ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಶಿಕ್ಷಕಿಗೆ ತಾ.ಪಂ ನಿಕಟಪೂರ್ವ ಅಧ್ಯಕ್ಷರ ಒತ್ತಡ, ಶಾಸಕರಿಂದ ಬೆದರಿಸುವ ತಂತ್ರ – ಕಾಂಗ್ರೆಸ್ ಆರೋಪ

0

  • ಶಿಕ್ಷಕಿ ತೆರೇಜ್ ಎಂ ಸಿಕ್ವೇರಾರವರಿಗೆ ಪ್ರಶಸ್ತಿ ನೀಡದಿದ್ದರೆ ಬ್ಲಾಕ್ ಕಾಂಗ್ರೆಸ್‌ನಿಂದ ತೀವ್ರ ಹೋರಾಟದ ಎಚ್ಚರಿಕೆ

ಪುತ್ತೂರು: ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಅರಿಯಡ್ಕ ಗ್ರಾಮದ ಪಾಪೆಮಜಲು ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ತೆರೇಜ್ ಎಂ ಸಿಕ್ವೇರಾ ಅವರಿಗೆ ಪ್ರಶಸ್ತಿ ಸ್ವೀಕರಿಸಲು ಬಾರದಂತೆ ತಾ.ಪಂ ನಿಕಟಪೂರ್ವ ಅಧ್ಯಕ್ಷರ ಒತ್ತಡದ ಮೇರೆಗೆ ಶಾಸಕರು ಬೆದರಿಸುವ ತಂತ್ರ ಮಾಡಿದ್ದಾರೆ. ಇದು ಪುತ್ತೂರಿನ ಶಿಕ್ಷಕ ವಲಯಕ್ಕೆ ಮಾಡಿದ ಅವಮಾನ. ತಕ್ಷಣ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕಿಗೆ ಗೌರವ ಪೂರ್ವಕವಾಗಿ ಪ್ರಶಸ್ತಿ ನೀಡಿದ್ದರೆ ಬ್ಲಾಕ್ ಕಾಂಗ್ರೆಸ್‌ನಿಂದ ತೀವ್ರ ಹೋರಾಟ ಮಾಡಲಾಗುವುದು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮೊಹಮ್ಮದ್ ಆಲಿ ಅವರು ಎಚ್ಚರಿಕೆ ನೀಡಿದ್ದಾರೆ.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಶಿಕ್ಷಕ ವಲಯದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಕೊಡುವ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಜಿಲ್ಲಾ ಶಿಕ್ಷಣ ಉಪನಿದೇರ್ಶಕರು ಬಿಡುಗಡೆ ಮಾಡಿದ್ದರು. ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಶಿಕ್ಷಣ ದಿನಾಚರಣೆಯೂ ನಡೆಯಿತು. ಆದರೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾದ ತೆರೆಜ್ ಸಿಕ್ವೇರ ಅವರನ್ನು ನೀವು ಪ್ರಶಸ್ತಿ ಸ್ವೀಕರಿಸಲು ಬರಬಾರದು ನೀವು ಬಂದರೆ ಕಾರ್ಯಕ್ರಮ ಹಾಳಾಗುತ್ತದೆ ಎಂದು ಶಿಕ್ಷಣಾಧಿಕಾರಿಗಳ ಸೂಚನೆ ಮೇರೆಗೆ ಇಬ್ಬರು ಶಿಕ್ಷಕರು ಬಂದು ಅವರಿಗೆ ತಿಳಿಸಿದ್ದಾರೆ. ಇಡಿ ಭ್ರಷ್ಟಾಚಾರ ವ್ಯವವಸ್ಥೆಯಡಿಯಲ್ಲಿ ಶಿಕ್ಷಕರು ಮಾತ್ರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಗೌರವಿಸುವುದು ನಾಗರಿಕರ ಕರ್ತವ್ಯ ಎಂದ ಅವರು ಜೊತೆಗೆ ಶಿಕ್ಷಕಿ ತೆರೇಜ್ ಎಂ ಸಿಕ್ವೇರಾ ಅವರ ಮೇಲೆ ಏನು ದ್ವೇಷ ಎಂದು ಹೇಳಬೇಕು ಎಂದು ಹೇಳಿದರು. ತಾ.ಪಂ ನಿಕಟಪೂರ್ವ ಅಧ್ಯಕ್ಷರ ಒತ್ತಡದ ಮೇರೆಗೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಬಾಯ್‌ಕಟ್ ಮಾಡುತ್ತಾರೆಂದು ಬೆದರಿಸುವ ಕೆಟ್ಟ ಪ್ರವೃತ್ತಿಯನ್ನು ಶಾಸಕರು ಮಾಡಿದ್ದಾರೆ. ಇದು ಶಾಸಕರು ಮತ್ತು ಬಿಜೆಪಿಯವರ ಸಣ್ಣತನದ ಕೆಲಸ ಮತ್ತು ಗುರುವಂದನೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಯವರಿಂದ ಗುರುಗಳಿಗೆ ಅವಮಾನ ಮಾಡುವ ಕೆಲಸ ಆಗಿದೆ. ಇದನ್ನು ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ. ಶಿಕ್ಷಕಿ ತೆರೇಜ್ ಅವರಿಗೆ ಗೌರವಯುತವಾಗಿ ಅವರಿಗೆ ಪ್ರಶಸ್ತಿ ಕಾರ್ಯಕ್ರಮ ಮಾಡಬೇಕು. ಇಲ್ಲವಾದರೆ ನಾವು ಬಿಡುವುದಿಲ್ಲ. ಪ್ರಶಸ್ತಿಗೆ ಆಯ್ಕೆ ಮಾಡಿದ್ದು ನಾವಲ್ಲ. ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಡಿಡಿಪಿಐ. ಹಾಗಾಗಿ ನಾವು ಹೋರಾಟ ಮಾಡುತ್ತೇವೆ ಎಂದರು.

