ಪ್ರಶ್ನೆಪತ್ರಿಕೆ ಹಂಚಿಕೆಯಲ್ಲಿ ಎಡವಟ್ಟು: ವಿದ್ಯಾರ್ಥಿಗಳು ತಬ್ಬಿಬ್ಬು

0

ದ್ವಿತೀಯ ಸೆಮೆಸ್ಟರ್ ಪ್ರಶ್ನೆ ಪತ್ರಿಕೆ ಬದಲು ಪ್ರಥಮ ಸೆಮೆಸ್ಟರ್ ಪ್ರಶ್ನೆಪತ್ರಿಕೆ ಹಂಚಿಕೆ!

ಪರೀಕ್ಷೆ ಮುಂದೂಡಿಕೆ

ಪುತ್ತೂರು: ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಮಂಗಳೂರು ವಿಶ್ವವಿದ್ಯಾನಿಲಯದಿಂದ 2021-22ನೇ ಸಾಲಿನ ಪದವಿ ಪರೀಕ್ಷೆಗಳು ಸೆ.೫ರಂದು ಆರಂಭಗೊಂಡಿದೆ. ಪದವಿ ಪರೀಕ್ಷೆಗಳು ಆರಂಭಗೊಂಡ ದಿನವೇ ಮಂಗಳೂರು ವಿಶ್ವವಿದ್ಯಾನಿಲಯ ಎಡವಟ್ಟು ಮಾಡಿಕೊಂಡಿದೆ. ಇದರ ಪರಿಣಾಮ ಪರೀಕ್ಷಾರ್ಥಿಗಳು ತಬ್ಬಿಬ್ಬುಗೊಂಡು ಪರದಾಟ ಪಡುವಂತಾಗಿದೆ.

ಪ್ರಥಮ ಪದವಿಯ ಬಿಬಿಎ ವಿಭಾಗದ ದ್ವಿತೀಯ ಸೆಮೆಸ್ಟರ್‌ನ ಕನ್ನಡ ಪರೀಕ್ಷೆ ಸೆ.5ರಂದು ನಡೆಯಬೇಕಾಗಿದ್ದು ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಸಂದರ್ಭದಲ್ಲಿ ಎಡವಟ್ಟು ಉಂಟಾಗಿದೆ. ದ್ವಿತೀಯ ಸೆಮೆಸ್ಟರ್ ಪ್ರಶ್ನೆ ಪತ್ರಿಕೆಯ ಬದಲಿಗೆ ಪ್ರಥಮ ಸೆಮೆಸ್ಟರ್‌ನ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ಹಂಚುವ ಮೂಲಕ ಮಂಗಳೂರು ವಿ.ವಿ.ಯ ಎಡವಟ್ಟಿನಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೂಡಲೇ ಆಯಾ ಕಾಲೇಜುಗಳ ಪರೀಕ್ಷಾ ವಿಭಾಗದ ಮುಖ್ಯಸ್ಥರು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರ ಗಮನಕ್ಕೆ ಪ್ರಶ್ನೆಪತ್ರಿಕೆ ಎಡವಟ್ಟಿನ ಕುರಿತು ತಿಳಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಸಂಬಂಧ ತಯಾರಿಯನ್ನು ಮಾಡಿದ್ದರು. ಇದೀಗ ಸಂಬಂಧಿಸಿದವರ ಎಡವಟ್ಟಿನಿಂದ ಮತ್ತೊಮ್ಮೆ ಪರೀಕ್ಷಾ ತಯಾರಿ ಮಾಡಿಕೊಳ್ಳಬೇಕಾಗಿದೆ. ಕೊರೋನಾದ ಆರ್ಭಟದ ಬಳಿಕ ಈಗಾಗಲೇ ಸುಧಾರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡದೆ ವಿ.ವಿ.ಯು ಉತ್ತಮ ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸಿದ್ದಾರೆ. ವಿ.ವಿ.ಯು ಶೈಕ್ಷಣಿಕ ವರ್ಷವನ್ನು ನಿಗದಿತ ಅವಧಿಗೆ ಮುನ್ನ ಮುಗಿಸಲು ವಿಳಂಬ ಮಾಡಿದ್ದು, ಇದೀಗ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ಅದಲು ಬದಲುಗೊಳಿಸುವ ಮೂಲಕ ಮತ್ತೊಂದು ತಪ್ಪನ್ನು ಮಾಡಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಪ್ರಶ್ನೆ ಪತ್ರಿಕೆ ಹಂಚಿಕೆ ಗೊಂದಲದಿಂದಾಗಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು, ವಿವೇಕಾನಂದ ಕಾಲೇಜು ಸಹಿತ ಹಲವೆಡೆ ಪರೀಕ್ಷೆ ಮುಂದೂಡಲ್ಪಟ್ಟಿದೆ.

ಕನ್ನಡ ಪರೀಕ್ಷೆ ಮುಂದೂಡಿಕೆ:

ಸೆ.5 ರಂದು ನಡೆಯಬೇಕಾಗಿದ್ದ ದ್ವಿತೀಯ ಸೆಮೆಸ್ಟರ್‌ನ ಬಿಬಿಎ ವಿಭಾಗದ ಕನ್ನಡ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆಯ ಬದಲಾವಣೆಯ ಸಂಬಂಧ ಮಂಗಳೂರು ವಿ.ವಿ ಕುಲಪತಿಯವರ ಅನುಮೋದನೆಯ ಮೇರೆಗೆ ಮುಂದೂಡಲಾಗಿದೆ. ಮುಂದೂಡಿದ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಮರು ನಗದಿಪಡಿಸಿ ಶೀಘ್ರದಲ್ಲಿ ಮುಂದೆ ತಿಳಿಸಲಾಗುವುದು. ಉಳಿದಂತೆ ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಂತೆ ಯಾವುದೇ ಬದಲಾವಣೆ ಇರುವುದಿಲ್ಲ. ಈ ಬದಲಾವಣೆಯನ್ನು ಸಂಬಂಧಪಟ್ಟ ವಿದ್ಯಾರ್ಥಿಗಳ ಗಮನಕ್ಕೆ ಕೂಡಲೇ ತರುವಂತೆ ಮಂಗಳೂರು ವಿ.ವಿಯ ಅಧೀನಕ್ಕೊಳಪಟ್ಟ ಎಲ್ಲಾ ಕಾಲೇಜು ಪ್ರಾಂಶುಪಾಲರಿಗೆ ಸೂಚಿಸಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವರು ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here