- ಪ್ರಶಸ್ತಿ ಸ್ವೀಕರಿಸದಂತೆ ತಡೆಯೊಡ್ಡಿದವರನ್ನು ಪತ್ತೆ ಹಚ್ಚುವಂತೆ ಆಗ್ರಹ
- ಶಿಕ್ಷಣಾಧಿಕಾರಿ ಸ್ಪಷ್ಟನೆ ನೀಡಲು ಆಗ್ರಹ
- ಗ್ರಾ.ಪಂ ಮಧ್ಯಪ್ರವೇಶಿಸಲು ಒತ್ತಾಯ
- ನ್ಯಾಯ ಸಿಗದಿದ್ದರೆ ಪ್ರತಿಭಟನೆಯ ಎಚ್ಚರಿಕೆ
ಪುತ್ತೂರು: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ಅರಿಯಡ್ಕ ಗ್ರಾಮದ ಪಾಪೆಮಜಲು ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ತೆರೇಜ್ ಎಂ ಸಿಕ್ವೇರಾ ಅವರನ್ನು ಪ್ರಶಸ್ತಿ ಪಡೆದುಕೊಳ್ಳಲು ಹೋಗದಂತೆ ತಡೆಯುವ ಮೂಲಕ ಅನ್ಯಾಯ ಮತ್ತು ಅವಮಾನ ಮಾಡಲಾಗಿದೆ. ಈ ಬೆಳವಣಿಗೆ ಖಂಡನೀಯವಾಗಿದ್ದು ಅವಮಾನಕ್ಕೊಳಗಾದ ಶಿಕ್ಷಕಿಗೆ ನ್ಯಾಯ ದೊರಕದೇ ಇದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಪಾಪೆಮಜಲು ಶಾಲಾ ಎಸ್.ಡಿ.ಎಂ.ಸಿ ತುರ್ತು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸೆ.6ರಂದು ಪಾಪೆಮಜಲು ಶಾಲೆಯಲ್ಲಿ ನಡೆಯಿತು.
ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಕುಮಾರ್ ಮಾತನಾಡಿ ನಮ್ಮ ಶಾಲೆಯ ಮುಖ್ಯಶಿಕ್ಷಕಿ ತೆರೇಜ್ ಎಂ ಸಿಕ್ವೇರಾರಿಗೆ ಜಿಲ್ಲಾ ಉತ್ತಮ ಪ್ರಶಸ್ತಿ ಬಂದಿರುವುದು ನಮಗೆಲ್ಲಾ ಬಹಳ ಖುಷಿಯಾಗಿತ್ತು ಆದರೆ ಅವರನ್ನು ಪ್ರಶಸ್ತಿ ಸ್ವೀಕರಿಸದಂತೆ ಷಡ್ಯಂತ್ರ ರೂಪಿಸಿ ಅಡ್ಡಗಾಲು ಹಾಕಿರುವುದು ಖಂಡನೀಯ. ಇದು ಎಲ್ಲರಿಗೂ ಬೇಸರ ತಂದಿದ್ದು ಈ ರೀತಿಯ ಅನ್ಯಾಯ ಮತ್ತು ಅವಮಾನ ಯಾಕೆ ಮಾಡಲಾಯಿತು? ಇದರ ಉದ್ದೇಶವೇನು ಎಂದು ಅಸಾಮಾಧಾನ ವ್ಯಕ್ತಪಡಿಸಿದರು.
