- ಶ್ರವಣ್ ಕುಮಾರ್ ನೇತೃತ್ವದ ಸಭೆಗೆ ಸಂದೀಪ್ ಕುಮಾರ್ ತಂಡ ಗೈರು
- ಪ್ರತ್ಯೇಕ ಸಭೆ: ಅಭಿಪ್ರಾಯ ದಾಖಲಿಸಿ ಜಿಲ್ಲಾ ಸಂಘಕ್ಕೆ ವರದಿ ರವಾನೆ
- ಲೆಕ್ಕಪತ್ರ ಪರಿಶೀಲನೆಗಾಗಿ ಮಂಗಳೂರು ಪ್ರೆಸ್‌ಕ್ಲಬ್‌ಗೆ ಕರೆಸಲಾಗುವುದು
- ಲೆಕ್ಕಪತ್ರ ಮಂಡನೆ ಸರಿಯಾದ ಬಳಿಕವೇ ಚುನಾವಣೆ
ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣೆ ಮತ್ತು ವಾರ್ಷಿಕ ಲೆಕ್ಕಪತ್ರದ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸದಸ್ಯರಾಗಿರುವ ಪುತ್ತೂರು ತಾಲೂಕಿಗೆ ಸಂಬಂಧಿಸಿದ ಪತ್ರಕರ್ತರ ಸಮಾಲೋಚನಾ ಸಭೆ ಸೆ.19ರಂದು ಪತ್ರಿಕಾ ಭವನದಲ್ಲಿ ನಡೆಯಿತು. ಮಂಗಳೂರಿನಿಂದ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಇಬ್ರಾಹಿಂ ಅಡ್ಕಸ್ಥಳ, ಪುಷ್ಪರಾಜ್ ಬಿ.ಯನ್, ಆರೀಫ್ ಪಡುಬಿದ್ರೆ, ಭರತ್‌ರಾಜ್ ಮತ್ತು ರಾಜೇಶ್ ಪೂಜಾರಿಯವರು ಪುತ್ತೂರಿನ ಪತ್ರಕರ್ತರ ಅಭಿಪ್ರಾಯ ಆಲಿಸಿದರು. ಎಲ್ಲರ ಅಭಿಪ್ರಾಯವನ್ನು ದಾಖಲಿಸಿಕೊಂಡು ಜಿಲ್ಲಾ ಪತ್ರಕರ್ತರ ಸಂಘಕ್ಕೆ ವರದಿ ನೀಡಲಾಗುವುದು. ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳು ಪ್ರಕಟಿಸಿದರು.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ನೇತೃತ್ವದ ತಂಡ ಮತ್ತು ಕಾರ್ಯದರ್ಶಿ ಸಂದೀಪ್ ಕುಮಾರ್ ಐ.ಬಿ.ಯವರ ತಂಡದ ಜತೆ ಪ್ರತ್ಯೇಕವಾಗಿ ಸಭೆ ನಡೆಸಲಾಗಿದ್ದು ಶ್ರವಣ್ ಕುಮಾರ್ ನಾಳ ನೇತೃತ್ವದ ತಂಡದ ಸಭೆಯಲ್ಲಿ ಉದಯ ಕುಮಾರ್ ಯು.ಎಲ್ ಉಪ್ಪಿನಂಗಡಿ, ಸಂತೋಷ್ ಕುಮಾರ್ ಶಾಂತಿನಗರ, ಸಿದ್ದೀಕ್ ನೀರಾಜೆ, ಸುಧಾಕರ ಪಡೀಲ್, ಶೇಖ್ ಜೈನುದ್ದೀನ್ ನೆಲ್ಲಿಕಟ್ಟೆ, ಲೋಕೇಶ್ ಬನ್ನೂರು, ನಝೀರ್ ಕೊಯಿಲ, ಸರ್ವೇಶ್ ಕುಮಾರ್ ಉಪ್ಪಿನಂಗಡಿ, ಶ್ಯಾಮಸುದರ್ಶನ್ ಭಟ್ ಹೊಸಮೂಲೆ, ಗೌತಮ್ ಕುಮಾರ್, ಶಿವಪ್ರಸಾದ್ ರೈ ಪೆರುವಾಜೆ, ಉಮಾಪ್ರಸಾದ್ ರೈ ನಡುಬೈಲು ಮತ್ತು ಗಣೇಶ್ ಕೆ. ಭಾಗವಹಿಸಿದ್ದರು. ಶ್ರವಣ್ ಕುಮಾರ್ ತಂಡದ ಅಭಿಪ್ರಾಯ ಆಲಿಸಿದ ಬಳಿಕ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಽಕಾರಿಗಳು ಸಂದೀಪ್ ಕುಮಾರ್ ಐ.ಬಿ. ನೇತೃತ್ವದ ತಂಡದ ಜತೆ ಸಭೆ ನಡೆಸಿದರು. ಈ ಸಭೆಯಲ್ಲಿ ಶಶಿಧರ ರೈ ಕುತ್ಯಾಳ, ಸಂಶುದ್ದೀನ್ ಸಂಪ್ಯ, ಅಜಿತ್ ಕುಮಾರ್, ಪ್ರಸಾದ್ ಬಲ್ನಾಡು, ರಾಜೇಶ್ ಪಟ್ಟೆ, ಅನೀಶ್ ಕುಮಾರ್ ಮತ್ತು ಕುಮಾರ್ ಕಲ್ಲಾರೆ ಭಾಗವಹಿಸಿದ್ದರು.
