ನಗರದ ಕೆಟ್ಟುಹೋಗಿರುವ ಸಿಸಿ ಕ್ಯಾಮರಾಗಳು ಶೀಘ್ರವೇ ದುರಸ್ತಿ: ಡಿವೈಎಸ್‌ಪಿ ಡಾ.ವೀರಯ್ಯ ಹಿರೇಮಠ್

0
  • ಹೊರಗಿನಿಂದ ಕಾಣುವಷ್ಟು ದೊಡ್ಡ ಮಟ್ಟಿಗೆ ಕೆಟ್ಟ ಪರಿಸ್ಥಿತಿ ಇಲ್ಲಿಲ್ಲ
  • ಜನತೆಗೆ ಕಾನೂನಿನ ಅರಿವು ಜಾಸ್ತಿಯಿದೆ, ಕಾನೂನನ್ನು ಗೌರವಿಸುತ್ತಾರೆ
  • ಪೊಲೀಸ್ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತೇವೆ
  • ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನ

ಪುತ್ತೂರು: ನಗರದಲ್ಲಿ ಪಬ್ಲಿಕ್ ಮತ್ತು ಪ್ರೈವೇಟ್ ಆಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ 86 ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿತ್ತು. ಈಗ ಸರ್ವೇ ಮಾಡಲಾಗಿದ್ದು, 86 ಸಿಸಿ ಕ್ಯಾಮರಾಗಳ ಪೈಕಿ 4 ಕ್ಯಾಮರಾಗಳು ಮಾತ್ರ ಸುಸ್ಥಿತಿಯಲ್ಲಿವೆ. 82 ಸಿಸಿ ಕ್ಯಾಮರಾಗಳು ಕೆಲಸ ಮಾಡುತ್ತಿಲ್ಲ. ಇವುಗಳನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಪುತ್ತೂರು ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಅವರನ್ನು ಭೇಟಿಯಾಗಿ ಗಮನಕ್ಕೆ ತರಲಾಗಿದೆ. ಅವರು ಒಪ್ಪಿ ತಹಶೀಲ್ದಾರ್, ತಾಲೂಕು ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಗರಸಭೆಯ ಅಧ್ಯಕ್ಷರನ್ನು ಸೇರಿಸಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ನೂರಕ್ಕೆ ನೂರು ಪೂರ್ಣಗೊಳಿಸುತ್ತೇವೆ ಎಂದು ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಡಾ.ವೀರಯ್ಯ ಹಿರೇಮಠ್ ಹೇಳಿದ್ದಾರೆ.

ಪುತ್ತೂರು ಉಪವಿಭಾಗದ ಪೊಲೀಸ್ ಉಪವಿಭಾಗಾಧಿಕಾರಿಯಾಗಿ 2022 ಆ.24ರಂದು ಅಧಿಕಾರ ಸ್ವೀಕರಿಸಿದ ಡಾ.ವೀರಯ್ಯ ಹಿರೇಮಠ್ ಅವರು ‘ಸುದ್ದಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಇಲಾಖೆಯ ಕಾರ್ಯವೈಖರಿ, ಮುಂದಿನ ಯೋಜನೆಗಳು ಮತ್ತು ಉಪವಿಭಾಗ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಕಾನೂನು ಸುವ್ಯವಸ್ಥೆ ನಿರ್ವಹಣೆಯ ಕುರಿತು ಮಾತನಾಡಿದರು.

