- ಸದನದಲ್ಲಿ ಶಾಸಕ ಸಂಜೀವ ಮಠಂದೂರು ಪ್ರಶ್ನೆಗೆ ಕಂದಾಯ ಸಚಿವರಿಂದ ಉತ್ತರ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಸ್ವಾಧೀನ ಹೊಂದಿರುವ ಕಾಣೆ, ಬಾಣೆ, ಕುಮ್ಕಿ, ಸೊಪ್ಪಿನ ಬೆಟ್ಟ, ಜಮೀನನ್ನು ಅವರಿಗೆ ಸಕ್ರಮೀಕರಣ ಮಾಡುವ ಕುರಿತು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯರನ್ನು ರಚಿಸಲಾಗಿದ್ದು, ಎಲ್ಲಾ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ವಿಧಾಸಭೆ ಅಧಿವೇಶನದಲ್ಲಿ ಶಾಸಕ ಸಂಜೀವ ಮಠಂದೂರು ಅವರ ಪ್ರಶ್ನೆಗೆ ಕಂದಾಯ ಸಚಿವ ಆರ್ ಅಶೋಕ್ ಅವರು ಉತ್ತರಿಸಿದ್ದಾರೆ.
ರೈತರು ಸ್ವಾಧೀನ ಹೊಂದಿ ಅನುಭವಿಸುತ್ತಿರುವ ಜಾಗಗಳನ್ನು ಅವರಿಗೆ ಸಕ್ರಮೀಕರಣ ಮಾಡುವ ಪ್ರಸ್ತಾವನೆ ಸರಕಾರದ ಯಾವ ಹಂತದಲ್ಲಿದೆ ಎಂದು ಸಂಜೀವ ಮಠಂದೂರು ಪ್ರಶ್ನಿಸಿದರು. ಈ ಕುರಿತು ಸಚಿವರು ಉತ್ತರಿಸಿ ಎಲ್ಲಾ ವಿಚಾರಗಳನ್ನು ವಿಶೇಷಾಧಿಕಾರಿಗಳು ಮುಂದುವರೆಸುತ್ತಾರೆ ಎಂದು ತಿಳಿಸಲಾಗಿತ್ತು. ಆದರೆ ಯಾವ ಕಾಲಮಿತಿಯೊಳಗೆ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಮತ್ತೊಮ್ಮೆ ಪ್ರಶ್ನಿಸಿದಾಗ ಜಮೀನುಗಳನ್ನು ಮಂಜೂರು ಮಾಡುವ ಕುರಿತು ಒಂದು ನೀತಿಯನ್ನು ರೂಪಿಸಲು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಸಮಿತಿ ತೀರ್ಮಾನದಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.