ಪುತ್ತೂರು ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಬಹುಕೋಟಿ ಯೋಜನೆ ಅನುಷ್ಠಾನಕ್ಕೆ ಸಂಕಲ್ಪದ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ದೇವಸ್ಥಾನದ ಆಡಳಿತ ಮಂಡಳಿ ಕೈಗೊಳ್ಳುವ ಯೋಜನೆಗೆ ಭಕ್ತರ ಸಹಮತ

  •  ರೂ. 36 ಕೋಟಿಗೂ ಮಿಕ್ಕಿದ ಮಾಸ್ಟರ್ ಪ್ಲಾನ್; ಸಂಜೀವ ಮಠಂದೂರು
  •  ಯೋಜನೆ ಮುಂದಿಟ್ಟಿದ್ದೇವೆ, ಭಕ್ತರ ಸಲಹೆಯಂತೆ ಮುಂದಿನ ನಡೆ ; ಕೇಶವಪ್ರಸಾದ್ ಮುಳಿಯ
  •  ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಿ ; ಮುರಳಿಕೃಷ್ಣ ಹಸಂತಡ್ಕ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕ್ಷೇತ್ರವನ್ನು ಇನ್ನಷ್ಟೂ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಬಹುಕೋಟಿಯ ಹೊಸ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕಾರ್ಯಗತಗೊಳಿಸುವ ಸಲುವಾಗಿ ಸೆ.4ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಕ್ತರ ಸಭೆ ನಡೆಯಿತು.ಸಭೆಯಲ್ಲಿ ಭಕ್ತಾದಿಗಳು ವಿವಿಧ ಸಲಹೆಗಳನ್ನು ನೀಡಿದ್ದು ದೇವಾಲಯದ ಆಡಳಿತ ಮಂಡಳಿ ಕೈಗೊಳ್ಳುವ ಯೋಜನೆಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಹೊಸ ಯೋಜನೆಯಲ್ಲಿ ವಿದ್ಯಾ ದಾಸೋಹಕ್ಕೆ ದಾನಿಗಳನ್ನು ಸೇರಿಸುವುದು, ಉಪಗುಡಿಗಳ ದ್ವಾರಗಳಿಗೆ ಬೆಳ್ಳಿಯ ದ್ವಾರ ಅಳವಡಿಸುವುದು, ಧ್ವಜಸ್ಥಂಭದ ಕೆಳಗಿನ ಭಾಗಕ್ಕೆ ಚಿನ್ನದ ಹೊದಿಕೆ ಹಾಕುವುದು, ಕೆರೆಯ ಪಕ್ಕದಲ್ಲಿ ಯಾತ್ರಿ ನಿವಾಸ, ನಾಲ್ಕು ಬ್ಲಾಕ್‌ಗಳಲ್ಲಿ ಕಮರ್ಷಿಯಲ್ ಕಟ್ಟಡ, ರಥ ಬೀದಿಯಲ್ಲಿ ಮಹಾದ್ವಾರ, ಆವರಣಗೋಡೆ, ರಥ ಬೀದಿಯ ಎರಡು ಬದಿ ಬಪರ್‌ಝೋನ್ ರಸ್ತೆ, ಬ್ರಹ್ಮರಥ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗುವಂತೆ ರಥಮಂದಿರ ಅಭಿವೃದ್ಧಿ, ಧ್ಯಾನರೂಢ ಶಿವನ ಮೂರ್ತಿಯ ಬಳಿ ಮಹಾಶಿವ ತೀಮ್ ಪಾರ್ಕ್ ಸ್ಥಾಪನೆ, ಭಾರತದ ನಕ್ಷೆ ಮಾಡಿ 12 ಜ್ಯೋತಿರ್ಲಿಂಗ ರಚನೆ, ನದಿಯ ನೀರು ಸಮುದ್ರಕ್ಕೆ ಬೀಳುವಂತೆ ಸಮುದ್ರದ ಪರಿಕಲ್ಪನೆ, ಥಿಯೇಟರ್, ಗದ್ದೆಯ ಸುತ್ತ ಫುಟ್ ಪಾತ್, ಶಿವನ ವಿವಿಧ ರೂಪ ತೋರಿಸುವ ಲೇಸರ್ ಶೋ, ಪುಷ್ಕರಣಿ ಅಭಿವೃದ್ಧಿ, ಗೋಶಾಲೆ ಸೇರಿದಂತೆ ಹಲವಾರು ವಿವಿಧ ಅಭಿವೃದ್ಧಿ ಕಾರ್ಯಕೈಗೊಳ್ಳುವ ಕುರಿತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ಇಂಜಿನಿಯರ್ ಮತ್ತು ಆರ್ಕಿಟೆಕ್ಟ್‌ರವರ ಮೂಲಕ ಯೋಜನೆಗಳ ತ್ರಿಡಿ ಶೋ ಪ್ರದರ್ಶಿಸಿ ಮಾಹಿತಿ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಭಕ್ತರು ವಿವಿಧ ಸಲಹೆ ನೀಡಿ ಆಡಳಿತ ಮಂಡಳಿ ಹಾಕಿಕೊಂಡ ಯೋಜನೆಗೆ ಒಮ್ಮತ ವ್ಯಕ್ತಪಡಿಸಿದರು.