ಪುತ್ತೂರಿನ ಜನತೆ ಒಳ್ಳೆಯವರು: ಈ ಭಾಗದಲ್ಲಿ ಕೋಮು ಸೂಕ್ಷ್ಮವಾದ ಬಹಳಷ್ಟು ವಿಚಾರಗಳಿವೆ. ನನ್ನ ಅಭಿಪ್ರಾಯದ ಪ್ರಕಾರ ಹೊರಗಡೆ ಕಾಣತಕ್ಕಂತಹ, ಕೇಳತಕ್ಕಂತಹ ಕೋಮುಸೂಕ್ಷ್ಮ ವಿಚಾರಗಳು ಇಲ್ಲಿ ಇಲ್ಲ. ಬಂದ ಒಂದು ತಿಂಗಳಿನಲ್ಲಿ ಬಹಳಷ್ಟು ಪ್ರೀತಿ ವಿಶ್ವಾಸದಿಂದ ಜನರು ಕಂಡಿದ್ದಾರೆ. ಬಹಳಷ್ಟು ಸಹಕಾರ ನೀಡಿದ್ದಾರೆ. ಇಲ್ಲಿನ ಜನರು ಬಹಳ ಒಳ್ಳೆಯವರು. ಪ್ರೀತಿ ವಿಶ್ವಾಸದಿಂದ ಬಾಳುತ್ತಿದ್ದಾರೆ. ಇಲ್ಲಿ ಜನರಿಗೆ ಕಾನೂನಿನ ಅರಿವು ಜಾಸ್ತಿಯಿದೆ. ಕಾನೂನು ಪಾಲನೆ ಮಾಡುತ್ತಿದ್ದಾರೆ. ಒಂದಿಬ್ಬರು ಜನರು ಮಾಡುವ ತಪ್ಪಿನಿಂದ ಪೂರ್ತಿ ಉಪವಿಭಾಗಕ್ಕೆ ಕೆಟ್ಟ ಹೆಸರು ಬರುತ್ತಿದೆ. ಧರ್ಮ ಧರ್ಮಗಳ ನಡುವೆ ಕೆಟ್ಟ ಹೆಸರು ತರಲು ಪ್ರಯತ್ನಿಸುವುದನ್ನು ತಡೆಗಟ್ಟಲು ಪ್ರಯತ್ನಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅಪರಾಧದ ವಿರುದ್ಧ ಕಠಿಣ ಕ್ರಮ: ಪುತ್ತೂರು ಉಪವಿಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗಬೇಕಿದೆ. ಇತ್ತೀಚೆಗೆ ಗಣೇಶ ಚತುರ್ಥಿಯ ಬಂದೋಬಸ್ತ್, ರಾಜ್ಯಪಾಲರ ಭೇಟಿ ಇತ್ಯಾದಿ ಸಂದರ್ಭದಲ್ಲಿ ಉತ್ತಮವಾಗಿ ನಿರ್ವಹಿಸಿಕೊಂಡು ಹೋಗಲಾಗಿದೆ. ಅಪರಾಧ ಪ್ರಮಾಣವನ್ನು ತಗ್ಗಿಸುವುದು ನಮ್ಮ ಎರಡನೇ ಧ್ಯೇಯವಾಗಿದೆ. ಮೊದಲು ಅಪರಾಧ ನಡೆಯದಂತೆ ತಡೆಯುತ್ತೇವೆ. ಅಕಸ್ಮಾತ್ ಅಪರಾಧಗಳು ನಡೆದರೆ ಅದನ್ನು ಪತ್ತೆಹಚ್ಚಿ ನೊಂದವರಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ಎಲ್ಲಾದರೂ ಗಾಂಜಾ, ಅಫೀಮು, ಇಸ್ಪೀಟ್, ಜುಗಾರಿ ದಂಧೆ ಇತ್ಯಾದಿ ಅಡ್ಡೆಗಳ ಮೇಲೆ ದಾಳಿ ನಡೆಸುತ್ತೇವೆ. ಇದರಲ್ಲಿ ತೊಡಗಿಕೊಳ್ಳುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪುತ್ತೂರು ಉಪವಿಭಾಗದಲ್ಲಿ ಸದ್ಯಕ್ಕೆ ನಡೆಯುತ್ತಿರುವ ತನಿಖೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಽನ ಅಽಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಅವರು ಕೂಡ ಸ್ಪಂದಿಸಿ ಉತ್ತಮ ಸಹಕಾರ ನೀಡುತ್ತಿದ್ದಾರೆ. ತನಿಖೆಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ ಎಂದು ಡಿವೈಎಸ್ಪಿ ಹೇಳಿದರು.

