ಅಂಬಿಕಾ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ನಿವಾಸಕ್ಕೆ ಮುತಾಲಿಕ್ ಭೇಟಿ

0

ಅಂಬಿಕಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅನುಪಮ ಟಿವಿಗೆ ವಿಶೇಷ ಸಂದರ್ಶನ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅವರ ಶ್ರೀಚಕ್ರ ನಿವಾಸಕ್ಕೆ ಶ್ರೀರಾಮ ಸೇನೆಯ ಸ್ಥಾಪಕ, ಹಿಂದೂ ನಾಯಕ ಪ್ರಮೋದ್ ಮುತಾಲಿಕ್ ಸೋಮವಾರ ಭೇಟಿ ನೀಡಿದರು. ಸುಮಾರು ಮೂರುದಶಕಗಳ ಹಿಂದೆ ಸಂಘಟನೆಯ ಕಾರ್ಯದಲ್ಲಿ, ಸುಬ್ರಹ್ಮಣ್ಯ ನಟ್ಟೋಜರನ್ನೊಳಗೊಂಡಂತೆ ತೊಡಗಿಕೊಂಡದ್ದನ್ನು ಮುತಾಲಿಕ್ ಅವರು ಸ್ಮರಿಸಿಕೊಂಡರು.

ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಮುನ್ನಡೆಸುತ್ತಿರುವ ಅನುಪಮ ಟಿವಿ ಎಂಬ ಯೂಟ್ಯೂಬ್ ವಾಹಿನಿ ಜತೆ ಮಾತನಾಡಿದ ಮುತಾಲಿಕ್ ಅವರು ದೇಶವನ್ನು ಭ್ರಷ್ಟಾಚಾರ ನಿರಂತರವಾಗಿ ಕಾಡುತ್ತಲೇ ಇದೆ. ಭ್ರಷ್ಟಾಚಾರ ಸಮಾಜಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊರತುಪಡಿಸಿ ಮತ್ಯಾರಿಗೂ ದೇಶವನ್ನು ಹೇಗೆ ಮುನ್ನಡೆಸಬೇಕೆಂಬ ಕಲ್ಪನೆಗಳಿಲ್ಲ ಎಂದರಲ್ಲದೆ ಸಂವಿಧಾನದಲ್ಲಿ ಜಾತ್ಯಾತೀಯ ಎಂಬ ಶಬ್ದವನ್ನು ಸೇರಿಸಬಹುದಾದರೆ ಹಿಂದೂ ರಾಷ್ಟ್ರ ಎಂಬ ಶಬ್ದವನ್ನು ಸೇರಿಸುವುದಕ್ಕೆ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ಶ್ರೀರಾಮಸೇನೆಯನ್ನು ರಾಜಕೀಯ ಪಕ್ಷವನ್ನಾಗಿ ಮಾಡುವುದಿಲ್ಲ. ಬದಲಾಗಿ ಬಿಜೆಪಿಯನ್ನೇ ಸರಿದಾರಿಗೆ ತರುವ ಪ್ರಯತ್ನ ಮುಂದುವರಿಯುತ್ತದೆ. ಇದೇ ಬಿಜೆಪಿಯ ಮೂಲಕ ಹಿಂದೂರಾಷ್ಟ್ರದ ಕಲ್ಪನೆಯನ್ನು ಸಾಕಾರಗೊಳಿಸಲಾಗುತ್ತದೆ. ಇಂದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡಿಯ ದೇಶಕ್ಕೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತದ ಮಾದರಿ ಬೇಕಾಗಿದೆ. ಹಿಂದೂಗಳು ಆಲಸ್ಯವನ್ನು ಬಿಟ್ಟು ಜಾಗೃತರಾಗಬೇಕು ಎಂದರಲ್ಲದೆ ಸಂಸ್ಕೃತಿ, ಸಂಸ್ಕಾರ, ದೇಶಪ್ರೇಮದ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ್ ಅವರನ್ನು ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ನಟ್ಟೋಜ ದಂಪತಿ ಸನ್ಮಾನಿಸಿ, ಹಿಂದೂ ಜಾಗೃತಿ ಮೂಡಿಸುವ ಮುತಾಲಿಕ್ ಅವರ ಕೈಂಕರ್ಯದಲ್ಲಿ ತಾವೂ ಜತೆಯಾಗಿದ್ದೇವೆ ಎಂಬುದನ್ನು ಶ್ರುತಪಡಿಸಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್, ಸುಬ್ರಹ್ಮಣ್ಯ ನಟ್ಟೋಜ ಅವರ ಪುತ್ರ ಶ್ರೀಕೃಷ್ಣ ನಟ್ಟೋಜ, ಅಂಬಿಕಾ ವಿದ್ಯಾಲಯದ ಸಂಪನ್ಮೂಲ ಉಪನ್ಯಾಸಕ ಶ್ರೀಕೃಷ್ಣ ಉಪಾಧ್ಯಾಯ, ಶ್ರೀರಾಮ ಸೇನೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here