ಸಂಜಯನಗರ ಶಾಲೆಯ ಮೂಲ ಅಭಿವೃದ್ಧಿಗೆ ಕಾರಣರ್ತರಾಗಿದ್ದರು:
ತೆರೇಜ್ ಎಂ ಸಿಕ್ವೇರಾ ಅವರು ಈ ಹಿಂದೆ ಪುತ್ತೂರು ನಾನು ಸ್ಥಾಪನೆ ಮಾಡಿದ ಸಂಜಯನಗರ ಶಾಲೆಯಲ್ಲಿ ಶಿಕ್ಷಕರಾಗಿದ್ದು ಅತ್ಯುತ್ತಮ ಕೆಲಸ ಮಾಡಿದ್ದಾರೆ. ನಮ್ಮ ಸಂಜಯನಗರ ಶಾಲೆಯ ಮೂಲ ಅಭಿವೃದ್ಧಿಗೆ ಕಾರಣರಾಗಿದ್ದರು. ಹಾಗಾಗಿ ಶಿಕ್ಷಕಿ ತೆರೇಜ್ ಎಂ ಸಿಕ್ವೇರಾ ಅವರ ಬಗ್ಗೆ ನನಗೆ ಚೆನ್ನಾಗಿ ಗುತ್ತಿಗೆ. ಅವರು ಪ್ರಶಸ್ತಿಗೆ ಅರ್ಹತೆಯನ್ನು ಹೊಂದಿದ್ದರು. ಆದರೆ ಬಿಜೆಪಿಯವರ ಕುಂತಂತ್ರದಿಂದ ಅವರನ್ನು ಪ್ರಶಸ್ತಿ ಸ್ವೀಕರಿಸದಂತೆ ಬೆದರಿಸುವ ತಂತ್ರ ಮಾಡಿದ್ದಾರೆ ಎಂದು ಹೆಚ್.ಮೊಹಮ್ಮದ್ ಆಲಿ ಆರೋಪಿಸಿದರು.

