ಕೊಣಾಲು-ಆರ್ಲ ಹಾ.ಉ.ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

2.88 ಲಕ್ಷ ರೂ.,ನಿವ್ವಳ ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಡ್ : ಉಷಾ ಅಂಚನ್

ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಕೊಣಾಲು-ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2021-22ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.21ರಂದು ಬೆಳಿಗ್ಗೆ ಸಂಘದ ವಠಾರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಉಷಾ ಅಂಚನ್‌ರವರು ಮಾತನಾಡಿ, 2015ರಲ್ಲಿ ಆರಂಭಗೊಂಡ ಸಂಘವು 7 ವರ್ಷ ಪೂರೈಸಿದ್ದು ವರ್ಷದಿಂದ ವರ್ಷಕ್ಕೆ ಲಾಭಗಳಿಕೆಯಲ್ಲಿ ಪ್ರಗತಿ ಸಾಧಿಸುತ್ತಿದೆ. 129 ಲೀ.ಹಾಲು ಸಂಗ್ರಹಣೆಯೊಂದಿಗೆ ಸಂಘವು ಆರಂಭಗೊಂಡಿತ್ತು. ಈಗ ಸಂಘದಲ್ಲಿ 154 ಸದಸ್ಯರಿದ್ದು 64,100 ರೂ.ಪಾಲು ಬಂಡವಾಳವಿದೆ. ವರದಿ ಸಾಲಿನಲ್ಲಿ ಸದಸ್ಯರಿಂದ 1,41,080.90 ಲೀ.ಹಾಲು ಖರೀದಿಸಿ 1,33,778.46 ಕೆ.ಜಿ.ಹಾಲು ಡೈರಿಗೆ ಮಾರಾಟ ಮಾಡಲಾಗಿದೆ. 11,199 ಲೀ.ಹಾಲು ಸ್ಥಳೀಯವಾಗಿ ಮಾರಾಟ ಆಗಿದೆ ಎಂದು ಹೇಳಿದ ಅವರು, 2021-22ನೇ ಸಾಲಿನಲ್ಲಿ ಸಂಘವು 2,88,112 ರೂ.,ನಿವ್ವಳ ಲಾಭಗಳಿಸಿದೆ. ಲಾಭವನ್ನು ಸಹಕಾರ ಸಂಘದ ನಿಬಂಧನೆಯಂತೆ ವಿಂಗಡಣೆ ಮಾಡಲಾಗಿದ್ದು ಸಂಘದ ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು. ಗುಣಮಟ್ಟದ ಆಧಾರದಲ್ಲಿ ಹಾಲಿನ ದರ ನಿಗದಿಯಾಗುವುದರಿಂದ ಸದಸ್ಯರು ಗುಣಮಟ್ಟದ ಹಾಲು ಸಂಘಕ್ಕೆ ಪೂರೈಕೆ ಮಾಡಬೇಕು. ಅದೇ ರೀತಿ ಸರಕಾರದಿಂದ ಬರುವ ಪ್ರೋತ್ಸಾಹಧನವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ ಉಷಾ ಅಂಚನ್‌ರವರು, ಮುಂದಿನ ದಿನಗಳಲ್ಲಿ ಸಂಘವು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಹಾಲು ಖರೀದಿ ಪ್ರಮಾಣ ಜಾಸ್ತಿ ಮಾಡುವ ನಿಟ್ಟಿನಲ್ಲಿ ಸಂಘದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಕುಟುಂಬದಿಂದಲೂ ಸಂಘಕ್ಕೆ ಹಾಲು ನೀಡುವ ನಿಟ್ಟಿನಲ್ಲಿ ಪ್ರೇರೇಪಿಸಲಾಗುವುದು. ಸಂಘದ ಅಭಿವೃದ್ಧಿಗೆ ಸದಸ್ಯರು ಸದಾ ಸಹಕಾರ ನೀಡಬೇಕೆಂದು ಹೇಳಿದರು.

ಅತಿಥಿಗಳಾಗಿದ್ದ ದ.ಕ.ಹಾಲು ಒಕ್ಕೂಟದ ಉಪವ್ಯವಸ್ಥಾಪಕಿ ಶ್ರುತಿ, ಒಕ್ಕೂಟದ ಸಂಜೀವಿನಿ ಸ್ಟೆಪ್ ವಿಭಾಗದ ನಳಿನಿಯವರು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಗುವ ಸವಲತ್ತುಗಳು, ಪ್ರಯೋಜನಗಳ ಕುರಿತು ಮಾಹಿತಿ ನೀಡಿ, ಕೊಣಾಲು ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಉಪಾಧ್ಯಕ್ಷೆ ಗಾಯತ್ರಿದೇವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕಿಯರಾದ ಬೇಬಿ, ನೈಜಿ, ವಲ್ಸಮ್ಮ ಜೋಯಿ, ಲೀಲಾವತಿ, ವಾರಿಜಾಕ್ಷಿ, ಶಾಂತಿ ಮರಿಯ ಮೊಂತೆರೋ, ಲಿಸ್ಸಿ, ಸುಹಾಸಿನಿ, ಝಬೇದಾ, ಶೀಲಾ ವಿ ಹಾಗೂ ಸಂಘದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕಿ ವಾರಿಜಾಕ್ಷಿ ಸ್ವಾಗತಿಸಿ, ಸಹಾಯಕಿ ಪ್ರಜಲ ವಂದಿಸಿದರು. ಕಾರ್ಯದರ್ಶಿ ಲೈನಾಜೋಬಿನ್ ವರದಿ ಮಂಡಿಸಿದರು. ನಯನ ಪ್ರಾರ್ಥಿಸಿದರು.

ಬಹುಮಾನ ವಿತರಣೆ:

2021-22ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. 9125 ಲೀ.ಹಾಲು ಸರಬರಾಜು ಮಾಡಿದ ಶಾಂತಿ ಮರಿಯ ಮೊಂತೆರೋ(ಪ್ರಥಮ), 6935 ಲೀ.ಹಾಲು ಸರಬರಾಜು ಮಾಡಿದ ಲಿಸ್ಸಿ, 6570 ಲೀ.ಹಾಲು ಸರಬರಾಜು ಮಾಡಿದ ನೈಜಿ(ದ್ವಿತೀಯ), 5840 ಲೀ.ಹಾಲು ಸರಬರಾಜು ಮಾಡಿದ ಜೋಸಿರೆಜಿ ಹಾಗೂ 5475 ಲೀ.ಹಾಲು ಸರಬರಾಜು ಮಾಡಿದ ಜೋಳಿ(ತೃತೀಯ)ಯವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಮೃತಪಟ್ಟ ಸಂಘದ ಸದಸ್ಯೆ ಆಲೀಸ್‌ರವರ ಕುಟುಂಬಕ್ಕೆ ಈ ಸಂದರ್ಭದಲ್ಲಿ ಧನ ಸಹಾಯ ನೀಡಲಾಯಿತು.

LEAVE A REPLY

Please enter your comment!
Please enter your name here