ರಾಮಕುಂಜ: ಜೇಸಿಐ ಆಲಂಕಾರು ಇದರ ‘ಜೇಸಿ ಸಪ್ತಾಹ; ನಮಸ್ತೆ 2022’ರ ಅಂಗವಾಗಿ ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಿರ್ಮಾಣಗೊಂಡ ಶಾಶ್ವತ ಯೋಜನೆ ಶಿಶು ಪೋಷಣಾ ಕೊಠಡಿಯ ಹಸ್ತಾಂತರ ಸೆ.15ರಂದು ಬೆಳಿಗ್ಗೆ ನಡೆಯಿತು.
ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜರವರು ಶಿಶು ಪೋಷಣಾ ಕೊಠಡಿ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಜೆಸಿಐ ಸೇವೆಗೆ ಹೆಸರು ಮಾಡಿದ ಸಂಸ್ಥೆ ಜೆಸಿಐ ಸೇವೆ ರಾಮಕುಂಜೇಶ್ವರನಿಗೂ ಸಿಗಬೇಕೆಂಬ ನಿಟ್ಟಿನಲ್ಲಿ ಇಲ್ಲಿ ಶಿಶು ಪೋಷಣಾ ಕೊಠಡಿ ನಿರ್ಮಾಣಗೊಂಡಿದೆ, ಇದೊಂದು ಇತರರಿಗೂ ಮಾದರಿಯಾಗಲಿ ಎಂದರು.
ಮುಖ್ಯ ಅತಿಥಿಯಾಗಿದ್ದ ಜೆಸಿಐ ವಲಯ 15ರ ವಲಯಾಧ್ಯಕ್ಷ ರೋಯನ್ ಉದಯ್ ಕ್ರಾಸ್ತಾರವರು ಮಾತನಾಡಿ, ಆಲಂಕಾರು ಜೆಸಿಐ ಅಧ್ಯಕ್ಷರು ಹೆಚ್ಚಿನ ಮುತುವರ್ಜಿಯಿಂದ ಹಲವು ಕಾರ್ಯಕ್ರಮ ಆಯೋಜಿಸಿದ್ದಾರೆ. ಮುಂದಿನ ವಲಯ ಸಮ್ಮೇಳನದಲ್ಲಿ ಆಲಂಕಾರು ಜೆಸಿಐಗೆ ಹೆಚ್ಚಿನ ಪ್ರಶಸ್ತಿ ಸಿಗಲಿ ಎಂದರು.
ಇನ್ನೋರ್ವ ಅತಿಥಿ ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ.ಸಂದರ್ಭೋಚಿತವಾಗಿ ಮಾತನಾಡಿದರು. ಆಲಂಕಾರು ಜೆಸಿಐ ಅಧ್ಯಕ್ಷ ಅಜಿತ್‌ಕುಮಾರ್ ರೈಯವರು ಅಧ್ಯಕ್ಷತೆ ವಹಿಸಿದ್ದರು.
ದಾನಿಗಳ ಪರವಾಗಿ ಅಂಗನವಾಡಿ ಕಾರ್ಯಕರ್ತೆ ಹರಿಣಿ, ಸುಮತಿ ಬಾಂತೊಟ್ಟು, ಶ್ರದ್ಧಾಕೇಶವರವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಪ್ತಾಹ ನಿರ್ದೇಶಕ ಪ್ರದೀಪ್ ಬಾಕಿಲರವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಅಧ್ಯಕ್ಷ ಅಜಿತ್‌ಕುಮಾರ್ ರೈ ಸ್ವಾಗತಿಸಿ, ನಿರೂಪಿಸಿದರು. ಶ್ರದ್ಧಾಕೇಶವ ಕಾರಿಜಾಲ್ ವಂದಿಸಿದರು. ಆಲಂಕಾರು ಜೆಸಿಐ ಸ್ಥಾಪಕಾಧ್ಯಕ್ಷ ಜನಾರ್ದನ ಬಿ.ಎಲ್., ನಿಕಟಪೂರ್ವಾಧ್ಯಕ್ಷ ಗಣೇಶ್ ಕಟ್ಟಪುಣಿ, ಪೂರ್ವಾಧ್ಯಕ್ಷೆ ಹೇಮಲತಾಪ್ರದೀಪ್, ಮಹಿಳಾ ಜೇಸಿ ಅಧ್ಯಕ್ಷೆ ಮಮತಾ ಅಂಬರಾಜೆ, ಲಕ್ಷ್ಮೀನಾರಾಯಣ ಅಲೆಪ್ಪಾಡಿ, ದೇವಕಿ ಹಿರಿಂಜ, ಬಾಲಕೃಷ್ಣ ಕೇಪುಳು, ಗುರುಪ್ರಸಾದ್ ಕೇವಳ, ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶೈಲಜಾ ಆಳ್ವ, ದೇವಸ್ಥಾನದ ಸಿಬ್ಬಂದಿ ಅಶೋಕ ಹಲ್ಯಾರ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.