ಕೃಷಿಯಂತೆ ಉದ್ಯಮ, ಉದ್ಯಮದಂತೆ ಕೃಷಿ : ಮುಳಿಯ – ಸುದ್ದಿ ಸಹಯೋಗದಲ್ಲಿ ನಡೆದ ಕೃಷಿಕೋದ್ಯಮ

0

 

ಪುತ್ತೂರು: ಕೃಷಿಯನ್ನು ಉದ್ಯಮದಂತೆ ಉದ್ಯಮವನ್ನು ಕೃಷಿಯಂತೆ ನಡೆಸುವಂತಾಗಬೇಕು ಎನ್ನುವುದೇ ಕೃಷಿಕೋದ್ಯಮ ಕಾರ್ಯಕ್ರಮದ ಉದ್ದೇಶ ಎಂದು ಮುಳಿಯ ಪ್ರತಿಷ್ಠಾನ ಛೇರ್‌ಮೆನ್ ಕೇಶವ ಪ್ರಸಾದ್ ಮುಳಿಯ ಹೇಳಿದರು.
ಮುಳಿಯ ಪ್ರತಿಷ್ಠಾನ ಹಾಗೂ ಸುದ್ದಿ ಸಹಯೋಗದಲ್ಲಿ ಸೆ. 20ರಂದು ಪುತ್ತೂರು ಮುಳಿಯ ಜ್ಯುವೆಲ್ಸ್ ಶೋರೂಮ್ ಮೇಲ್ಗಡೆಯ ಅಪರಂಜಿ ರೂಫ್ ಗಾರ್ಡನ್‌ನಲ್ಲಿ ನಡೆದ ಕೃಷಿಕೋದ್ಯಮ ಕೃಷಿ ಬದುಕಿನ ಪಯಣದಲ್ಲಿ ಹೊಸತನದ ಹೆಜ್ಜೆ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಗೂ ಉದ್ಯಮಕ್ಕೂ ಎಲ್ಲಿಯ ನಂಟು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ. ಕೃಷಿ ಹಾಗೂ ಉದ್ಯಮ ಎರಡೂ ಪ್ರತ್ಯೇಕ ವಿಷಯ ಎಂದು ಹೇಳಿದರೂ, ಅವರೆಡಕ್ಕೂ ಪರಸ್ಪರ ನಂಟು ಇದೆ. ಕೃಷಿ ಕಾರ್ಯ ನಡೆಸುವಾಗ ಪ್ರತಿ ಗಿಡವನ್ನು ಕಾಳಜಿಯಿಂದ ಸಾಕಬೇಕು. ಅದರಿಂದ ಎಷ್ಟು ಸಾಧ್ಯವೋ ಅಷ್ಟು ಇಳುವರಿಯನ್ನು ಪಡೆದುಕೊಳ್ಳುವತ್ತ ಕೃಷಿಕರು ಗಮನ ಹರಿಸುತ್ತಾರೆ. ಇದೇ ರೀತಿ ಉದ್ಯಮದಲ್ಲಿ ಹೇಳುವುದಾದರೆ, ಪ್ರತಿಯೋರ್ವ ಗ್ರಾಹಕನತ್ತ ನಾವು ಗಮನ ಕೊಡಬೇಕು. ಆತನ ಬೇಡಿಕೆಗಳನ್ನು ಪೂರೈಸುತ್ತ ಚಿತ್ತ ಹರಿಸಬೇಕು. ಆಗ ಮಾತ್ರ ಗ್ರಾಹಕ ಹೆಚ್ಚಿನ ಉತ್ಪನ್ನ ಖರೀದಿಸಲು ಮುಂದಾಗುತ್ತಾನೆ. ಹಾಗಾಗಿ ಕೃಷಿ ಹಾಗೂ ಉದ್ಯಮವನ್ನು ಪರಸ್ಪರ ಬೆಸೆಯುವಂತಾದರೆ, ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಮಾಡಲು ಸಾಧ್ಯ ಎಂದರು.
