ಕಾಣಿಯೂರು: ಮಕ್ಕಳಲ್ಲಿ ಅಮೋಘವಾದ ಪ್ರತಿಭೆಗಳು ಅಡಗಿದ್ದು, ಅವುಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಾಗ ಅದೇ ಮಕ್ಕಳು ಸಮಾಜದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಹೇಳಿದರು. ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಕಾಣಿಯೂರು ಇವುಗಳ ಆಶ್ರಯದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ಕಾಣಿಯೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಾಗ ಮಕ್ಕಳ ಬೌದ್ಧಿಕ ಮಟ್ಟ ಬೆಳೆದು, ಮುಂದೆ ನೆಮ್ಮದಿಯಿಂದ ಸುಸಂಸ್ಕೃತ ಜೀವನ ಮಾಡಲು ಸಾಧ್ಯವಾಗುತ್ತದೆ. ಮಕ್ಕಳು ಉತ್ತಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ.ಎಂ.ಬಿ, ಗ್ರಾ.ಪಂ. ಸದಸ್ಯರಾದ ಗೌರಿ ಮಾದೋಡಿ, ಜಯಂತ ಅಬೀರ, ಕಡಬ ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ, ಸವಣೂರು ಕ್ಲಸ್ಟರ್ ಸಿಆರ್‌ಪಿ ಕುಶಾಲಪ್ಪ ಗೌಡ, ಶಾಲಾಡಳಿತ ಸಮಿತಿ ಸದಸ್ಯ ನಾಗೇಶ್ ರೈ ಮಾಳ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ ಉಪಸ್ಥಿತರಿದ್ದರು. ಕಾಣಿಯೂರು ಕ್ಲಸ್ಟರ್ ಸಿಆರ್‌ಪಿ ಯಶೋದರವರು ಪ್ರಾಸ್ತಾವಿಕ ಮಾತನಾಡಿದರು. ಶಾಲಾಡಳಿತಾಧಿಕಾರಿ ವಸಂತ ರೈ ಕಾರ್ಕಳ ಸ್ವಾಗತಿಸಿ, ಮುಖ್ಯಗುರು ಸರಸ್ವತಿ.ಎಂ ವಂದಿಸಿದರು. ವಿದ್ಯಾರ್ಥಿನಿಯರಾದ ರಚನಾ, ಮನಸ್ವಿ, ಐಸಿತಾ ರೈ ಪ್ರಾರ್ಥಿಸಿದರು. ಶಿಕ್ಷಕಿಯರಾದ ವೀಣಾಲತಾ, ವಿನಯ. ವಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾಣಿಯೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ವಿಭಾಗ ಮತ್ತು ಹಿರಿಯ ವಿಭಾಗದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.