ರೂ. 4,43,530 ನಿವ್ವಳ ಲಾಭ | ಶೇ.8 ಡಿವಿಡೆಂಡ್
ಪುತ್ತೂರು: ಬಿಇಒ ಆಫೀಸ್ ಬಳಿಯ ಸಾರಥಿ ಭವನದಲ್ಲಿ ಕಾರ್ಯಾಚರಿಸುತ್ತಿರುವ ಜಿ.ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.11 ರಂದು ಬೆಳಿಗ್ಗೆ ಹೋಟೆಲ್ ಸಂತೃಪ್ತಿ ಎದುರಿನ ಸಣ್ಣ ಕೈಗಾರಿಕಾ ಸಹಕಾರಿ ಕಟ್ಟಡದ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ನಾರಾಯಣ ಹೇರಳೆರವರ ಅಧ್ಯಕ್ಷತೆಯಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ನಾರಾಯಣ ಹೇರಳೆರವರು, ವರ್ಷಾಂತ್ಯಕ್ಕೆ ಸಂಘದಲ್ಲಿ 413 `ಎ’ ವರ್ಗದ ಸದಸ್ಯರಿದ್ದು, ರೂ.4,46,000 ಪಾಲು ಬಂಡವಾಳವಿರುತ್ತದೆ. ವರ್ಷಾಂತ್ಯಕ್ಕೆ ಎಲ್ಲಾ ಬಗೆಯ ಠೇವಣಿ ಸೇರಿ ಸುಮಾರು ರೂ.20559309 ಇದ್ದು, ರೂ.18240896 ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.100 ಸಾಧನೆ ಮಾಡಿದ್ದು ಲೆಕ್ಕ ಪರಿಶೋಧನೆಯಲ್ಲಿ ಸಂಘವು `ಎ’ ಶ್ರೇಣಿಯನ್ನು ಪಡೆದುಕೊಂಡಿರುತ್ತದೆ ಅಲ್ಲದೆ ಸಂಘವು ವರದಿ ವರ್ಷದಲ್ಲಿ ರೂ.8,40,19,535 ವಹಿವಾಟು ನಡೆಸಿದೆ ಎಂದರು.
ಸಂಘದ ನಿರ್ದೇಶಕರಾದ ಸುಧಾ ಎನ್ ಹಾಗೂ ಇಂದಿರಾ ವಿ ಪ್ರಾರ್ಥಿಸಿದರು. ನಿರ್ದೇಶಕ ಗೋಪಾಲಕೃಷ್ಣ ಹೇರಳೆ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಮೋಹನ ಹೊಳ್ಳರವರು ಹಿಂದಿನ ಸಾಲಿನ ನಿರ್ಣಯವನ್ನು ಹಾಗೂ 2021-22ನೇ ಸಾಲಿನ ವರದಿಯನ್ನು ಓದಿದರು. ಲೆಕ್ಕಾಧಿಕಾರಿ ಶಶಿಧರ್ ರಾವ್‌ರವರು ಲೆಕ್ಕಪತ್ರ ಹಾಗೂ ಮುಂಗಡ ಬಜೆಟ್‌ನ್ನು ಮಂಡಿಸಿದರು. ನಿರ್ದೇಶಕ ಶಿವಪ್ರಸಾದ್ ಎ. ವಂದಿಸಿದರು.
ಸಂಘವು ವರದಿ ಸಾಲಿನಲ್ಲಿ ರೂ. 4,43,530 ನಿವ್ವಳ ಲಾಭ ಗಳಿಸಿದ್ದು ಶೇ.8 ಡಿವಿಡೆಂಡ್ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಹೇರಳೆರವರು ಘೋಷಿಸಿದರು.