ಕ್ಷೇತ್ರ ಮಹಾಕ್ಷೇತ್ರವಾಗಿ ಬೆಳಗುವಂತೆ ಭಕ್ತರ ಸಹಕಾರವಿರಲಿ – ಶಂಕರ ಎಂ ಬಿದರಿ
ಪುತ್ತೂರು: ಕಾಡುಗಳ್ಳ ವೀರಪ್ಪನ್ ಗ್ಯಾಂಗ್ ನ್ನು ಮಟ್ಟಹಾಕಿದ ಕಾರ್ಯಾಚರಣೆಯಿಂದ ಖ್ಯಾತರಾದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಎಂ ಬಿದರಿ ಅವರು ಸೆ.5 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಶ್ರೀ ದೇವರ ದರುಶನ ಪಡೆದ ಅವರಿಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಶಾಲು ಹೊದಿಸಿ ಗೌರವಿಸಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಪ್ತಸಾದ ವಿತರಿಸಿದರು. ಈ ಸಂದರ್ಭದಲ್ಲಿ ಶಂಕರ್ ಬಿದರಿಯವರು ದೇವಸ್ಥಾನದ ಅಭಿವೃದ್ಧಿ ಕುರಿತು ದೇವಳದ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿದರು.ಕ್ಷೇತ್ರ ಬಹಳ ದೊಡ್ಡ ಶಕ್ತಿವಂತ ಕ್ಷೇತ್ರ. ಈ ಕ್ಷೇತ್ರ ಮಹಾಕ್ಷೇತ್ರವಾಗಿ ಬೆಳಗಲು ಭಕ್ತ ಸಮುದಾಯದ ಸಹಕಾರವಿರಲಿ ಎಂದು ಶಂಕರ ಬಿದರಿ ಅವರು ಹೇಳಿದರು.
ಸನ್ಮಾನ:
ಶಂಕರ್ ಬಿದರಿಯವರು 1978ರಲ್ಲಿ ಐಪಿಎಸ್‌ಗೆ ಸೇರಿ 2012ರಲ್ಲಿ ನಿವೃತ್ತಿಯಾಗುವವರೆಗೆ 34 ವರ್ಷಗಳ ಕಾಲ ಸೇವೆ ಸಲ್ಲಿಸಿದರಲ್ಲದೆ ಇವರ ಚಟುವಟಿಕೆ ನಿವೃತ್ತಿಯ ನಂತರವೂ ಪಿಎಚ್ ಡಿ ಪ್ರಬಂದಕ್ಕೆ ಪ್ರೇರಣೆ ನೀಡಿದೆ. ಕಾಡುಗಳ್ಳ ವೀರಪ್ಪನ್ 200 ಸಂಖ್ಯೆಯನ್ನು 5 ಕ್ಕೆ ಇಳಿಸಿದ ಕೀರ್ತಿ ಅವರದಾಗಿದೆ. ಈ ನಿಟ್ಟಿನಲ್ಲಿ ದೇವಳದ ವತಿಯಿಂದ ಅವರನ್ನು ದೇವಳದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಅವರೊಂದಿಗೆ ಕರ್ತವ್ಯ ನಿರ್ವಹಿಸಿದ ನಿವೃತ್ತ ಎಸ್ಪಿ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮಚಂದ್ರ ಕಾಮತ್ ನಗರಸಭೆ ಸದಸ್ಯರಾದ ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದೇವಳದ ಭೇಟಿ ಬಳಿಕ ಅವರೊಂದಿಗೆ ಕರ್ತವ್ಯ ನಿರ್ವಹಿಸಿದ ರಾಮದಾಸ್ ಗೌಡ ಅವರ ಮನೆಗೆ ಭೇಟಿ ನೀಡಿ ಮಂಗಳೂರಿಗೆ ತೆರಳಿದರು.