36 ಕೋಟಿ ರೂ.ಗೂ ಮಿಕ್ಕಿದ ಮಾಸ್ಟರ್ ಪ್ಲಾನ್ ಶಾಶ್ವತ ಯೋಜನೆಯಾಗಿರಲಿ: ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಸಭೆಯಲ್ಲಿ ಬಹಳಷ್ಟು ಸಲಹೆ ಬಂದಿದೆ. ಇದನ್ನು ದೇವಸ್ಥಾನದ ಆಡಳಿತ ಮಂಡಳಿ, ಇಂಜಿನಿಯರ್‌ಗಳ ಜೊತೆ ಚರ್ಚಿಸಿ ವಾಸ್ತುಬದ್ದವಾಗಿ ಜಾರಿಗೊಳಿಸುವ ಕಾರ್ಯ ಕೈಗೊಳ್ಳುತ್ತೇವೆ. ಈಗಾಗಲೇ ಪುಡಾದಿಂದ ರೂ.1 ಕೋಟಿಯಲ್ಲಿ ಬನ್ನೂರು ಬಾವುದಕೆರೆ ಮತ್ತು ರೂ.50 ಲಕ್ಷದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿಗೆ ಅನುದಾನ ಇಡಲಾಗಿದೆ. ಇದರ ಜೊತೆಗೆ ವೇಸ್ಟ್‌ಮೆನೇಜ್‌ಮೆಂಟ್‌ಗೆ ಸಂಬಂಧಿಸಿ ರೂ.25 ಲಕ್ಷಕ್ಕೆ ಟೆಂಡರ್ ಆಗಿದೆ. ಒಟ್ಟಿನಲ್ಲಿ ದೇವಳದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿ ನಡೆಯುವಾಗ ಜಾಗೃತ ಸಮಿತಿಯೂ ರಚನೆ ಮಾಡಬೇಕು. ಬ್ರಹ್ಮಕಲಶದ ಸಿದ್ದತೆಗೂ ಸಮಿತಿ ರಚನೆ ಆಗಬೇಕು. ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಿಂದ ಹಂತ ಹಂತವಾಗಿ ಮತ್ತು ಧಾರ್ಮಿಕ ಇಲಾಖೆಯಿಂದಲೂ ಅನುದಾನಕ್ಕೆ ಪ್ರಯತ್ನಿಸುತ್ತೇನೆ ಎಂದರು.