ಪತ್ರಕರ್ತರ ಸಂಘದ ಲೆಕ್ಕಪತ್ರ ಪರಿಶೀಲನೆ ಬಳಿಕ ಚುನಾವಣೆ: ಪುತ್ತೂರು ತಾಲೂಕು ಪತ್ರಕರ್ತರ ಸಂಘದ ವಾರ್ಷಿಕ ಲೆಕ್ಕಪತ್ರದ ವಿಚಾರದಲ್ಲಿನ ಗೊಂದಲವನ್ನು ಪರಿಹರಿಸಿದ ಬಳಿಕವೇ ಪತ್ರಕರ್ತರ ಸಂಘದ ಚುನಾವಣೆ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಇಬ್ರಾಹಿಂ ಅಡ್ಕಸ್ಥಳ, ಪುಷ್ಪರಾಜ್ ಬಿ.ಯನ್, ಆರೀ- ಪಡುಬಿದ್ರೆ, ಭರತ್‌ರಾಜ್ ಮತ್ತು ರಾಜೇಶ್ ಪೂಜಾರಿಯವರು ಸಭೆಯಲ್ಲಿ ತಿಳಿಸಿದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನೇತೃತ್ವದ ತಂಡದ ಜತೆ ಮೊದಲು ನಡೆದ ಸಭೆಯ ವೇಳೆ ಶ್ರವಣ್‌ರವರು ಪತ್ರಕರ್ತರ ಸಂಘದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ತಿಳಿಸಿದರು. ನಾವು ಅಭಿಪ್ರಾಯ ದಾಖಲಿಸಿಕೊಳ್ಳಲು ಬಂದಿದ್ದೇವೆ. ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಜಿಲ್ಲಾ ಪತ್ರಕರ್ತರ ಸಂಘಕ್ಕೆ ವರದಿ ನೀಡುತ್ತೇವೆ. ಅಲ್ಲಿ ಅಂತಿಮ ತೀರ್ಮಾನ ಆಗುತ್ತದೆ ಎಂದು ಭರತ್‌ರಾಜ್ ಮತ್ತು ಪುಷ್ಪರಾಜ್ ತಿಳಿಸಿದರು. ಪುತ್ತೂರು ಪತ್ರಕರ್ತರ ಸಂಘದ ಲೆಕ್ಕಪತ್ರದಲ್ಲಿ ಗೊಂದಲ ಇದೆ, ಲೆಕ್ಕಪತ್ರದ ವ್ಯವಹಾರದಲ್ಲಿ ನಿರ್ಲಕ್ಷ್ಯ ಕಂಡು ಬಂದಿದೆ ಎಂದು ಲೆಕ್ಕಪತ್ರ ಪರಿಶೀಲನೆ ನಡೆಸಿದ್ದ ಉದಯಕುಮಾರ್ ಯು.ಎಲ್. ತಿಳಿಸಿದರು. ಈ ಬಗ್ಗೆ ದಾಖಲಿಸಿಕೊಂಡು ಜಿಲ್ಲಾ ಸಂಘಕ್ಕೆ ವರದಿ ನೀಡಲಾಗುವುದು ಎಂದು ಪುಷ್ಪರಾಜ್ ಬಿ.