ಬಂಟ್ವಾಳ: ಬೆಂಜನಪದವು ಕೆನರಾ ಇಂಜಿನೀಯರಿಂಗ್ ಕಾಲೇಜಿನ ಉನ್ನತ್ ಭಾರತ್ ಮತ್ತು ಎನ್ ಎಸ್ ಎಸ್ ಘಟಕ, ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ, ಲಯನ್ಸ್ ಕ್ಲಬ್ ಮಾಣಿ ಹಾಗೂ ಗ್ರಾಮ ಪಂಚಾಯತ್ ನೆಟ್ಲಮುಡ್ನೂರು ಇದರ ಜಂಟಿ ಆಶ್ರಯದಲ್ಲಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಣ್ಣಿನ ಫಲವತ್ತತೆ, ಜೈವಿಕ ಗೊಬ್ಬರದ ಬಳಕೆ ಹಾಗೂ ಕೃಷಿ ಯಂತ್ರೋಪಕರಣಗಳ ಕುರಿತು ಎರಡು ದಿನಗಳ ಮಾಹಿತಿ ಮತ್ತು ಕಾರ್ಯಗಾರ ಸೆ.22 ಮತ್ತು 23ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆನರಾ ಇಂಜಿನೀಯರಿಂಗ್ ಕಾಲೇಜಿನ ಮಾನ್ಯತಾ ವಿಭಾಗದ ಡೀನ್ ಡಾ. ವೆಂಕಟೇಶ್ ಎನ್, ಕೃಷಿಯಲ್ಲಿ ರೈತರ ಆದಾಯ ವೃದ್ಧಿಗೆ ತಂತ್ರಜ್ಞಾನದ ಜೊತೆಗೆ ಮಣ್ಣಿನ ಪೋಷಕಾಂಶ ಹೆಚ್ಚಿಸುವ ಅಗತ್ಯವಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಅಧ್ಯಕ್ಷ ಪುಷ್ಪರಾಜ್ ಚೌಟರವರು ರೈತರಿಗೆ ಇಂತಹ ಕಾರ್ಯಗಾರದ ಅಗತ್ಯವಿದ್ದು ಇದರಿಂದ ಅವರ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯಲು ಸಹಕಾರಿ ಆಗುತ್ತದೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸಲು ಜೈವಿಕ ಗೊಬ್ಬರದ ಅಗತ್ಯವಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಪಾರ್ಥ ವಾರಣಾಸಿ, ನಿರ್ದೇಶಕರು, ವಾರಣಾಸಿ ಅಭಿವೃದ್ಧಿ ಹಾಗೂ ಸಂಶೋಧನಾ ಘಟಕ ಅಡ್ಯನಡ್ಕ ಇವರು ಕಾರ್ಯಾಗಾರ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಪಿ ಉಮೇಶ್, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ವಾರಣಾಸಿ ಸಂಶೋಧನಾ ಘಟಕದ ವಿಜ್ಞಾನಿ ಡಾ. ನಿವೇದಿತಾ ಭಾಗವಹಿಸಿದ್ದರು. ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ಡಿ. ತನಿಯಪ್ಪ ಗೌಡ ಸ್ವಾಗತಿಸಿ ಲಯನ್ಸ್ ಕ್ಲಬ್ ಮಾಣಿ ಇದರ ಸದಸ್ಯ ಲಯನ್ ಕೂಸಪ್ಪ ಪೂಜಾರಿ ವಂದಿಸಿದರು. ಕೆನರಾ ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ನಿರಂಜನ್ ರೈ ಎಲ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
ಕೆನರಾ ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಸಂದೀಪ್ ಎಸ್ ಸೋಲಾರ್ ಡ್ರೆಯರ್ ಮತ್ತು ಜೇನು ತುಪ್ಪ ತೆಗೆಯುವ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ನಡೆಸಿದರು. ಸುಮಾರು 50 ರೈತರು ಇದರಲ್ಲಿ ಭಾಗವಹಿಸಿ, ಸೆ.23ರಂದು ವಾರಣಾಸಿ ಅಭಿವೃದ್ಧಿ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಕೆನರಾ ಇಂಜಿನೀಯರಿಂಗ್ ಕಾಲೇಜಿನ ಎನ್ಎಸ್ಎಸ್ ಘಟಕದ ಸಂಯೋಜಕರಾದ ನಾರಾಯಣಸ್ವಾಮಿ ಕಾರ್ಯಕ್ರಮ ಸಂಯೋಜಿಸಿದರು