ನಾನು ಜಾರಿಗೊಳಿಸಿದ್ದ ಸಕಾಲ ಯೋಜನೆ ಸರಿಯಾಗಿ ಅನುಷ್ಠಾನಿಸಿದರೆ ಶೇ.60ರಷ್ಟು ಭ್ರಷ್ಟಾಚಾರ ನಿಲ್ಲುತ್ತದೆ

0

  • ಸರಕಾರದಿಂದ ಧನಾತ್ಮಕ ಪ್ರತಿಕ್ರಿಯೆ ಇರದ ಬಗ್ಗೆ ಡಿ.ವಿ. ಬೇಸರ

ಪುತ್ತೂರು: `’ನಾನು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಜಾರಿಗೊಳಿಸಿದ್ದ ಸಕಾಲ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ ಸರಕಾರಿ ಕಚೇರಿಯಲ್ಲಿರುವ ಭ್ರಷ್ಟಾಚಾರ ಶೇ.60 ರಷ್ಟು ನಿಲ್ಲುತ್ತಿತ್ತು” ಎಂದು ಬೆಂಗಳೂರು ಉತ್ತರ ಲೋಕಸಭಾ ಸದಸ್ಯ, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆಗಿರುವ ಡಿ.ವಿ.ಸದಾನಂದ ಗೌಡರು ಹೇಳಿದ್ದಾರಲ್ಲದೆ, `ಸಕಾಲ ಯೋಜನೆಯ ಕುರಿತು ಧನಾತ್ಮಕವಾಗಿ ಕ್ರಮಕೈಗೊಳ್ಳದ ಸ್ವಪಕ್ಷೀಯ ಸರಕಾರದ ಮೇಲೆ’ ಅಸಮಾಧಾನ ವ್ಯಕ್ತಪಡಿಸಿದರು.

ಸೆ.17ರಂದು ದೇವರಗುಂಡದ ಸ್ವಗೃಹಕ್ಕೆ ಆಗಮಿಸಿದ್ದ ಡಿ.ವಿ.ಸದಾನಂದರನ್ನು `ಸುದ್ದಿ’ ತಂಡ ಭೇಟಿಯಾಗಿ ಮಾತನಾಡಿಸಿತು. ಸಕಾಲ ವ್ಯವಸ್ಥೆಯನ್ನು ನಾನು ಮುಖ್ಯಮಂತ್ರಿ ಅಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದೆ. ಆದರೆ ಸಕಾಲಕ್ಕೊಂದು ಪ್ರತ್ಯೇಕ ಸಚಿವಾಲಯ ಮಾಡಿ ಅದನ್ನು ಯಶಸ್ವಿಯಾಗಿ ಅನುಷ್ಠಾನವಾಗಿಸಿದ್ದರೆ ಶೇ.60 ರಷ್ಟು ಭ್ರಷ್ಟಾಚಾರ ನಿಲ್ಲುತ್ತಿತ್ತು. ಈ ಕುರಿತು ಸ್ವಾತಂತ್ರ್ಯ ದಿನಾಚರಣೆಯಂದು ನಾನೇ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಪತ್ರವನ್ನೂ ಬರೆದಿದ್ದೆ. ಆದರೆ ಇದಕ್ಕೆ ಸಾಕಷ್ಟು ಧನಾತ್ಮಕ ಪ್ರತಿಕ್ರಿಯೆ ದೊರೆಯದ ಕಾರಣವೇ ಇಂದು ಭ್ರಷ್ಟಾಚಾರದ ಬಗ್ಗೆ ಇಷ್ಟು ಚರ್ಚೆಯಾಗುತ್ತಿದೆ ಎಂದರು.