ಎಸ್‌ಡಿಎಂಸಿ ಸದಸ್ಯ ಇಕ್ಬಾಲ್ ಹುಸೇನ್ ಕೌಡಿಚ್ಚಾರು ಮಾತನಾಡಿ ನಮ್ಮ ಶಾಲೆಯ ಮುಖ್ಯ ಶಿಕ್ಷಕಿಗೆ ನಾವು ಕೇಳಿ ಪ್ರಶಸ್ತಿ ಬಂದದ್ದಲ್ಲ. ಉತ್ತಮ ಶಿಕ್ಷಕಿಯಾದ ಕಾರಣ ಅವರಿಗೆ ಪ್ರಶಸ್ತಿ ಬಂದಿದೆ. ಜಿಲ್ಲಾ ಪ್ರಶಸ್ತಿ ಸ್ವೀಕರಿಸಲು ಅವರನ್ನು ತೆರಳದಂತೆ ಮಾಡಲು ಇಬ್ಬರು ಶಿಕ್ಷಕರನ್ನು ಮೇಲಧಿಕಾರಿಗಳು ಕಳುಹಿಸಿದ್ದು ಯಾಕೆ..? ಇದರ ಹಿಂದಿನ ಉದ್ದೇಶವೇನು ಎಂದು ಆಕ್ರೊಶ ವ್ಯಕ್ತಪಡಿಸಿದರು. ಇದು ತೆರೇಜ್ ಎಂ ಸಿಕ್ವೇರಾರವರಿಗೆ ಮತ್ತು ಶಾಲೆಗೆ ಮಾಡಿದ ಅವಮಾನವಾಗಿದ್ದು ಇದಕ್ಕೆ ನ್ಯಾಯ ಸಿಗದೇ ಹೋದಲ್ಲಿ ಹೋರಾಟಕ್ಕೆ ಇಳಿಯಲಾಗುವುದು ಎಂದು ಹೇಳಿದರು.
ಶಿಕ್ಷಣ ಸಲಹಾ ಸಮಿತಿ ಸದಸ್ಯ ಅಮ್ಮಣ್ಣ ರೈ ಮಾತನಾಡಿ ತೆರೇಜ್ ಎಂ ಸಿಕ್ವೇರಾರವರನ್ನು ಜಿಲ್ಲಾ ಉತ್ತಮ ಪ್ರಶಸ್ತಿ ಪಡೆಯುವುದನ್ನು ತಡೆದು ಅವಮಾನ ಮಾಡಲಾಗಿದ್ದು ಅವರು ಪ್ರಶಸ್ತಿ ಸ್ವೀಕರಿಸಲು ಹೋದರೆ ಗಲಾಟೆ ಗದ್ದಲ ಆಗುತ್ತದೆಂದು ಹೇಳಿರುವುದಲ್ಲದೇ ವಿಚಾರವನ್ನು ಸಹಶಿಕ್ಷಕರಿಗೆ ತಿಳಿಸಿದರೆ ಸಸ್ಪೆಂಡ್ ಮಾಡುವ ಬೆದರಿಕೆ ಕೂಡಾ ಒಡ್ಡಲಾಗಿದೆ. ಇದೆಲ್ಲಾ ಯಾವ ನ್ಯಾಯ ಎಂದು ಪ್ರಶ್ನಿಸಿದರು. ಇದರ ಬಗ್ಗೆ ಸಮಗ್ರ ತನಿಖೆಯಾಗಿ ನ್ಯಾಯ ಸಿಗಬೇಕು ಎಂದು ಅಮ್ಮಣ್ಣ ರೈ ಆಗ್ರಹಿಸಿದರು.
ಎಸ್‌ಡಿಎಂಸಿ ಉಪಾಧ್ಯಕ್ಷೆ ವಿನುತಾ ಕೆ.ವಿ ಮಾತನಾಡಿ ಜಿಲ್ಲಾ ಉತ್ತಮ ಪ್ರಶಸ್ತಿ ಬಂದಿರುವುದನ್ನು ಸ್ವೀಕರಿಸದಂತೆ ತಡೆಹಿಡಿಯುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ಹೇಳಿದರು.
ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಧನಂಜಯ ನಾಯ್ಕ ಮಾತನಾಡಿ ಶಿಕ್ಷಕಿಯೋರ್ವರಿಗೆ ಈ ರೀತಿಯ ಅನ್ಯಾಯ ಮಾಡುವುದು ಅಕ್ಷಮ್ಯವಾಗಿದ್ದು ಇದಕ್ಕೆ ನ್ಯಾಯ ಸಿಗದಿದ್ದರೆ ಹೋರಾಟ ನಡೆಸಸಬೇಕು ಎಂದು ಹೇಳಿದರು.
ಪೋಷಕರಾದ ಜ್ಯೋತಿ ಮಾತನಾಡಿ ಓರ್ವ ಶಿಕ್ಷಕಿಗೆ ಈ ರೀತಿಯ ಅವಮಾನ ಮತ್ತು ಅನ್ಯಾಯ ಮಾಡುವುದನ್ನು ಯಾರೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಮಾತನಾಡಿ ಶಿಕ್ಷಕಿಗಾಗಿರುವ ಅನ್ಯಾಯ ನಮಗೆಲ್ಲರಿಗೂ ಆಗಿರುವ ಅನ್ಯಾಯವಾಗಿದೆ ಎಂದು ಹೇಳಿದರು.
ಎಸ್‌ಡಿಎಂಸಿ ಸದಸ್ಯೆ ಲಲಿತಾ ಮಾತನಾಡಿ ನಮ್ಮ ಶಾಲೆಯ ಮುಖ್ಯ ಶಿಕ್ಷಕಿಗೆ ಆಗಿರುವ ಅವಮಾನ ನಮಗೆಲ್ಲಾ ನೋವು ತಂದಿದ್ದು ಇದಕ್ಕೆ ನ್ಯಾಯ ಸಿಗಲೇಬೇಕು ಎಂದು ಹೇಳಿದರು.
ಎಸ್‌ಡಿಎಂಸಿ ಹಾಗೂ ಅರಿಯಡ್ಕ ಗ್ರಾ.ಪಂ ಸದಸ್ಯೆಯಾಗಿರುವ ಪುಷ್ಪಲತಾ ಮಾತನಾಡಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ ಮಾಡಿ ಈ ರೀತಿ ಅವಮಾನ ಮಾಡಿರುವುದು ಖಂಡನೀಯ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಶಾಲೆಯಲ್ಲಿ ರಾಜಕೀಯ ಇಲ್ಲ:
ಶಾಲೆ ಎನ್ನುವುದು ವಿದ್ಯಾದೇಗುಲವಾಗಿದ್ದು ಇಲ್ಲಿ ರಾಜಕೀಯ ಇಲ್ಲ. ಮುಖ್ಯ ಶಿಕ್ಷಕಿಗೆ ಆಗಿರುವ ಅನ್ಯಾಯ ನಮ್ಮ ಊರಿಗೆ ಆಗಿರುವ ಅನ್ಯಾಯವಾಗಿದ್ದು ಅದನ್ನು ನಾವೆಲ್ಲರೂ ಖಂಡಿಸಬೇಕಾಗಿದೆ. ಇದರಲ್ಲಿ ರಾಜಕೀಯ, ಅದು ಇದು ಯಾವುದೂ ಬರುವುದಿಲ್ಲ ಎಂದು ಅಮ್ಮಣ್ಣ ರೈ ಹೇಳಿದರು.
ಶಿಕ್ಷಣಾಧಿಕಾರಿ ಸ್ಪಷ್ಟನೆ ನೀಡಲು ಆಗ್ರಹ:
ಪ್ರಶಸ್ತಿ ಸ್ವೀಕರಿಸಲು ತೆರೇಜ್ ಎಂ ಸಿಕ್ವೇರಾರನ್ನು ಯಾರ ಕುಮ್ಮಕ್ಕಿನಿಂದ ಮತ್ತು ಷಡ್ಯಂತ್ರದಿಂದ ಪ್ರಶಸ್ತಿ ಪಡೆಯುವುದನ್ನು ತಡೆಯಲಾಗಿದೆ ಮತ್ತು ಇದರಲ್ಲಿ ಇಲಾಖೆಯ ಪಾತ್ರವೇನು ಎಂಬುವುದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಪಷ್ಟಪಡಿಸಬೇಕು. ಇಲಾಖೆಯಿಂದಲೇ ಈ ರೀತಿ ಅನ್ಯಾಯವಾಗಲು ಕಾರಣವೇನು ಎಂಬುವುದು ತನಿಖೆಯಾಗಬೇಕೆಂದು ಸಭೆಯಲ್ಲಿದ್ದವರು ಒತ್ತಾಯಿಸಿದರು.
ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ:
ಮುಖ್ಯ ಶಿಕ್ಷಕಿಗೆ ಆಗಿರುವ ಅನ್ಯಾಯ, ಅವಮಾನಕ್ಕೆ ನ್ಯಾಯ ಸಿಗದಿದ್ದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿ ತಮ್ಮ ಹುದ್ದೆಯನ್ನು ತ್ಯಜಿಸುವುದಾಗಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಗ್ರಾ.ಪಂ ಮಧ್ಯಪ್ರವೇಶಿಸಲು ಆಗ್ರಹ:
ನಮ್ಮ ಗ್ರಾಮದ ಶಾಲೆಯ ಶಿಕ್ಷಕಿಗೆ ಆಗಿರುವ ಅನ್ಯಾಯ ನಮ್ಮ ಗ್ರಾಮಕ್ಕೆ ಆಗಿರುವ ಅವಮಾನವಾಗಿದ್ದು ಈ ನಿಟ್ಟಿನಲ್ಲಿ ಅರಿಯಡ್ಕ ಗ್ರಾ.ಪಂ ಈ ವಿಚಾರದಲ್ಲಿ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಸಭೆಯಲ್ಲಿದ್ದವರು ಆಗ್ರಹಿಸಿದರು.
ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಣಯ:
ಶಾಲಾ ಮುಖ್ಯ ಶಿಕ್ಷಕಿ ತೆರೇಜ್ ಎಂ ಸಿಕ್ವೇರಾರಿಗೆ ಆಗಿರುವ ಅನ್ಯಾಯ ಅವರೊಬ್ಬರಿಗೆ ಆಗಿದ್ದಲ್ಲ. ಅದು ನಮ್ಮ ಶಾಲೆಗೂ, ವಿದ್ಯಾರ್ಥಿಗಳಿಗೂ, ಊರಿಗೂ ಆಗಿರುವ ಅನ್ಯಾಯವಾಗಿದೆ. ಹಾಗಾಗಿ ಇದಕ್ಕೆ ನ್ಯಾಯ ಸಿಗಲೇಬೇಕು. ಈ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ನೀಡುವ ಮೂಲಕ ಸಮಗ್ರ ತನಿಖೆಗೆ ಆಗ್ರಹಿಸಲಾಗುವುದು. ನ್ಯಾಯ ಸಿಗದೇ ಇದ್ದಲ್ಲಿ ಪೋಷಕರ ಸಭೆ ನಡೆಸಿ ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟಿಸುವುದಾಗಿ ತೀರ್ಮಾನಿಸಲಾಯಿತು.
ಎಸ್‌ಡಿಎಂಸಿ ಸದಸ್ಯರಾದ ನಾರಾಯಣ ನಾಯ್ಕ, ಅಪ್ಪಯ್ಯ ನಾಯ್ಕ, ಮಿನಾಕ್ಷಿ, ಲಲಿತಾ, ಹೇಮಲತಾ ಬಿ, ಜಯಲಕ್ಷ್ಮೀ, ದೇವಪ್ಪ ನಾಯ್ಕ, ಮೋನಪ್ಪ ನಾಯ್ಕ, ಭಾಗೀರಥಿ, ಪೂರ್ಣಿಮಾ ಮೊದಲಾದವರು ವಿವಿಧ ಅಭಿಪ್ರಾಯ ವ್ಯಕ್ತಪಡಿಸಿದರು.