ಸ್ವಂತಿಕೆ ಇಲ್ಲದ ಶಾಸಕರು:
ನಮ್ಮ ಅವಧಿಯಲ್ಲಿ ಶಿಕ್ಷಕರಿಗೆ ಉತ್ತಮ ರೀತಿಯಲ್ಲಿ ಸನ್ಮಾನ ಆಗಿದೆ. ಬಿಜೆಪಿ ಸರಕಾರವು ಇಂತಹ ಕೆಲಸ ಮಾಡಬೇಕಾಗಿತ್ತು. ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಗೌರವಿಸುವುದು ಶಾಸಕರ ಕೆಲಸ. ಇವರು ಮಾಡುವುದಿಲ್ಲ. ಮಾಡಲು ಬಿಡುವುದೂ ಇಲ್ಲ. ಪುತ್ತೂರಿನ ಶಾಸಕರಿಗೆ ಸ್ವಂತಿಕೆ ಎಂಬುದು ಇಲ್ಲ. ಅವರಿಗೆ ಬೆನ್ನು ಮೂಲೆಯೇ ಇಲ್ಲ. ಶಿಕ್ಷಕರನ್ನು ಅವಮಾನಿಸಿದ ಇವರು ಕೆಲವೇ ದಿನದಲ್ಲಿ ಅವಮಾನಗೊಳಗಾಗುತ್ತಾರೆ. ಮುಂದಿನ ದಿನ ನಾವು ದಾಖಲೆ ಇಟ್ಟು ಶಾಸಕರ ಬೇಜವಾಬ್ದಾರಿ ಕೆಲಸ ಬಯಲಿಗೆಳೆಯಲಿದ್ದೇವೆ. ಪುತ್ತೂರು ತಾಲೂಕಿನ ಎಷ್ಟು ಶಾಲೆಗಳಿಗೆ ಅಭಿವೃದ್ದಿ ಕಾರ್ಯಕ್ರಮ ಕೊಟ್ಟಿದ್ದಾರೆ ಎಂದು ಶಾಸಕರು ಹೇಳಬೇಕು. ಶಾಸಕರು ಮತ್ತು ಜನಪ್ರತಿನಿಧಿಗಳು ಹೇಳಿದ ಹಾಗೆ ಕುಣಿಯುವ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೆಚ್.ಮೊಹಮ್ಮದ್ ಆಲಿ ಹೇಳಿದರು.

ಬಿ.ಇ.ಒ ಅವರನ್ನು ಅಮಾನತ್ತು ಮಾಡಬೇಕು:
ಶಾಸಕರನ್ನು ಕೇಳಿ ಕಾರ್ಯಕ್ರಮ ಮಾಡುವ ಮತ್ತು ರಾಜಕಾರಣಿರಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಇಲಾಖೆಯ ಅಧಿಕಾರಿಗಳ ವಿರುದ್ಧ ನಾವು ಏನು ಮಾಡಬೇಕೋ ಅದನ್ನು ಮಾಡಲಿದ್ದೇವೆ. ಅದೇ ರೀತಿ ಶಿಕ್ಷಕಿಗೆ ಬೆದರಿಸಲು ಪ್ರೇರಣೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಅಮಾನತು ಮಾಡಬೇಕು ಎಂದು ಹೆಚ್.ಮೊಹಮ್ಮದ್ ಆಲಿ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ನಗರ ಕಾಂಗ್ರೆಸ್ ಉಪಾಧ್ಯಕ್ಷ ವಿಕ್ಟರ್ ಪಾಯಸ್, ಪ್ರಧಾನ ಕಾರ್ಯದರ್ಶಿ ಸುರೇಶ್ ಪೂಜಾರಿ ಉಪಸ್ಥಿತರಿದ್ದರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸದಂತೆ ಶಿಕ್ಷಕಿಗೆ ತಡೆ ಪ್ರಕರಣ; ಎಸ್.ಡಿ.ಎಂ.ಸಿ.ಯಿಂದ ಖಂಡನಾ ಸಭೆ-ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ

LEAVE A REPLY

Please enter your comment!
Please enter your name here