ಕಳೆದ ಫ್ರೆಬ್ರವರಿಯಲ್ಲಿ ಸ್ವತಃ ಮೋದಿಯವರೇ ರಾಜ್ಯ ಸರಕಾರದ ಅಧಿಕಾರಿ ಶಾಲಿನಿ ರಜನೀಶ್ ಜೊತೆ ಫೋನ್ ಮೂಲಕ ಮಾತನಾಡಿ, ದೇಶದ ಎಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ಜೊತೆ ಸಂವಹನ ನಡೆಸಬೇಕು. ಸಕಾಲ ಯೋಜನೆಯ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದ್ದರು. ಶಾಲಿನಿಯವರು ಅದನ್ನು ಮಾಡಿಯೂ ಇದ್ದರು. ಆ ಬಳಿಕ ವಾದರೂ ಇದಕ್ಕೆ ವೇಗ ಸಿಗಬಹುದು ಎಂದು ನಾನು ಭಾವಿಸಿದ್ದೆ. ಆದರೆ ಸಿಕ್ಕಿಲ್ಲ ಎಂದು ಡಿ.ವಿ. ಬೇಸರ ತೋಡಿಕೊಂಡರು.

ಭ್ರಷ್ಟಾಚಾರದ ವಿರುದ್ಧದ ಸುದ್ದಿ ಆಂದೋಲನ ಸಂತೋಷ ತಂದಿದೆ. ನಾವು ಜೊತೆಗಿದ್ದೇವೆ : ಡಿ.ವಿ.ಎಸ್.
ಭ್ರಷ್ಟಾಚಾರದ ವಿರುದ್ಧ ಸುದ್ದಿ ನಡೆಸುತ್ತಿರುವ ಆಂದೋಲನ ನನಗೆ ಮನಸ್ಸಿಗೆ ಅತ್ಯಂತ ಹತ್ತಿರವಾಗಿದೆ. ಇದನ್ನು ಮುಂದುವರೆಸಿ, ನಾವೂ ಜೊತೆಗಿದ್ದೇವೆ ಎಂದು ಡಿ.ವಿ.ಸದಾನಂದ ಗೌಡ ಹೇಳಿದರು.

ದೇವರಗುಂಡದಲ್ಲಿ ಸುದ್ದಿಯೊಂದಿಗೆ ಮಾತನಾಡುತ್ತಿದ್ದ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ಈ ವಿಚಾರವಾಗಿ ನಾನು ಡಾ. ಶಿವಾನಂದರಲ್ಲಿ ಫೋನ್ ಮೂಲಕ ಮಾತನಾಡಿದ್ದೇನೆ. ಎಲ್ಲೆಲ್ಲಿ ಇದಕ್ಕೆ ಪರಿಹಾರ ಸೂತ್ರಗಳು ಇದೆ ಎಂದು ನಿಮಗನ್ನಿಸಿದೆಯೋ ಅದನ್ನು ನಮಗೆ ಹೇಳಿದರೆ ಅದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದೆ. ನಾನು ೧೫ ವರ್ಷದಿಂದ ಬಿಜೆಪಿ ಕೋರ್ ಕಮಿಟಿಯಲ್ಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತಿತರರ ನಿಕಟ ಸಂಪರ್ಕವಿದೆ. ಹೀಗಾಗಿ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಪರಿಹಾರ ಕ್ರಮದ ಬಗ್ಗೆ ನಿರ್ದಿಷ್ಟ ವಿಚಾರ ಲಭಿಸಿದರೆ ಅವರ ಗಮನಕ್ಕೆ ತರಬಹುದು. ಸುದ್ದಿಯವರ ಆಂದೋಲನದ ಮೂಲಕವಾದರೂ ಭ್ರಷ್ಟಾಚಾರ ನಿಗ್ರಹಕ್ಕೆ ವೇಗ ದೊರೆಯುತ್ತದೋ ನೋಡೋಣ ಎಂದು ಡಿ.ವಿ. ಹೇಳಿದರು.

 

ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ – ಮರೆಯದಿರಿ… ಮನೆ-ಮನೆಯಲ್ಲಿ, ಮಾಧ್ಯಮಗಳಲ್ಲಿ ಚರ್ಚೆಯ, ಚುನಾವಣೆಯಲ್ಲಿ ನಿರ್ಣಾಯಕ ವಿಷಯವಾಗಲಿ. ಜನರು ಬಯಸಿದರೆ ಪ್ರತಿನಿಧಿಗಳು ಬದಲಾಗುತ್ತಾರೆ, ಭ್ರಷ್ಟಾಚಾರ ನಿರ್ಮೂಲನವಾಗುತ್ತದೆ.

 

 

LEAVE A REPLY

Please enter your comment!
Please enter your name here