ಮರದ ಕೊಂಬೆ ಕಡಿಯುತ್ತಿದ್ದ ವೇಳೆ ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

0

ಕಡಬ: ಮರದ ಕೊಂಬೆ ಕಡಿಯುತ್ತಿದ್ದ ವೇಳೆ ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸೆ.7ರಂದು ಕಡಬದ ಕುಂತೂರಿನಲ್ಲಿ ನಡೆದಿದೆ.

ಕಡಬ: ಮರದ ಕೊಂಬೆ ಕಡಿಯುವಾಗ ಆಕಸ್ಮಿಕವಾಗಿ ೩೩ ಕೆವಿ ವಿದ್ಯುತ್ ಹೈಟೆನ್ಷನ್ ತಂತಿ ತಾಗಿ ವ್ಯಕ್ತಿಯೊಬ್ಬರು ದಾರುಣ ಸಾವನ್ನಪ್ಪಿದ ಘಟನೆ ಕುಂತೂರು ಗ್ರಾಮದ ಅನ್ನಡ್ಕ ಎಂಬಲ್ಲಿ ಆ.೭ರಂದು ಮಧ್ಯಾಹ್ನ ನಡೆದಿದೆ.

ಕುಂತೂರು ಗ್ರಾಮದ ಅನ್ನಡ್ಕ ಕಾಲಾಯಿಲ್ ದಿ| ತಂಗಚ್ಚನ್ ಎಂಬವರ ಪುತ್ರ ಮನೋಜ್(೪೪ವ.) ಮೃತಪಟ್ಟವರು. ಇವರು ಮಾರ್ ಇವಾನಿಯೋಸ್ ಕ್ಯಾಥೋಲಿಕ್ ಚರ್ಚ್ ಬಳಿಯಿರುವ ಚಾಕೋಟೆ ಮರಕ್ಕೆ ಹತ್ತಿ ರೆಂಬೆ ಕಡಿಯುತ್ತಿದ್ದಾಗ ಹತ್ತಿರದಲ್ಲೇ ಹಾದು ಹೋಗುವ ವಿದ್ಯುತ್ ಲೈನ್‌ಗೆ ರೆಂಬೆ ತಾಗಿದೆ. ಪರಿಣಾಮ ವಿದ್ಯುತ್ ಶಾಕ್‌ಗೆ ಒಳಗಾಗಿ ಮರದಲ್ಲೇ ಇವರ ಪ್ರಾಣ ಪಕ್ಷಿ ಹಾರಿಹೋಗಿದೆ. ಲೈನ್ ಆ- ಮಾಡುವವರೆಗೂ ಬೆಂಕಿಯುಂಡೆ ಕೆಳಗೆ ಬೀಳುತ್ತಿದ್ದರೂ ಮೃತದೇಹ ಮಾತ್ರ ಮರದಲ್ಲೇ ಸಿಲುಕಿಕೊಂಡಿತ್ತು. ಕಾಲು ಸಂಪೂರ್ಣ ಸುಟ್ಟು ಹೋಗಿ ಮರದಲ್ಲಿ ನೇತಾಡುತ್ತಿದ್ದ ಶವವನ್ನು ಹಗ್ಗದ ಸಹಾಯದಿಂದ ಕೆಳಗಿಸಲಾಯಿತು.

ಮೃತ ತಂಗಚ್ಚನ್ ಅವರ ಏಕೈಕ ಪುತ್ರನಾಗಿದ್ದ ಮನೋಜ್‌ರವರು ಎರಡು ವರ್ಷದ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಕೊರೋನಾ ಸಂದರ್ಭದಲ್ಲಿ ಊರಿಗೆ ಬಂದಿದ್ದ ಇವರು ಮತ್ತೆ ವಿದೇಶಕ್ಕೆ ತೆರಳದೆ ಊರಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಇವರ ಪತ್ನಿ ಈಗಲೂ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಇಬ್ಬರು (ಒಂದು ಗಂಡು ಹಾಗೂ ಒಂದು ಹೆಣ್ಣು) ಮಕ್ಕಳು ಊರಿನಲ್ಲಿ ಸ್ಥಳೀಯ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮನೋಜ್‌ರವರು ನೂತನ ಮನೆ ನಿರ್ಮಾಣ ಮಾಡುತ್ತಿದ್ದು ಕೆಲಸ ಅರ್ಧದಲ್ಲಿದೆ. ಇಂತಹ ಸಂದರ್ಭದಲ್ಲಿ ಈ ಸಾವು ಮನೆಯವರಿಗೆ ಅಘಾತವುಂಟು ಮಾಡಿದೆ.

ಸ್ಥಳಕ್ಕೆ ಆಲಂಕಾರು ಮೆಸ್ಕಾಂ ಜೆಇ ಜೋಸೆ-, ಕಡಬ ಠಾಣಾ ಎಎಸ್‌ಐ ಚಂದ್ರಶೇಖರ್, ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್ ರೈ, ಮಾಜಿ ಅಧ್ಯಕ್ಷ ಚಂದ್ರಶೇಖರ ರೈ , ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ,ವರ್ಗೀಸ್, ಸ್ಥಳೀಯ ಮುಖಂಡ ರಾಯ್ ಅಬ್ರಹಾಂ ಮತ್ತಿತರರು ಭೇಟಿ ನೀಡಿದ್ದಾರೆ. ಮನೋಜ್ ಅವರ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಪತ್ನಿ ವಿದೇಶದಿಂದ ಬಂದ ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.
ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವ ಅಪಾಯಕಾರಿ ಮರಗಳು, ಗೆಲ್ಲುಗಳು ರಸ್ತೆಯುದ್ದಕ್ಕೂ ಅಲ್ಲಲ್ಲಿ ಇದ್ದು, ಇದರ ತೆರವಿಗೆ ಆಗಾಗ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಆದರೂ ಮೆಸ್ಕಾಂ ಮತ್ತು ಅರಣ್ಯ ಇಲಾಖೆಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸದೆ ಕಾನೂನು ತೊಡಕುಗಳನ್ನು ಹೇಳಿಕೊಂಡು ಕಾಲ ಕಳೆಯುತ್ತಿವೆ ಎನ್ನುವ ಆರೋಪಗಳು ವ್ಯಕ್ತವಾಗಿದೆ. ಕೂಡಲೇ ವಿದ್ಯುತ್ ತಂತಿಗಳ ಸಮೀಪ ಇರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here