ರಾಮಕುಂಜ ಹಾಲು ಉತ್ಪಾದಕರ ಸಂಘದ ಮಹಾಸಭೆ

0

ಹಾಲಿನ ದರ ಏರಿಕೆಗೆ ಆಗ್ರಹ-ಸರ್ಕಾರವನ್ನು ಕೋರಿ ನಿರ್ಣಯ

ಒಟ್ಟು ವ್ಯವಹಾರ: 6 ಕೋಟಿ 3ಲಕ್ಷ, ನಿವ್ವಳ ಲಾಭ: 6 ಲಕ್ಷದ 6 ಸಾವಿರ.

  •  10% ಡಿವಿಡೆಂಟ್ ಘೋಷಣೆ.
  • ಪಶು ಆಹಾರದಲ್ಲಿ ಗುಣಮಟ್ಟದ ಕೊರತೆ ಇದೆ

ಉಪ್ಪಿನಂಗಡಿ: ಹೈನುಗಾರರಿಗೆ ಕೊಡುವ ಹಾಲಿನ ದರ ಇದೀಗ ಸರಾಸರಿ ಲೀಟರ್‌ಗೆ 30 ರೂಪಾಯಿ ಇದ್ದುದನ್ನು 40 ರೂಪಾಯಿಗೆ ಏರಿಕೆ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿ ಈ ಬಗ್ಗೆ ರಾಮಕುಂಜ ಹಾಲು ಉತ್ಪಾದಕರ ಸಂಘ ಸರ್ಕಾರವನ್ನು ಕೋರಿ ನಿರ್ಣಯ ಅಂಗೀಕರಿಸಿದೆ.

ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಕೆ. ಮುರಳೀಕೃಷ್ಣ ಬಡಿಲ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು ಕಳೆದ 3 ವರ್ಷಗಳಿಂದ ಹಾಲಿನ ದರ ಏರಿಕೆ ಆಗಿಲ್ಲ, ಆದರೆ ಪಶು ಆಹಾರದ ದರ, ಕೂಲಿ ಖರ್ಚು, ಸಾಗಾಟ ವೆಚ್ಚ ಎಲ್ಲವೂ ದುಪ್ಪಟ್ಟು ಏರಿಕೆ ಆಗಿದೆ. ಹೀಗಾಗಿ ಹೈನುಗಾರರು ಸಂಕಷ್ಟ ಎದುರಿಸುವಂತಾಗಿದೆ, ಆದ ಕಾರಣ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಸರ್ಕಾರವನ್ನು ಕೇಳಿಕೊಳ್ಳುವ ಬಗ್ಗೆ ನಿರ್ಣಯ ಅಂಗೀಕರಿಸಬೇಕು ಎಂದು ಆಗ್ರಹಿಸಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಸಂಘದ ವತಿಯಿಂದ ಸರಬರಾಜು ಮಾಡುವ ಪಶು ಆಹಾರದಲ್ಲಿ ಗುಣ ಮಟ್ಟದ ಕೊರತೆ ಇದ್ದು, ಹಾಲಿನ ಇಳುವರಿಯಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದ ಸದಸ್ಯರು ಈ ಬಗ್ಗೆ ಒಕ್ಕೂಟದ ಗಮನಕ್ಕೆ ತಂದು ಸರಿಪಡಿಸಿಕೊಳ್ಳುವ ಬಗ್ಗೆಯೂ ನಿರ್ಣಯ ಅಂಗೀಕರಿಸಲಾಯಿತು.

ವ್ಯವಹಾರ, ನಿವ್ವಳ ಲಾಭ, ಡಿವಿಡೆಂಟ್:

ಸಂಘದಲ್ಲಿ 2021-22ನೇ ಸಾಲಿನಲ್ಲಿ 6 ಕೋಟಿ, 3 ಲಕ್ಷದ, 71 ಸಾವಿರದ 563 ರೂಪಾಯಿ ವ್ಯವಹಾರ ನಡೆಸಿದ್ದು, ಈ ಪೈಕಿ 6 ಲಕ್ಷದ 6 ಸಾವಿರದ 564 ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಪ್ರತೀ ಲೀಟರ್ ಹಾಲಿಗೆ 63 ಪೈಸೆಯಂತೆ ಬೋನಸ್ ಹಾಗೂ 10 ಶೇಕಡಾ ಡಿವಿಡೆಂಟ್ ನೀಡಲಾಗುವುದು ಎಂದು ಅಧ್ಯಕ್ಷ ಕೆ. ಮುರಳೀಕೃಷ್ಣ ಬಡಿಲ ಘೋಷಿಸಿದರು.

