನಲಿಕೆಮಜಲು, ಶೀನಪ್ಪ ಗೌಡ, ವಸಂತ ಕುಂಟಿನಿ, ಕೃಷ್ಣಪ್ರಸಾದ್ ಬೊಳ್ಳಾವು, ದುರ್ಗಾಪ್ರಸಾದ್ ಬೊಳ್ಳಾವು, ರೋಹಿತ್ ಬೊಳ್ಳಾವು, ರಾಧಾಕೃಷ್ಣ ಭಟ್ ಬೊಳ್ಳಾವು, ನಾರಾಯಣ ಭಟ್ ಪೆರಿಯಡ್ಕ, ನಾಗೇಶ್ ಬೊಳ್ಳಾವು, ಬಾಲಕೃಷ್ಣ ಕುಂಟಿನಿ, ಶಿವರಾಜ್ ಭಟ್ ಕುಂಟಿನಿ, ಹರಿಪ್ರಸಾದ್ ಭಟ್, ಸುಜೀತ್ ಬೊಳ್ಳಾವು, ನಿತಿನ್ ಬೊಳ್ಳಾವು, ಲೋಕೇಶ ನೆಕ್ಕರೆ, ರಮೇಶ ನೆಕ್ಕರೆ, ರಾಜೇಶ ನೆಕ್ಕರೆ, ಪರಮೇಶ್ವರ ನೆಕ್ಕರೆ, ಹರೀಶ್ ಪಟ್ಲ, ಪ್ರವೀಣ್ ರೈ, ಪ್ರವೀಣ್ ಕುಮಾರ್, ರೋಹಿತ್, ಅಶೋಕ್ ವರ್ನಡ್ಕ, ಸದಾಶಿವ, ಸುಧಾಕರ ಕನಿಯ, ಸತೀಶ್ ಕನಿಯ, ದುರ್ಗಾಪ್ರಸಾದ್, ಗಣೇಶ್ ಕಿಂಡೋವು, ಶ್ರೀನಿವಾಸ ಬೊಳ್ಳಾವು, ಉಪೇಂದ್ರ, ದಿನೇಶ್ ಕಣಿಯ, ಬಾಲಚಂದ್ರ ಕೊರಂಬಾಡಿ ಮತ್ತಿತರರು ಉಪಸ್ಥಿತರಿದ್ದರು.