ಮುಂದಿನ 50 ವರ್ಷವೂ ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಬರುವ ಭಕ್ತರಿಗೆ ಯಾವ ರೀತಿಯ ಸೌಲಭ್ಯ ಒದಗಿಸಬೇಕು. ಅದಕ್ಕೆ ಇವತ್ತು ಹಾಕಿದ ಯೋಜನೆ ಶಾಶ್ವತವಾಗಿರಬೇಕು. ಸುಬ್ರಹ್ಮಣ್ಯದಲ್ಲಿ ೩೦೦ ಕೋಟಿ ರೂ., ಯೋಜನೆ ಹಾಕಲಾಗಿದೆ. ಅದು ಐದತ್ತು ವರ್ಷದಲ್ಲಿ ಪೂರ್ಣ ಆಗುತ್ತದೆ. ಪುತ್ತೂರಿನಲ್ಲೂ ರೂ. 36 ಕೋಟಿಗೂ ಮಿಕ್ಕಿ ಮಾಸ್ಟರ್ ಪ್ಲಾನ್ ಹಾಕಲಾಗಿದೆ. ಇದರಲ್ಲಿ ಹೊಸದಾಗಿ ಒಂದು ಆವರಣಗೋಡೆ, ಶಿವನ ಪಾರ್ಕ್ ಬಿಟ್ಟರೆ ಹಿಂದಿನವರು ಮಾಡಿದ್ದನ್ನು ಮುಂದುವರಿಸುವ ಯೋಜನೆ ಹಲವು ಇದೆ. ಈ ಹಿಂದಿನ ಸಮಿತಿ ಸಭೆ ಕರೆದಾಗ ಯಾವುದೂ ಕೂಡಾ ಪಂಚವಾರ್ಷಿಕ, ದಶ ವಾರ್ಷಿಕ ಯೋಜನೆಗಳಾಗಿರಬಾರದು ಎಂದು ತಿಳಿಸಿದ್ದೆ. ಸಮಿತಿ ಯಾವುದಾದರು ಒಂದು ಕೆಲಸ ಕೈಗೊಂಡರೆ ಅದನ್ನು ಪೂರ್ಣಗೊಳಿಸಬೇಕು. ಇದನ್ನು ಯಾಕೆ ಉಲ್ಲೇಖ ಮಾಡಿದ್ದೇನೆಂದರೆ ಸಮಿತಿಯವರು ಉತ್ತಮ ಉದ್ದೇಶ ಇಟ್ಟುಕೊಂಡು ಭೋಜನ ಶಾಲೆ ನಿರ್ಮಾಣಕ್ಕೆ ಹೊರಟರು. ಆದರೆ ಮತ್ತೆ ಗುತ್ತಿಗೆದಾರರಿಗೆ ಹಣ ಕೊಡಲಿಲ್ಲ ಎಂದು ನನ್ನ ಬಳಿಗೆ ಬಂದಿದ್ದರು. ಕೊನೆಗೆ ನಾನು ಎಂಡೋಮೆಂಟ್ ಕಮೀಷನರ್ ಮೂಲಕ ಹಣ ಕೊಡಿಸುವ ಕೆಲಸ ಮಾಡಿಸಿದೆ. ಆದರೂ ಅನ್ನಛತ್ರ ಪೂರ್ಣವಾಗಿಲ್ಲ. ಸುಮಾರು 10 ವರ್ಷದ ಹಿಂದೆ ಆರಂಭಿಸಿದ ಸಭಾಭವನ ಕೂಡಾ ಪರಿಪೂರ್ಣ ಆಗಿಲ್ಲ. ಆ ಸಂದರ್ಭದಲ್ಲಿ ರೂ. 1 ಕೋಟಿಯಲ್ಲಿ ಕಟ್ಟಡ ಪೂರ್ಣ ಆಗುತ್ತಿತ್ತು. ಇವತ್ತು ರಿನೊವೇಶನ್‌ಗೆ ರೂ.1 ಕೋಟಿ ಬೇಕು. ಹೀಗೆ ನಿಗದಿತ ವರ್ಷದಲ್ಲಿ ಕಾಮಗಾರಿಗಳಾಗಿದ್ದಾಗ ಅದರ ವೆಚ್ಚ ಹೆಚ್ಚಾಗುತ್ತದೆ. ಹಾಗಾಗಿ ಕಾಲಮಿತಿಯಲ್ಲಿ ಎಸ್ಟಿಮೇಟ್‌ನಂತೆ ಎಲ್ಲಾ ಕಾಮಗಾರಿ ಮುಗಿಸಬೇಕೆಂದು ಅಧ್ಯಕ್ಷರಿಗೆ ಹೇಳಿದ್ದೇನೆ. ಅದಕ್ಕೆ ಅಧ್ಯಕ್ಷರು ಕೂಡಾ ನಮಗೆ ಎಷ್ಟು ಮಾಡಲಾಗುತ್ತದೆಯೋ ಅಷ್ಟನ್ನೆ ಕೈಗೆತ್ತಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ. ಒಮ್ಮೆ ಧಾರ್ಮಿಕ ದತ್ತಿ ಇಲಾಖೆಯಿಂದ ಅನುಮೋದನೆ ಸಿಕ್ಕಿದರೆ ಅದರ ಪ್ರಕಾರ ಕೆಲಸ ಕಾರ್ಯ ನಡೆಯುತ್ತದೆ. ಮುಂದಿನ ದಿನ ಧಾರ್ಮಿಕ ಇಲಾಖೆಯ ಸಚಿವರು ಬರುವ ಸಾಧ್ಯತೆ ಇದೆ ಎಂದು ಸಂಜೀವ ಮಠಂದೂರು ಹೇಳಿದರು.

