ಪುತ್ತೂರು:ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಪಶು ಆಸ್ಪತ್ರೆ ಪುತ್ತೂರು ಇದರ ವತಿಯಿಂದ ವಿಶ್ವ ರೇಬಿಸ್ ದಿನದ ಅಂಗವಾಗಿ 10 ದಿನಗಳ ಕಾಲ ನಡೆಯಲಿರುವ ನಾಯಿಗಳಿಗೆ ಹುಚ್ಚ ನಾಯ ರೋಗ ನಿರೋಧಕ ಉಚಿತ ಲಸಿಕೆ ಅಭಿಯಾನಕ್ಕೆ ಸೆ.21ರಂದು ಪಶು ಆಸ್ಪತ್ರೆಯ ಆವರಣದಲ್ಲಿ ಚಾಲನೆ ನೀಡಲಾಯಿತು.
ಅಭಿಯಾನವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಚಾಲನೆ ನೀಡಿದ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಹುಚ್ಚುನಾಯಿ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಲಾಖೆ ಕೈಗೊಂಡಿರುವ ಅಭಿಯಾನವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಅಭಿಯಾನದ ಬಗ್ಗೆ ಮಾತನಾಡಿ, ಸೆ.28ರಂದು ನಡೆಯಲಿರುವ ವಿಶ್ವ ರೇಬಿಸ್ ದಿನದ ಅಂಗವಾಗಿ ನಾಯಿಗಳಿಗೆ ಹುಚ್ಚುನಾಯ ರೋಗ ನಿರೋಧಕ ಲಸಿಕಾ ಅಭಿಯಾನವನ್ನು ಇಲಾಖೆ ಹಮ್ಮಿಕೊಂಡಿದೆ. ಪಶು ಆಸ್ಪತ್ರೆಗಳಿರುವ 12 ಗ್ರಾಮಗಳಲ್ಲಿ ಹಾಗೂ ಪುತ್ತೂರು ಪಶುವೈದ್ಯ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ವಿತರಿಸಲಾಗುವುದು. ಸಾರ್ಜಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಕರಪತ್ರ ಬಿಡುಗಡೆ:
ನಾಯಿಗಳ ಸಾಕಾಣಿಕೆ, ರೇಬಿಸ್ ರೋಗ ಹರಡುವ ವಿಧಾನ, ನಿಯಂತ್ರಣದ ಮಾಹಿತಿಗಳನ್ನು ಒಳಗೊಂಡಿರುವ ಕರಪತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ನಗರ ಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ಮಾಜಿ ಸದಸ್ಯ ರಾಜೇಶ್ ಬನ್ನೂರು, ಹಿರಿಯ ರಾಸು ಅಭಿವೃದ್ಧಿ ಅಧಿಕಾರಿ ಹೊನ್ನಪ್ಪ ಗೌಡ, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಪ್ರಶಾಂತ್ ಕಿರಿಯ ಪಶುವೈದ್ಯಕೀಯ ಪರೀಕ್ಷಕ ಪುಂಡರಿಕಾಕ್ಷ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.