ರಾಜ್ಯ ಸರಕಾರದಿಂದ ಪೌರ ಕಾರ್ಮಿಕರಿಗೆ ಗುಡ್ ನ್ಯೂಸ್; 11,133 ಪೌರ ಕಾರ್ಮಿಕರ ಸೇವೆ ಖಾಯಮಾತಿಗೆ ಸಚಿವ ಸಂಪುಟ ಒಪ್ಪಿಗೆ

0

ಪುತ್ತೂರು:ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ, ನೇರ ಪಾವತಿ ಪೌರ ಕಾರ್ಮಿಕರಿಗೆ ರಾಜ್ಯ ಸರಕಾರ ಶುಭ ಸುದ್ದಿ ನೀಡಿದೆ.ನವರಾತ್ರಿಯ ಹಬ್ಬದ ಉಡುಗೊರೆ ಎಂಬಂತೆ ಮೊದಲ ಹಂತದಲ್ಲಿ 11,133 ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ಸೆ.19ರಂದು ಒಪ್ಪಿಗೆ ನೀಡಿದ್ದು, ವಿಶೇಷ ನೇಮಕ ನಿಯಮಗಳಡಿ ಈ ಅವಕಾಶ ಕಲ್ಪಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.ಪುತ್ತೂರು ನಗರಸಭೆಯ ಕೆಲವು ಪೌರಕಾರ್ಮಿಕರೂ ಈ ಮೂಲಕ ಸೇವೆ ಖಾಯಮಾತಿ ಹೊಂದಲಿದ್ದಾರೆ.

ನಗರ-ಪಟ್ಟಣಗಳ ಸ್ವಚ್ಛತೆ, ಸ್ವಾಸ್ಥ್ಯ ಕಾಪಾಡುವ ಕೆಲಸದಲ್ಲಿ ನಿರತರಾಗಿರುವವರ ಬದುಕು ಅತಂತ್ರವಾಗಿದ್ದು, ಅವರ ಸೇವೆ ಖಾಯಂಗೊಳಿಸಿ ಎಂದು ಪೌರ ಕಾರ್ವಿಕರು ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಿದ್ದರು. ಪೌರ ಕಾರ್ಮಿಕರ ಸಂಘದ ಪ್ರತಿನಿಽಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿದ್ದಾರೆ.

ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರನ್ನು ಸರಕಾರಿ ನೌಕರರೆಂದು ನೇಮಕ ಮಾಡುವ ಕುರಿತು ಸಚಿವ ಸಂಪುಟ ಒಪ್ಪಿಗೆ ನೀಡಿದೆ.ರಾಜ್ಯದ ನಗರ ಸಭೆ, ಪುರಸಭೆ ಮತ್ತು ಇತರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11,133 ಪೌರ ಕಾರ್ಮಿಕರನ್ನು ಸರಕಾರಿ ನೌಕರರೆಂದು ನೇಮಕ ಮಾಡಲು ಸರಕಾರ ತೀರ್ಮಾನಿಸಿದೆ.ಬಿಬಿಎಂಪಿಯ 3673, ನಗರಸಭೆ, ಪುರಸಭೆಗಳ 5,533, ಮತ್ತು ಮಹಾನಗರ ಪಾಲಿಕೆಗಳಲ್ಲಿ 1,927 ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು ಈ ಎಲ್ಲಾ ಕಾರ್ಮಿಕರನ್ನು ಸರಕಾರಿ ನೌಕರರೆಂದು ನೇಮಕಾತಿ ನಡೆಯಲಿದೆ.

ಪುತ್ತೂರು ನಗರ ಸಭೆಯಲ್ಲಿ ಒಟ್ಟು 88 ಕಾರ್ಮಿಕರ ಹುದ್ದೆ ಮಂಜೂರಾಗಿದೆ.ಈ ಪೈಕಿ 11 ಮಂದಿ ಈಗಾಗಲೇ ಖಾಯಂ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.41 ಮಂದಿ ನೇರ ಪಾವತಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.ಮಂಜೂರಾದ ಹುದ್ದೆಗಳ ಪೈಕಿ 36 ಹುದ್ದೆಗಳು ಖಾಲಿಯಿದೆ.

11,133 ಪೌರಕಾರ್ಮಿಕರ ಖಾಯಂ ಇದೇ ಮೊದಲು: ನಗರಸಭೆಯ 5,533, ಪುರಸಭೆಗಳ 3,673 ಪೌರ ಕಾರ್ಮಿಕರ ಸೇವೆ ಖಾಯಂಗೊಳ್ಳಲಿದೆ.ವಿಶೇಷ ನೇಮಕಾತಿ ನಿಯಮಗಳಡಿ ಸರಕಾರಿ ನೌಕರರೆಂದು ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ.ಈ ನೌಕರರು ಈಗ 17,000-28,980 ರೂ. ವೇತನ ಶ್ರೇಣಿ ಅಡಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಒಂದೇ ಬಾರಿ 11,133 ಪೌರ ಕಾರ್ಮಿಕರ ಖಾಯಂ ಆಗುತ್ತಿರುವುದು ಇದೇ ಮೊದಲು.

