ಪುತ್ತೂರು: ಎನ್.ಎಸ್.ಯು.ಐ ಪುತ್ತೂರು ಘಟಕವು ರಾಜ್ಯದಲ್ಲೇ ಪ್ರಥಮ ಬಾರಿಗೆ ಗ್ರಾಮಾಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಗ್ರಾಮಾಭಿಯಾನದ ಮೂಲಕ ಎನ್.ಎಸ್.ಯು.ಐ ಸದಸ್ಯತ್ವದ ಮೂಲಕ ಬಲಪಡಿಸುವುದು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಲ್ಲಿ ಸೌಹಾರ್ದತೆಯನ್ನು ಮೂಡಿಸುವ ಕಾರ್ಯ ಈ ಅಭಿಯಾನದ ಮೂಲಕ ನಡೆಯಲಿದೆ ಎಂದು ದ.ಕ ಜಿಲ್ಲಾ ಎನ್.ಎಸ್.ಯು.ಐ ಮುಖಂಡ ಬಾತೀಶ್ ಅಳಕೆಮಜಲು ಹೇಳಿದರು. ಅವರು ಸೆ.22ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಸ್ತುತ ಅನೇಕ ಕಾಲೇಜು ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿಗಳನ್ನು ಧರ್ಮದ ಧ್ರುವೀಕರಣದ ಮೂಲಕ, ಕೋಮು ಪ್ರಚೋದನೆಗಳ ಮೂಲಕ ಹಿಂದೂ, ಮುಸಲ್ಮಾನ, ಕ್ರಿಶ್ಚಿಯನ್ ವಿದ್ಯಾರ್ಥಿಗಳ ನಡುವೆ ಕಂದಕವನ್ನು ಏರ್ಪಡಿಸುವ ಸಂಘಟನೆಗಳನ್ನು ನಾವು ನೋಡಿರಬಹುದು ಆದರೆ ಎನ್.ಎಸ್.ಯು.ಐ ಇದಕ್ಕೆಲ್ಲಕ್ಕಿಂತ ಭಿನ್ನವಾಗಿ ಸೌಹಾರ್ದಯುತ ಸೇತುವೆಯನ್ನು ನಿರ್ಮಿಸಿ ಆ ಮೂಲಕ ಶಾಂತಿ ಮೂಡಿಸುವ ಕೆಲಸವನ್ನು ಕಾಲೇಜು ಕ್ಯಾಂಪಸ್ಗಳಲ್ಲಿ ಮಾಡುತ್ತಿದೆ. ಗ್ರಾಮಾಭಿಯಾನದಲ್ಲೂ ಈ ಕೆಲಸಗಳು ನಡೆಯಲಿದೆ’ ಎಂದರು.
ಎನ್.ಎಸ್.ಯು.ಐ ಪುತ್ತೂರು ಘಟಕದ ಅಧ್ಯಕ್ಷ ಚಿರಾಗ್ ರೈ ಮಾತನಾಡಿ ಪ್ರಸ್ತುತ ಕಾಲೇಜುಗಳಲ್ಲಿ ಹಿಂದೂ ಮುಸ್ಲಿಂ ಮುಂತಾದ ಮತೀಯ ಜಗಳಗಳು ಹೆಚ್ಚುತ್ತಿದೆ. ಆದ್ದರಿಂದ ಪ್ರತೀ ಕಾಲೇಜು ಹಾಗೂ ಗ್ರಾಮಗಳಲ್ಲಿ ಎನ್.ಎಸ್.ಯು.ಐ ಘಟಕವನ್ನು ನಿರ್ಮಿಸಿ ಅಲ್ಲಿ ಸೌಹಾರ್ದತೆಯ ಬಗ್ಗೆ ತಿಳಿಹೇಳುವ ಕೆಲಸವಾಗಲಿದೆ.ಪ್ರತೀ ಗ್ರಾಮದಲ್ಲಿ ಎನ್.ಎಸ್.ಯು.ಐ ಘಟಕ ರಚಿಸಿ ಅಲ್ಲಿನ ವಿದ್ಯಾರ್ಥಿಗಳ ಸಮಸ್ಯೆಗೆ ಧ್ವನಿಯಾಗಲಿದ್ದೇವೆ ಈ ನಿಟ್ಟಿನಲ್ಲಿ ನಾವು ಗ್ರಾಮಾಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಪುತ್ತೂರು ಎಸ್.ಎಸ್.ಯು.ಐ ಘಟಕದ ಕಾರ್ಯದರ್ಶಿ ಎಡ್ವರ್ಡ್ ಮಾತನಾಡಿ ‘ಎನ್.ಎಸ್.ಯು.ಐ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಸೆ.24ರಂದು ಸಂಜೆ 4ಗಂಟೆಗೆ ಇಡ್ಕಿದು ಗ್ರಾಮದಲ್ಲಿ ಬೃಹತ್ ಸದಸ್ಯತ್ವ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ನಡೆಸಲಿದ್ದೇವೆ.ಈ ಮೂಲಕ ವಿದ್ಯಾರ್ಥಿಗಳಲ್ಲಿ ಭ್ರಾತೃತ್ವ ಬೆಳೆಸುವ ಕಾರ್ಯವನ್ನು ಎನ್.ಎಸ್.ಯು.ಐ ಮುಂದಿನ ದಿನಗಳಲ್ಲಿ ಮಾಡಲಿದೆ’ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಎಸ್ ಯು.ಐ ಪುತ್ತೂರು ನಗರ ಕಾರ್ಯದರ್ಶಿ ಆಸ್ಟನ್ ಉಪಸ್ಥಿತರಿದ್ದರು.