ಯನ್. ತಿಳಿಸಿದರು. ಶ್ರವಣ್ ಕುಮಾರ್ ನಾಳ ಮಾತನಾಡಿ, ಪತ್ರಿಕಾ ಭವನದ ದಾಖಲೆಗಳು, ಸಂಘದ ಕಟ್ಟಡ ಕಾಮಗಾರಿಯ ಬಿಲ್ ಮತ್ತು ಲೆಕ್ಕಪತ್ರದ ವಿವರಗಳನ್ನು ಅಧ್ಯಕ್ಷನಾಗಿ ನಾನು ಕೇಳಿದರೂ ಕಾರ್ಯದರ್ಶಿ, ಕೋಶಾಽಕಾರಿ, ಮೆನೇಜರ್ ಕೊಡುತ್ತಿಲ್ಲ, ಲೆಕ್ಕಪತ್ರ ಪರಿಶೀಲನೆ ನಡೆಸಿ ವರದಿ ನೀಡಿದ್ದ ಉದಯ ಕುಮಾರ್ ಅವರಿಗೂ ಲೆಕ್ಕಪತ್ರದ ಮಾಹಿತಿಯನ್ನು ಸರಿಯಾಗಿ ಅವರು ನೀಡುತ್ತಿಲ್ಲ ಎಂದು ಹೇಳಿದರು. ಪತ್ರಕರ್ತರ ಸಂಘದ ಅಧ್ಯಕ್ಷರಿಗೂ, ಲೆಕ್ಕಪತ್ರ ಪರಿಶೀಲನೆ ನಡೆಸಲು ಪತ್ರಕರ್ತರ ಸಂಘದಿಂದಲೇ ನೇಮಕಗೊಂಡಿದ್ದ ಉದಯ ಕುಮಾರ್ ಅವರಿಗೂ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯವರು ಸರಿಯಾದ ವಿವರ ಕೊಡುವುದಿಲ್ಲ ಎಂದಾದರೆ ಇದೀಗ ಗೊಂದಲ ಪರಿಹರಿಸಲು ಮಧ್ಯಪ್ರವೇಶ ಮಾಡಿರುವ ಜಿಲ್ಲಾ ಪತ್ರಕರ್ತರ ಸಂಘದವರೇ ಅದರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸಂತೋಷ್ ಕುಮಾರ್ ಶಾಂತಿನಗರ ಹೇಳಿದರು. ಪುತ್ತೂರು ಪತ್ರಕರ್ತರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಲೆಕ್ಕಪತ್ರ ಪರಿಶೀಲನೆ ಮಾಡಿದ್ದವರನ್ನು ಮಂಗಳೂರು ಪ್ರೆಸ್‌ಕ್ಲಬ್‌ಗೆ ಕರೆಸಿ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ಆರಿಫ್ ಪಡುಬಿದ್ರೆ ಹೇಳಿದರು. ಆಗಲೂ ಅವರು ಲೆಕ್ಕಪತ್ರದ ವಿವರ ಕೊಡದಿದ್ದರೆ ಏನು ಮಾಡುವುದು ಎಂದು ಶೇಕ್ ಜೈನುದ್ದೀನ್ ಪ್ರಶ್ನಿಸಿದರು. ಭರತ್‌ರಾಜ್ ಪ್ರತಿಕ್ರಿಯಿಸಿ ಅದನ್ನು ರಾಜ್ಯ ಸಂಘ ನೋಡಿಕೊಳ್ಳುತ್ತದೆ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.