ಯೋಜನೆ ಮುಂದಿಟ್ಟಿದ್ದೇವೆ, ಭಕ್ತರ ಸಲಹೆಯಂತೆ ಮುಂದಿನ ನಡೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯರವರು ಮಾತನಾಡಿ, 22 ಅಭಿವೃದ್ದಿ ಯೋಜನೆಯನ್ನು ಮುಂದಿಟ್ಟಿದ್ದೇವೆ. ಇದಕ್ಕೆಲ್ಲಾ ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಇದರಲ್ಲಿ 8 ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಇದರಲ್ಲಿ ಸಾವಿರಾರು ವರ್ಷಗಳ ಬಾಳಿಕೆ ಬರುವ ಶಿಲಾಮಯ ಆವರಣಗೋಡೆ ಕಾಮಗಾರಿ ಮತ್ತು ಅನ್ನಛತ್ರದ ಕಾಮಗಾರಿ ನಡೆಯುತ್ತದೆ. ಎಲ್ಲಾ ಯೋಜನೆಯನ್ನು ಮುಂದಿಟ್ಟಿದ್ದೇವೆ. ಭಕ್ತರ ಸಲಹೆಯಂತೆ ನಮ್ಮ ಮುಂದಿನ ನಡೆ ಇರಲಿದೆ. ಯೋಜನೆಯಲ್ಲಿ ಬದಲಾವಣೆಗೂ ಅವಕಾಶವಿದೆ ಎಂದ ಹೇಳಿದರು.

ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಿ: ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕರವರು ಮಾತನಾಡಿ, ದೇವಳದ ಅಭಿವೃದ್ಧಿಯಲ್ಲಿ ಭಕ್ತರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಭಕ್ತರು ಎಲ್ಲಾ ರೀತಿಯಲ್ಲಿ ಕೈ ಜೋಡಿಸುವಂತೆ ವಿನಂತಿಸಿದರು.

