ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ರಾಮಗಿರಿ ಶ್ರೀ ರಾಮ ಭಜನಾ ಮಂದಿರದಲ್ಲಿ ಆ.೩೧ರಿಂದ ಸೆ.೦೨ ರ ತನಕ ನಡೆದ ವೈಭವದ ಶ್ರೀ ಗಣೇಶೋತ್ಸವ ಸೆ.02ರಂದು ಸಮಾಪ್ತಿಗೊಂಡಿತು. ಮೂರು ದಿನಗಳ ಕಾಲ ಪೂಜಿಸಲ್ಪಟ್ಟ ಶ್ರೀ ಗಣೇಶ ವಿಗ್ರಹದ ವಿಸರ್ಜನ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಮೂರು ದಿನಗಳಲ್ಲಿ 4 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ವಿಶೇಷವಾಗಿ ಪ್ರತಿದಿನ ಮಧ್ಯಾಹ್ನ ಧಾರ್ಮಿಕ ಉಪನ್ಯಾಸ ನಡೆಯಿತು. ಮೊದಲ ದಿನ ಬಾಳ್ವೆಯ ಬೆಳಕು ವಿಷಯದಲ್ಲಿ ಬೆಂಗಳೂರಿನ ಚಿಂತಕ ದುರ್ಗಾಪರಮೇಶ್ವರ ಭಟ್ ಉಪನ್ಯಾಸ ನೀಡಿದರು. ಎರಡನೇ ದಿನ ಶ್ರೀ ಕ್ಷೇತ್ರ ಪುತ್ತೂರಿನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್‌ರವರು ದೇವಾಲಯಗಳು ಮತ್ತು ಧರ್ಮಜಾಗೃತಿ ಎಂಬ ವಿಷಯದಲ್ಲಿ ಹಾಗೂ ಮೂರನೇ ದಿನ ಜನಪದ ನಂಬಿಕೆ ಮತ್ತು ಹಿಂದೂ ಧರ್ಮ ಎಂಬ ವಿಷಯದಲ್ಲಿ ತಮ್ಮಣ್ಣ ಶೆಟ್ಟಿ ಮಾಣಿ ಉಪನ್ಯಾಸ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೊದಲ ದಿನ ವಾಗ್ದೇವಿ ಸಂಗೀತ ಶಾಲೆಯ ಶಿಷ್ಯೆ ವೃಂದದವರಿಂದ ಶಾಸ್ತ್ರೀಯ ಸಂಗೀತ, ಬೃಂದಾವನ ನಾಟ್ಯಾಲಯ ಕುಂಬ್ರ ಬಳಗದವರಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು. ಎರಡನೇ ದಿನ ಕವಿತಾ ದಿನಕರ ಶಿಷ್ಯವೃಂದದವರಿಂದ ಭಕ್ತಿ ರಸಮಂಜರಿ, ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘ ಶೃಂಗೇಶರಿ ಇವರಿಂದ ಭಕ್ತಿ ರಸಮಂಜರಿ, ವಿಶ್ವಭಾರತಿ ಕಲಾವಿದರಿಂದ ಹಾಗೂ ಅತಿಥಿ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ಮೂರನೇ ದಿನ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘ ಪ್ರಾಯೋಜಕತ್ವದಲ್ಲಿ ಕುಣಿತ ಭಜನೆ ಗಮನ ಸೆಳೆಯಿತು. ಇದಲ್ಲದೆ ಧಾರ್ಮಿಕ ರಸಪ್ರಶ್ನೆ,ಗಣೇಶನ ಚಿತ್ರಬಿಡಿಸುವ, ಭಕ್ತಿಗೀತೆ, ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು, ಕುಣಿತ ಭಜನೆ ಇತ್ಯಾದಿ ಜರಗಿತು. ಊರಪರವೂರ ಸಾವಿರಾರು ಭಕ್ತರು ಆಗಮಿಸಿ ಗಣಪತಿಗೆ ವಿವಿಧ ಪೂಜಾ ಸೇವೆಗಳನ್ನು ಮಾಡಿದರು.
ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ರೈ ಅರೆಪ್ಪಾಡಿ, ಕೋಶಾಧಿಕಾರಿ ಚಂದ್ರಕಾಂತ ಶಾಂತಿವನ, ಉಪಾಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಜತೆ ಕಾರ್ಯದರ್ಶಿ ಆಶಾಲತಾ ರೈ ಕುಂಬ್ರ, ಮಾಜಿ ಅಧ್ಯಕ್ಷರುಗಳಾದ ಕುಂಬ್ರ ದುರ್ಗಾಪ್ರಸಾದ್ ರೈ, ರತನ್ ರೈ ಕುಂಬ್ರ, ಗಣೇಶೋತ್ಸವ ಸಮಿತಿ ಸಂಚಾಲಕ ರಾಜಮೋಹನ್ ರೈ ನೀರಳ, ಮಂದಿರದ ಸಲಹಾ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಾಬು ಪೂಜಾರಿ ಬಡಕ್ಕೋಡಿ, ಚಂದ್ರಶೇಖರ ರೈ ಕುರಿಕ್ಕಾರ, ಪುರಂದರ ರೈ ಕುಯ್ಯಾರು, ಸುಂದರ ರೈ ಮಂದಾರ, ಅಂಕಿತ್ ರೈ ಕುಯ್ಯಾರು, ಮೇಘರಾಜ್ ರೈ ಮುಡಾಲ, ಚಿರಾಗ್ ರೈ ಬೆದ್ರುಮಾರು, ಯುವರಾಜ ಪೂಂಜಾ, ಸಂತೋಷ್ ರೈ ಕುಂಬ್ರ, ಪ್ರದೀಪ್ ಕುಮಾರ್, ಮಾಧವ ರೈ ಕುಂಬ್ರ, ವಿಶ್ವನಾಥ ರೈ ಕೋಡಿಬೈಲು, ಗಂಗಾಧರ ರೈ ಕುಯ್ಯಾರು, ಶೇಖರ ರೈ ಕುರಿಕ್ಕಾರ, ಉಮೇಶ್ ಕುಮಾರ್ ಬರಮೇಲು, ಕರುಣಾ ರೈ ಬಿಜಳ ಹಾಗೂ ಸರ್ವ ಸದಸ್ಯರುಗಳು ಭಕ್ತಾಧಿಗಳನ್ನು ಸ್ವಾಗತಿಸಿ ಪ್ರಸಾದ ನೀಡಿ ಸತ್ಕರಿಸಿದರು.
ವೈಭವದ ಶೋಭಾಯಾತ್ರೆ
ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯರವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳಿಂದ ಮೂರು ದಿನಗಳ ಕಾಲ ಪೂಜಿಸಲ್ಪಟ್ಟ ಶ್ರೀ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ ಆಕರ್ಷಕವಾಗಿ ನಡೆಯಿತು. ಆ.02 ರಂದು ಸಂಜೆ ಮಹಾಪೂಜೆಯ ಬಳಿಕ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆ ಆರಂಭಗೊಂಡಿತು. ಭಜನಾ ಮಂದಿರದಿಂದ ಕುಂಬ್ರ ಅಶ್ವತ್ಥ ಕಟ್ಟೆಯ ಬಳಿಕ ಮೆರವಣಿಗೆ ನಡೆದು ಕಟ್ಟೆಯ ಬಳಿ ಸಾರ್ವಜನಿಕರಿಂದ ಹಣ್ಣುಕಾಯಿ ಸಮರ್ಪಣೆ ಇತ್ಯಾದಿ ನಡೆಯಿತು. ತಿಂಗಳಾಡಿ ಶ್ರೀ ದೇವತಾ ಭಜನಾ ಮಂದಿರದಲ್ಲಿ ಪೂಜಿಸಲ್ಪಟ್ಟ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆಯು ಕುಂಬ್ರ ಕಟ್ಟೆಯ ಬಳಿಗೆ ಆಗಮಿಸಿ ದ್ವಂದ್ವ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶೇಖಮಲೆ ಪುಣ್ಯ ನದಿಯಲ್ಲಿ ಎರಡು ಗಣೇಶ ವಿಗ್ರಹದ ಜಲಸ್ತಂಭನ ನಡೆಯಿತು. ನೂರಾರು ಭಕ್ತಾಧಿಗಳು ಶೋಭಾಯಾತ್ರೆಯುದ್ದಕ್ಕೂ ಜೈಕಾರ ಹಾಕುತ್ತಾ ಸಾಗಿಬಂದರು. ಈ ಸಂದರ್ಭದಲ್ಲಿ ನಡೆದ ಕುಣಿತ ಭಜನಾಮೃತ ಗಮನಸೆಳೆಯಿತು.
` ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳ ಕಾಲ ನಡೆದ ಗಣೇಶೋತ್ಸವದಲ್ಲಿ ಊರಪರವೂರ ನೂರಾರು ಭಕ್ತರು ಪಾಲ್ಗೊಂಡು ಶ್ರೀ ಗಣೇಶನ ಕೃಪೆಗೆ ಪಾತ್ರರಾದರು. ಸುಮಾರು 4 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.’ – ರಾಜೇಶ್ ರೈ ಪರ್ಪುಂಜ, ಅಧ್ಯಕ್ಷರು ಶ್ರೀರಾಮ ಭಜನಾ ಮಂದಿರ ಕುಂಬ್ರ