ಬಾಲಕ,ಬಾಲಕಿಯರ ವಿಭಾಗದಲ್ಲಿ ರಾಮಕುಂಜ ಪ.ಪೂ.ಕಾಲೇಜು ತಂಡ ಚಾಂಪಿಯನ್
ರಾಮಕುಂಜ: ಸೆ.೩ರಂದು ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ನಡೆದ ಕಡಬ ತಾಲೂಕು ಮಟ್ಟದ ಪಿಯುಸಿ ವಿದ್ಯಾರ್ಥಿಗಳ ಖೋ ಖೋ ಪಂದ್ಯಾಟದಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ನೂಜಿಬಾಳ್ತಿಲ ಬೆಥನಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಂಡ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಉದ್ಘಾಟನೆ:
ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಯದುಶ್ರೀ ಆನೆಗುಂಡಿಯವರು ಪಂದ್ಯಾಟ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡೆಯು ಪರಸ್ಪರ ಸ್ಪರ್ಧೆಯನ್ನು ಉಂಟುಮಾಡುತ್ತದೆ. ಈ ಸ್ಪರ್ಧೆಯು ಆರೋಗ್ಯಕರವಾಗಿರಬೇಕು, ಸಹನೆ ಮತ್ತು ಸಹಬಾಳ್ವೆಯ ಸಂದೇಶವನ್ನು ನಾವು ಅರಿತುಕೊಂಡು ಅದರಂತೆ ನಡೆಯಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಕೊಯಿಲ ಶಾಖಾ ಸಲಹಾ ಸಮಿತಿಯ ಅಧ್ಯಕ್ಷ ಜನಾರ್ದನ ಕದ್ರರವರು ಶುಭಹಾರೈಸಿದರು. ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಸುಬ್ರಹ್ಮಣ್ಯ ಕಾರಂತ್‌ರವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ವಿಶ್ವೇಶ್ವರ ಎಂ., ಸ್ವಾಗತಿಸಿದರು. ಆಂಗ್ಲಭಾಷಾ ವಿಭಾಗದ ಸತೀಶ್ ಜಿ ಆರ್ ವಂದಿಸಿದರು. ಬಳಿಕ ಖೋ-ಖೋ ಪಂದ್ಯಾಟ ನಡೆಯಿತು.
ವಿಜೇತ ತಂಡಗಳಿಗೆ ಸಂಜೆ ನಡೆದ ಸಮಾರೋಪದಲ್ಲಿ ಬಹುಮಾನ ವಿತರಿಸಲಾಯಿತು. ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಗುರು ಸತೀಶ್ ಭಟ್ ಬಿಳಿನೆಲೆಯವರು ಬಹುಮಾನ ವಿತರಿಸಿದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್, ರಘುರಾಮ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.