ನಮಸ್ತೆ ಜೆಸಿಐ ಸಪ್ತಾಹ -2022ಕ್ಕೆ ಚಾಲನೆ : ಪ್ರಥಮ ದಿನ ಮೂವರು ಮಹಿಳಾ ಉದ್ಯಮಿಯರಿಗೆ ಸನ್ಮಾನ

0

ಜೀವನದ ಒಂದೊಂದು ಅವಕಾಶವನ್ನು ಬಳಸಿಕೊಳ್ಳಿ- ಪ್ರತಿಮಾ ಹೆಗ್ಡೆ
ಪ್ರತಿಯೊಬ್ಬರಲ್ಲೂ ಪ್ರತಿಭೆಯ ಸಾಧನೆ ಅಡಗಿದೆ – ಶಶಿರಾಜ್ ರೈ
ಸಮಾಜದಲ್ಲಿ ಗುರುತಿಸಲ್ಪಟ್ಟು ಜೇಸಿಐಯಿಂದ – ಸ್ವಾತಿ ಜೆ ರೈ

 

ಪುತ್ತೂರು: ಪುತ್ತೂರು ಜೆಸಿಐಯಿಂದ ಸೆ. 15ರ ತನಕ ನಡೆಯುವ ‘ನಮಸ್ತೆ ಜೇಸಿಐ ಸಪ್ತಾಹ -2022’ ಕಾರ್ಯಕ್ರಮಕ್ಕೆ ಸೆ.9ರಂದು ಜೇಸಿಐ ಮುಳಿಯ ಟ್ರೈನಿಂಗ್ ಹಾಲ್‌ನಲ್ಲಿ ಚಾಲನೆ ನೀಡಲಾಗಿದೆ. ಒಟ್ಟು 7 ದಿನಗಳು ನಡೆಯುವ ಸುಮಾರು 15 ವಿಭಿನ್ನ ರೀತಿಯ ಕಾರ್ಯಕ್ರಮಗಳಿಗೆ ಸಂಬಂಧಿಸಿ ಆರಂಭದ ದಿನವೇ ಮೂವರು ಮಹಿಳಾ ಸಾಧಕಿಯರನ್ನು ಗೌರವಿಸುವ ಮೂಲಕ ಮಹಿಳೆಯರಿಗೆ ಪ್ರಧಾನ ಸ್ಥಾನ ಜೇಸಿಐ ನೀಡಿದೆ.
ಜೀವನದ ಒಂದೊಂದು ಅವಕಾಶವನ್ನು ಬಳಸಿಕೊಳ್ಳಿ:
ಜೇಸಿಐ ಸಪ್ತಾಹ ಉದ್ಘಾಟಿಸಿದ ಲಿಟ್ಲ್ ಎಂಜಲ್ ಸ್ಕೂಲ್‌ನ ಅಧ್ಯಕ್ಷೆ ಪ್ರತಿಮಾ ಅಜಿತ್ ಹೆಗ್ಡೆಯವರು ಮಾತನಾಡಿ ಮಹಿಳೆ ಸಬಲೀಕರಣವಾಗಬೇಕು. ಆಗ ಜೀವನದ ಪ್ರತಿ ಮೌಲ್ಯ ಆಕೆಗೆ ಅರ್ಥವಾಗುತ್ತದೆ. ಇದಕ್ಕಾಗಿ ಜೀವನದ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳಬೇಕೆಂದ ಅವರು ಕೇವಲ ಶಿಕ್ಷಣ ಮಾತ್ರವಲ್ಲ. ತಮ್ಮ ಪ್ರತಿಭೆಗಳನ್ನು ಜಾಗೃಗೊಳಿಸುವಂತೆ ತಿಳಿಸಿದರು.
ಪ್ರತಿಯೊಬ್ಬರಲ್ಲೂ ಪ್ರತಿಭೆಯ ಸಾಧನೆ ಅಡಗಿದೆ:
ಜೇಸಿಐ ಅಧ್ಯಕ್ಷ ಶಶಿರಾಜ್ ರೈ ಅವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆಯೆಂಬ ಸಾಧನೆ ಅಡಗಿದೆ. ಅದನ್ನು ಹೊರ ತರುವ ಪ್ರಯತ್ನ ಮಾಡಬೇಕು. ಜೇಸಿಐ ಮೂಲಕ ಜೀವನದ ಮಹತ್ವ ಅರಿಯಬಹುದು. ಇಲ್ಲಿನ ಪ್ರತಿಯೊಂದು ಸಂದೇಶಗಳು, ಸದಸ್ಯರ ಅನುಭವಗಳು ನಮ್ಮ ಜೀವನಕ್ಕೆ ಪಾಠದಂತೆ ಎಂದ ಅವರು ಮುಂದೆ ಸಪ್ತಾಹದ ಎಲ್ಲಾ ದಿನವೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಸಮಾಜದಲ್ಲಿ ಗುರುತಿಸಲ್ಪಟ್ಟು ಜೇಸಿಐಯಿಂದ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೇಸಿ ಪ್ರಾಂತ್ಯ ಎ ವಲಯ ಉಪಾಧ್ಯಕ್ಷೆ ಸ್ವಾತಿ ಜೆ ರೈ ಅವರು ಮಾತನಾಡಿ ಯುವಶಕ್ತಿಯಲ್ಲಿ ಸಮರ್ಥ ನಾಯಕತ್ವ ಗುಣವನ್ನು ತುಂಬಿಸಿ ಅವರಿಗೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸುವ ಕೆಲಸ ಜೇಸಿಐ ಮಾಡುತ್ತಿದೆ. ಜೇಸಿ ತತ್ವವು ಎಲ್ಲರನ್ನೂ ಸಮಾನತೆಯೆಡೆ ಕೊಂಡೊಯ್ಯುತ್ತಿದ್ದು, ಉತ್ತಮ ಮಾರ್ಗದರ್ಶನದ ಮೂಲಕ ಸಮಾಜದಲ್ಲಿ ಉತ್ತಮ ಹಾದಿಯಲ್ಲಿ ಮುನ್ನಡೆಯುವಂತೆ ಮಾಡುತ್ತದೆ. ಇದರೊಂದಿಗೆ ಸಮಾಜಮುಖಿ ಕಾರ್ಯಗಳನ್ನು ನಡೆಸಲು ಪ್ರೇರೆಪಿಸುತ್ತಿದೆ ಇದರಿಂದಾಗಿ ನಾನು ವಿದ್ಯಾರ್ಥಿ ಜೀವನ ಮತ್ತು ವಕೀಲೆಯಾಗಿ ಕಲಿಯದ್ದು ಈ ಸಂಸ್ಥೆಯ ಸದಸ್ಯೆಯಾಗಿ ಸಮಾಜದಲ್ಲಿ ಗುರುತಿಸಲ್ಪಟ್ಟಿದ್ದೆನೆ ಎಂದರು.
ಮಹಿಳಾ ಉದ್ಯಮಿಯರಿಗೆ ಸನ್ಮಾನ:
ಮಹಿಳಾ ಸಾಧಕ ಉದ್ಯಮಿಗಳಾದ ದಾರಂದಕುಕ್ಕು ಮಂಗಳಾ ಹಾರ್ಡ್ವೇರ್ ಸಂಸ್ಥೆಯ ಮಾಲಕಿ ಮಹಾಲಕ್ಷ್ಮೀ ಕೆ ಹೆಬ್ಬಾರ್, ಜನೌಷಧಿ ಕೇಂದ್ರದ ನೋಡೆಲ್ ಅಧಿಕಾರಿಯಾಗಿದ್ದು ಇದೀಗ ಸ್ವಂತ ಉದ್ಯಮ ನಡೆಸುತ್ತಿರುವ ಡಾ. ಅನಿಲಾ ದೀಪಕ್ ಶೆಟ್ಟಿ, ಎಸ್‌ಡಿಪಿ ರೆಮಿಡೀಸ್ ಸಂಸ್ಥೆಯ ಪಾಲುದಾರೆ ರೂಪಾಲೇಖ ಪಾಣಾಜೆ ಅವರನ್ನು ಜೇಸಿಐ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತ ಮಹಾಲಕ್ಷ್ಮೀ ಅವರು ಮಾತನಾಡಿ ಮಹಿಳೆ ಕೇವಲ ಮೊಬೈಲ್, ಟಿವಿ ನೋಡುವಲ್ಲಿ ಕಾಲ ಕಳೆಯುವ ಬದಲು ಹೊಸ ಹೊಸ ಆಸಕ್ತಿಯಿಂದ ಜೀವನ ಮುಂದೆ ಸಾಗಿಸಬೇಕು ಎಂದರು. ಇನ್ನೋರ್ವ ಸನ್ಮಾನಿತ ಸಾಧಕಿ ಭಾರತೀಯ ಜನೌಷಧಿ ಕೇಂದ್ರದ ನೋಡೆಲ್ ಅಧಿಕಾರಿಯಾಗಿದ್ದು ಇದೀಗ ಸ್ವಂತ ಉದ್ಯಮ ನಡೆಸುತ್ತಿರುವ ಡಾ.