ರಾಮಕುಂಜ ಗ್ರಾಮಸಭೆ: ಅಲೆಮಾರಿ ಜಾನುವಾರುಗಳ ಬಗ್ಗೆ ಗ್ರಾ.ಪಂ.ನಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ

0

ರಾಮಕುಂಜ: ಹೆದ್ದಾರಿಯುದ್ದಕ್ಕೂ ಅಲೆಮಾರಿ ಜಾನುವಾರುಗಳು ತಿರುಗಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಹೇಳಿದ ಗ್ರಾಮಸ್ಥರು ಈ ಬಗ್ಗೆ ಗ್ರಾಮ ಪಂಚಾಯತ್‌ನಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಘಟನೆ ರಾಮಕುಂಜ ಗ್ರಾಮಸಭೆಯಲ್ಲಿ ನಡೆದಿದೆ.

ಸಭೆ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ.,ರವರ ಅಧ್ಯಕ್ಷತೆಯಲ್ಲಿ ಸೆ.೧೪ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಕೆ.ಎ. ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಗ್ರಾಮಸ್ಥ ತೇಜಕುಮಾರ್ ರೈ ಹಾಗೂ ಇತರೇ ಗ್ರಾಮಸ್ಥರು, ಆತೂರು ಪರಿಸರದಲ್ಲಿ ಹೆದ್ದಾರಿಯುದ್ದಕ್ಕೂ ರಸ್ತೆಯಲ್ಲಿ ಜಾನುವಾರುಗಳು ಓಡಾಟ ನಡೆಸುತ್ತಿರುತ್ತವೆ. ಇದರಿಂದ ದ್ವಿಚಕ್ರ ಸೇರಿದಂತೆ ಇತರೇ ವಾಹನ ಸವಾರರಿಗೆ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ಪಶುವೈದ್ಯ ಪರೀಕ್ಷಕ ಅಶೋಕ್ ಕುಮಾರ್‌ರವರು, ಕೋಳಿ, ಜಾನುವಾರು ಸೇರಿದಂತೆ ಯಾವುದೇ ಪ್ರಾಣಿಗಳನ್ನು ತಮ್ಮ ಜಾಗದ ಬೌಂಡರಿಯಿಂದ ಹೊರಬಿಡಲು ಅವಕಾಶವಿಲ್ಲ ಎಂದರು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ನಂತರ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ.ರವರು, ಸಾಕುಪ್ರಾಣಿಗಳ ವಾರೀಸುದಾರರಿಗೆ ಪಂಚಾಯತ್‌ನಿಂದ ನೋಟಿಸ್ ನೀಡುವುದಾಗಿ ಹೇಳಿದರು.

ಹೆದ್ದಾರಿ ಬದಿ ತ್ಯಾಜ್ಯ:
ನೀರಾಜೆ ಭಾಗ ಸೇರಿದಂತೆ ಹಲವು ಕಡೆಗಳಲ್ಲಿ ಹೆದ್ದಾರಿ ಬದಿಯಲ್ಲಿ ಕೋಳಿ ಸೇರಿದಂತೆ ಇತರೇ ತ್ಯಾಜ್ಯಗಳನ್ನು ಗೋಣಿಚೀಲದಲ್ಲಿ ತುಂಬಿಸಿಕೊಂಡು ಬಂದು ಸುರಿಯಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅಶೋಕ್‌ಕುಮಾರ್ ಕೊಯಿಲ ಒತ್ತಾಯಿಸಿದರು. ಈ ಬಗ್ಗೆ ಗ್ರಾಮಸ್ಥರು ವಿಡಿಯೋ ಮಾಡಿ ಕಳಿಸಿಕೊಂಡುವಂತೆ ಸೂಚಿಸಲಾಯಿತು.