ಅಪಘಾತಗಳ ಕುರಿತು ಜಾಗೃತಿಗೆ ಪ್ರಯತ್ನ : ಈ ಭಾಗದ ಭೌಗೋಳಿಕ ಪರಿಸ್ಥಿತಿಯಿಂದ ಅಪಘಾತಗಳು ಸಂಭವಿಸುತ್ತಿವೆ. ಜೊತೆಗೆ ಕೆಲವೊಂದು ಕಡೆಗಳಲ್ಲಿ ಬೆಳಕಿನ ವ್ಯವಸ್ಥೆಯ ಕೊರತೆ ಇರುವುದರಿಂದ, ರಸ್ತೆಗಳು ಸಾಕಷ್ಟು ಅಗಲವಾಗಿಲ್ಲದೇ ಇರುವುದರಿಂದ ಅಪಘಾತಗಳು ಹೆಚ್ಚು ಸಂಭವಿಸಿ ಪ್ರಾಣಹಾನಿಯಾಗುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಮುಂಬರುವ ಚುನಾವಣಾ ಸಂದರ್ಭಗಳಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಿದ್ಧವಾಗಿದೆ. ಹಳ್ಳಿಗಳ ಕಡೆಗೆ ಪೊಲೀಸರ ನಡಿಗೆಯನ್ನು ಜಾಸ್ತಿ ಮಾಡಲಾಗುವುದು. ಪೊಲೀಸ್ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ. ಪೊಲೀಸ್-ಪಬ್ಲಿಕ್ ಸಂಬಂಧವನ್ನು ಗಟ್ಟಿಗೊಳಿಸಲು ಪ್ರಯತ್ನಿಸುವ ಮೂಲಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ತರಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಸತ್ಯಕ್ಕೆ ದೂರವಾದ ವರದಿ ಬೇಡ: ನೈತಿಕ ಪೊಲೀಸ್‌ಗಿರಿಯ ಬಗ್ಗೆ ಬಹಳಷ್ಟು ಚರ್ಚೆಗಳಾಗುತ್ತಿವೆ. ಕೆಲವೊಂದು ಸೂಕ್ಷ್ಮ ವಿಚಾರಗಳಿರುತ್ತವೆ. ಅವುಗಳು ಸತ್ಯಕ್ಕೆ ದೂರವಾಗಿದ್ದಾಗಲೂ ಆತುರದಲ್ಲಿ ಬಿತ್ತರಿಸಿ ಸಮಾಜದಲ್ಲಿ ಸ್ವಾಸ್ಥ್ಯ ಕದಡುವ ಪ್ರಯತ್ನಗಳು ನಡೆಯುತ್ತಿವೆ. ದಯವಿಟ್ಟು ಆ ರೀತಿ ಮಾಡಬೇಡಿ. ಒಬ್ಬಿಬ್ಬರು ಮಾಡುವ ವೈಯಕ್ತಿಕ ಕೆಲಸಗಳಿಂದ ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆ ಬರುವುದನ್ನು ತಡೆಗಟ್ಟಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಸೈಬರ್‌ಕ್ರೈಮ್ ಮೇಲೆ ನಿಗಾ: ಸಾಮಾಜಿಕ ಜಾಲತಾಣಗಳಿಗೆ ಸಂಬಂಧಪಟ್ಟಂತೆ ನಡೆಯುವ ಪ್ರಕರಣಗಳಲ್ಲಿ ಎಲ್ಲೋ ಕುಳಿತು ಮಾಡುವುದರಿಂದ ತಪ್ಪಿತಸ್ಥರನ್ನು, ಅಪರಾಽಗಳನ್ನು ಪತ್ತೆಹಚ್ಚುವುದು ಸ್ವಲ್ಪ ಕಷ್ಟದ ಕೆಲಸ. ಆದರೂ ಕೂಡ ಈ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಇದೆ. ಅಲ್ಲಿ ನುರಿತ ಸಿಬ್ಬಂದಿಗಳು ಕೆಲಸ ಮಾಡುತ್ತಿರುತ್ತಾರೆ. ಸಮಾಜದ ಸ್ವಾಸ್ಥ್ಯ ಕದಡುವ ನಿಟ್ಟಿನಲ್ಲಿ ಯಾರಾದರೂ ಈ ಮೂಲಕ ಪ್ರಯತ್ನಪಟ್ಟರೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಡಾ.ವೀರಯ್ಯ ಹಿರೇಮಠ್ ಹೇಳಿದರು.