ಸಾಮರ್ಥ್ಯ ಹಾಗೂ ಅವಕಾಶಗಳನ್ನು ಬಳಸಿಕೊಂಡು ಕೃಷಿ ಹಾಗೂ ಉದ್ಯಮ ಬೆಳೆಯುತ್ತದೆ. ರಾಜ್ಯ ರಾಜಧಾನಿಯಲ್ಲಿ ಹಣಕ್ಕೆ ಹೆಚ್ಚು ಪ್ರಾಶಸ್ತö್ಯ ಇರುವುದರಿಂದ ಅಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಆದರೆ ರಾಜಧಾನಿಯನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಕೃಷಿಯನ್ನು ಹೆಚ್ಚು ಬೆಳೆಸಲು ಅವಕಾಶ ನೀಡಲಾಗುತ್ತಿದೆ. ಇದಕ್ಕೆ ತಕ್ಕನಾಗಿ ಶ್ರಮವನ್ನು ಹಾಕಬೇಕು. ವಾರದ 6 ದಿನವೂ, ಕಚೇರಿಯಲ್ಲಿ ದುಡಿದಂತೆ ತೋಟದಲ್ಲಿ ಕೆಲಸ ಮಾಡಲು ಸಿದ್ಧರಾಗಬೇಕು. ಹಾಗಾದರೆ ಮಾತ್ರ ಕೃಷಿಯಲ್ಲಿ ಬೆಳವಣಿಗೆ ಕಾಣಲು ಸಾಧ್ಯ ಎಂದರು.

ಇ-ಕಾಮರ್ಸ್, ಬ್ರಾಂಡಿಂಗ್ ಅಗತ್ಯ: ಮುರಳೀಕೃಷ್ಣ
ಕಾಸರಗೋಡು ಸಿಪಿಸಿಆರ್‌ಐನ ಚೀಫ್ ಟೆಕ್ನಿಕಲ್ ಆಫೀಸರ್ ಯಚ್. ಮುರಳೀಕೃಷ್ಣ ಮಾತನಾಡಿ, ಮನೆಮನೆಗಳಲ್ಲಿ ಐಟಿ – ಬಿಟಿ ಕಲಿತ ಯುವಕರಿದ್ದಾರೆ. ಆದರೂ ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ವಿಫಲರಾಗಿದ್ದೇವೆ. ಭಾರತದ ಅಡಿಕೆಗೆ ಧಾರ್ಮಿಕ ಟಚ್ ನೀಡಿ ಇರಾನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ದಕ್ಷಿಣ ಭಾರತದ ಅಡಿಕೆಯನ್ನು ಉತ್ತರ ಭಾರತದಲ್ಲಿ ಇಂತಹ ಉತ್ಪನ್ನವಾಗಿ ಮಾರಾಟ ಮಾಡಲು ಯಾಕೆ ಪ್ರಯತ್ನಿಸಬಾರದು? ಪ್ರಸಕ್ತ ಸನ್ನಿವೇಶದಲ್ಲಿ ಇ-ಕಾಮರ್ಸ್, ಬ್ರಾಂಡಿAಗ್ ಅಗತ್ಯತೆ ಇದೆ. ಇದರಿಂದ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಎಂದರು.
ಕೃಷಿ ಸೇರಿದಂತೆ ಯಾವುದೇ ಉದ್ಯಮದಲ್ಲಿ ಸರಿಯಾದ ಗುರಿ ಇಲ್ಲದೇ ಯಶಸ್ಸು ಸಾಧ್ಯವಿಲ್ಲ. ಗುರಿಯೆಡೆಗೆ ನಾವು ಕೇಂದ್ರಿಕೃತರಾಗದೇ ಹೋದರೆ, ಗಮ್ಯ ತಲುಪಲು ಸಾಧ್ಯವಿಲ್ಲ. ಆದ್ದರಿಂದ ಕೃಷಿಯನ್ನು ಉದ್ಯಮವಾಗಿ ಬೆಳೆಸಲು ಬೇಕಾದ ಚಾಕಚಕ್ಯತೆಯ ಕಡೆಗೆ ಗಮನ ಕೊಡುವುದು ಅಗತ್ಯ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಆರಂಭಿಸಲಾಗಿದೆ. ನಿರ್ವಹಣಾ ವೆಚ್ಚ, ಬೆಲೆ ಏರಿಳಿಕೆ ಎಲ್ಲದರ ಬಗ್ಗೆಯೂ ಇಲ್ಲಿ ಚರ್ಚೆ ನಡೆಸಲಾಗುತ್ತಿದೆ. ಕೃಷಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಆಹಾರ ಜೊತೆಗೆ ಆದಾಯ: ವಿಶ್ವೇಶ್ವರ ಭಟ್ ಬಂಗಾರಡ್ಕ
