- ದೇಶಭಕ್ತಿಯಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳು ಮುಂಚೂಣಿಯಲ್ಲಿವೆ : ಗಿರೀಶ್ ನಂದನ್
ಪುತ್ತೂರು: ದೇಶಭಕ್ತಿಯ ವಿಚಾರ ಬಂದಾಗ ಅಂಬಿಕಾ ಶಿಕ್ಷಣ ಸಂಸ್ಥೆಗಳು ಮುಂಚೂಣಿಯಲ್ಲಿರುವುದು ಗಮನಾರ್ಹ. ವಿದ್ಯಾರ್ಥಿ ದೆಸೆಯಿಂದಲೇ ಯುವಸಮೂಹದಲ್ಲಿ ರಾಷ್ಟ್ರಜಾಗೃತಿ ಮೂಡಿಸುವ ಅಂಬಿಕಾದ ಪ್ರಯತ್ನ ಮೆಚ್ಚುವಂತಹದ್ದು. ತನ್ಮಧ್ಯೆ ಯೋಧರನ್ನು ಗೌರವಿಸುವ ಪದ್ಧತಿಯನ್ನು ಅಂಬಿಕಾ ಸಂಸ್ಥೆಗಳು ನಡೆಸಿಕೊಂಡು ಬರುತ್ತಿರುವುದು ಶ್ಲಾಘನಾರ್ಹ ಕಾರ್ಯ ಎಂದು ಪುತ್ತೂರಿನ ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಮಂಗಳವಾರ ಸೇನಾ ನಿವೃತ್ತಿ ಪಡೆದು ತವರೂರಿಗೆ ಆಗಮಿಸಿದ ನಿವೃತ್ತ ಯೋಧರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಬದುಕು ಪ್ರತಿಯೊಬ್ಬನಿಗೂ ಅನೇಕ ಅವಕಾಶಗಳನ್ನು ಒದಗಿಸಿಕೊಡುತ್ತಲೇ ಇರುತ್ತದೆ. ಹಾಗಾಗಿ ಸೋತಾಗ ಖಿನ್ನರಾಗದೆ ಮತ್ತೊಮ್ಮೆ ಪ್ರಯತ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಕಾರಾತ್ಮಕ ಧೋರಣೆಯಿಂದ ಹೊರಬಂದು ಸಾಧನೆಯೆಡೆಗೆ ಮನಮಾಡಬೇಕು. ದೇಶಸೇವೆಯ ಅವಕಾಶ ದೊರಕಿದರೆ ಹೆಮ್ಮೆಪಡಬೇಕು ಎಂದರಲ್ಲದೆ ಶೈಕ್ಷಣಿಕವಾಗಿ ಕಡಿಮೆ ಅಂಕ ಪಡೆದವರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಬಹುದು. ತರಗತಿಯ ಅಂಕಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಂಬಂಧವಿಲ್ಲ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹವಾಲ್ದಾರ್ ವಿಜಯ ಕುಮಾರ್ ಎನ್ ಮಾತನಾಡಿ ಪ್ರಾಮಾಣಿಕವಾಗಿ ಮಾಡುವ ಪ್ರತಿಯೊಂದು ಕೆಲಸವೂ ದೇಶಸೇವೆಯೇ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಹಿಂದಿನ ದಿನಗಳಲ್ಲಿ ಸೇನೆಗೆ ಸೇರುವ ಬಗೆಗೆ ಮಾಹಿತಿ ಮತ್ತು ಮಾರ್ಗದರ್ಶನಗಳ ಕೊರತೆ ಇತ್ತು. ಆದರೆ ಈಗ ಎಳವೆಯಲ್ಲೇ ಅಂತಹ ಜ್ಞಾನ ವಿದ್ಯಾರ್ಥಿಗಳಿಗೆ ದೊರಕುತ್ತಿದೆ. ಎಲ್ಲರಿಗೂ ಸೇನೆಯನ್ನು ಸೇರುವ ಅವಕಾಶ ದೊರಕುವುದಿಲ್ಲ. ಹಾಗಾಗಿ ಅಂತಹ ಅವಕಾಶ ಸಿಕ್ಕರೆ ಹೆಮ್ಮೆ ಪಡಬೇಕು ಎಂದರು ನುಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮತ್ತೋರ್ವ ಯೋಧ ಪುಷ್ಪರಾಜ್ ಬಾರ್ತಿಕುಮೇರು ಮಾತನಾಡಿ ರಾಜಕೀಯ ಪರಿಸ್ಥಿತಿ ಹಿತಕರವಾಗಿದ್ದರೆ ದೇಶದ ರಕ್ಷಣೆ ಸುಲಭಸಾಧ್ಯವೆನಿಸುತ್ತದೆ. ಈಗಿನ ದಿನಗಳಲ್ಲಿ ಭಾರತ ಸರ್ಕಾರ ಗಡಿ ಭಾಗದ ನುಸುಳುವಿಕೆ, ಭಯೋತ್ಪಾದನೆ ಬಗೆಗೆ ಕಠಿಣ ನಿಲುವು ತಳೆದಿದೆ. ಹಾಗಾಗಿ ಯಾರೂ ಬಾರತದ ತಂಟೆಗೆ ಬರುತ್ತಿಲ್ಲ. ಪ್ರತಿ ಮನೆಯಿಂದ ಒಬ್ಬನಾದರೂ ಸೇನೆ ಸೇರುವಂತಾದರೆ ಇಡಿಯ ಮನೆತನಕ್ಕೇ ಅದು ಗೌರವ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ದೇಶದ ಕುಟುಂಬಗಳ ರಕ್ಷಣೆಗಾಗಿ ತಮ್ಮ ಕುಟುಂಬದೆಡೆಗಿನ ಭಾವನೆಯನ್ನು ಹತ್ತಿಕ್ಕಿ ವೀರ ಯೋಧರು ಮುನ್ನಡೆಯುತ್ತಾರೆ. ಅಂತಹ ನಿಸ್ವಾರ್ಥ ಸೇವೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಸೈನಿಕರಿಗೆ ಗೌರವ ನೀಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಬಸ್ಸಿನಲ್ಲಿ ಆಸನ ಬಿಟ್ಟುಕೊಡುವುದು, ಸರತಿ ಸಾಲಿನಲ್ಲಿ ಯೋಧರನ್ನು ಮುಂದಕ್ಕೆ ಕಳುಹಿಸುವುದೇ ಮೊದಲಾದ ಕನಿಷ್ಟ ಕೃತಜ್ಞತೆಯನ್ನಾದರೂ ನಾವು ಯೋಧರೆಡೆಗೆ ತೋರಬೇಕು ಎಂದರಲ್ಲದೆ ನಿವೃತ್ತರಾದವರ ಜಾಗಕ್ಕೆ ಯುವಶಕ್ತಿಯನ್ನು ಕಳುಹಿಸಿಕೊಡುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಿಗೆ ಗೌರವಾರ್ಪಣೆ – ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಬೋಧಕ-ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಸಂಸ್ಥೆಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ ಸ್ವಾಗತಿಸಿ, ಉಪನ್ಯಾಸಕ ವಿಷ್ಣು ಪ್ರದೀಪ್ ವಂದಿಸಿದರು. ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು.
ಮೆರವಣಿಗೆ: ಸಭಾಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸೇನಾ ನಿವೃತ್ತಿ ಹೊಂದಿ ತವರೂರಿಗೆ ಆಗಮಿಸಿದ ವೀರ ಯೋಧರಾದ ಹವಾಲ್ದಾರ್ ವಿಜಯ ಕುಮಾರ್ ಎನ್ ಹಾಗೂ ಪುಷ್ಪರಾಜ್ ಬಾರ್ತಿಕುಮೇರು ಅವರನ್ನು ಪುತ್ತೂರು ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿಯಿಂದ ತೆರೆದ ವಾಹನದಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯಕ್ಕೆ ಕರೆತರಲಾಯಿತು. ಬಸ್ ನಿಲ್ದಾಣಕ್ಕೆ ಆಗಮಿಸಿದ ಇಬ್ಬರೂ ಯೋಧರಿಗೆ ಅಂಬಿಕಾ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅವರು ಮಾಲಾರ್ಪಣೆಗೈದು ಸ್ವಾಗತಿಸಿದರು. ನೂರಾರು ಮಂದಿ ವಿದ್ಯಾರ್ಥಿಗಳ ದೇಶಭಕ್ತಿಯ ಘೋಷಣೆಗಳು ಹಾಗೂ ವಾದ್ಯ ಡೋಲುಗಳ ಮಧ್ಯೆ ಮೆರವಣಿಗೆಯಲ್ಲಿ ಯೋಧರನ್ನು ಕರೆತಂದದ್ದು ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು. ಪುತ್ತೂರು ಸುತ್ತಮುತ್ತಲಿನ ಪ್ರದೇಶದ ಯಾರೇ ಸೈನಿಕ ನಿವೃತ್ತಿಯಾಗಿ ಬಂದರೂ ಅಂಬಿಕಾ ಶಿಕ್ಷಣ ಸಂಸ್ಥೆಗಳ ವತಿಯಿಂದ ಮೆರವಣಿಗೆ ನಡೆಸಿ ಗೌರವಿಸಲಾಗುತ್ತಿರುವುದು ಗಮನಾರ್ಹ ವಿಚಾರ .