ಮಂಗಳೂರುನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
- 3800 ಕೋಟಿ ರೂ.ಗಳ 8 ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ
- ಗೋಲ್ಡ್‌ಫಿಂಚ್ ಮೈದಾನದಲ್ಲಿ ಬೃಹತ್ ಸಮಾವೇಶ
- ಪುತ್ತೂರು, ಕಡಬದವರ ಸಹಿತ ಲಕ್ಷಾಂತರ ಮಂದಿ ಭಾಗಿ
ಮಂಗಳೂರು:ಕೇಂದ್ರ ಹಾಗೂ ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರದ ಮೂಲಕ ರಾಜ್ಯದ ಜನತೆಯ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಲ್ಲಿನ ಗೋಲ್ಡ್ ಫಿಂಚ್ ಮೈದಾನದಲ್ಲಿ 3800 ಕೋಟಿ ರೂ.ಮೊತ್ತದ ೮ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸವನ್ನು ನೆರವೇರಿಸಿ ಅವರು ಮಾತನಾಡಿದರು.
ಕಳೆದ ಎಂಟು ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಮಾಡಲಾಗಿರುವ ಪ್ರಗತಿಯಲ್ಲಿ ದೊಡ್ಡ ಪಾಲು ಕರ್ನಾಟಕಕ್ಕೆ ಲಭಿಸಿದೆ.ಸಾಗರ ಮಾಲಾ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲ್ವೇ ಹಳಿಗಳ ವಿದ್ಯುದ್ದೀಕರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಾಲ್ಕು ಪಟ್ಟು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದೆ.ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದಲ್ಲಿ 30ಲಕ್ಷ ಮನೆಗಳಿಗೆ ನೇರವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ.ಪ್ರಧಾನಮಂತ್ರಿ ಆಯುಷ್ಮಾನ್ ಯೋಜನೆಯಡಿ 30 ಲಕ್ಷ ಫಲಾನುಭವಿಗಳಿಗೆ 4ಸಾವಿರ ಕೋಟಿ ರೂ.ಮೊತ್ತದ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡಲು ಸಾಧ್ಯವಾಗಿದೆ ಎಂದು ಮೋದಿ ಹೇಳಿದರು.
ಕೇಂದ್ರ ಸರಕಾರದಿಂದ ಸುರಕ್ಷತೆಗೆ ಕ್ರಮ: ದೇಶದ ಪ್ರಥಮ ಸ್ವದೇಶಿ ಏರ್‌ಕ್ರಾಫ್ಟ್ ವಾಹಕ ನೌಕೆಯನ್ನು ಇಂದು ಕೊಚ್ಚಿಯಲ್ಲಿ ಲೋಕಾರ್ಪಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ದೇಶದ ಸೇನಾ ಸುರಕ್ಷತೆಗೆ ಹಾಗೂ ಆರ್ಥಿಕ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ.ನವ ಮಂಗಳೂರು ಬಂದರಿನಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೆ 3800 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಇದರಿಂದ ದೇಶದ ಆರ್ಥಿಕತೆಗೆ ಮಾತ್ರವಲ್ಲದೆ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿ ಸಾಧ್ಯವಾಗಲಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಸ್ಥಳೀಯ ಕೃಷಿಕರಿಗೆ ಹಾಗೂ ಮೀನುಗಾರರಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಸುಲಭವಾಗಲಿದೆ.ಕಡಿಮೆ ವೆಚ್ಚದಲ್ಲಿ ಉತ್ಪನ್ನಗಳ ರಫ್ತು ಸಾಧ್ಯವಾಗಲಿದ್ದು, ನವ ಮಂಗಳೂರು ಬಂದರಿನ ಸಾಮರ್ಥ್ಯ ದ್ವಿಗುಣಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಆಯುಷ್ಮಾನ್ ಯೋಜನೆಯಿಂದ 4 ಕೋಟಿ ಬಡವರಿಗೆ ಲಾಭವಾಗಿದೆ: ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಆಯುಷ್ಮಾನ್ ಯೋಜನೆಯಿಂದ ಆದ ಲಾಭವನ್ನು ವಿಶೇಷವಾಗಿ ಉಲ್ಲೇಖಿಸಿದರು.ದೇಶದಲ್ಲಿ ಸುಮಾರು ನಾಲ್ಕು ಕೋಟಿ ಬಡವರು ಯೋಜನೆ ಲಾಭ ಪಡೆದಿದ್ದು, ಸುಮಾರು ರೂ.15,೦೦೦ ಕೋಟಿ ಬಡವರ ಹಣ ಉಳಿದಿದೆ.ಕರ್ನಾಟಕದಲ್ಲೂ 30 ಲಕ್ಷ ಜನರು ಯೋಜನೆಯ ಲಾಭ ಪಡೆದಿದ್ದು, ರೂ. 4೦೦೦ ಕೋಟಿಯಷ್ಟು ಬಡವರ ಹಣ ಉಳಿದಿದೆ, ಎಂದರು.