ಬಿಳಿಟರ್ಪಾಲ್ ನೀಡಿ:
ಕೃಷಿ ಇಲಾಖೆಯಿಂದ ರೈತರಿಗೆ ಕಪ್ಪು ಟರ್ಪಾಲ್ ನೀಡಲಾಗುತ್ತಿದೆ. ಇದರ ಬದಲು ಸೋಲಾರ್‌ಗೆ ಬಳಕೆಯಾಗುವ ಬಿಳಿ ಟರ್ಪಾಲ್ ನೀಡಬೇಕೆಂದು ವಸಂತಿ ಕನೆಮಾರ್ ಆಗ್ರಹಿಸಿದರು.

ಗಾಣಂತಿ ರಸ್ತೆ ದುರಸ್ತಿಗೆ ಆಗ್ರಹ:
ಕುಂಡಾಜೆಯಿಂದ ಗಾಣಂತಿಗೆ ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು ಓಡಾಟ ನಡೆಸಲು ಆಗುತ್ತಿಲ್ಲ. ಇಲ್ಲಿ ಚರಂಡಿಯಲ್ಲಿಯೇ ವಿದ್ಯುತ್ ಕಂಬವೂ ಹಾಕಲಾಗಿದೆ. ಸದ್ರಿ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸಿ ಸಂಚಾರಕ್ಕೆ ಯೋಗ್ಯರಸ್ತೆಯನ್ನಾಗಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಮಳೆ ಕಡಿಮೆಯಾದ ಬಳಿಕ ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷೆ ಮಾಲತಿ ಎನ್.ಕೆ.ತಿಳಿಸಿದರು.

ತೆರಿಗೆ ಪರಿಷ್ಕರಣೆ-ಚರ್ಚೆ:
ಮನೆ ತೆರಿಗೆ ಪರಿಷ್ಕರಣೆ ಯಾವ ಆಧಾರದಲ್ಲಿ ಮಾಡಲಾಗಿದೆ. ರೂ.೨೦೦ ಇದ್ದ ಮನೆ ತೆರಿಗೆ ಏಕಾಏಕಿ ರೂ.೧ ಸಾವಿರಕ್ಕೆ ಏರಿಕೆಯಾಗಿದೆ ಎಂದು ಎಪಿಎಂಸಿ ಮಾಜಿ ಸದಸ್ಯ ಕೊರಗಪ್ಪರವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಜೆರಾಲ್ಡ್ ಮಸ್ಕರೇನಸ್‌ರವರು, ಪ್ರತಿ ಎರಡು ವರ್ಷಕ್ಕೊಮ್ಮೆ ಮನೆ ತೆರಿಗೆ ಪರಿಷ್ಕರಣೆ ಮಾಡಬೇಕಾಗಿದೆ. ಸರಕಾರದ ಆದೇಶದಂತೆ ಈಗ ಪರಿಷ್ಕರಣೆ ಮಾಡಲಾಗಿದೆ ಎಂದರು. ಈ ವೇಳೆ ಮಾತನಾಡಿದ ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ಮನೆ ತೆರಿಗೆ ಪರಿಷ್ಕರಣೆ ಬಗ್ಗೆ ಆಕ್ಷೇಪ ಇದ್ದಲ್ಲಿ ಸಲ್ಲಿಸುವಂತೆ ಗ್ರಾಮಸ್ಥರಿಗೆ ೧ ತಿಂಗಳ ಅವಕಾಶ ನೀಡಲಾಗಿತ್ತು. ಈ ಬಗ್ಗೆ ಪತ್ರಿಕೆಯಲ್ಲೂ ಪ್ರಕಟಣೆ ನೀಡಲಾಗಿತ್ತು. ಆದರೂ ಗ್ರಾಮಸ್ಥರಿಂದ ಆಕ್ಷೇಪಣೆ ಬಾರದೇ ಇದ್ದಲ್ಲಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಆಕ್ಷೇಪಣೆ ಸಲ್ಲಿಕೆಗೆ ಮತ್ತೆ ೧ ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೂ ಯಾವುದೇ ಆಕ್ಷೇಪಣೆ ಬಂದಿಲ್ಲ ಎಂದರು. ತೆರಿಗೆ ಪರಿಷ್ಕರಣೆ ವ್ಯತ್ಯಾಸವಾಗಿದ್ದಲ್ಲಿ ರಶೀದಿಯೊಂದಿಗೆ ಕಚೇರಿಗೆ ಬಂದು ಪರಿಶೀಲನೆ ಮಾಡುವಂತೆ ಗ್ರಾಮಸ್ಥರಿಗೆ ಸೂಚಿಸಲಾಯಿತು.