ಅವರನ್ನೂ ಸಭೆಗೆ ಕರೆದಿದ್ದೇವೆ, ಬರುವುದಿಲ್ಲ ಎಂದು ತಿಳಿಸಿದ್ದಾರೆ; ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿನ ವಿಚಾರ ಚರ್ಚಿಸಲು ಜಿಲ್ಲಾ ಪತ್ರಕರ್ತರ ಸಂಘದವರು ಸಭೆ ಕರೆದಿದ್ದರೂ ಕಾರ್ಯದರ್ಶಿ ಸಂದೀಪ್ ಕುಮಾರ್ ಐ.ಬಿ. ನೇತೃತ್ವದ ತಂಡ ಸಭೆಗೆ ಗೈರು ಹಾಜರಾಗಿತ್ತು. ಮೀಟಿಂಗ್ ನಡೆಯುವ ಹಾಲ್‌ಗೆ ಬರುವ ಬದಲು ಅವರು ಪತ್ರಿಕಾ ಭವನದ ಮತ್ತೊಂದು ಕೊಠಡಿಯಲ್ಲಿ ಕುಳಿತಿದ್ದರು. ಈ ಬಗ್ಗೆ ಪ್ರಸ್ತಾಪಿಸಿದ ಆರಿಫ್ ಪಡುಬಿದ್ರೆರವರು ಸಭೆಯ ಮೊದಲು ಅವರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ್ದೇವೆ, ಅವರು ಕೆಲವೊಂದು ಅಭಿಪ್ರಾಯ ತಿಳಿಸಿದ್ದಾರೆ. ನಿಮ್ಮ ಈ ಸಭೆಯ ಬಳಿಕ ಅವರೊಂದಿಗೆ ಅಽಕೃತವಾಗಿ ಸಭೆ ನಡೆಸಿ ಅವರ ಅಭಿಪ್ರಾಯವನ್ನೂ ಪಡೆದು ಎರಡೂ ಕಡೆಯವರ ಅಭಿಪ್ರಾಯ ದಾಖಲಿಸಿ ಜಿಲ್ಲಾ ಸಂಘಕ್ಕೆ ನೀಡಲಾಗುವುದು ಎಂದರು. ಸಂತೋಷ್ ಕುಮಾರ್ ಶಾಂತಿನಗರ ಮಾತನಾಡಿ, ಪುತ್ತೂರಿನ ಪತ್ರಕರ್ತರ ಸಂಘದ ವಿವಾದದ ಕುರಿತು ಮಾತನಾಡಲು ಜಿಲ್ಲಾ ಸಂಘದವರು ಬಂದಿರುವಾಗ ಅವರು ಯಾಕೆ ಸಭೆಗೆ ಬಂದಿಲ್ಲ. ಅವರನ್ನು, ನಮ್ಮನ್ನು ಒಟ್ಟು ಸೇರಿಸಿ ಒಂದೇ ಸಭೆ ನಡೆಸುವ, ಎದುರು ಕುಳಿತು ಚರ್ಚೆ ಮಾಡುವ, ಏನೆಲ್ಲಾ ಸಮಸ್ಯೆ ಇದೆ ಎಂದು ಎದುರೇ ಮಾತನಾಡುವ ಎಂದರು. ಪುಷ್ಪರಾಜ್ ಬಿ.ಯನ್. ಪ್ರತಿಕ್ರಿಯಿಸಿ ಅವರನ್ನು ಈ ಸಭೆಗೆ ಕರೆದಿದ್ದೇವೆ. ಬರುವುದಿಲ್ಲ ಎಂದು ತಿಳಿಸಿದ್ದಾರೆ. ಅವರೊಂದಿಗೆ ಮತ್ತೆ ಮಾತನಾಡುತ್ತೇವೆ, ಒಟ್ಟು ಸಮಸ್ಯೆ ಬಗೆಹರಿದರೆ ಆಯಿತು ಎಂದರು. ಆರೀ- ಪಡುಬಿದ್ರೆ ಮತ್ತು ಇಬ್ರಾಹಿಂ ಅಡ್ಕಸ್ಥಳ ಮಾತನಾಡಿ, ಇಲ್ಲಿನ ಎಲ್ಲಾ ಪತ್ರಕರ್ತರನ್ನು ಸಂಘಕ್ಕೆ ಒಟ್ಟು ಸೇರಿಸಿಕೊಳ್ಳಬೇಕೆಂಬುದೇ ಜಿಲ್ಲಾ ಸಂಘದ ಆಶಯವಾಗಿದೆ. ಯಾರನ್ನೂ ಪ್ರತ್ಯೇಕ ಮಾಡುವ ವಿಚಾರ ಇಲ್ಲ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.