ಕೋವಿಡ್ ಕಾಲದ ನೀತಿಗಳಿಂದ ಲಾಭ : ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿಲುವಿನಿಂದ ಆರ್ಥಿಕ ಅವಘಡ ತಪ್ಪಿದೆ ಎಂದು,ಸರ್ಕಾರದ ಕ್ರಮಗಳನ್ನು ಮೋದಿ ಸಮರ್ಥಿಸಿಕೊಂಡರು.ರಫ್ತಿನಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಸೇವಾವಲಯ, ಉತ್ಪಾದನಾ ವಲಯಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ.ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಹೆಚ್ಚಿದ್ದು, ರಫ್ತು ಹೆಚ್ಚಿರುವುದರಿಂದ ಕರಾವಳಿಗರಿಗೆ ಲಾಭವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿ ಅಬ್ಬಕ್ಕ ಮತ್ತು ರಾಣಿ ಚೆನ್ನಭೈರಾದೇವಿ ಅವರು ನಮಗೆ ಸ್ಪೂರ್ತಿಯಾಗಿದ್ದಾರೆ ಎಂದು ಮೋದಿ ಹೇಳಿದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಇತರ ಯೋಜನೆಗಳ ಫಲಾನುಭವಿಗಳಿಗೆ ಪ್ರಧಾನಿಯವರು ಸಾಂಕೇತಿಕವಾಗಿ ಚೆಕ್ ವಿತರಿಸಿದರು.ಪ್ರಧಾನಿಯನ್ನು ಶ್ರೀಕೃಷ್ಣ ಹಾಗೂ ಪರಶುರಾಮರ ಲೋಹದ ವಿಗ್ರಹಗಳು, ಸಾಂಪ್ರದಾಯಿಕ ಪೇಟ, ಶಾಲು, ಮಲ್ಲಿಗೆಯ ಹಾರಗಳನ್ನು ನೀಡುವುದರ ಮೂಲಕ ಮುಖ್ಯಮಂತ್ರಿ ಬೊಮ್ಮಾಯಿ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಗೌರವಿಸಿದರು.
ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭ-ಬೊಮ್ಮಾಯಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಡಬಲ್ ಇಂಜಿನ್ ಸರ್ಕಾರದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ.ನವ ಮಂಗಳೂರು ಬಂದರು ಪ್ರಾಽಕಾರದಲ್ಲಿ 3800 ಕೋಟಿ ರೂ.ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಅವರು ಚಾಲನೆ ನೀಡಿದ್ದು, ಈ ಮೂಲಕ ಕರಾವಳಿಯ ಅಭಿವೃದ್ಧಿಗೆ ವೇಗ ದೊರಕಲಿದೆ.ಬಂದರಿನ ವಹಿವಾಟು ಸಾಮರ್ಥ್ಯ ನಾಲ್ಕು ಪಟ್ಟು ಹೆಚ್ಚಾಗಲಿದ್ದು, ದೇಶದ ಆರ್ಥಿಕತೆಗೆ ಬಲ ತುಂಬಲಿದೆ.ಇದರಿಂದ ಮುಂದಿನ ದಿನಗಳಲ್ಲಿ ಕರಾವಳಿ ಮಾತ್ರವಲ್ಲದೆ, ರಾಜ್ಯದ ಅಭಿವೃದ್ದಿ ಸಾಧ್ಯವಾಗಲಿದೆ.ನವಭಾರತದ ನಿರ್ಮಾಣದಲ್ಲಿ ನಮ್ಮ ಕರ್ನಾಟಕ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.
