ಕೊಕ್ಕಡದಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ದೌರ್ಜನ್ಯ ಪ್ರಕರಣ; ಅಪರಾಧಿ ಪದ್ಮನಾಭನಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಕೋರ್ಟ್

0

ಪುತ್ತೂರು: ಕೊಕ್ಕಡದಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಕೊಕ್ಕಡದ ಕುಂಞ ಎಂಬವರ ಪುತ್ರ ಪದ್ಮನಾಭ ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ಪೋಕ್ಸೋ)ಎಫ್‌ಟಿಎಸ್‌ಸಿ ೧ ನ್ಯಾಯಾಲಯ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

೨೦೧೯ರ ಆಗಸ್ಟ್ ೧೭ರಂದು ಮಧ್ಯಾಹ್ನ ತನ್ನ ಶಾಲೆಯಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಯ ಕಡೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಎಂಬಲ್ಲಿಗೆ ತಲುಪಿದಾಗ ದಾರಿಯ ಬದಿಯಲ್ಲಿ ನಿಂತಿದ್ದ ಕೊಕ್ಕಡದ ಕುಂಞ ಎಂಬವರ ಪುತ್ರ ಪದ್ಮನಾಭ ಎಂಬಾತ ಅಪ್ರಾಪ್ತ ವಯಸ್ಕಳಾದ ನೊಂದ ಬಾಲಕಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಲೈಂಗಿಕ ಉದ್ದೇಶದಿಂದ ಆಕೆಯ ಮಾನಕ್ಕೆ ಕುಂದುಂಟಾಗುವಂತೆ ಆಕೆಯ ಕೈ ಹಿಡಿದು ಎಳೆದು ನೀನು ನನ್ನ ಜೊತೆ ಬಾ, ಏನೂ ಆಗುವುದಿಲ್ಲ ಎಂದು ಹೇಳಿದ್ದ. ಈ ವೇಳೆ ನೊಂದ ಬಾಲಕಿ ಹೆದರಿ ಆರೋಪಿತನ ಹಿಡಿತದಿಂದ ಕೊಸರಿ ಬಿಡಿಸಿಕೊಂಡು ತನ್ನ ಗೆಳತಿಯ ಮನೆಯ ಕಡೆಗೆ ಓಡಿ ಮನೆಯಲ್ಲಿದ್ದ ಗೆಳತಿಯನ್ನು ಕರೆದು ಆಕೆಯಲ್ಲಿ ವಿಷಯ ತಿಳಿಸಿದಾಗ ಆಕೆ ನೊಂದ ಬಾಲಕಿಯನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ ಅಲ್ಲಿದ್ದ ತನ್ನ ತಂದೆ ಜಮಾಲ್‌ರವರಿಗೆ ಘಟನೆ ಬಗ್ಗೆ ತಿಳಿಸಿದ್ದರು. ಈ ಸಮಯದಲ್ಲಿ ಪದ್ಮನಾಭ ನೊಂದ ಬಾಲಕಿಯನ್ನು ಹಿಂಬಾಲಿಸಿಕೊಂಡು ಅವಳ ಗೆಳತಿಯ ಮನೆಯ ಬಳಿ ಬಂದು ಗೆಳತಿಯ ತಂದೆ ಜಮಾಲ್‌ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹುಡುಗಿಯನ್ನು ನಿಮ್ಮ ಮನೆಗೆ ಯಾಕೆ ಸೇರಿಸಿಕೊಂಡೆ, ಅವಳನ್ನು ಹೊರಗೆ ಕಳುಹಿಸು ಎಂಬುದಾಗಿ ಹೇಳಿದ್ದ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆ ಪೂರ್ಣಗೊಳಿಸಿದ ಧರ್ಮಸ್ಥಳ ಪೊಲೀಸ್ ಠಾಣಾ ಎಸ್.ಐ. ಚಂದ್ರಶೇಖರ್ ಅವರು ಆರೋಪಿ ಪದ್ಮನಾಭನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿರವರು ಆರೋಪಿ ಪದ್ಮನಾಭನನ್ನು ಅಪರಾಧಿ ಎಂದು ಘೋಷಿಸಿ ಆತನಿಗೆ ಪೋಕ್ಸೋ ಕಾಯ್ದೆ ಕಲಂ ೧೨ರಡಿ ಅಪರಾಧಕ್ಕೆ ೩ ವರ್ಷ ಸಾಧಾರಣ ಶಿಕ್ಷೆ ಮತ್ತು ದಂಡ, ಐಪಿಸಿ ೩೫೪(ಡಿ)ರಡಿಯ ಅಪರಾಧಕ್ಕಾಗಿ ೩ ವರ್ಷ ಸಾಧಾರಣ ಶಿಕ್ಷೆ ಮತ್ತು ದಂಡ ಮತ್ತು ಐಪಿಸಿ ೩೪೧ರಡಿಯ ಅಪರಾಧಕ್ಕಾಗಿ ಒಂದು ವರ್ಷ ಸಾಧಾರಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.

ಎಸ್‌ಪಿಪಿ ಸಹನಾದೇವಿ ಸಮರ್ಪಕ ವಾದ ಮಂಡನೆ: 5 ಅಪರಾಧಿಗಳಿಗೆ ಶಿಕ್ಷೆ
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಐವರು ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಪೋಕ್ಸೋ) ಎಫ್‌ಟಿಎಸ್‌ಸಿ ೧ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜನಕಿ ಸಹನಾದೇವಿ ಗಮನ ಸೆಳೆದಿದ್ದಾರೆ. ವಿಶೇಷ ಸರಕಾರಿ ಅಭಿಯೋಜಕಿಯಾಗಿ ನೇಮಕಗೊಂಡ ಕೇವಲ ೮ ತಿಂಗಳ ಅವಧಿಯಲ್ಲಿ ಈವರೆಗೆ ಪೋಕ್ಸೋ ಪ್ರಕರಣದಡಿ ಆರೋಪ ಎದುರಿಸುತ್ತಿದ್ದ ಐವರು ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಸಹನಾದೇವಿ ಯಶಸ್ವಿಯಾಗಿದ್ದಾರೆ. ಮಂಗಳೂರಿನ ಬೋಳೂರು ನಿವಾಸಿಯಾಗಿರುವ ಸಹನಾದೇವಿಯವರ ಸಮರ್ಪಕ ದಾಖಲೆ, ಸಾಕ್ಷಿ ಸಂಗ್ರಹದೊಂದಿಗೆ ಉತ್ತಮಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿಸುವ ಮೂಲಕ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತವಾಗಿದೆ. ಸಹನಾದೇವಿಯವರ ಸಹೋದರಿ ಚೇತನಾದೇವಿಯವರು ಪುತ್ತೂರು ನ್ಯಾಯಾಲಯದಲ್ಲಿ ಎಪಿಪಿಯಾಗಿದ್ದಾರೆ.

LEAVE A REPLY

Please enter your comment!
Please enter your name here