ಸಭೆಯಲ್ಲಿ ದ.ಕ. ಹಾಲು ಒಕ್ಕೂಟದ ಪ್ರತಿನಿಧಿ ಡಾ. ಜಿತೇಂದ್ರ ಪ್ರಸಾದ್ ಕೃತಕ ಗರ್ಭಧಾರಣೆಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಮತ್ತು ಜಾನುವಾರುಗಳಲ್ಲಿ ಫಲವತ್ತತೆಯನ್ನು ಉತ್ತಮ ಪಡಿಸಲು ಬೇಕಾದ ಕ್ರಮಗಳ ಬಗ್ಗೆ ಹಾಗೂ ಪಶುಪಾಲನೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವಿಸ್ತರಣಾಧಿಕಾರಿ ಯಮುನಾರವರು ಹಾಲಿನ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಮತ್ತು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಗೌರವಾರ್ಪಣೆ:

2021-22ರ ಸಾಲಿನಲ್ಲಿ 60 ದಿವಸಗಳಿಗೂ ಮೇಲ್ಪಟ್ಟು ಸಂಘಕ್ಕೆ ಹಾಲು ಮಾರಾಟ ಮಾಡಿದ ಎಲ್ಲಾ ಸದಸ್ಯರಿಗೂ ಬಹುಮಾನ ನೀಡಿ ಪುರಸ್ಕರಿಸಲಾಯಿತು. ವಾರ್ಷಿಕವಾಗಿ ಅತೀ ಹೆಚ್ಚು ಹಾಲು ಹಾಕಿದ ವಾಸಪ್ಪ ಗೌಡ ಬರೆಮೇಲು, ಕೆ. ಸತ್ಯಸುಂದರ ರಾವ್, ಶ್ರೀಮತಿ ಗುಲಾಬಿ ಕುಂಡಡ್ಕ ಇವರನ್ನು ಹಾಗೂ ಗುಣಮಟ್ಟದ ಆಧಾರದಲ್ಲಿ ಹರ್ಷ ಕುಮಾರ್ ಬಡಿಲ ಇವರುಗಳನ್ನು ಗೌರವಿಸಲಾಯಿತು.

ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ:

ಶೈಕ್ಷಣಿಕ ಸಾಧನೆ ಮಾಡಿದ ಸಂಘದ ಸದಸ್ಯ ಕುಟುಂಬದ ವಿದ್ಯಾರ್ಥಿಗಳಾದ ದ್ವಿತೀಯ ಪಿಯುಸಿ.ಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಅನುಜ್ಞಾ ವೈ,ಟಿ., ಕೌಶಿಕ್ ರಾವ್ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಶಿಶಿರ ದೇವಾಡಿಗ ಹಾಗೂ ಕ್ರೀಡಾ ವಿಭಾಗದಲ್ಲಿ ಯುನಿವರ್ಸಿಟಿ ಅಂತರ್ ವಲಯದಲ್ಲಿ ಕಬಡ್ಡಿಯಲ್ಲಿ

2ನೇ ಸ್ಥಾನ ಗಳಿಸಿದ ಕುಮಾರಿ ಸವಿತಾ ಇವರುಗಳನ್ನು ಪುರಸ್ಕರಿಸಿ ಗೌರವಿಸಲಾಯಿತು.

ಸಭೆಯಲ್ಲಿ ಸಂಘದ ಸದಸ್ಯರುಗಳಾದ ರಾಮ ಭಟ್, ಉದಯ ಕಶ್ಯಪ್, ಬಾಲಕೃಷ್ಣ ಗೌಡ, ವಾಸಪ್ಪ ಗೌಡ, ಯಧುಶ್ರೀ, ಶಾಂತಾರಾಮ, ಹರ್ಷ ಕುಮಾರ್, ಶಿವರಾಮ ಭಟ್ ಚರ್ಚೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.

ವೇದಿಕೆಯಲ್ಲಿ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳಾದ ಸುರೇಶ್ ನಾಯ್ಕ್ ಕೊಯಿಲ, ಕೆ. ಸತ್ಯ ಸುಂದರ ರಾವ್ ಹರ್ವೆ, ಬಿ. ಮೋನಪ್ಪ ಮೂಲ್ಯ ಬೊಳ್ಳರೋಡಿ, ಶ್ರೀಮತಿ ರತ್ನಾವತಿ ಎಸ್. ಗೌಡ, ಶ್ರೀಮತಿ ಭವಾನಿ ಕೆ. ಕಂಪ, ವೆಂಕಪ್ಪ ನಾಯ್ಕ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ‍್ಯ ನಿರ್ವಹಣಾಧಿಕಾರಿ ಕೆ. ಚಿತ್ತರಂಜನ್ ರಾವ್ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಯನ್. ಸುಬ್ರಹ್ಮಣ್ಯ ಭಟ್ ಬರೆಂಪಾಡಿ ವಂದಿಸಿದರು.
ಸಿಬ್ಬಂದಿಗಳಾದ ಪಿ. ಹರಿಪ್ರಸಾದ್, ಶ್ರೀಮತಿ ಜಲಜಾಕ್ಷಿ, ಧರ್ಣಪ್ಪ ಗೌಡ ವಿವಿಧ ಕಾರ‍್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here