ರಾಜ್ಯದ ಸಿಆರ್‌ಝೆಡ್ ಮಾಸ್ಟರ್ ಪ್ಲಾನ್‌ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಕಳೆದ 30 ವರ್ಷಗಳ ಹೋರಾಟಕ್ಕೆ ಇದೀಗ ಫಲ ದೊರಕಿದೆ. ಇದರಿಂದ ಕರಾವಳಿಯ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಸಾಗರ ಮಾಲಾ ಯೋಜನೆಯಡಿ ಕಾರವಾರ ಬಂದರಿನಲ್ಲಿ ರೂ.276 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳು ಅನುಷ್ಟಾನಗೊಳ್ಳುತ್ತಿವೆ.ಇದೇ ರೀತಿ ಹೊನ್ನಾವರ ಮತ್ತು ಕುಮಟಾ ಬಂದರುಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ.ಪಿಎಂ ಮತ್ಸ್ಯ ಸಂಪದ ಯೋಜನೆಯಡಿ ಆಳ ಮೀನುಗಾರಿಕೆಗೆ ಹೈಸ್ಪೀಡ್ ಬೋಟ್‌ಗಳನ್ನು ಖರೀದಿಸಲು ಕೇಂದ್ರ ಸರ್ಕಾರ 40 ಶೇಕಡಾ ಸಬ್ಸಿಡಿ ಒದಗಿಸಲಿದೆ ಎಂದರು.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ ಸರ್ಬಾನಂದ್ ಸೊನೊವಾಲ, ಶ್ರೀಪಾದ್ ನಾಯಕ್, ಶಾಂತನು ಠಾಕೂರ್, ಶೋಭಾ ಕರಂದ್ಲಾಜೆ, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸಂಜೀವ ಮಠಂದೂರು,ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್,ಹರೀಶ್ ಪೂಂಜ, ರಾಜೇಶ್ ನಾಕ್, ಉಮಾನಾಥ ಕೋಟ್ಯಾನ್, ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆಗೊಂಡ ಯೋಜನೆಗಳು
ಕಂಟೇನರ್‌ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ ಯೋಜನೆ ವೆಚ್ಚ:ರೂ.281 ಕೋಟಿ 6.02.ಎಂಟಿಪಿಎರಷ್ಟು ಹೆಚ್ಚುವರಿ ಸಾಮರ್ಥ್ಯದ ಬಿಎಸ್ 6 ಉನ್ನತೀಕರಣ ಯೋಜನೆ:ಬಿಎಸ್6 ಶ್ರೇಣಿ ಇಂಧನಗಳ ಉತ್ಪಾದನೆ ಯೋಜನೆ ವೆಚ್ಚ:1,829 ಕೋಟಿ.ಸಮುದ್ರ ನೀರಿನ ನಿರ್ಮಲೀಕರಣ ಘಟಕ:ಶುದ್ಧ ನೀರಿನ ಸಂರಕ್ಷಣೆ 30ಎಂಎಲ್‌ಡಿ ನಿರ್ಮಲೀಕರಣ ಸಾಮರ್ಥ್ಯದೊಂದಿಗೆ
ಸುಸ್ಥಿರತೆಗೆ ಉತ್ತೇಜನ ಯೋಜನೆ ವೆಚ್ಚ:ರೂ.677 ಕೋಟಿ.
ಶಿಲಾನ್ಯಾಸಗೊಂಡ ಯೋಜನೆಗಳು
ಎನ್‌ಎಂಪಿಯಲ್ಲಿ ಸಮಗ್ರ ಎಲ್‌ಪಿಜಿ ಹಾಗೂ ಬೃಹತ್ ಪಿಒಎಲ್ ಸೌಲಭ್ಯ ಸ್ಥಾಪನೆ-ಯೋಜನೆ ವೆಚ್ಚ ರೂ.500 ಕೋಟಿ.ಎನ್‌ಎಂಪಿಯಲ್ಲಿ ಶೇಖರಣಾ ಟ್ಯಾಂಕ್‌ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ-ಯೋಜನೆ ವೆಚ್ಚ ರೂ.100 ಕೋಟಿ.ಎನ್‌ಎಂಪಿಎಯಲ್ಲಿ ಬಿಟುಮೆನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ-ಯೋಜನೆ ವೆಚ್ಚ ರೂ.100 ಕೋಟಿ.ಎನ್‌ಎಂಪಿಎಯಲ್ಲಿ ಬಿಟುಮೆನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್‌ಗಳು ಹಾಗೂ ಸಂಬಂಽತ ಸೌಲಭ್ಯಗಳ ನಿರ್ಮಾಣ-ಯೋಜನೆ ವೆಚ್ಚ ರೂ.100 ಕೋಟಿ.