ಅನಿಲ ದೀಪಕ್ ಶೆಟ್ಟಿ ಅವರು ಮಾತನಾಡಿ ಜೆಸೀಐ ಯಿಂದ ಸನ್ಮಾನ ಪಡೆಯುವುದು ಸಂತೋಷ ಆಗಿದೆ ಎಂದು ತನ್ನ ಜೀವನದ ಹೆಜ್ಜೆಯಲ್ಲಿ ಭ್ರಷ್ಟಾಚಾರವನ್ನು ವಿರೋಧಿಸಿ, ಒತ್ತಡವನ್ನು ಎದುರಿಸಿದ್ದೇನೆ. ಕೊನೆಗೆ ನನ್ನ ಕುಟುಂಬ ಮುಖ್ಯ ಎಂದು ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಆದರೆ ನಾನಿವತ್ತು ಸ್ವಂತ ಉದ್ಯಮ ಆರಂಭಿಸಿದ್ದೇನೆ. ಹಾಗಾಗಿ ನಮ್ಮ ಮಕ್ಕಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಪ್ರಪಂಚದ ಯಾವ ಮೂಲೆಗೆ ಹೋದರು ಅಲ್ಲಿ ಜೀವನ ಮಾಡುವಂತಹ ಛಲವನ್ನು ಹೊಂದುವಂತೆ ಬೆಳೆಸಬೇಕೆಂದರು. ಇನ್ನೋರ್ವ ಸನ್ಮಾನಿತೆ ಎಸ್ ಡಿ ಪಿ ರೆಮಿಡೀಸ್ ಸಂಸ್ಥೆಯ ಪಾಲುದಾರ ರೂಪಾಲೇಖ ಪಾಣಾಜೆ ಅವರು ಮಾತನಾಡಿ ಮಹಿಳೆ ಯಾವತ್ತು ಅಬಳೆ ಅಲ್ಲ ಸಬಳೆ ಎಂಬುದು ಭಾರತೀಯ ಸಂಸ್ಕೃತಿ ಮಾತಿನಂತೆ ಪ್ರತಿ ಕ್ಷೇತ್ರದಲ್ಲಿ ಮಹಿಳೆಯ ಸಾಧನೆ ಇದೆ ಎಂದರು. ಜೇಸಿಐಯ ಶಿಲ್ಪಾ ಪಿ ಶೆಟ್ಟಿ, ಆಶಾ ಮೋಹನ್, ರೇಶ್ಮಾ ಸನ್ಮಾನಿತರನ್ನು ಪರಿಚಯಿಸಿದರು. ಸುಪ್ರಿತ್ ಕೆ.ಸಿ ಅವರು ಅತಿಥಿಗಳನ್ನು ಪರಿಚಯಿಸಿದರು. ರಂಜಿನಿ ಜೇಸಿ ವಾಣಿ ವಾಚಿಸಿದರು. ವೇದಿಕೆಯಲ್ಲಿ ನಮಸ್ತೆ ಪ್ರೋಜೆಕ್ಟ್ ಡೈರೆಕ್ಟರ್ ಕಾರ್ತಿಕ್ ಉಪಸ್ಥಿತರಿದ್ದರು. ಜೇಸಿಐ ಮೋಹನ್ ಕೆ ವಂದಿಸಿದರು.

ಇಂದು ರಕ್ತದಾನ, ಮಧುಮೇಹ ಶಿಬಿರ
ಸೆ.10ರಂದು ಬೆಳಿಗ್ಗೆ ಗಂಟೆ 10.30ಕ್ಕೆ ರೋಟರಿ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದಾನ ಮತ್ತು ಮಧುಮೇಹ ತಪಾಸಣಾ ಶಿಬಿರ ನಡೆಯಲಿದೆ. ಇದೇ ಸಂದರ್ಭದಲ್ಲಿ ಫಲಾನುಭವಿ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ವಿತರಣೆ ನಡೆಯಲಿದೆ. ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಮಾಲಕ ಚೇತನ್ ಪ್ರಕಾಶ್ ಕಜೆ ಮತ್ತು ಜೇಸಿ ವಲಯ ಕೋಆರ್ಡಿನೇಟರ್ ರಶ್ಮೀ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here