ಸರಕಾರಿ ಕಚೇರಿಯಲ್ಲಿ ಸ್ವೀಕೃತಗೊಂಡಿರುವ ಕಡತಗಳನ್ನು ಸಾರ್ವಜನಿಕ ವ್ಯಕ್ತಿಗೆ ನೀಡಿ ನಂಬಿಕೆ ದ್ರೋಹ, ಸಾರ್ವಜನಿಕರಿಗೆ ತೊಂದರೆ : ಅಕ್ರಮ ಲಾಭಗಳಿಸುವ ಉದ್ದೇಶದಿಂದ ಇಲಾಖಾ ದಾಖಲೆ ದುರುಪಯೋಗ – ಆರೋಪಿ ಗ್ರಾಮಕರಣಿಕ ಜಯಚಂದ್ರರ ಜಾಮೀನು ಅರ್ಜಿ ವಜಾ

0

ಪುತ್ತೂರು:ಉಪ್ಪಿನಂಗಡಿ ಸಮೀಪದ ಬಾರ್ಯ, ಕರಾಯ ಗ್ರಾಮದ ಗ್ರಾಮಕರಣಿಕರಾಗಿದ್ದು ಎನ್.ಸಿ.ಆರ್ -ಲ್‌ಗಳ ಕೇಸ್ ವರ್ಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಕಂದಾಯ ಇಲಾಖೆಯ ದಾಖಲೆ ದುರುಪಯೋಗ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಎಸ್.ಪಿ.ಜಯಚಂದ್ರ ಅವರ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ನ್ಯಾಯಾಲಯ ವಜಾಗೊಳಿಸಿದೆ.

ಬೆಳ್ತಂಗಡಿ ಹೋಬಳಿ ವ್ಯಾಪ್ತಿಗೆ ಒಳಪಟ್ಟ ತಣ್ಣೀರುಪಂತ, ಪುತ್ತಿಲ, ಬಾರ್ಯ, ಕರಾಯ ಗ್ರಾಮದ ಗ್ರಾಮಕರಣಿಕರಾಗಿದ್ದ ಎಸ್.ಪಿ.ಜಯಚಂದ್ರ ಅವರು 2018ನೇ ಇಸವಿಯ, ಕೊಕ್ಕಡ ಹೋಬಳಿಯ ಎಸ್.ಸಿ.ಆರ್.ಫೈಲ್‌ಗಳ ಕೇಸ್ ವರ್ಕರ್ ಆಗಿದ್ದ ಅವಽಯಲ್ಲಿ ಆರೋಪಿ ಪಿ.ಎನ್.ರಾಜು ಎಂಬಾತನೊಂದಿಗೆ ಸೇರಿ ಅಕ್ರಮ ಲಾಭಗಳಿಸುವ ಉದ್ದೇಶದಿಂದ ತನ್ನ ಸರ್ಕಾರಿ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ತಾಲೂಕು ಕಛೇರಿಗೆ ಸಾರ್ವಜನಿಕರಿಂದ ಬಂದ ಎನ್.ಸಿ.ಆರ್ ಫೈಲ್‌ಗಳನ್ನು 2ನೇ ಅರೋಪಿ ಪಿ.ಎನ್.ರಾಜು ಎಂಬಾತನ ವಶಕ್ಕೆ ನೀಡಿದ್ದು ಆತ ಈ ಫೈಲ್‌ಗಳನ್ನು ಅಪ್ರಮಾಣಿಕವಾಗಿ ತನ್ನ ವಶದಲ್ಲಿ ಬಚ್ಚಿಟ್ಟಿದ್ದನ್ನು ತಾಲೂಕು ಕಛೇರಿಗೆ ನೀಡಿ ಇಬ್ಬರು ಆರೋಪಿಗಳು ಸೇರಿ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದ್ದರೆಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿಸಾನಿಕಂ ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಜಯಚಂದ್ರ ಅವರನ್ನು ಸೆ.7ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಶೆಟ್ಟಿ ಹಳ್ಳಿಯ ಸಿ.ಎ.ಕರೆ ಮನೆಯಿಂದ ಬಂಽಸಿ ಕರೆತಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಬಂಧಿತ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯು ಮಧ್ಯಂತರ ಜಾಮೀನು ಮತ್ತು ಶಾಶ್ವತ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.ಪ್ರಾಸಿಕ್ಯೂಶನ್ ಪರ ಬೆಳ್ತಂಗಡಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಪುತ್ತೂರು ನಿವಾಸಿ ದಿವ್ಯರಾಜ್ ಹೆಗ್ಡೆ ವಾದಿಸಿದ್ದರು.