ಪೋಷಕರಾದ ಚಂದ್ರ ಜಿ ಕುತ್ಯಾಡಿ, ಧನಂಜಯ ನಾಯ್ಕ, ದಿನೇಶ್ ಕುಮಾರ್, ವಿನುತ ಕೆ.ವಿ, ಅಪ್ಪಯ್ಯ ನಾಯ್ಕ, ಹೊನ್ನಪ್ಪ ನಾಯ್ಕ
ಉಪಸ್ಥಿತರಿದ್ದು ವಿವಿಧ ಅಭಿಪ್ರಾಯ ಮಂಡಿಸಿದರು.
ಶಿಕ್ಷಣ ಇಲಾಖೆಗೆ ಮನವಿ:
ಖಂಡನಾ ಸಭೆ ನಡೆಸಿದ ಬಳಿಕ ಎಸ್‌ಡಿಎಂಸಿ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ ದೂರು ಮತ್ತು ಮನವಿ ಪತ್ರವನ್ನು ಸಲ್ಲಿಸಲಾಯಿತು.
ಸಾರ್ವಜನಿಕ ಸಮಾರಂಭ ಏರ್ಪಡಿಸಿ ಪ್ರಶಸ್ತಿ ನೀಡಲು ಆಗ್ರಹ:
ಶಾಲಾ ಮುಖ್ಯಶಿಕ್ಷಕಿ ತೆರೇಜ್ ಎಂ ಸಿಕ್ವೇರಾರವರಿಗೆ ತಡೆಹಿಡಿದಿರುವ ಪ್ರಶಸ್ತಿಯನ್ನು ಶಿಕ್ಷಣ ಇಲಾಖೆಯು ಕೆಲವೇ ದಿನಗಳೊಳಗಾಗಿ ಸಾರ್ವಜನಿಕ ಸಮಾರಂಭ ಏರ್ಪಡಿಸಿ ಪ್ರಶಸ್ತಿ ನೀಡಬೇಕು. ಜನಪ್ರತಿನಿಧಿಗಳು, ಶಿಕ್ಷಕರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಆಗಬೇಕು ಎಂದು ಎಸ್‌ಡಿಎಂಸಿ ಸದಸ್ಯರು ಮತ್ತು ಪೋಷಕರು ಹೇಳಿದರು. ಪ್ರಶಸ್ತಿಯನ್ನು ಮನೆಗೋ, ಶಾಲೆಗೋ ಹೋಗಿ ಕೊಡಬಾರದು. ಸಮಾರಂಭ ಏರ್ಪಡಿಸಿ ಗೌರವಯುತವಾಗಿ ಪ್ರಶಸ್ತಿ ನೀಡಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಆ ಇಬ್ಬರು ಶಿಕ್ಷಕರು ಯಾರು…?
ಶಾಲಾ ಮುಖ್ಯಶಿಕ್ಷಕಿ ತೆರೇಜ್ ಎಂ ಸಿಕ್ವೇರಾರವರನ್ನು ಪ್ರಶಸ್ತಿ ಸ್ವೀಕರಿಸಲು ಬರಬೇಡಿ ಎಂದು ಹೇಳಿದ ಆ ಇಬ್ಬರು ಶಿಕ್ಷಕರು ಯಾರು ಎಂದು ಸಭೆಯಲ್ಲಿದ್ದ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಆ ಇಬ್ಬರು ಶಿಕ್ಷಕರು ಯಾರೆಂದು ತನಿಖೆಯಾಗಬೇಕು ಮತ್ತು ಅವರಿಬ್ಬರನ್ನು ಅಮಾನತು ಮಾಡಬೇಕು ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿದ್ದವರು ಆಗ್ರಹಿಸಿದರು.