ಕೃಷಿಕ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ, ಕೇಂದ್ರ ಸರಕಾರದ ಚಿಂತನೆಯನ್ನು ಮುಳಿಯ ಪ್ರತಿಷ್ಠಾನ ಹಾಗೂ ಸುದ್ದಿ ಸಹಯೋಗದ ಕೃಷಿಕೋದ್ಯಮ ಕಾರ್ಯಕ್ರಮ ಜಾರಿಗೊಳಿಸಲು ಮುಂದಾಗಿದೆ. ಕೃಷಿಯನ್ನು ಉದ್ಯಮವಾಗಿ ಬೆಳೆಸಬೇಕೆಂಬುದೇ ಸರಕಾರದ ಧೋರಣೆಯೂ ಕೂಡ. ಒಂದು ಸಂದರ್ಭದಲ್ಲಿ ಆಹಾರದ ಅಭಾವ ಇತ್ತು. ಆದರೆ ಇಂದಿಲ್ಲ. ಇಂದು ಆಹಾರ ಬೆಳೆ ಹೆಚ್ಚಾಗಿದೆ. ಆದ್ದರಿಂದ ಆಹಾರವನ್ನು ಹೆಚ್ಚು ಬೆಳೆಸಬೇಕೆಂಬುದು ಸರಕಾರದ ಗುರಿಯೂ ಅಲ್ಲ. ಅದಕ್ಕೆ ಬದಲಾಗಿ, ಆಹಾರದ ಜೊತೆಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವತ್ತ ಸರಕಾರ ಗಮನ ಕೊಡುತ್ತಿದೆ ಎಂದ ಅವರು, 1 ಎಕರೆ ಜಾಗದಲ್ಲಿ ವರ್ಷಕ್ಕೆ 4-5 ಲಕ್ಷ ರೂ. ಉಳಿಸಬಹುದು ಎನ್ನುವುದೇ ಯಶಸ್ವಿ ಕೃಷಿ ಎಂದು ಉದಾಹರಿಸಿದರು.
ಕೃಷಿಕರಿಗೆ ಸಮಸ್ಯೆ ಆಗಿದೆ ಎಂದರೆ ಸರಕಾರ ಗಮನ ಕೊಡುವುದಿಲ್ಲ ಎಂಬ ಆರೋಪ ಇದೆ. ನಿಜವಾಗಿಯೂ ಸರಕಾರಕ್ಕೆ ಇದು ಆಸಕ್ತಿಯ ವಿಷಯ ಅಲ್ಲ. ಸರಕಾರ ಗಮನ ಕೊಡುವುದು, 2 ಎಕರೆಯೊಳಗಿನ ಕೃಷಿಕನ ಬಗ್ಗೆ. ಕಡಿಮೆ ಖರ್ಚು ಮಾಡಿ ಹೆಚ್ಚು ಇಳುವರಿ ಪಡೆಯುವುದು ಹಾಗೂ ನಗದೀಕರಣ ಆಗಬೇಕು ಎನ್ನುವುದೇ ಸರಕಾರದ ಧೋರಣೆ ಎಂದು ವಿವರಿಸಿದರು.

ಕೃಷಿ ಉದ್ಯಮವೇ, ಜೀವನವೇ?: ಅಶೋಕ್ ಕುಮಾರ್
ಮಾ ಇಂಟಿಗ್ರೇಟರ್ಸ್ನ ಸ್ಥಾಪಕ ಅಶೋಕ್ ಕುಮಾರ್ ಮಾತನಾಡಿ, ಕೃಷಿ ವ್ಯವಹಾರವೋ, ಜೀವನವೋ ಎನ್ನುವುದನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು. ಜೀವನ ಎಂದರೆ ಎಷ್ಟು ಬರುತ್ತದೋ ಅಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳಬೇಕು. ಆದರೆ ಕೃಷಿಯನ್ನು ವ್ಯವಹಾರವಾಗಿ ತೆಗೆದುಕೊಳ್ಳುತ್ತೇನೆ ಎಂದು ಹೊರಟರೆ – ಇರುವ ಮೂಲ, ಶ್ರಮ ಹಾಗೂ ವ್ಯವಸ್ಥೆಯನ್ನು ಶೇ. 100ರಷ್ಟು ಬಳಸಿಕೊಳ್ಳಬೇಕು. ಹಾಗಾದಾಗ ಮಾತ್ರ ಅದನ್ನು ವ್ಯವಹಾರ ಎನ್ನುತ್ತೇವೆ. ಹಾಕಿದ ಬಂಡವಾಳವನ್ನು ಸದ್ವಿನಿಯೋಗ ಮಾಡಲು ತಿಳಿದಿರಬೇಕು. ವರ್ಷದ 365 ದಿನ ಅಂದರೆ ವಾರದ 7 ದಿನದಲ್ಲಿ 24 ಗಂಟೆಯೂ ಕೃಷಿಯನ್ನೇ ಆಲೋಚಿಸಬೇಕು, ಕೆಲಸ ಮಾಡಬೇಕು. ಹೀಗಾದಾಗ ಮಾತ್ರ ಉದ್ಯಮವಾಗಿ ಅಗ್ರಿ ಬ್ಯುಸಿನೆಸ್ ಅಥವಾ ಕೃಷಿ ಉದ್ಯಮ ಎಂದು ಹೇಳಲು ಸಾಧ್ಯ ಎಂದರು.