ದೇವಳದ ಸುತ್ತಲಿನ ಆವರಣವೂ ದೇವಾಲಯದಂತೆ: ಗುಡಿಗಳು ಪ್ರಾಕಾರಗಳು ಮಾತ್ರ ದೇವಸ್ಥಾನವಲ್ಲ. ದೇವಳದ ಹೊರಾಂಗಣದ ಸಂಪೂರ್ಣ ಆವರಣವೂ ದೇವಸ್ಥಾನವಿದ್ದಂತೆ. ಇಂತಹ ಮನೋಭಾವ ಭಕ್ತರಲ್ಲಿ ಮೂಡಬೇಕು. ಆಗ ಅಭಿವೃದ್ಧಿ ಕಾರ್ಯಕ್ಕೆ ಉತ್ತಮ ಯಶಸ್ಸು ಸಿಗಲಿದೆ. ಈ ನಿಟ್ಟಿನಲ್ಲಿ ಆವರಣ ಗೋಡೆ, ಕಟ್ಟಡ ರಚನೆ ಶಬ್ದಗಳಿಗಿಂತ ಇನ್ನೂ ಉತ್ತಮ ರೀತಿಯ ಭಾವನಾತ್ಮಕ, ಭಕ್ತಿ ಪೂರ್ವಕವಾದ ಪದಪ್ರಯೋಗ ಮಾಡುವುದು ಉತ್ತಮ ಎಂದು ನ್ಯಾಯವಾದಿ ಶಿವಪ್ರಸಾದ್ ಇ ಸಲಹೆ ನೀಡಿದರು. ಮಾಸ್ಟರ್ ಪ್ಲಾನ್ ಡೆವೆಲಪ್ ಮಾಡಿದ ರಾಮ್ ಪ್ರಕಾಶ್, ಶಿವಪ್ರಕಾಶ್, ರವೀಶ್, ಅಕ್ಷಯ್ ರಾಮ್, ಆರ್ಕಿಟೆಕ್ಟ್ ಸಚ್ಚಿದಾನಂದ ಅವರು ಯೋಜನೆಗಳ ೩ಡಿ ಪ್ರದರ್ಶನ ತೋರಿಸಿ ವಿವರಿಸಿದರು. ನಗರಸಭೆ ಸದಸ್ಯರಾಗಿರುವ ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಪುಷ್ಕರಣಿಯ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು.

ನ್ಯಾಯವಾದಿ ಶಿವಪ್ರಸಾದ ಇ, ನಿವೃತ್ತ ಶಿಕ್ಷಕಿ ವಸಂತಿ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ರಾಜೇಶ್ ಪವರ್‌ಪ್ರೆಸ್‌ನ ರಘುನಾಥ ರಾವ್, ಸುದರ್ಶನ್ ಮುರ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಪಿ.ಜಿ.ಚಂದ್ರಶೇಖರ್ ವಿವಿಧ ಸಲಹೆ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯೆ ಡಾ. ಸುಧಾ ಎಸ್ ರಾವ್ ಅವರು ವಿದ್ಯಾದಾಸೋಹ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸದಸ್ಯರಾದ ರಾಮದಾಸ್ ಗೌಡ, ರಾಮಚಂದ್ರ ಕಾಮತ್, ಬಿ.ಕೆ.ವೀಣಾ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ದೇವಳದ ಕಾರ್ಯನಿರ್ವಹಣಾಽಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಸೇರಿದಂತೆ ಭಕ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

ಧಾನ್ಯರೂಢ ಮಹಾಶಿವನ ಮೂರ್ತಿ‌ಬಳಿ ಭಾರತದ ನಕ್ಷೆ ಮಾಡಿ 12 ಜ್ಯೋತಿರ್ಲಿಂಗ ರಚನೆ ಜೊತೆಗೆ, ಭಾರತದ‌ ಧಾರ್ಮೀಕ ಕ್ಷೇತ್ರಗಳನ್ನು, ಎಲ್ಲಾ ಪವಿತ್ರ ನದಿಗಳನ್ನು ಗುರುತಿಸಲಾಗುವುದು. ನದಿಗಳೆಲ್ಲ ಸಮುದ್ರಕ್ಕೆ ಸಂಪರ್ಕ ಹೊಂದುವಂತಹ‌ ರಚನೆಗಳು ಮತ್ತು ಸಮುದ್ರದ ಪರಿಕಲ್ಪಣೆಯನ್ನು ಇಲ್ಲಿ ತೋರಿಸಲಾಗುತ್ತದೆ.

ಕೇಶವಪ್ರಸಾದ್ ಮುಳಿಯ ಅಧ್ಯಕ್ಷರು
ಶ್ರೀ ಮಹಾಲಿಗೇಶ್ವರ ದೇವಸ್ಥಾನ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.