ಉಳಿದ 12,800 ಪೌರಕಾರ್ಮಿಕರಿಗೂ ಶೀಘ್ರ ವ್ಯವಸ್ಥೆ: 26,000 ಪೌರಕಾರ್ಮಿಕರನ್ನು ಸೇರ್ಪಡೆಗೊಳಿಸಬೇಕು,ಇದರಲ್ಲಿ ಕಸಗುಡಿಸುವವರನ್ನೂ ಸೇರಿಸಬೇಕು ಎಂಬ ಬೇಡಿಕೆ ಇತ್ತು.ಇದು ಮೊದಲ ಕಂತಾಗಿದ್ದು, ಉಳಿದ 12,800 ಪೌರಕಾರ್ಮಿಕರಿಗೂ ಶೀಘ್ರದಲ್ಲೇ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಎಲ್ಲಾ 26,000 ಜನರನ್ನು ಸೇರಿಸಬೇಕೆಂದು ನಾವು ಬಯಸಿದ್ದೇವೆ.24,000 ಕಾರ್ಮಿಕರಲ್ಲಿ ಇತರರನ್ನು ಲೋಡರ್‌ಗಳು, ಡ್ರೈವರ್‌ಗಳು ಮತ್ತು ಕ್ಲೀನರ್‌ಗಳು ಎಂದು ವರ್ಗೀಕರಿಸಲಾಗಿದೆ.ಇದನ್ನು ಪ್ರತ್ಯೇಕವಾಗಿ ವರ್ಗೀಕರಿಸಲು ಸಾಧ್ಯವಿಲ್ಲ’ ಎಂದು ಪೌರಕಾರ್ಮಿಕ ಸಮಿತಿಯ ಸದಸ್ಯ ಕ್ಲಿಪ್ಟಾನ್ ರೋಜಾರಿಯೋ ತಿಳಿಸಿದ್ದಾರೆ.

ಹಣಕಾಸಿನ ಸಮಸ್ಯೆಗಳಿವೆ,ಹೀಗಾಗಿ ನಾವು ಎಲ್ಲವನ್ನು ಒಂದೇ ಬಾರಿಗೆ ಮಾಡಲು ಸಾಧ್ಯವಾಗಲಿಲ್ಲ.ಉಳಿದ 12,800 ಸೇರ್ಪಡೆಗಾಗಿ ನಾವು ಕಾಯಬೇಕಾಗಿದೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.

ಪ್ರತಿಭಟನೆ ನಡೆದಿತ್ತು: ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಬದಲು ನೇರ ವೇತನ ನೀಡಿ ಸೇವೆ ಖಾಯಂಗೊಳಿಸುವಂತೆ ಆಗ್ರಹಿಸಿ ಈ ಹಿಂದೆ ಹಲವು ಬಾರಿ ರಾಜ್ಯವ್ಯಾಪಿ ಪ್ರತಿಭಟನೆ ನಡೆದಿತ್ತು.ಪುತ್ತೂರಿನಲ್ಲಿಯೂ ಪ್ರತಿಭಟನೆಗಳು ನಡೆದಿತ್ತು.ಈಗ ಸರಕಾರ ನೇಮಕಗೊಳಿಸುವ ಸಿಹಿಸುದ್ದಿ ನೀಡಿದ್ದು ಕಾರ್ಮಿಕರ ಹೋರಾಟಕ್ಕೆ ನ್ಯಾಯದೊರೆತಂತಾಗಿದೆ.

ಹೋರಾಟಕ್ಕೆ ಸಂದ ಜಯ

ಪೌರ ಕಾರ್ಮಿಕರನ್ನು ಹೊರಗುತ್ತಿಗೆ ಪದ್ಧತಿ ಬದಲು ನೇರ ನೇಮಕಾತಿ ಮಾಡಬೇಕು ಎಂದು ರಾಜ್ಯವ್ಯಾಪಿ ಹೋರಾಟ ನಡೆಸಿದ್ದೆವು.ಸೆ.23ರಂದು ಪೌರ ಕಾರ್ಮಿಕರ ದಿನದಂದು ನೇಮಕಾತಿಯ ಆದೇಶ ಪತ್ರ ನೀಡುವಂತೆ ಬೇಡಿಕೆ ಸಲ್ಲಿಸಿದ್ದೆವು.ಈ ಸಂದರ್ಭದಲ್ಲಿ ಸರಕಾರ ಮೂರು ತಿಂಗಳ ಕಾಲಾವಕಾಶ ಕೋರಿತ್ತು. ಈಗ ಅವಧಿಗೆ 10 ದಿನ ಬಾಕಿಯಿರುವಾಗಲೇ ಪೌರಕಾರ್ಮಿಕರ ಸೇವೆ ಖಾಯಮಾತಿ ಘೋಷಣೆ ಮಾಡಿದ್ದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ.ನಮ್ಮ ಹೋರಾಟಕ್ಕೆ ಈಗ ಅರ್ಧ ನ್ಯಾಯ ದೊರೆತಿದೆ.ಇದರ ಜೊತೆಗೆ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಚಾಲಕರು, ಕಚೇರಿ ಸಿಬ್ಬಂದಿಗಳು, ಒಳಚರಂಡಿ ಸೇರಿದಂತೆ ಹೊರಗುತ್ತಿಗೆಯಲ್ಲಿರುವ ಎಲ್ಲಾ ನೌಕರರನ್ನೂ ಸರಕಾರಿ ನೌಕರರಾಗಿ ನೇಮಕ ಮಾಡುವಂತೆ ಬೇಡಿಕೆ ಸಲ್ಲಿಸಿದ್ದು ಅವರಿಗೂ ನೇರ ಪಾವತಿ ವ್ಯವಸ್ಥೆ ಮಾಡುವ ಮೂಲಕ ಸರಕಾರ ಪೂರ್ಣ ನ್ಯಾಯ ನೀಡಬೇಕು ಎಂದು ಪೌರ ಕಾರ್ಮಿಕರು ಮತ್ತು ಹೊರಗುತ್ತಿಗೆ ನೌಕರರ ಕರಾವಳಿ ಪ್ರದೇಶ ಸಂಚಾಲಕ ಅಣ್ಣಪ್ಪ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here