ಭೂಮಿಪೂಜೆ ನಡೆದ ಕಾಮಗಾರಿ
ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ-ಯೋಜನೆ ವೆಚ್ಚ ರೂ.196.51 ಕೋಟಿ.
ಹರಿದು ಬಂದ ಜನಸಾಗರ ಕೇಸರೀಮಯವಾದ ಸಭಾಂಗಣ
ಮೋಡ ಕವಿದ ವಾತಾವರಣ ಮತ್ತು ಭಾರೀ ಭದ್ರತೆಯ ನಡುವೆಯೂ ಸಮಾರಂಭಕ್ಕೆ ಜನಸಾಗರವೇ ಹರಿದುಬಂದಿತ್ತು.ನೂರಾರು ಜನರಿಗೆ ಜಾಗ ಸಾಲದೆ,ಪ್ರಧಾನಿಗಳ ಆಗಮನವನ್ನು ಹೊರಗಿನಿಂದಲೇ ನೋಡಿ ಕಣ್ತುಂಬಿಕೊಂಡರು. ಬೃಹತ್ ವೇದಿಕೆಯಡಿ ಹಲವು ಎಲ್‌ಇಡಿ ಪರದೆಗಳನ್ನು ಜೋಡಿಸಿದ್ದರಿಂದ ಮತ್ತು ವಾಹನ ನಿಲುಗಡೆ, ಆಹಾರ-ನೀರು ಹಂಚಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದರಿಂದ ಯಾವುದೇ ಅನಾನುಕೂಲವಾಗಲಿಲ್ಲ.ಕೇಸರಿ ಶಾಲುಗಳನ್ನು ಧರಿಸಿದ್ದ ಬಿಜೆಪಿ ಕಾರ್ಯಕರ್ತರಿಂದ ಸಭಾಂಗಣ ಕೇಸರೀಮಯವಾಗಿತ್ತು.ಭಾರೀ ಘೋಷಣೆಗಳು, ಚುರುಕಾಗಿ ಓಡಾಡಿಕೊಂಡಿದ್ದ ಸ್ಥಳೀಯ ಸಚಿವರು, ಸಂಸದರು ಗಮನ ಸೆಳೆದರು.
ಕೇಂದ್ರ, ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಲಕ್ಷಾಂತರ ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಪುತ್ತೂರು, ಕಡಬ ತಾಲೂಕಿನಿಂದಲೂ ಸಹಸ್ರಾರು ಕಾರ್ಯಕರ್ತರು, ಫಲಾನುಭವಿಗಳು ಪಾಲ್ಗೊಂಡಿದ್ದರು.
ಪುತ್ತೂರು,ಕಡಬದಿಂದಲೂ ಸಹಸ್ರಾರು ಮಂದಿ
ಕೇಂದ್ರ, ರಾಜ್ಯ ಸರಕಾರದ ವಿವಿಧ ಯೋಜನೆಗಳ -ಲಾನುಭವಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಲಕ್ಷಾಂತರ ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಪುತ್ತೂರು, ಕಡಬ ತಾಲೂಕಿನಿಂದಲೂ ಸಹಸ್ರಾರು ಕಾರ್ಯಕರ್ತರು, ಫಲಾನುಭವಿಗಳು ಪಾಲ್ಗೊಂಡಿದ್ದರು.
ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ್ ರಾವ್ ಅವರ ನೇತೃತ್ವದಲ್ಲಿ ವಿವಿಧ ಮಹಾಶಕ್ತಿ ಕೇಂದ್ರ,ಶಕ್ತಿ ಕೇಂದ್ರಗಳ ಮತ್ತು ಬೂತ್ ಪ್ರಮುಖರ ಹಾಗೂ ವಿವಿಧ ಮೋರ್ಚಾಗಳ ಪ್ರಮುಖರ ನೇತೃತ್ವದಲ್ಲಿ ವಿವಿಧ ಬಸ್ಸುಗಳಲ್ಲಿ ಕಾರ್ಯಕರ್ತರು ಮಂಗಳೂರಿಗೆ ತೆರಳಿದ್ದರು.ಮಂಗಳೂರಿಗೆ ತೆರಳುವವರಿಗಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ೨೮೫ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿ ಕಾರ್ಯಕರ್ತರಿಗೆ ೧೧೫ ಕೆಎಸ್‌ಆರ್‌ಟಿಸಿ ಬಸ್ ಮತ್ತು ೧೦೦ ಖಾಸಗಿ ಬಸ್‌ಗಳು ಹಾಗೂ ಸರಕಾರಿ ಯೋಜನೆಗಳ ಫಲಾನುಭವಿಗಳಿಗಾಗಿ ೭೦ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.ಬಿಜೆಪಿ ಕಾರ್ಯಕರ್ತರಿದ್ದ ಬಸ್‌ಗಳಿಗೆ ೧ರಿಂದ ೨೧೫ ಸಂಖ್ಯೆಗಳು ಮತ್ತು ಪ್ರತಿ ಬಸ್‌ನಲ್ಲೂ ಬಿಜೆಪಿ ಧ್ವಜ ಅಳವಡಿಸಲಾಗಿತ್ತು.ಫಲಾನುಭವಿಗಳು ತೆರಳಿದ್ದ ಬಸ್‌ಗಳಲ್ಲಿ ಸಂಖ್ಯೆ ಮತ್ತು ಆಯಾ ಗ್ರಾಮದ ಫಲಾನುಭವಿಗಳ ಮಾಹಿತಿ ಇತ್ತು.ಕಾರ್ಯಕರ್ತರು ತೆರಳುವ ಮತ್ತು ಮಂಗಳೂರಿನಿಂದ ಹಿಂತಿರುಗುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಸರಕಾರಕ್ಕೆ ಜೈಕಾರ ಘೋಷಣೆಗಳನ್ನು ಕೂಗುತ್ತಿದ್ದರು.
ಬಸ್ಸಿಲ್ಲದೆ ಪರದಾಡಿದ ಪ್ರಯಾಣಿಕರು: ಪುತ್ತೂರು ವಿಭಾಗದ ಬಹುತೇಕ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಮತ್ತು ಖಾಸಗಿ ಬಸ್ಸುಗಳೂ ಮಂಗಳೂರಿಗೆ ತೆರಳಿದ್ದುದರಿಂದಾಗಿ ಬಸ್ಸುಗಳನ್ನೇ ಅವಲಂಬಿಸಿದ್ದ ಹಲವು ಪ್ರಯಾಣಿಕರು ಪರದಾಡುವಂತಾಗಿದ್ದ ಕುರಿತು ದೂರುಗಳು ವ್ಯಕ್ತವಾಗಿವೆ.
ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಸಾವಿರಾರು ಮಂದಿ
ಉಪ್ಪಿನಂಗಡಿ: ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರಿನ ಕಾರ್ಯಕ್ರಮಕ್ಕೆ ಬಿಜೆಪಿ ಮಹಾಶಕ್ತಿ ಕೇಂದ್ರದ ನಾಲ್ಕು ಗ್ರಾಮಗಳಿಂದ ಸಾವಿರಾರು ಜನ ಭಾಗವಹಿಸಿದ್ದಾರೆ. ಇದಕ್ಕಾಗಿ ೨೪ ಬಸ್‌ಗಳನ್ನು ಸಜ್ಜುಗೊಳಿಸಲಾಗಿತ್ತಲ್ಲದೆ, ಕೆಲವರು ಖಾಸಗಿ ವಾಹನಗಳಲ್ಲಿ ಮಂಗಳೂರಿಗೆ ತೆರಳಿದರು. ಮಹಾಶಕ್ತಿ ಕೇಂದ್ರದ ವ್ಯಾಪ್ತಿಗೊಳಪಡುವ ಬಜತ್ತೂರು, ಹಿರೇಬಂಡಾಡಿ, ೩೪ ನೆಕ್ಕಿಲಾಡಿ ಹಾಗೂ ಉಪ್ಪಿನಂಗಡಿ ಗ್ರಾಮಗಳಿಂದ ೨೪ ಬಸ್‌ನಲ್ಲಿ ಎರಡು ಸಾವಿರದಷ್ಟು ಕಾರ್ಯಕರ್ತರು ಹಾಗೂ ಸ್ವಂತ ವಾಹನಗಳಲ್ಲಿ ಮೂರು ಸಾವಿರದಷ್ಟು ಕಾರ್ಯಕರ್ತರು ಮಂಗಳೂರಿಗೆ ತೆರಳಿದರು. ಅಲ್ಲದೇ, ಪ್ರತಿ ಗ್ರಾ.ಪಂ.ನಿಂದ ಕೇಂದ್ರ ಸರಕಾರದ ಯೋಜನೆಗಳ -ಲಾನುಭವಿಗಳು, ಕೆಲ ಆಶಾ ಕಾರ್ಯಕರ್ತೆಯರು, ಸೀ ಶಕ್ತಿ ಸಂಘದ ಸದಸ್ಯರು ಪ್ರಧಾನಿ ಕಾರ್ಯಕ್ರಮಕ್ಕೆ ತೆರಳಿದರು.
