ನೆಲ್ಯಾಡಿ: ‘ಜೇಸಿ ಸಪ್ತಾಹ: ನಮಸ್ತೆ-2022’ ಸಮಾರೋಪ

0
  • ಯುವ ಜನತೆಯಲ್ಲಿನ ಪ್ರತಿಭೆ, ಸಾಮರ್ಥ್ಯ ಪಸರಿಸುವ ಕೆಲಸ ಆಗಬೇಕಿದೆ: ಪ್ರದೀಪ್ ಬಾಕಿಲ

ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ೩೯ನೇ ವರ್ಷದ ‘ಜೇಸಿ ಸಪ್ತಾಹ: ನಮಸ್ತೆ-೨೦೨೨’ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ ಸೆ.೧೫ರಂದು ಸಂಜೆ ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ವಿಶೇಷ ಆಹ್ವಾನಿತರಾಗಿದ್ದ ಪೂರ್ವ ವಲಯಾಧಿಕಾರಿ ಪ್ರದೀಪ್ ಬಾಕಿಲ ಮಾತನಾಡಿ, ಪ್ರತಿಭೆಗಳು, ಸಾಮರ್ಥ್ಯಗಳು ಯುವ ಜನತೆಯಲ್ಲಿ ಬಹಳಷ್ಟು ಇದೆ. ಆದರೆ ಅದನ್ನು ಎಲ್ಲಿ, ಹೇಗೇ ವಿನಿಯೋಗಿಸುತ್ತಿದ್ದೇವೆ ಎಂಬುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಇದಕ್ಕೆ ಸರಿಯಾದ ಉತ್ತರವನ್ನು ಕಳೆದ ಹಲವು ವರ್ಷಗಳಿಂದ ಜೇಸಿ ಸಂಸ್ಥೆ ನೀಡುತ್ತಿದೆ. ಹತ್ತಾರು ಯುವಕರನ್ನು ಸಮಾಜಮುಖಿಯಾದ ಜನತೆಯನ್ನು ಜೇಸಿ ಸಂಸ್ಥೆ ಸಮಾಜಕ್ಕೆ ನೀಡುತ್ತಿದೆ. ಇದನ್ನು ಇನ್ನಷ್ಟೂ ಉದಾತ್ತವಾದ ಚಿಂತನೆಯೊಂದಿಗೆ ಪಸರಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು. ಜೇಸಿ ಸಿದ್ದಾಂತಗಳ ಅನುಷ್ಠಾನಗೊಳಿಸುವಲ್ಲಿ ನೆಲ್ಯಾಡಿ ಜೆಸಿಐ ಇತರೇ ಜೆಸಿಐಗಳಿಗೆ ಮಾದರಿಯಾಗಿದೆ. ಕೇವಲ ಕೊಡುಗೆ ಕೊಡುವುದೊಂದೇ ಜೆಸಿಐ ಧ್ಯೇಯವಲ್ಲ. ನಾವು ಬೆಳೆಯುವುದರೊಂದಿಗೆ ಇನ್ನೊಬ್ಬರನ್ನೂ ಬೆಳೆಸುವ ಕೆಲಸ ಜೆಸಿಐಯಿಂದ ಆಗಬೇಕೆಂದು ಪ್ರದೀಪ್ ಬಾಕಿಲ ಹೇಳಿದರು.

ಕಮಲಪತ್ರ ಪುರಸ್ಕೃತರಾದ ನೆಲ್ಯಾಡಿ ಜೆಸಿಐನ ಪೂರ್ವಾಧ್ಯಕ್ಷೆ ಮೇರಿಜೋನ್‌ರವರು ಮಾತನಾಡಿ, ಕಮಲಪತ್ರ ರಾಷ್ಟ್ರೀಯ ಪ್ರಶಸ್ತಿಗೆ ಸರಿಸಮಾನವಾಗಿದೆ. ಈ ಅಮೂಲ್ಯವಾದ ಪ್ರಶಸ್ತಿ ದೊರೆತಿರುವುದಕ್ಕೆ ಧನ್ಯಳಾಗಿದ್ದೇನೆ. ಯಾವುದೇ ಅವಕಾಶ ಸಿಕ್ಕಿದಾಗ ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡು ಸಮಾಜದಲ್ಲಿ ಉತ್ತಮ ಕೆಲಸ ಮಾಡಬೇಕು. ನಮಗೆ ಆತ್ಮವಿಶ್ವಾಸ, ದೇವರ ಮೇಲೆ ನಂಬಿಕೆ ಇರಬೇಕೆಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಮೆಸ್ಕಾಂ ನೆಲ್ಯಾಡಿ ಶಾಖಾ ಕಿರಿಯ ಅಭಿಯಂತರ ರಮೇಶ್, ನೆಲ್ಯಾಡಿ ಎಲೈಟ್ ರಬ್ಬರ್ ಕಂಪನಿ ಮಾಲಕ ಶಾಜಿ ಯು.ವಿ.ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷರಾದ ಪುರಂದರ ಗೌಡ ಡೆಂಜ, ಜಾನ್ ಪಿ.ಎಸ್.,ರವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.

ಬಹುಮಾನ ವಿತರಣೆ:
ಜೆಸಿ ಸಪ್ತಾಹದ ಅಂಗವಾಗಿ ಜೆಸಿ ಸದಸ್ಯರಿಗೆ, ಸಾರ್ವಜನಿಕರಿಗೆ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಜೆಸಿಐ ಪೂರ್ವಾಧ್ಯಕ್ಷ ಮೋಹನ್ ವಿ., ಆನ್ಸಿ ಜಾನ್‌ರವರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.

