ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರವರ ಮನೆಯಲ್ಲಿ 15 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮವು ಸೆ..2ರಂದು ವಿಜ್ರಂಭಣೆಯಿಂದ ಜರಗಿತು. ನಾಗರ ಪಂಚಮಿಯ ದಿನದಂದು ಶುಭ ಮುಹೂರ್ತದಲ್ಲಿ ವಿಗ್ರಹದ ರಚನೆ ಆರಂಭಿಸಿ ಚೌತಿ ದಿನದಂದು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಪೂಜೆಯ ಬಳಿಕ ಸಂಜೆ ದೀಪಾರಾಧನೆ, ಮಹಾರಂಗಪೂಜೆ ವಿಶೇಷವಾದ ಫಲಕಣಜ ಸೇವೆ, ಮರುದಿನ ಪ್ರಾತಃಕಾಲದಲ್ಲಿ ಸೂರ್ಯೋದಯದ ಮುಂಚೆ ಫಲಕಣಜದ ವಿಸರ್ಜನೆ ನಡೆಯಿತು. ಮಧ್ಯಹ್ನ 12 ಕಾಯಿ ಗಣಪತಿ ಹೋಮ, ಸಂಜೆ ಪುಷ್ಪಾಲಂಕಾರ, ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಶೋಭಾಯಾತ್ರೆ ಜರಗಿ, ಗಣೇಶನ ವಿಗ್ರಹವನ್ನು ಜಲಸ್ತಂಭನ ಮಾಡಲಾಯಿತು. ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಪಂಜಿಗುಡ್ಡೆ ಈಶ್ವರಭಟ್ ರವರ ಪುತ್ರ ವರುಣ್ ಕೆ ಪಿ ರವರು ಸ್ವಯಂ ಗಣೇಶನ ವಿಗ್ರಹವನ್ನು ರಚಿಸಿ ಪೂಜಿಸಿ ಜಲಸ್ತಂಭನ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ಸುಮಾರು 500 ಕ್ಕೂ ಮಿಕ್ಕಿ ಭಕ್ತಾಧಿಗಳು ಪಾಲ್ಗೊಂಡಿದ್ದರು.
ಧನ ಸಹಾಯ: ಇದೇ ಸಂದರ್ಭದಲ್ಲಿ ಅಸೌಖ್ಯದಿಂದ ಬಳಲುತ್ತಿದ್ದ 5 ಮಂದಿಯ ಚಿಕಿತ್ಸೆಗಾಗಿ ತಲಾ ರೂ. 5,000 ದಂತೆ ಧನ ಸಹಾಯವನ್ನು ವಿತರಿಸಲಾಯಿತು. ಬನ್ನೂರು ನಿವಾಸಿ ಉಮೇಶ್, ಜಯಂತ ಎರ್ಮುಂಜ ಪಳ್ಳ, ಕುಶಾಲಪ್ಪ ಗೌಡ, ಉಮ್ಮರ್ ಫಾರೂಕ್ ಎರ್ಮುಂಜ, ಶಶಿಧರ ಅವರ ಚಿಕಿತ್ಸೆಗಾಗಿ ತಲಾ ರೂ. 5,000 ದಂತೆ 30000 ರೂ. ಧನಸಹಾಯ ಅಲ್ಲದೆ ಪುತ್ತೂರು ಶ್ರೀ ರಾಮಕೃಷ್ಣ ಸೇವಾ ಅಶ್ರಮಕ್ಕೆ 10,000 ಸಾವಿರ ರೂ. ದೇಣಿಗೆಯನ್ನು ನೀಡಲಾಯಿತು. ಹೀಗೆ 40,000 ರೂ. ನ್ನು ವಿತರಿಸಲಾಯಿತು. ಈ ದೇಣಿಗೆಯನ್ನು ಬನ್ನೂರು ನಿವಾಸಿ ಗೋಪಾಲಕೃಷ್ಣ ರವರ ಪುತ್ರ ಗಣೇಶ್ ಭಟ್ ರೂ 20,000 ಹಾಗೂ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಗೌಡ ರೂ.20,000 ದೇಣಿಗೆ ನೀಡಿದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹಾಗೂ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಗೌಡ ಅವರು ದೇಣಿಗೆಯನ್ನು ವಿತರಿಸಿದರು. ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಜಯಶ್ರೀ ದಂಪತಿ ಭಕ್ತಾಧಿಗಳನ್ನು ಸ್ವಾಗತಿಸಿ ಸತ್ಕರಿಸಿದರು.