ಮಾನ್ಸೂನ್, ಮಾರುಕಟ್ಟೆಗಿಂತ ಹೆಚ್ಚಿನ ವೇಗ ಅಗತ್ಯ:
ಎಂಎಸ್ಸಿ ಓದುವ ಸಂದರ್ಭ ಮಾನ್ಸೂನ್ ವೈಪರೀತ್ಯ, ದರ ಏರಿಳಿಕೆಗಳ ನಡುವೆ ಇರುವ ಅಡಿಕೆಯ ಬಗ್ಗೆ ಪ್ರಬಂಧ ಬರೆದಿದ್ದೆ. ಆಗ 80 ವರ್ಷಗಳ ದತ್ತಾಂಶವನ್ನು ಸಂಗ್ರಹಿಸಿದ್ದೇನೆ. ಪ್ರತಿ 12 – 14 ವರ್ಷಕ್ಕೊಮ್ಮೆ ಅಡಿಕೆ ದರ ಇಳಿಕೆ ಕಾಣುತ್ತದೆ. ಎಷ್ಟೆಂದರೆ, ಉತ್ಪಾದನೆಯ ದರದ ಮಟ್ಟಕ್ಕೆ ಅಡಿಕೆ ದರ ಇಳಿಕೆಯಾಗುತ್ತದೆ. ಇದನ್ನು ಸರಿಪಡಿಸಬೇಕಾದರೆ ಮಾನ್ಸೂನ್ ಹಾಗೂ ಮಾರುಕಟ್ಟೆಯ ವೇಗಕ್ಕಿಂತ ನಾವು ವೇಗವಾಗಿ ಹೋಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮಗೇನು ಅವಕಾಶಗಳಿವೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಅಶೋಕ್ ಕುಮಾರ್ ತಿಳಿಸಿದರು.

ನಮ್ಮ ಮುಂದಿರುವ ಸವಾಲು:
ಹವಾಮಾನ ವೈಪರೀತ್ಯ, ಪ್ರತಿವರ್ಷ ಕಾಡುವ ಅತಿವೃಷ್ಟಿ ಹಾಗೂ ಅನಾವೃಷ್ಟಿ, ಬರ, ಹೊಸ ಹೊಸ ರೋಗಗಳು, ಸವಾಲು ಇದ್ದೇ ಇದೆ. ಇದರೊಂದಿಗೆ ವರ್ಷದಿಂದ ವರ್ಷಕ್ಕೆ ನೀರಿನ ಕೊರತೆ ಕಾಡುತ್ತಲೇ ಇದೆ. ಇನ್ನೊಂದೆಡೆ ಕೃಷಿ ಕಾರ್ಮಿಕರ ದುಡಿಮೆಯ ವೇತನ ಹೆಚ್ಚಾಯಿತು ಎಂದು ಹೇಳುತ್ತೇವೆ. ಹಾಗೆ ನೋಡಿದರೆ ಕಂಪೆನಿಯೊAದು ಭತ್ತೆ, ರಜೆಗಳೆಲ್ಲಾ ಸೇರಿ ತಿಂಗಳಿಗೆ 23 ಸಾವಿರ ರೂ.ವನ್ನು ನೀಡುತ್ತದೆ. ಅದರಲ್ಲೂ ಕೌಶಲ್ಯಯುತ ಕೆಲಸಗಾರರಿಗೆ 35 ಸಾವಿರ ರೂ.ವಾದರೂ ವೇತನ ನೀಡುತ್ತದೆ. ಹೀಗಿರುವಾಗ ಕೃಷಿ ಕಾರ್ಮಿಕ ನೆಮ್ಮದಿಯ ಜೀವನ ನಡೆಸುವುದು ಬೇಡವೇ? ಹಾಗಾದರೆ ಆತನಿಗೆ ನಾವು ನೀಡುವ ವೇತನ ಕಡಿಮೆಯೇ ಅಲ್ಲವೇ ಎಂದರು. ಕೃಷಿಗೆ ಲಭ್ಯತೆಗಳೆಲ್ಲಾ ಕಡಿಮೆ ಇರುವಾಗ ಹೆಚ್ಚು ಆಹಾರ ಬೆಳೆ ಬೆಳೆಯುವುದು ಹೇಗೆ ಎನ್ನುವುದು ನಮ್ಮ ಮುಂದಿರುವ ಸವಾಲು. ಈ ಎಲ್ಲಾ ಸವಾಲುಗಳ ನಡುವೆ ಅವಕಾಶವನ್ನು ಹೇಗೆ ಬಳಸಿಕೊಳ್ಳುವುದನ್ನು ಕೃಷಿಕರು ಕಲಿತುಕೊಳ್ಳಬೇಕು ಎಂದು ಅಶೋಕ್ ಕುಮಾರ್ ತಿಳಿಸಿದರು.