ಎಲ್ಲಾ ಸದಸ್ಯರನ್ನು ಸೇರಿಸಿಕೊಂಡು ಚುನಾವಣೆ ಮಾಡಿ: ಪುತ್ತೂರು ಪತ್ರಕರ್ತರ ಸಂಘಕ್ಕೆ ಯಾವ ಮಾನದಂಡದಲ್ಲಿ ಚುನಾವಣೆ ನಡೆಯಲಿದೆ ಎಂದು ಉದಯ ಕುಮಾರ್ ಯು.ಎಲ್. ಅವರು ಮಾಹಿತಿ ಕೇಳಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಪಡೆದುಕೊಂಡಿರುವ ಪುತ್ತೂರು ತಾಲೂಕಿನ ಎಲ್ಲಾ ಪತ್ರಕರ್ತರನ್ನು ಸೇರಿಸಿಕೊಂಡು ಪುತ್ತೂರು ಪತ್ರಕರ್ತರ ಸಂಘಕ್ಕೆ ಚುನಾವಣೆ ನಡೆಸಬೇಕು ಎಂದು ಶಿವಪ್ರಸಾದ್ ರೈ ಪೆರುವಾಜೆ ಒತ್ತಾಯಿಸಿದರು. ನಝೀರ್ ಕೊಯಿಲ ಧ್ವನಿಗೂಡಿಸಿದರು. ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಪಡೆದುಕೊಂಡಿರುವವರು ಸೇರಿದಂತೆ ಪುತ್ತೂರು ಪತ್ರಕರ್ತರ ಸಂಘದಲ್ಲಿ ಒಟ್ಟು 38 ಸದಸ್ಯರಿದ್ದಾರೆ. ಅದರಲ್ಲಿ ಇಬ್ಬರಿಗೆ ಜಿಲ್ಲಾ ಸಂಘದ ಸದಸ್ಯತ್ವ ಸಿಕ್ಕಿಲ್ಲ. ಹಾಗಾಗಿ 36 ಸದಸ್ಯರನ್ನು ಮತದಾರರನ್ನಾಗಿಸಿ ಪುತ್ತೂರು ಸಂಘಕ್ಕೆ ಚುನಾವಣೆ ಮಾಡಬೇಕು ಎಂದು ಶ್ರವಣ್ ಕುಮಾರ್ ಆಗ್ರಹಿಸಿದರು. ಈ ವಿಚಾರವನ್ನು ಜಿಲ್ಲಾ ಸಂಘದಲ್ಲಿ ಚರ್ಚೆ ನಡೆಸಲಾಗುವುದು. ಯಾರನ್ನೆಲ್ಲಾ ಮತದಾರರನ್ನಾಗಿಸಿ ಚುನಾವಣೆ ಮಾಡಬೇಕು ಎಂದು ರಾಜ್ಯ ಸಂಘದ ಅಧ್ಯಕ್ಷರ ಜತೆ ಚರ್ಚಿಸಿ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸಂಘದ ಪದಾಧಿಕಾರಿಗಳು ತಿಳಿಸಿದರು.
ವಾಟ್ಸಾಪ್ ಗ್ರೂಪ್ ಸಡನ್ ಬಂದ್ ಆಗಿದೆ: ಪುತ್ತೂರು ಪತ್ರಕರ್ತರ ಸಂಘಕ್ಕೆ ವಾಟ್ಸಾಪ್ ಗ್ರೂಪ್ ಮಾಡಬೇಕು. ಮೊನ್ನೆ ಒಂದು ಗ್ರೂಪ್ ಇತ್ತು. ಅದು ಸಡನ್ ಬಂದ್ ಆಗಿದೆ ಎಂದು ನಝೀರ್ ಕೊಯಿಲ ಹೇಳಿದರು. ಪುತ್ತೂರು ಪತ್ರಕರ್ತರ ಸಂಘದ ಮಾಹಿತಿ ತಿಳಿಯಲು ಒಂದು ಗ್ರೂಪ್ ಮಾಡಬೇಕು ಎಂದು ನಝೀರ್ ಆಗ್ರಹಿಸಿದರು. ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದರು.