ಶಿಷ್ಟರಕ್ಷಕ-ದುಷ್ಟಶಿಕ್ಷಕ ಕೆಲಸ: ಉಪವಿಭಾಗ ವ್ಯಾಪ್ತಿಯಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ರೌಡಿಶೀಟರ‍್ಸ್, ಹಿಸ್ಟರಿ ಶೀಟರ‍್ಸ್‌ಗಳಿಗೆ ಠಾಣಾ ವ್ಯಾಪ್ತಿಯಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಹೋಗಿ ಮುಂಬರುವ ದಿನಗಳಲ್ಲಿ ಯಾವುದೇ ರೀತಿಯಲ್ಲಿ ಸಮಾಜದ ಶಾಂತಿಯನ್ನು ಕದಡದಂತೆ ತಿಳಿಸಿ ಹೇಳಿ ಏನೇನು ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತಿದ್ದಾರೆ. ಜೊತೆಗೆ ಅವರ ಮನೆಗಳಿಗೆ ಸರ್‌ಪ್ರೈಸ್ ವಿಸಿಟ್ ಕೊಟ್ಟು ಅವರು ಮನೆಯಲ್ಲಿದ್ದಾರೋ, ಬೇರೆಲ್ಲಿಗಾದರೂ ತೆರಳುತ್ತಿದ್ದಾರೋ ಎಂದು ಅವರ ಬಗ್ಗೆ ವರದಿ ನೀಡುತ್ತಿದ್ದಾರೆ. ಈ ಮೂಲಕ ಅಪರಾಧ ಹಿನ್ನೆಲೆಯುಳ್ಳವರಿಗೆ ಪೊಲೀಸರ ಮೇಲೆ ಭಯ ಹುಟ್ಟುತ್ತಿದೆ. ಪೊಲೀಸ್ ಇಲಾಖೆ ಎಂದರೆ ಶಿಷ್ಟರಕ್ಷಕ-ದುಷ್ಟಶಿಕ್ಷಕ. ಆ ಕರ್ತವ್ಯವನ್ನು ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಜನಸ್ನೇಹಿ ಪೊಲೀಸ್ ವ್ಯವಸ್ಥೆ: ಜನಸ್ನೇಹಿ ಪೊಲೀಸ್ ಪರಿಕಲ್ಪನೆಯಡಿಯಲ್ಲಿ ಮೇಲಽಕಾರಿಗಳ ಸೂಚನೆಯಂತೆ ಎಸ್‌ಸಿಎಸ್ಟಿ ಮೀಟಿಂಗ್ಸ್, ಯೂತ್ ಕಮಿಟಿ ಮೀಟಿಂಗ್ಸ್‌ಗಳನ್ನು ಮಾಡುತ್ತಿದ್ದೇವೆ. ಇದರಲ್ಲಿ ಜನರು ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರೆ ಅವುಗಳನ್ನು ಸ್ವೀಕರಿಸಿ ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಬಗೆಹರಿಸಬಹುದೋ ಅಂತೆ ಬಗೆಹರಿಸುತ್ತೇವೆ. ಪೊಲೀಸ್ ಠಾಣೆಗಳಿಂದ ಶಾಂತಿಸಭೆಗಳನ್ನು ಡಿಸೆಂಟ್ರಲೈಸ್ ಮಾಡಿ ಒಂದು ಪ್ರದೇಶ, ಹಳ್ಳಿಯಲ್ಲಿ ಗ್ರಾಮಸಭೆಗಳನ್ನು ಮಾಡಿದಾಗ ಎಲ್ಲರೂ ಭಾಗವಹಿಸಬಹುದು. ಎಲ್ಲರಿಗೂ ತಿಳುವಳಿಕೆ ಉಂಟಾಗುತ್ತದೆ.

LEAVE A REPLY

Please enter your comment!
Please enter your name here