ಕೊಣಾಲು: ಕಾನೂನು ಮಾಹಿತಿ ಶಿಬಿರ, ನಿವೃತ್ತ ಯೋಧರಿಗೆ ಸನ್ಮಾನ

0

ನೆಲ್ಯಾಡಿ: ಕರ್ನಾಟಕ ಹಾಲು ಮಹಾಮಂಡಳಿ ಬೆಂಗಳೂರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಹಾಗೂ ಕೊಣಾಲು ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಆಶ್ರಯದಲ್ಲಿ ಕಾನೂನು ಮಾಹಿತಿ ಶಿಬಿರ ಸೆ.21ರಂದು ಕೊಣಾಲು ಆರ್ಲದಲ್ಲಿರುವ ಸಂಘದ ಆವರಣದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ನೋಟರಿ, ನ್ಯಾಯವಾದಿ ಎನ್.ಇಸ್ಮಾಯಿಲ್ ನೆಲ್ಯಾಡಿಯವರು ಮಹಿಳೆ ಮತ್ತು ಪೊಲೀಸ್ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ನೆಲ್ಯಾಡಿ ಹೊರಠಾಣೆಯ ಹೆಡ್‌ಕಾನ್ಸ್‌ಸ್ಟೇಬಲ್ ಬಾಲಕೃಷ್ಣರವರು ಮಹಿಳೆ ಮತ್ತು ಪೊಲೀಸ್ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ನಿವೃತ್ತ ಸೈನಿಕರಾದ ಸೆಬಾಸ್ಟಿಯನ್ ಉದನೆ, ಒ.ಜಿ.ನೈನಾನ್ ನೆಲ್ಯಾಡಿ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ, ದ.ಕ.ಸಹಕಾರಿ ಹಾಲು ಒಕ್ಕೂಟದ ಉಪವ್ಯವಸ್ಥಾಪಕಿ ಶ್ರುತಿಯವರು ಸಂದರ್ಭೋಚಿತವಾಗಿ ಮಾತನಾಡಿ, ಗ್ರಾಮದಲ್ಲಿನ ನಿವೃತ್ತ ಸೈನಿಕರನ್ನು ಗುರುತಿಸಿ ಸನ್ಮಾನಿಸಿರುವ ಕೊಣಾಲು-ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಣಾಲು ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್‌ರವರು ಮಾತನಾಡಿ, ಕೊಣಾಲು ಗ್ರಾಮದಲ್ಲಿ 21 ಮಂದಿ ಯೋಧರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಗ್ರಾಮದ ಹೆಮ್ಮೆಯಾಗಿದೆ. ದೇಶದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೊಣಾಲು ಗ್ರಾಮದ ನಿವಾಸಿಗಳಾಗಿದ್ದು ನಿವೃತ್ತರಾದ ಯೋಧರಿಗೆ ಸಂಘದ ವತಿಯಿಂದ ಸನ್ಮಾನ ಮಾಡುತ್ತಿದ್ದೇವೆ. ಗ್ರಾಮೀಣ ಭಾಗವಾದ ಕೊಣಾಲು ಗ್ರಾಮದಿಂದ ಇನ್ನಷ್ಟೂ ಮಂದಿ ಸೇನೆಗೆ ಸೇರಿ ದೇಶಸೇವೆ ಮಾಡುವಂತೆ ಆಗಬೇಕೆಂದು ಹೇಳಿದರು.

ಕೊಣಾಲು ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷೆ ಗಾಯತ್ರಿದೇವಿ, ನಿರ್ದೇಶಕಿಯರಾದ ಬೇಬಿ, ನೈಜಿ, ವಲ್ಸಮ್ಮ ಜೋಯಿ, ಲೀಲಾವತಿ, ವಾರಿಜಾಕ್ಷಿ, ಶಾಂತಿ ಮರಿಯ ಮೊಂತೆರೋ, ಲಿಸ್ಸಿ, ಸುಹಾಸಿನಿ, ಝಬೇದಾ, ಶೀಲಾ ವಿ., ಹಾಗೂ ಸಂಘದ ಸದಸ್ಯೆಯರು, ಗ್ರಾಮಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ದ.ಕ. ಸಹಕಾರಿ ಹಾಲು ಒಕ್ಕೂಟದ ಸಂಜೀವಿನಿ ಸ್ಟೆಪ್ ವಿಭಾಗದ ನಳಿನಿಯವರು ಸ್ವಾಗತಿಸಿ, ಸಂಘದ ಸಹಾಯಕಿ ಪ್ರಜಲ ವಂದಿಸಿದರು. ಹರ್ಷ ಆರ್ಲ ಕಾರ್ಯಕ್ರಮ ನಿರೂಪಿಸಿದರು. ಕೊಣಾಲು ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಾರ್ಯದರ್ಶಿ ಲೈನಾ ಜೋಬಿನ್, ಸಹಾಯಕಿ ಪ್ರಜಲ ಸಹಕರಿಸಿದರು.

ಸನ್ಮಾನ:

ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೊಣಾಲು ಗ್ರಾಮದವರಾದ ಬೇಬಿ, ರೆಜಿ, ಜಾರ್ಜ್, ಜೋಯ್, ಜೇಮ್ಸ್ ಒ.ಜೆ., ಮ್ಯಾಥ್ಯು, ಲಿಸ್ಸಿ, ತೋಮಸ್, ರೆಜಿಯವರ ಪರವಾಗಿ ರೆನ್ಸಿ ವರ್ಗೀಸ್‌ರವರನ್ನು ಈ ಸಂದರ್ಭದಲ್ಲಿ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಿವೃತ್ತ ಸೈನಿಕರಾದ ಒ.ಜಿ.ನೈನಾನ್ ನೆಲ್ಯಾಡಿ ಹಾಗೂ ಸೆಬಾಸ್ಟಿಯನ್ ಉದನೆಯವರನ್ನು ಸನ್ಮಾನಿಸಲಾಯಿತು. ಸನ್ಮಾನಿತರಾದ ಲಿಸ್ಸಿ, ಜಾರ್ಜ್‌ರವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here