ಅನೀಶ್ ಕುಮಾರ್‌ಗೆ ಸದಸ್ಯತ್ವ ನೀಡಲು ಜಿಲ್ಲಾ ಸಂಘದಲ್ಲಿ ವಿರೋಧ: ಪುತ್ತೂರು ತಾಲೂಕಿಗೆ ಸಂಬಂಽಸಿದಂತೆ 38 ಮಂದಿಯ ಪೈಕಿ ಒಟ್ಟು 36 ಪತ್ರಕರ್ತರಿಗೆ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಮೊನ್ನೆ ಪುತ್ತೂರಿಗೆ ಭೇಟಿ ನೀಡಿದ್ದಾಗ ಗುರುತಿನ ಚೀಟಿ ವಿತರಿಸಿದ್ದಾರೆ. ಅನೀಶ್ ಕುಮಾರ್ ಸಹಿತ ಪುತ್ತೂರಿನ ಇಬ್ಬರಿಗೆ ಜಿಲ್ಲಾ ಸಂಘದಲ್ಲಿ ಸದಸ್ಯತ್ವ ಕೊಟ್ಟು ಗುರುತಿನ ಚೀಟಿ ನೀಡಲು ಕ್ರಮ ಕೈಗೊಳ್ಳುವಂತೆ ಸಂಘದ ರಾಜ್ಯಾಧ್ಯಕ್ಷರು ಆಗ ತಿಳಿಸಿದ್ದರು. ಈ ಬಗ್ಗೆ ಜಿಲ್ಲಾ ಸಂಘದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಆದರೆ, ಅನೀಶ್ ಕುಮಾರ್ ಮತ್ತು ಇನ್ನೊಬ್ಬರಿಗೆ ಸದಸ್ಯತ್ವ ನೀಡಲು ಜಿಲ್ಲಾ ಸಂಘದಲ್ಲಿ ವಿರೋಧ ವ್ಯಕ್ತವಾಗಿದೆ. ನೂತನ ಸದಸ್ಯತ್ವ ನೀಡುವ ಅವಧಿ ಮುಗಿದಿರುವುದರಿಂದ ಸದ್ಯಕ್ಕೆ ಅವರಿಗೆ ಸದಸ್ಯತ್ವ ನೀಡಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಸುಧಾಕರ ಸುವರ್ಣ, ಕಿರಣ್ ಕುಂಡಡ್ಕ ತಟಸ್ಥ: ಪತ್ರಕರ್ತರ ಸಂಘದೊಳಗಿನ ವಿಚಾರದಲ್ಲಿ ನಾವು ತಟಸ್ಥರಾಗಿರುವುದಾಗಿ ಪತ್ರಕರ್ತರ ಸಂಘದ ಸದಸ್ಯರಾದ ಸುಧಾಕರ ಸುವರ್ಣ ತಿಂಗಳಾಡಿ ಮತ್ತು ಕಿರಣ್ ಕುಂಡಡ್ಕ ತಿಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ನಮಗೆ ಸಂಘ ಮುಖ್ಯ. ಹೊರತು ಪರ ವಿರೋಧದ ಗುಂಪಿನಲ್ಲಿ ನಾವು ಇಲ್ಲ. ಇಂತಹ ಗೊಂದಲದ ಸಭೆಗಳಿಗೆ ನಾವು ಬರುವುದಿಲ್ಲ ಎಂದು ಸುಧಾಕರ ಸುವರ್ಣ ಮತ್ತು ಕಿರಣ್ ಕುಂಡಡ್ಕರವರು ಸಂದೀಪ್ ಕುಮಾರ್‌ಗೆ ತಿಳಿಸಿರುವುದಾಗಿ ತಿಳಿದು ಬಂದಿದೆ.