ಜೇಸಿ ಸಪ್ತಾಹ-೨೦೨೨ರ ಯೋಜನಾ ನಿರ್ದೇಶಕ ಶಿವಪ್ರಸಾದ್‌ರವರು ಕಾರ್ಯಕ್ರಮದ ಕುರಿತು ಮಾತನಾಡಿದರು. ಅಧ್ಯಕ್ಷೆ ಜಯಂತಿ ಬಿ.ಎಂ.ಅಧ್ಯಕ್ಷತೆ ವಹಿಸಿ ಮಾತನಾಡಿ, ೧ ವಾರ ನಡೆದ ಜೇಸಿ ಸಪ್ತಾಹದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಮಹಿಳಾ ಜೇಸಿವಿಂಗ್ ಅಧ್ಯಕ್ಷೆ ಜಯಲಕ್ಷ್ಮಿಪ್ರಸಾದ್, ಜೆಜೆಸಿ ಅಧ್ಯಕ್ಷ ಅಕ್ಷಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷ ರವಿಚಂದ್ರ ಹೊಸವೊಕ್ಲು ವೇದಿಕೆಗೆ ಆಹ್ವಾನಿಸಿದರು. ಸುಪ್ರಿತಾರವಿಚಂದ್ರ ಜೇಸಿವಾಣಿ ವಾಚಿಸಿದರು. ಸಪ್ತಾಹದ ಯೋಜನಾ ನಿರ್ದೇಶಕಿ ಸುಚಿತ್ರಾ ಜೆ.ಬಂಟ್ರಿಯಾಲ್‌ರವರು ಸಪ್ತಾಹದ ವರದಿ ವಾಚಿಸಿದರು. ಜಯಂತಿ ಬಿ.ಎಂ.ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಪ್ರವೀರ್ಣ ಎಸ್.ಎಂ.ವಂದಿಸಿದರು. ಪೂರ್ವಾಧ್ಯಕ್ಷ ಜಯಾನಂದ ಬಂಟ್ರಿಯಾಲ್ ಸೇರಿದಂತೆ ಪೂರ್ವಾಧ್ಯಕ್ಷರು, ಜೆಸಿ ಘಟಕಾಡಳಿತ ಮಂಡಳಿ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಮಲಪತ್ರ ಪುರಸ್ಕೃತ ಮೇರಿಜಾನ್‌ರವರು ಆತಿಥ್ಯ ನೀಡಿದರು.

ಕಮಲಪತ್ರ ಪುರಸ್ಕಾರ:
ನೆಲ್ಯಾಡಿ ಜೆಸಿಐನ ಪೂರ್ವಾಧ್ಯಕ್ಷೆ, ವಲಯ ತರಬೇತುದಾರರೂ ಆದ ಮೇರಿಜೋನ್‌ರವರಿಗೆ ಕಮಲಪತ್ರ ಪುರಸ್ಕಾರ ನೀಡಿ ಗೌರವಿಸಲಾಯಿತು. ಮೇರಿಜೋನ್‌ರವರ ಪತಿ, ನಿವೃತ್ತ ಯೋಧ ಜೋನ್, ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಾಹ್ನವಿಪುರಂದರ ಗೌಡರವರು ಮೇರಿಜೋನ್‌ರವರನ್ನು ಸಭೆಗೆಪರಿಚಯಿಸಿದರು.

ಗೌರವಾರ್ಪಣೆ:
ಪರಿಸರ ಪ್ರೇಮಿ, ಪವರ್‌ಮ್ಯಾನ್ ದುರ್ಗಾಸಿಂಗ್, ಪ್ರಗತಿಪರ ಕೃಷಿಕ ತುಕಾರಾಮ ರೈ ಹೊಸಮನೆ, ಅಡಿಕೆ ವ್ಯಾಪಾರಿ ಮಹಮ್ಮದ್ ನಝೀರ್ ಹೊಸಮಜಲು, ಮೆಸ್ಕಾಂ ನೆಲ್ಯಾಡಿ ಶಾಖಾ ಕಿರಿಯ ಅಭಿಯಂತರ ರಮೇಶ್, ನೆಲ್ಯಾಡಿಯಲ್ಲಿ ಗ್ರಾಮಕರಣಿಕರಾಗಿದ್ದು ಬಂಟ್ವಾಳ ತಾಲೂಕು ಕಚೇರಿಗೆ ವರ್ಗಾವಣೆಗೊಂಡಿರುವ ಅಶ್ವಿನಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಜೆಸಿಐನ ಸದಸ್ಯರಾದ ದಯಾಕರ ರೈ, ವಿಶ್ವನಾಥ ಶೆಟ್ಟಿ, ಗಣೇಶ್ ಕೆ.ರಶ್ಮಿ, ಆನಂದ ಅಜಿಲ, ನಾರಾಯಣ ಎನ್ ಬಲ್ಯರವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿ, ಸನ್ಮಾನಪತ್ರ ವಾಚಿಸಿದರು. ದುರ್ಗಾಸಿಂಗ್, ತುಕಾರಾಮ ರೈ, ಅಶ್ವಿನಿಯವರು ಮಾತನಾಡಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here