ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಸಂಧ್ಯಾ ಪಿ ಅವರಿಗೆ ದ.ಕ ಜಿಲ್ಲಾ ಪ್ರಾಂಶುಪಾಲರ ಸಂಘದ ವತಿಯಿಂದ ನಡೆದ ವಿಶೇಷ ಸಮಾರಂಭದಲ್ಲಿ `ಉತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲೆಯ ಐವರು ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ್ದಾರೆ.
2004ರಲ್ಲಿ ಕುಂಬ್ರ ಮರ್ಕಝುಲ್ ಹುದಾ ವಿದ್ಯಾಸಂಸ್ಥೆಗೆ ಸೇರ್ಪಡೆಗೊಂಡು ಡಿಪ್ಲೊಮಾ ತರಗತಿಯನ್ನು ಮುನ್ನಡೆಸಿದ ಇವರು 2005ರಲ್ಲಿ ಪದವಿಪೂರ್ವ ವಿಭಾಗ ಆರಂಭಗೊಂಡ ಬಳಿಕ 2006ರಲ್ಲಿ ಪ್ರಾಂಶುಪಾಲ ಹುದ್ದೆಯನ್ನು ವಹಿಸಿ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಗ್ರಾಮೀಣ ಭಾಗದ ಒಂದೇ ವಿದ್ಯಾಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಸುಮಾರು ಹತ್ತೊಂಬತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಂಧ್ಯಾ ಪಿ ಅವರು ಸಂಸ್ಥೆಯ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ತಮ್ಮ ಜವಾಬ್ದಾರಿಯನ್ನು ಶಿಸ್ತು ಮತ್ತು ಬದ್ಧತೆಯಿಂದ ಮಾಡಿ ಮುಗಿಸುವ ಇವರ ಕಾರ್ಯಕ್ಷಮತೆಗೆ ಕಾಲೇಜಿನ ಆಡಳಿತ ಸಮಿತಿಯಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಕೊರೋನ ಸಮಯದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಆನ್‌ಲೈನ್ ತರಗತಿ ನಡೆಸಿದ್ದ ಇವರು ಇಲಾಖಾ ಕೆಲಸ ಕಾರ್ಯಗಳನ್ನೂ ಶಿಸ್ತುಬದ್ದವಾಗಿ ಮಾಡುತ್ತಾ ಬಂದಿದ್ದಾರೆ.
ಸಂಧ್ಯಾ ಪಿ ಅವರು ಪತಿ ಉದ್ಯಮಿ ಸುಂದರ್ ಶೆಟ್ಟಿ, ಪುತ್ರರಾದ ಸುಶಾಂತ್ ಹಾಗೂ ಸುಹಾನ್ ಜೊತೆ ಬನ್ನೂರು ಗುರುಂಪುನಾರ್‌ನಲ್ಲಿರುವ ನಿವಾಸದಲ್ಲಿ ವಾಸವಾಗಿದ್ದಾರೆ.