ಫುಡ್ ಸೇಫ್ಟಿ ಅಗತ್ಯ:
ಫುಡ್ ಸೇಫ್ಟಿ ಬಗ್ಗೆ ಮಾತನಾಡಿದ ಅಶೋಕ್ ಕುಮಾರ್, ಸೇಫ್ಟಿ ಇಲ್ಲದ ಅಥವಾ ಸುರಕ್ಷತೆ ಇಲ್ಲದ ಆಹಾರವನ್ನು ಉಚಿತವಾಗಿ ಕೊಟ್ಟರೂ ಯಾರೂ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಫುಡ್ ಸೇಫ್ಟಿ ಎನ್ನುವುದು ಬಹಳ ಅಗತ್ಯ. ಇಂದು ಕೆಮಿಕಲ್ ಹಾಕಿದ ಆಹಾರ ಸೇಫ್ಟಿ ಅಲ್ಲ ಎನ್ನುತ್ತೇವೆ. ಕೆಮಿಕಲ್ ಹಾಕದ ಆಹಾರಗಳಲ್ಲೂ ಸೇಫ್ಟಿ ಇರುವುದಿಲ್ಲ. ಇದಕ್ಕೆ ಉದಾಹರಣೆ ಫಂಗಸ್‌ನAತಹ ವಿಷಕಾರಿಗಳ ಬೆಳವಣಿಗೆ. ಇವುಗಳನ್ನೆಲ್ಲಾ ತಪ್ಪಿಸುವ ಮಟ್ಟಿಗೆ ಫುಡ್ ಸೇಫ್ಟಿಯನ್ನು ಬೆಳೆಸಿಕೊಳ್ಳಬೇಕು. ಇವತ್ತಿನ ಗ್ರಾಹಕನಿಗೆ ಈ ಎಲ್ಲಾ ವಿಚಾರಗಳನ್ನು ತಿಳಿಸಿದರೆ ಮಾತ್ರ, ಆತ ಖರೀದಿ ಮಾಡುತ್ತಾನೆ ಎಂದು ವಿವರಿಸಿದರು.

ಒಗ್ಗೂಡಿಸಿಕೊಂಡು ಮುಂದಡಿ: ರಾಮ್‌ಕಿಶೋರ್
ಎಫ್‌ಪಿಓ ಬಗ್ಗೆ ಮಾತನಾಡಿದ ರಾಮ್‌ಕಿಶೋರ್, 2016ರಲ್ಲಿ ಪಿಂಗಾರ ಆರಂಭಿಸಿದೆ. 1 ಸಾವಿರ ರೈತರು 1 ಸಾವಿರ ರೂ. ಶೇರು ಬಂಡವಾಳ ಹಾಕಿ ಆರಂಭವಾದ ಸಂಸ್ಥೆಗೆ ಈಗ 5 ವರ್ಷ. ಈ ಬಾರಿ 15 ಲಕ್ಷ ರೂ. ಲಾಭ ಕಂಡಿದೆ. ಮೊದಲ ವರ್ಷ ಹಲಸಿನ ಮೌಲ್ಯವರ್ಧನೆ, ಎರಡನೇ ವರ್ಷದಲ್ಲಿ ಬಾಳೆಕಾಯಿ, ಬಳಿಕ ಅಡಿಕೆ ಮೌಲ್ಯವರ್ಧನೆ, ಈ ವರ್ಷದಿಂದ ಅಡಿಕೆ ಕೊಯ್ಲಿಗೆ ದೋಟಿಯಿಂದ ಕೊಯ್ಲು ಮಾಡಲು ತಂಡವನ್ನು ಕಟ್ಟಿದ್ದೇವೆ. ಫೆಬ್ರವರಿಯಿಂದ ಇಲ್ಲಿವೆರೆಗೆ 20 ಲಕ್ಷ ರೂ. ವ್ಯವಹಾರ ಮಾಡಿದೆ. ಇಲ್ಲಿನ ಯೋಜನೆಗಳೇ ಹಾಗಿವೆ. ಒಗ್ಗೂಡಿಸಿಕೊಂಡು ಮುಂದೆ ಹೋಗಲು ನೋಡುತ್ತಿದ್ದೇವೆ. ಮುಂದೆ ತೋಟ ನೋಡಿಕೊಳ್ಳುವ ಕೆಲಸಕ್ಕೆ ಮುಂದಾಗಬಹುದು. ಅಷ್ಟು ಬೇಡಿಕೆ ಇದೆ. ನೀವೇ ನಡಿಸಿಕೊಂಡು ಹೋಗಿ, ಲೆಕ್ಕಾಚಾರ ಸುಲಭ ಎಂಬ ಬೇಡಿಕೆಯೂ ಇದೆ. ಈಗಾಗಲೇ 3 ಎಕರೆ ಜಾಗ ಖರೀದಿಗೆ ಮುಂದಾಗಿದ್ದೇವೆ. ನಮ್ಮ ರೈತರು ನಮಗೆ ಸಹಕಾರ ನೀಡಿದರೆ ಮಾತ್ರ ಇದನ್ನು ಯಶಸ್ವಿಯಾಗಿ ನಡೆಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಸಾವಯವ ಕೃಷಿಯ ಬಗ್ಗೆ ಡಾ. ವೇಣು ಕಳೆಯತ್ತೋಡಿ, ಕೃಷಿ ತಂತ್ರಗಾರಿಕೆ ಬಗ್ಗೆ ಶ್ರೀಹರಿಭಟ್ ಸಜಂಗದ್ದೆ, ನರ್ಸರಿ ಬಗ್ಗೆ ವೇಣುಗೋಪಾಲ್, ಇನ್ಟಾ÷್ಸ ಬಾಸ್ಕೆಟ್ ಕೃಷಿ ಮಳಿಗೆ ಬಗ್ಗೆ ಶ್ರೀಕೃಷ್ಣ ಮೋಹನ್, ಆಯುರ್ವೇದ ಮೂಲಿಕೆಗಳ ಕೃಷಿ ಬಗ್ಗೆ ಡಾ. ಹರಿಕೃಷ್ಣ ಪಾಣಾಜೆ, ಸುರಂಗ ನೀರಾವರಿ ಬಗ್ಗೆ ಗೋವಿಂದ ಭಟ್ ಮಾಣಿಲ, ಹೈನುಗಾರಿಕೆ ಬಗ್ಗೆ ಕಸ್ತೂರಿ ಅಡ್ಯಂತಾಯ, ಬಸಳೆ ಕೃಷಿ ಬಗ್ಗೆ ಸುರೇಶ್ ಗೌಡ, ತರಕಾರಿ ಕೃಷಿ ಬಗ್ಗೆ ಶ್ರೀರಾಮ ಭಟ್ಟ ಚೆನ್ನಾಂಗೋಡು, ಕೃಷಿ ಸಂಘಟನೆ ಬಗ್ಗೆ ಮಹೇಶ್ ಪುಚ್ಚಪ್ಪಾಡಿ ಅಭಿಪ್ರಾಯ ಮಂಡಿಸಿದರು.
ಮುಳಿಯ ಸಂಸ್ಥೆಯ ನಿರ್ದೆಶಕಿ ಕೃಷ್ಣವೇಣಿ ಪ್ರಾರ್ಥಿಸಿದರು. ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಉಪಸ್ಥಿತರಿದ್ದರು. ವೇಣು ಶರ್ಮ ಕಾರ್ಯಕ್ರಮ ನಿರೂಪಿಸಿದರು.

ಕೃಷಿಕರ ಜೊತೆಗಿರಲಿದೆ ಸುದ್ದಿ ಕೃಷಿ ಸೇವಾ ಕೇಂದ್ರ: ಡಾ. ಯು.ಪಿ. ಶಿವಾನಂದ್
ಸಮಾರೋಪದಲ್ಲಿ ಕೃಷಿಕೋದ್ಯಮ ಕಾರ್ಯಕ್ರಮದ ಬಗ್ಗೆ ಉಪಸಂಹಾರ ಮಾತುಗಳನ್ನಾಡಿದ ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಯು.ಪಿ. ಶಿವಾನಂದ್, ಇಂದು ಮಾರುಕಟ್ಟೆಯ ಸಾಧ್ಯತೆಗಳು ಹಲವಾರು ಬಗೆಯಲ್ಲಿ ತೆರೆದುಕೊಂಡಿದೆ. ಕೃಷಿಯನ್ನು ಉದ್ಯಮವಾಗಿ ತೆರೆದುಕೊಳ್ಳುವಲ್ಲಿ ಕೃಷಿಕೋದ್ಯಮ ಕಾರ್ಯಕ್ರಮ ಯಶಸ್ವಿಯಾಗಿದ್ದು, ಮಾಧ್ಯಮಗಳ ಕಣ್ಣು ತೆರೆಸುವ ಕೆಲಸ ಇಲ್ಲಿ ಆಗಿದೆ. ಮಾರುಕಟ್ಟೆಯ ಜೊತೆಗೆ ಬೇಡಿಕೆಯ ಬಗ್ಗೆಯೂ ಮಾತುಕತೆ ನಡೆದಿದೆ. ಕೃಷಿಯನ್ನು ಉದ್ಯಮವಾಗಿ ಮುನ್ನಡೆಸುವ ದಾರಿಯನ್ನು ಇಲ್ಲಿ ತೋರಿಸಲಾಗಿದೆ. ಇಂತಹ ಕಾರ್ಯದಲ್ಲಿ ಸುದ್ದಿ ಮಾಧ್ಯಮವಾಗಿ, ಪತ್ರಿಕೆಯಾಗಿ, ಜಾಲತಾಣವಾಗಿ ಇಂತಹ ಕಾರ್ಯಕ್ರಮದ ಜೊತೆ ಇರುತ್ತದೆ ಎಂದು ತಿಳಿಸಿದರು.