ನೆಲ್ಯಾಡಿ ಮಹಾಶಕ್ತಿಕೇಂದ್ರದಿಂದ ೧೫೦೦ಕ್ಕೂ ಹೆಚ್ಚು ಮಂದಿ ಭಾಗಿ
ನೆಲ್ಯಾಡಿ: ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದ ಮಂಗಳೂರಿನ ಗೋಲ್ಡನ್ ಪಿಂಚ್ ಸಿಟಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ನೆಲ್ಯಾಡಿ ಮಹಾಶಕ್ತಿಕೇಂದ್ರ ವ್ಯಾಪ್ತಿಯ ೧೦ ಗ್ರಾಮಗಳಿಂದ ಸುಮಾರು ೧೫೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು ಎಂದು ಬಿಜೆಪಿ ನೆಲ್ಯಾಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಭಾಸ್ಕರ ಎಸ್.ಗೌಡ ತಿಳಿಸಿದ್ದಾರೆ.
ನೆಲ್ಯಾಡಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಗೋಳಿತ್ತೊಟ್ಟು ಗ್ರಾಮದಿಂದ ೨, ಕೊಣಾಲು ಗ್ರಾಮದಿಂ ದ ೨, ಆಲಂತಾಯ ಗ್ರಾಮದಿಂದ ೧, ನೆಲ್ಯಾಡಿ ಗ್ರಾಮದಿಂದ ೨, ಕೌಕ್ರಾಡಿ ಗ್ರಾಮದಿಂದ ೫, ಇಚ್ಲಂಪಾಡಿ ಗ್ರಾಮದಿಂದ ೧, ರೆಂಜಿಲಾಡಿ ಗ್ರಾಮದಿಂದ ೧, ನೂಜಿಬಾಳ್ತಿಲ ಗ್ರಾಮದಿಂದ ೨, ಕೊಣಾಜೆ ಗ್ರಾಮದಿಂದ ೨ ಹಾಗೂ ಶಿರಾಡಿ ಗ್ರಾಮದಿಂದ ೨ ಹೀಗೆ ಒಟ್ಟು ೨೦ ಬಸ್‌ಗಳಲ್ಲಿ ೧೫೦೦ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಮಂಗಳೂರಿಗೆ ತೆರಳಿ ಮೋದಿಯವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಮಂಗಳೂರಿಗೆ ಮೋದಿ ಭೇಟಿ ಕಾರ್ಯಕ್ರಮ ಕಡಬದಿಂದ ೩೫ ಬಸ್ಸುಗಳಲ್ಲಿ ೧೭೫೦ ಫಲಾನುಭವಿಗಳು
ಕಡಬ: ಕಡಬ ತಾಲೂಕಿನಿಂದ ೩೫ ಬಸ್ಸುಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ೧೭೫೦ -ಲಾನುಭವಿಗಳು ಮಂಗಳೂರಿಗೆ ತೆರಳಿದ್ದಾರೆ.
ಫಲಾನುಭವಿಗಳು ಅಲ್ಲದೆ ಅಪಾರ ಸಂಖ್ಯೆಗಳಲ್ಲಿ ಬಿಜೆಪಿ ಕಾರ‍್ಯಕರ್ತರು ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಪ್ರತಿ ಗ್ರಾಮವಾರು ಕೇಂದ್ರಗಳಿಗೆ ಸರಕಾರಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದ್ದು ಕಾರ್ಯಕರ್ತರು ತೆರಳಿದ್ದಾರೆ.
