ಚಿತ್ರ: ಅಶ್ವಿನಿ ಪುತ್ತೂರು
ಪುತ್ತೂರು: ಕೋಡಿಂಬಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆ.31ರಿಂದ ಸೆ.2ರವರೆಗೆ ಕೋಡಿಂಬಾಡಿ ಅಶ್ವತ್ಥಕಟ್ಟೆ ವಠಾರದಲ್ಲಿ ನಡೆದ 39ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವೈಭವದ ಶೋಭಾಯಾತ್ರೆ ಸೆ.2ರಂದು ರಾತ್ರಿ ನಡೆಯಿತು.
ಆ.31ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಪ್ರತಿಷ್ಠಾ ಪೂಜೆ, ನ್ಯಾಯವಾದಿ ಅಶೋಕ ಆರಿಗ ಬಾರಿಕೆರವರಿಂದ ಧ್ವಜಾರೋಹಣ, ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ವಿನಾಯಕನಗರ ಯುವಶಕ್ತಿ ಗೆಳೆಯರ ಬಳಗದಿಂದ ಭಜನಾ ಸೇವೆ, ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗ್ರಾ.ಪಂ.ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ, ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಬಳಿಕ ಕುಡ್ಲ ತುಳುವಪ್ಪೆ ಕಲಾವಿದರಿಂದ ‘ಅಗ್ಗಿನಾತ್ ಮುಗಿಯುಜಿ ಬಾಯಿಡೇ’ ತುಳುನಾಟಕ ನಡೆಯಿತು.
ಸೆ.1ರಂದು ಬೆಳಿಗ್ಗೆ ವೇದಮೂರ್ತಿ ಶ್ರೀವತ್ಸ ಕೆದಿಲಾಯರವರ ನೇತೃತ್ವದಲ್ಲಿ 108 ತೆಂಗಿನಕಾಯಿ ಗಣಯಾಗ, ಗಣಯಾಗದ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಕೋಡಿಂಬಾಡಿ ಗ್ರಾಮ ವ್ಯಾಪ್ತಿಯ ಅಂಗನವಾಡಿ ಪುಟಾಣಿಗಳಿಂದ ಕಲಾ ವೈವಿಧ್ಯ, ರಾತ್ರಿ ಪುತ್ತೂರು ನಗರಸಭಾ ಸದಸ್ಯರಾದ ವಾಸ್ತುತಜ್ಞ ಪಿ.ಜಿ.ಜಗನ್ನಿವಾಸ ರಾವ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ನಿವೃತ್ತ ಯೋಧ ಪುಷ್ಪರಾಜ್ ಗೌಡ ಬಾರ್ತಿಕುಮೇರು, ಎಂ.ಎಸ್ಸಿ. ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ವಂದನಾ ಸಾಮಂತ್ ನೆಕ್ಕರಾಜೆ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿರುವ ಅನ್ವಿಕಾ ಪ್ರಭು ದಾರಂದಕುಕ್ಕುರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಭೆಯ ಬಳಿಕ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಬಳಿಕ ಗಯಾಪದ ಕಲಾವಿದೆರ್ ಅಭಿನಯದ ‘ಏತ್ ಪಂಡಲಾ ಆತೆ…ಅಯ್ಕೆ ಯಾನ್ ಮನಿಪುಜಿ’ ತುಳು ನಾಟಕ ನಡೆಯಿತು.
ಸೆ.2ರಂದು ಬೆಳಿಗ್ಗೆ ತಿರುಪತಿ ತಿರುಮಲ ಟ್ರಸ್ಟ್ ಮಹಿಳಾ ಭಜನಾ ಮಂಡಳಿ ಬೊಳುವಾರು, ಪುತ್ತೂರು ಇವರಿಂದ ಭಜನಾ ಸೇವೆ, ಗಣಹೋಮ, ಅಶ್ವತ್ಥಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ ವಿಸರ್ಜನಾ ಪೂಜೆ ಜರಗಿತು. ನಂತರ ಮಹಾಗಣಪತಿಯ ಶೋಭಾಯಾತ್ರೆ ಅಶ್ವತ್ಥಕಟ್ಟೆ ವಠಾರದಿಂದ ಹೊರಟು ಸೇಡಿಯಾಪು, ದಾರಂದಕುಕ್ಕುವರೆಗೆ ಸಾಗಿ ಮರಳಿ ಕೋಡಿಂಬಾಡಿ, ವಿನಾಯಕನಗರದಿಂದಾಗಿ ಮಠದಬೆಟ್ಟು ಶ್ರೀರಾಜರಾಜೇಶ್ವರಿ ದೇವಸ್ಥಾನ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿಯಿಂದ ಹಿಂತಿರುಗಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದವರೆಗೆ ಸಾಗಿ ಶಾಂತಿನಗರ ಕೆರೆಯಲ್ಲಿ ಶ್ರೀ ಮಹಾಗಣಪತಿಯ ವಿಗ್ರಹದ ಜಲಸ್ಥಂಭನ ನಡೆಯಿತು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ವಾರಿಸೇನ ಜೈನ್, ಪ್ರಧಾನ ಕಾರ್ಯದರ್ಶಿ ದೇವಾನಂದ ಕೋಡಿಂಬಾಡಿ, ಗ್ರಾ.ಪಂ.ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿ, ಪ್ರಮುಖರಾದ ಬಾಲಕೃಷ್ಣ ಬೋರ್ಕರ್ ಕೆ, ಜಯಾನಂದ ಕೆ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಎ.ಮುರಳೀಧರ ರೈ ಮಠಂತಬೆಟ್ಟು, ಕೇಶವ ಭಂಡಾರಿ ಕೈಪ, ಪ್ರಕಾಶ್ ಕುಮಾರ್ ಜೈನ್ ಮಿತ್ತಳಿಕೆ, ಜಯಪ್ರಕಾಶ್ ಬದಿನಾರು, ಕುಮಾರನಾಥ ಎಸ್., ಸುಭಾಶ್ ನಾಯಕ್ ನೆಕ್ಕರಾಜೆ, ಉಲ್ಲಾಸ್ ಕೋಟ್ಯಾನ್, ಜಗನ್ನಾಥ ಶೆಟ್ಟಿ ನಡುಮನೆ, ಯು.ಜಿ.ರಾಧಾ ಶಾಂತಿನಗರ, ಭರತ್ ಗೌಡ ನಿಡ್ಯ, ಶೇಖರ ಪೂಜಾರಿ ಜೇಡರಪಾಲು ಸಹಿತ ನೂರಾರು ಮಂದಿ ಭಾಗವಹಿಸಿದ್ದರು. ಪುತ್ತೂರು ನಗರ ಠಾಣಾ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.