ಎಲ್ಲಾ ಬೆಳೆಗಳನ್ನು ಬೆಳೆಯುತ್ತೇವೆ ನಿಜ. ಆದರೆ ಬೆಳೆದ ಬೆಳೆಗೆ ನಂತರ ಮಾರುಕಟ್ಟೆ ಹೇಗೆ ಎನ್ನುವ ಪ್ರಶ್ನೆ ಬಹಳ ದೊಡ್ಡದಾಗಿ ಕಾಡುತ್ತದೆ. ಇದಕ್ಕೆ ಉತ್ತರವಾಗಿ ಸುದ್ದಿ ಕೃಷಿ ಸೇವಾ ಕೇಂದ್ರ ಕೆಲಸ ನಿರ್ವಹಿಸಲಿದೆ. ಕೃಷಿ ಸ್ವಾತಂತ್ರö್ಯ ಎಂದರೆ ಕೃಷಿಕರಿಗೆ ಅಗತ್ಯವಾಗಿ ಬೇಕಾಗಿರುವುದನ್ನು ಪಡೆಯುವುದು ಎಂದರ್ಥ. ಈ ನಿಟ್ಟಿನಲ್ಲಿ ಸುದ್ದಿ ಕೆಲಸ ನಿರ್ವಹಿಸುತ್ತಿದ್ದು, ಸದ್ಯದಲ್ಲೇ ಸುದ್ದಿ ಕೃಷಿ ಸೇವಾ ಕೇಂದ್ರವನ್ನು ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಹಾಗೂ ಮಂಗಳೂರಿನಲ್ಲಿ ತೆರೆಯಲಿದ್ದೇವೆ. ಇಲಾಖೆಗಳ ಮಾಹಿತಿಯನ್ನು ಅಲ್ಲಿ ನೀಡಲಿದ್ದೇವೆ. ಈ ಜವಾಬ್ದಾರಿಯುತ ಕೆಲಸವನ್ನು ಸುದ್ದಿ ಕೃಷಿ ಸೇವಾ ಕೇಂದ್ರ ನಿರ್ವಹಿಸಲಿದೆ ಎಂದರು.

ಸರಕಾರ ಗ್ರಾಹಕ ಸ್ನೇಹಿ, ಕೃಷಿಕ ಸ್ನೇಹಿಯಲ್ಲ:
ನಾವಿಂದು ವಿಶ್ವ ಮಾರುಕಟ್ಟೆಯಲ್ಲಿದ್ದೇವೆ. ಪ್ರಪಂಚದಾದ್ಯAತ ನಮಗೆ ಬೇರೆ ಬೇರೆ ಅವಕಾಶಗಳಿವೆ. ಹಾಗೆಯೇ ಬೇರೆ ಬೇರೆ ದೇಶಗಳಿಗೆ ನಮ್ಮ ದೇಶದಲ್ಲೂ ಅವಕಾಶಗಳಿವೆ. ಹಾಗಾಗಿ ನಮ್ಮ ಮಾರುಕಟ್ಟೆಗೆ ಬೇರೆಯವರನ್ನು ಬರಲು ಬಿಡುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಯಾಕೆಂದರೆ ವಿಶ್ವ ಮಾರುಕಟ್ಟೆಯೇ ಹಾಗಿದೆ. ಆಹಾರದ ಬಗ್ಗೆ ಹೇಳುವುದಾದರೆ. ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ರೀತಿಯ ಆಹಾರ ಅಭದ್ರತೆ ಇದೆ. ಅದರಲ್ಲೂ ಪೌಷ್ಟಿಕಾಂಶ ಕೊರತೆಯೂ ಇದೆ. ಪ್ರಪಂಚದ ಹಲವು ಭಾಗಗಳಿಗೆ ಆಹಾರದ ಲಭ್ಯತೆಯೇ ಇಲ್ಲ ಎನ್ನುವುದು ವಾಸ್ತವ ಎಂದ ಅಶೋಕ್ ಕುಮಾರ್, ಕೃಷಿಕ ಸೋತಿದ್ದಾನೆ ಎಂದಾಗ ಸರಕಾರವಾಗಲಿ, ಸಂಘ-ಸAಸ್ಥೆಗಳಾಗಲಿ ಸಹಾಯಕ್ಕೆ ಬರುವುದಿಲ್ಲ. ಯಾಕೆಂದರೆ ಇರುವ ಜನಸಂಖ್ಯೆಯಲ್ಲಿ ಶೇ. 