ಪ್ರಯಾಣಿಕರ ಪರದಾಟ: ಸರಕಾರಿ ಬಸ್ಸುಗಳು ಮಂಗಳೂರಿಗೆ ತೆರಳಿದ್ದರಿಂದ ಕಡಬ ಭಾಗದಲ್ಲಿ ಬಸ್ಸುಗಳ ಸಂಚಾರ ಇರಲಿಲ್ಲ, ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸಂಚಾರಕ್ಕೆ ಪರದಾಡಿದ ಘಟನೆಗಳು ನಡೆದಿವೆ, ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು ವಾಹನಕ್ಕಾಗಿ ಕಾಯುತ್ತಿರುವುದು ಕಂಡು ಬಂದಿತ್ತು.ಕಡಬ: ಕಡಬ ತಾಲೂಕಿನಿಂದ ೩೫ ಬಸ್ಸುಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ೧೭೫೦ ಫಲಾನುಭವಿಗಳು ಮಂಗಳೂರಿಗೆ ತೆರಳಿದ್ದಾರೆ.
ಫಲಾನುಭವಿಗಳು ಅಲ್ಲದೆ ಅಪಾರ ಸಂಖ್ಯೆಗಳಲ್ಲಿ ಬಿಜೆಪಿ ಕಾರ‍್ಯಕರ್ತರು ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಪ್ರತಿ ಗ್ರಾಮವಾರು ಕೇಂದ್ರಗಳಿಗೆ ಸರಕಾರಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದ್ದು ಕಾರ್ಯಕರ್ತರು ತೆರಳಿದ್ದಾರೆ.
ಪ್ರಯಾಣಿಕರ ಪರದಾಟ: ಸರಕಾರಿ ಬಸ್ಸುಗಳು ಮಂಗಳೂರಿಗೆ ತೆರಳಿದ್ದರಿಂದ ಕಡಬ ಭಾಗದಲ್ಲಿ ಬಸ್ಸುಗಳ ಸಂಚಾರ ಇರಲಿಲ್ಲ, ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸಂಚಾರಕ್ಕೆ ಪರದಾಡಿದ ಘಟನೆಗಳು ನಡೆದಿವೆ, ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು ವಾಹನಕ್ಕಾಗಿ ಕಾಯುತ್ತಿರುವುದು ಕಂಡು ಬಂದಿತ್ತು.
ಮಂಗಳೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ವಿಟ್ಲ ಹೋಬಳಿಯಿಂದ ನೂರಾರು ಬಿಜೆಪಿ ಕಾರ್ಯಕರ್ತರು
ವಿಟ್ಲ: ವಿಟ್ಲ ಹೋಬಳಿಯ ವಿವಿಧ ಕಡೆಗಳಿಂದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಪುಣಚ ಮಹಾಶಕ್ತಿ ಕೇಂದ್ರದಿಂದ ೩೧ಬಸ್ಸುಗಳಲ್ಲಿ ೩೦೦೦ ಮಂದಿ, ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ೨೩ ಬಸ್ಸುಗಳಲ್ಲಿ ೧೭೦೦ ಮಂದಿ ಹಾಗೂ ವಿಟ್ಲ ಪಡ್ನೂರು ಮಹಾಶಕ್ತಿಕೇಂದ್ರದಿಂದ ೨೨ಬಸ್ಸುಗಳಲ್ಲಿ ೧೩೦೦ ಮಂದಿ ಬಿಜೆಪಿ ಕಾರ್ಯಕರ್ತರು ತೆರಳಿದ್ದರು. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕ ಕ್ರಮವಾಗಿ ಎಲ್ಲೆಡೆ ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದಲ್ಲಿ ಭಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೆಚ್ಚಿನ ಸರಕಾರಿ ಬಸ್ಸುಗಳ ಸಹಿತ ಖಾಸಗಿ ಬಸ್ಸುಗಳು ಪ್ರಧಾನಿಯವರ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ದಿರುವ ಹಿನ್ನೆಲೆಯಲ್ಲಿ ಬಸ್ಸುಸಂಚಾರ ಕಡಿಮೆ ಇದ್ದ ಕಾರಣ ವಿಟ್ಲ ಸುತ್ತಮುತ್ತಲ ಪ್ರದೇಶದಿಂದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಸಹಿತ ಕೆಲಸಕ್ಕೆ ಬಸ್ಸಿನಲ್ಲಿ ತೆರಳುವವರು ಸಮಸ್ಯೆ ಎದುರಿಸುವಂತಾಗಿತ್ತು.