ಸ್ಮಶಾನ ಜಾಗ ಗುರುತಿಸಿ:
ಹಳೆನೇರೆಂಕಿಯಲ್ಲಿ ಸ್ಮಶಾನಕ್ಕೆ ಜಾಗ ಕಾದಿರಿಸುವಂತೆ ಹಿಂದಿನ ಗ್ರಾಮಸಭೆಯಲ್ಲಿಯೇ ಪ್ರಸ್ತಾಪಿಸಲಾಗಿದೆ. ಈ ವಿಚಾರ ಏನಾಯಿತು ಎಂದು ಗ್ರಾಮಸ್ಥೆ ದೇವಕಿ ಹಿರಿಂಜ ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಎಪಿಎಂಸಿ ಮಾಜಿ ಸದಸ್ಯ ಕೊರಗಪ್ಪ ಎರಟಾಡಿಯವರು, ಸರ್ವೆ ನಂ.೭೮ರಲ್ಲಿ ಸ್ಮಶಾನಕ್ಕೆ ಜಾಗ ಕಾದಿರಿಸಲಾಗಿದ್ದು ಆರ್‌ಟಿಸಿಯೂ ಆಗಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಹೇಳಿದರು. ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಸದಸ್ಯರಾದ ಕೇಶವ ಗಾಂಧಿಪೇಟೆ, ಯತೀಶ್‌ಕುಮಾರ್ ಬಾನಡ್ಕ, ಕುಶಾಲಪ್ಪ ಗೌಡ, ವಸಂತ ಎ., ಸೂರಪ್ಪ ಕುಲಾಲ್, ಹೆಚ್.ಅಬ್ದುಲ್‌ರಹಿಮಾನ್, ಸುಜಾತ, ರೋಹಿಣಿ, ಸುಚೇತಾ, ಜಯಶ್ರೀ, ಪ್ರದೀಪ್, ಭವಾನಿ, ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ವಿಠಲ್, ಮೆಸ್ಕಾಂ ಸಿಬ್ಬಂದಿ ಮಿನಿ ಪಿ.ಸಿ., ಕೃಷಿ ಇಲಾಖೆಯ ಭರಮಣ್ಣವರ, ಗ್ರಾಮ ಒನ್ ಕೇಂದ್ರದ ಪ್ರವೀಣ್, ಗ್ರಾಮಕರಣಿಕ ಸತೀಶ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ಮೇನೇಜರ್ ಆನಂದ ಗೌಡ, ಆರೋಗ್ಯ ಇಲಾಖೆಯ ಜಲಜ, ಹಿರಿಯ ಪಶುವೈದ್ಯ ಪರೀಕ್ಷಕ ಅಶೋಕ್‌ಕುಮಾರ್, ಇಂಜಿನಿಯರ್ ಎಸ್.ಎಸ್.ಹುಕ್ಕೇರಿ, ಶಿಕ್ಷಣ ಇಲಾಖೆಯ ಸಾಂತಪ್ಪ ಗೌಡ, ಎಸ್‌ಬಿಐ ಗ್ರಾಹಕ ಸೇವಾಕೇಂದ್ರದ ಶ್ರೀನಿವಾಸ ಪಡ್ಡಿಲ್ಲಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಉಮಾವತಿಯವರು ಇಲಾಖಾವಾರು ಮಾಹಿತಿ ನೀಡಿದರು. ಪಿಡಿಒ ಜೆರಾಲ್ಡ್ ಮಸ್ಕರೇನಸ್ ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿ ಪ್ರಸಾದ್ ವರದಿ ಮಂಡಿಸಿದರು.

LEAVE A REPLY

Please enter your comment!
Please enter your name here