65 ಜನರೂ ಗ್ರಾಹಕರೇ. ಕೃಷಿಕರಿಗಿಂತ ಗ್ರಾಹಕರ ಮತ ಹೆಚ್ಚಿರುವುದರಿಂದ ಸರಕಾರದ ನೀತಿಗಳು ಗ್ರಾಹಕರ ಸ್ನೇಹಿಯಾಗಿಯೇ ಇರುತ್ತವೆ. ಕೃಷಿಕ ಸ್ನೇಹಿಯಾಗಿರಲು ಸಾಧ್ಯವೇ ಇಲ್ಲ. ಇದಕ್ಕೆ ಅಂಕಿಅAಶ, ಅರ್ಥಶಾಸ್ತçಗಳಲ್ಲಿ ಪೂರಕ ದಾಖಲೆಗಳು ಸಿಗುತ್ತವೆ. ಇದಕ್ಕೆ ಒಂದು ಉದಾಹರಣೆ ಎಂದರೆ – ಬೆಲೆ ಏರಿಕೆ ಎನ್ನುವುದು ದೊಡ್ಡ ಸುದ್ದಿಯಾಗುತ್ತದೆ. ಆದರೆ ಬೆಳೆದ ಬೆಳೆಗೆ ಸರಿಯಾದ ದರ ಸಿಗುವುದಿಲ್ಲ ಎನ್ನುವುದು ದೊಡ್ಡ ಸುದ್ದಿಯೇ ಅಲ್ಲ ಎಂದು ವಿವರಿಸಿದರು.

ಯಾರು ಯಶಸ್ವಿ ಕೃಷಿ ಉದ್ಯಮಿ?
ಬೇಡಿಕೆ ಇರುವ ಉತ್ಪನ್ನವನ್ನೇ ಬೆಳೆಯಬೇಕು ಎನ್ನುವುದು ಎಲ್ಲರೂ ತಿಳಿದಿರುವ ವಿಷಯ. ಆದರೆ ನಮ್ಮಲ್ಲಿರುವ 2, 5 ಎಕರೆ ಜಾಗದಲ್ಲಿ ಬೇಡಿಕೆಯ ಬೆಳೆಯನ್ನು ಉತ್ಪಾದಿಸಲು ಸಾಧ್ಯವಿಲ್ಲ. ಉದಾಹರಣೆ ಎಂದರೆ, 100 ಎಕರೆ ಜಾಗದಲ್ಲಿ ಒಂದೇ ತಳಿಯ ಭತ್ತವನ್ನು ಒಂದೇ ಗುಣಮಟ್ಟದಲ್ಲಿ ಬೆಳೆಯಬೇಕು. ಅದಕ್ಕೆ ಸ್ವಂತ ಬ್ರಾö್ಯಂಡ್ ನೀಡಬೇಕು. ಜನ ಬಂದು ಇದೇ ಬ್ರಾö್ಯಂಡ್‌ನ ಉತ್ಪನ್ನ ಕೊಡಿ ಎಂದು ಕೇಳುವಂತಾಗಬೇಕು. ಆಗ ಮಾತ್ರ ಯಶಸ್ವಿ ಕೃಷಿ ಉದ್ಯಮಿಯಾಗಲು ಸಾಧ್ಯ ಎಂದು ಅಶೊಕ್ ಕುಮಾರ್ ವ್ಯಾಖ್ಯಾನಿಸಿದರು.

ಸುದ್ದಿ ನೇರಪ್ರಸಾರ
ಮುಳಿಯ ಹಾಗೂ ಸುದ್ದಿ ಸಹಯೋಗದಲ್ಲಿ ನಡೆದ ಕೃಷಿಕೋದ್ಯಮ ಕೃಷಿ ಬದುಕಿನ ಪಯಣದಲ್ಲಿ ಹೊಸತನದ ಹೆಜ್ಜೆ ಕಾರ್ಯಕ್ರಮದ ನೇರ ಪ್ರಸಾರ ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರಗೊಂಡಿತು.

LEAVE A REPLY

Please enter your comment!
Please enter your name here