ಪತ್ರಿಕೆಯಲ್ಲಿ ಪ್ರಕಟವಾಗುವ ವರದಿಗೂ ಪತ್ರಕರ್ತರ ಸಂಘಕ್ಕೂ ಸಂಬಂಧ ಇಲ್ಲ
ಸಂದೀಪ್ ಕುಮಾರ್ ತಂಡದವರಿಗೆ ಜಿಲ್ಲಾ ಪತ್ರಕರ್ತರ ಸಂಘದವರಿಂದ ಮನವರಿಕೆ
ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ತಂಡದ ಜತೆ ಸಭೆ ನಡೆದ ಬಳಿಕ ಕಾರ್ಯದರ್ಶಿ ಸಂದೀಪ್ ಕುಮಾರ್ ಐ.ಬಿ. ತಂಡದ ಜತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಽಕಾರಿಗಳು ಸಭೆ ನಡೆಸಿದರು. ಪತ್ರಕರ್ತರ ಸಂಘದ ಲೆಕ್ಕಪತ್ರ ಸರಿಯಾಗಿದೆ ಎಂದು ಸಂದೀಪ್ ಕುಮಾರ್ ಈ ವೇಳೆ ವಾದ ಮಂಡಿಸಿದರು. ಅಧ್ಯಕ್ಷರು ಕೇಳಿದಾಗಲೂ ವಿವರ ನೀಡದ ಬಗ್ಗೆ ಜಿಲ್ಲಾ ಪದಾಽಕಾರಿಗಳು ಕೇಳಿದಾಗ ಎಲ್ಲಾ ವಿವರ ಸರಿ ಇದೆ. ಮಹಾಸಭೆ ಆಗಿದೆ ಎಂದು ಸಂದೀಪ್ ಮತ್ತು ಬಳಗದವರು ಹೇಳಿದರು. ಆಗಿನ ಸಭೆ ಮತ್ತು ಈಗಿನ ಸಭೆಯಲ್ಲಿನ ಅಭಿಪ್ರಾಯ ದಾಖಲಿಸಿ ಜಿಲ್ಲಾ ಸಂಘಕ್ಕೆ ಕೊಡುವುದಷ್ಟೇ ನಮ್ಮ ಕೆಲಸ ಎಂದು ಜಿಲ್ಲಾ ಸಂಘದ ಪದಾಧಿಕಾರಿಗಳು ತಿಳಿಸಿದರು. ಸಂಶುದ್ದೀನ್ ಸಂಪ್ಯರವರು ಮಾತನಾಡಿ, ಪತ್ರಕರ್ತರ ಸಂಘದ ಬಗ್ಗೆ ಪತ್ರಿಕೆಯಲ್ಲಿ ವರದಿ ಬರುವಾಗ ನೋವು ಆಗುತ್ತದೆ. ನಮ್ಮ ಫೋಟೋ ಹಾಕಿ ವರದಿ ಬರುತ್ತಿರುವುದರಿಂದ ಮನೆಯವರಿಗೂ ವಿಷಯ ಗೊತ್ತಾಗುವಂತಾಗಿದೆ ಎಂದು ಹೇಳಿದರು. ಸಂದೀಪ್ ಕುಮಾರ್ ಮಾತನಾಡಿ, ಲಕ್ಷಾಂತರ ಗುಳುಂ ಎಂದು ಪತ್ರಿಕೆಯಲ್ಲಿ ಬರುತ್ತಿದೆ. ಗುಳುಂ ಆಗಿಲ್ಲ. ನಾನು ಬಾಡಿಗೆ ಮನೆಯಲ್ಲಿ ಇರುವುದು ಎಂದು ಹೇಳಿದರು. ಪತ್ರಿಕೆಯಲ್ಲಿ ಪ್ರಕಟವಾಗುವ ವರದಿಗಳಿಗೂ ಪತ್ರಕರ್ತರ ಸಂಘಕ್ಕೂ ಸಂಬಂಧ ಇಲ್ಲ. ಪತ್ರಿಕೆಯಲ್ಲಿ ವರದಿ ಪ್ರಕಟಿಸುವುದು ಆ ಪತ್ರಿಕೆಯವರಿಗೆ ಬಿಟ್ಟದ್ದು. ಅದಕ್ಕೆ ನಾವು ಏನೂ ಮಾಡಲಾಗದು. ನೀವು ನೀವೇ ನೋಡಿಕೊಳ್ಳಿ ಎಂದು ಜಿಲ್ಲಾ ಸಂಘದ ಪದಾಧಿಕಾರಿಗಳು ಸಂದೀಪ್ ಕುಮಾರ್ ತಂಡಕ್ಕೆ ಮನವರಿಕೆ ಮಾಡಿದರು ಎಂದು ಮಾಹಿತಿ ಲಭ್ಯವಾಗಿದೆ.