ನಂಬಿಕೆ ದ್ರೋಹ: ಪ್ರಕರಣದ 1ನೇ ಆರೋಪಿ ಎಸ್.ಪಿ.ಜಯಚಂದ್ರ 2018ನೇ ಇಸವಿಯಲ್ಲಿ ತಾಲೂಕು ಕಛೇರಿಯಿಂದ 57 ಎನ್.ಸಿ.ಆರ್.ಎನ್.ಆರ್.ಅಶಿಗಳನ್ನು 3ನೇ ಆರೋಪಿತನ ವಶಕ್ಕೆ ನೀಡಿರುವುದಾಗಿ ತಿಳಿಸಿದ್ದು ಇದರಿಂದ 1ನೇ ಆರೋಪಿ ಎಸ್.ಪಿ ಜಯಚಂದ್ರ ಸರ್ಕಾರಿ ಕರ್ತವ್ಯದಲ್ಲಿ ನಂಬಿಕೆದ್ರೋಹವೆಸಗಿರುವುದಲ್ಲದೆ, ಸರಕಾರಿ ನೌಕರನಾಗಿರುವ ಎಸ್.ಪಿ ಜಯಚಂದ್ರ ಸರಕಾರಿ ಕಚೇರಿಯಲ್ಲಿ ಸ್ವೀಕೃತಗೊಂಡಿರುವ ಎನ್.ಸಿ.ಆರ್ ಅರ್ಜಿಗಳನ್ನು ಸಾರ್ವಜನಿಕ ವ್ಯಕ್ತಿಯಾದ 2ನೇ ಆರೋಪಿ ಪಿ.ಎನ್.ರಾಜು ಎಂಬಾತನ ವಶಕ್ಕೆ ನೀಡಿರುವುದು ಗುರುತರವಾದ ಗಂಭೀರ ಸ್ವರೂಪದ ಆರೋಪ.

ಆರೋಪಿತನು ಇದೇ ರೀತಿಯಲ್ಲಿ ಸರಕಾರಿ ಕಛೇರಿಯಿಂದ ಬೇರೆ ದಾಖಲಾತಿಗಳನ್ನು ದುರುಪಯೋಗ ಪಡಿಸಿರುವ ಸಾಧ್ಯತೆ ಇರುವುದರಿಂದ, ಈತನಿಗೆ ಜಾಮೀನು ನೀಡಿದಲ್ಲಿ ಇದೇ ರೀತಿಯಲ್ಲಿ ಈತ ತನ್ನ ಚಾಳಿಯನ್ನು ಮುಂದುವರೆಸುವ ಸಾಧ್ಯತೆ ಇದೆ.ಆರೋಪಿತ ಜಯಚಂದ್ರ 2ನೇ ಆರೋಪಿ ಪಿ.ಎನ್.ರಾಜು ಜೊತೆ ಸೇರಿ ಶಿಬಾಜೆ, ರಶ್ಯಾ, ಕಳಂಜ, ಧರ್ಮಸ್ಥಳ ಗ್ರಾಮದ ಸಾರ್ವಜನಿಕರು ಬೆಳ್ತಂಗಡಿ ತಾಲೂಕು ಕಚೇರಿಗೆ ನೀಡಿದ್ದ ಅಕ್ರಮ ಸಕ್ರಮ ದಾಖಲಾತಿಗಳನ್ನು ದುರುಪಯೋಗಪಡಿಸಿ ಈ ಗ್ರಾಮದ ಸಾರ್ವಜನಿಕರಿಗೆ ತೊಂದರೆಯನ್ನು ನೀಡಿರುವ ಸಾಧ್ಯತೆಯಿದೆ. ಆರೋಪಿ ಎಸ್.ಪಿ.ಜಯಚಂದ್ರ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಪ್ರಕರಣದ ಮುಂದಿನ ತನಿಖೆಯ ದಿಕ್ಕುತಪ್ಪಿಸುವ ಸಾಧ್ಯತೆಗಳೂ ಇರುವುದರಿಂದ ಜಾಮೀನು ನೀಡಿದಲ್ಲಿ ಈತ ಈ ಪ್ರಕರಣದ ಸಾರ್ವಜನಿಕ ಸಾಕ್ಷಿದಾರರಿಗೆ ಬೆದರಿಕೆಯನ್ನೊಡ್ಡಿ ಸಾಕ್ಷಿ ಪುರಾವೆಗಳನ್ನು ನಾಶ ಪಡಿಸುವ ಸಾಧ್ಯತೆ ಇರುವುದರಿಂದ ಜಾಮೀನು ಮಂಜೂರು ಮಾಡದಂತೆ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆಯವರು ಆಕ್ಷೇಪಣೆ ಸಲ್ಲಿಸಿದ್ದರು.ಇದನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಆರೋಪಿ ಸೇವೆಯಿಂದ ಅಮಾನತು: ಆರೋಪಿ ಎಸ್.ಪಿ.ಜಯಚಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ದ.ಕ.ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here