ಪತ್ರಕರ್ತರ ಸಂಘದ ಜತೆ ಭಿನ್ನಾಭಿಪ್ರಾಯ ಇಲ್ಲ: ಸುದ್ದಿ ಬಳಗದವರ ವಿರುದ್ಧ ಪತ್ರಕರ್ತರ ಸಂಘದ ಕೆಲ ಸದಸ್ಯರೇ ಸುಳ್ಳು ಕೇಸುಗಳಿಗೆ ಸಾಕ್ಷಿ ಹಾಕಿದ್ದಾರೆ-ಅದಕ್ಕಾಗಿ ಸಂಘದಿಂದ ಹೋಗಿದ್ದೆವು
ಪುತ್ತೂರು ಪತ್ರಕರ್ತರ ಸಂಘದ ವಿಚಾರದ ಕುರಿತು ಚರ್ಚೆ ನಡೆಸಲು ಆಗಮಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸಭೆಯುದ್ದಕ್ಕೂ ಪತ್ರಕರ್ತರು ಒಗ್ಗಟ್ಟಾಗಿ ಇರಬೇಕು. ಎಲ್ಲಾ ಪತ್ರಕರ್ತರು ಒಳಗೊಂಡು ಸಂಘ ಇರಬೇಕು ಎಂದು ಬುದ್ಧಿವಾದ ಹೇಳಿದರು. ಈ ವೇಳೆ ಮಾತನಾಡಿದ ಸಂತೋಷ್ ಕುಮಾರ್ ಅವರು ನಮಗೆ ಯಾವುದೇ ಪತ್ರಕರ್ತರ ಸಂಘದ ಜತೆಗೆ ಭಿನ್ನಾಭಿಪ್ರಾಯ ಇಲ್ಲ. ಪುತ್ತೂರು ಪತ್ರಕರ್ತರ ಸಂಘದಲ್ಲಿ ಸದಸ್ಯರಾಗಿದ್ದ ನಮ್ಮ ಸುದ್ದಿ ಬಳಗದವರ ವಿರುದ್ಧ ಪತ್ರಕರ್ತರ ಸಂಘದ ಕೆಲವು ಸದಸ್ಯರೇ ಸುಳ್ಳು ಕೇಸ್‌ಗಳಿಗೆ ಸಾಕ್ಷಿ ಹಾಕಿದ್ದಾರೆ. ಪದೇ ಪದೇ ನಮ್ಮ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ. ಇದಕ್ಕಾಗಿ ಪುತ್ತೂರು ಪತ್ರಕರ್ತರ ಸಂಘದಿಂದ ಹೊರ ಹೋಗಿದ್ದೆವು. ಹೊರತು ಜಿಲ್ಲಾ ಸಂಘ, ರಾಜ್ಯ ಸಂಘದ ಜತೆ ಇದ್ದೆವು. ಹಾಗಾಗಿ ಇಲ್ಲಿ ಮೂರ‍್ನಾಲ್ಕು ಸದಸ್ಯರಿಂದ ತೊಂದರೆ ಆಗಿದೆ ಹೊರತು ಇಡೀ ಪತ್ರಕರ್ತರ ಸಂಘದವರಿಂದ ನಮಗೆ ತೊಂದರೆ ಆಗಿಲ್ಲ. ಆದ್ದರಿಂದ ಪುತ್ತೂರು ಪತ್ರಕರ್ತರ ಸಂಘದಲ್ಲಿ ಎಲ್ಲರೂ ಒಟ್ಟಾಗಿ ಇರುವುದಕ್ಕೆ ನಮ್ಮ ಆಕ್ಷೇಪ ಇಲ್ಲ ಎಂದು ಅವರು ಹೇಳಿದರು. ಶಿವಪ್ರಸಾದ್ ರೈ ಪೆರುವಾಜೆ, ಶೇಕ್ ಜೈನುದ್ದೀನ್ ಧ್ವನಿಗೂಡಿಸಿದರು. 36 ಪತ್ರಕರ್ತರ ಪೈಕಿ ಮೂರ‍್ನಾಲ್ಕು ಮಂದಿ ಮಾತ್ರ ಎಲ್ಲರನ್ನೂ ಸೇರಿಸಿ ಚುನಾವಣೆ ಮಾಡುವುದಕ್ಕೆ ವಿರೋಧ ಮಾಡುತ್ತಾರೆ ಹೊರತು ಬಹುಮತ ಎಲ್ಲರೂ ಒಟ್ಟಾಗಿ ಇರುವುದಕ್ಕೆ ಇದೆ ಎಂದು ಶ್ರವಣ್ ಕುಮಾರ್ ಹೇಳಿದರು.