ಭ್ರಷ್ಟಾಚಾರದ ದೂರುಗಳಿದ್ದಲ್ಲಿ ನೇರವಾಗಿ ನೀಡಬಹುದು-ಲೋಕಾಯುಕ್ತ ಎಸ್ಪಿ ಲಕ್ಷ್ಮಿಗಣೇಶ್

0

ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸಂಬಂಧಿಸಿ ಯಾವುದೇ ರೀತಿಯ ಭ್ರಷ್ಟಾಚಾರದ ದೂರುಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಲೋಕಾಯುಕ್ತಕ್ಕೆ ನೀಡಬಹುದು ಎಂದು ಮಂಗಳೂರು-ಉಡುಪಿ ವಿಭಾಗದ ಲೋಕಾಯುಕ್ತ ಎಸ್ಪಿ ಲಕ್ಷ್ಮಿಗಣೇಶ್ ಕೆ. ತಿಳಿಸಿದ್ದಾರೆ.

ದ.ಕ. ಮತ್ತು ಉಡುಪಿ ವಿಭಾಗದ ಲೋಕಾಯುಕ್ತ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿರುವ ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಸರಕಾರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದರೆ ಅಥವಾ ಗಳಿಕೆಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದರೆ ಅವರ ವಿರುದ್ಧ ದೂರು ಸಲ್ಲಿಸಿ ಪರಿಹಾರವನ್ನು ಸಾರ್ವಜನಿಕರು ಕಂಡುಕೊಳ್ಳಬಹುದು ಎಂದ ಅವರು ರಾಜ್ಯ ಸರಕಾರ ಕರ್ನಾಟಕ ಲೋಕಾಯುಕ್ತವನ್ನು ಮತ್ತಷ್ಟು ಬಲಷ್ಠ ಮಾಡಿದೆ, ಪೊಲೀಸ್ ಠಾಣಾ ಅಧಿಕಾರ ಜತೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ವಿಚಾರದಲ್ಲಿ ಹೆಚ್ಚಿನ ಕೆಲಸ ಮಾಡುವ ಅಧಿಕಾರ ನೀಡಿದೆ. ಯಾರಾದರೂ ಸರಕಾರಿ ಅಧಿಕಾರಿಗಳು ಕೆಲಸ ಮಾಡಿಸಿಕೊಳ್ಳಲು ಹಣ ಕೇಳುತ್ತಿದ್ದಾರೆ ಎಂದಾದರೆ ಅದು ಪಂಚಾಯತ್‌ನಿಂದ ಹಿಡಿದು ಜಿಲ್ಲಾಧಿಕಾರಿಗಳ ತನಕ ದೂರು ಕೊಟ್ಟರೆ ಅದರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು ಎಂದರು. ಲೋಕಾಯುಕ್ತದ ಮಂಗಳೂರು ವಿಭಾಗ ಎಂದರೆ ಮಂಗಳೂರು ಹಾಗೂ ಉಡುಪಿ ಜಿಲ್ಲೆ ಎರಡು ಕೂಡ ಜತೆಗೂಡುತ್ತದೆ. ಈಗಾಗಲೇ ಎಸಿಬಿಯಲ್ಲಿರುವ ಹಳೆಯ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವ ಕಾರ್ಯ ನಡೆಯುತ್ತಿದೆ. ವರ್ಗಾವಣೆಯಾದ ಬಳಿಕ ಇರುವ ಪ್ರಕರಣಗಳ ವಿರುದ್ಧ ತನಿಖೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈಗಾಗಲೇ ಮಂಗಳೂರು ವಿಭಾಗದಲ್ಲಿ ೨ ಡಿವೈಎಸ್ಪಿ ಹಾಗೂ ೧ ಇನ್ಸ್‌ಪೆಕ್ಟರ್ ಹುದ್ದೆ ಇದ್ದರೆ ೧ ಇನ್ಸ್‌ಪೆಕ್ಟರ್ ಹಾಗೂ ೬ ಪಿಸಿಗಳ ಹುದ್ದೆಗಳು ಖಾಲಿ ಉಳಿದಿದೆ. ಉಡುಪಿಯಲ್ಲಿ ೧ ಡಿವೈಎಸ್ಪಿ ಹಾಗೂ ೧ ಇನ್ಸ್‌ಪೆಕ್ಟರ್‌ಗಳಿದ್ದು ಇದರಲ್ಲಿ ೧ ಇನ್ಸ್‌ಪೆಕ್ಟರ್ ಹುದ್ದೆ ಖಾಲಿಯಿದೆ. ಈ ಖಾಲಿ ಇರುವ ಹುದ್ದೆಗಳು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದ ಲಕ್ಷ್ಮಿಗಣೇಶ್‌ರವರು ಲೋಕಾಯುಕ್ತಕ್ಕೆ ಈಗ ಹೆಚ್ಚಿನ ಅಧಿಕಾರ ನೀಡುವ ಜತೆಯಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಕಾಯಿದೆಯ ಹೊಣೆಗಾರಿಕೆ ಕೂಡ ಲೋಕಾಯುಕ್ತಕ್ಕೆ ಬಂದಿದೆ. ಪೊಲೀಸ್ ಠಾಣೆಯ ರೀತಿಯಲ್ಲಿ ಇನ್ನು ಮುಂದೆ ಲೋಕಾಯುಕ್ತ ಕಾರ್ಯಾಚರಣೆಯನ್ನು ನಡೆಸುತ್ತದೆ. ಭ್ರಷ್ಟಾಚಾರ ವಿರುದ್ದ ದೂರು ನೀಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಎಸಿಬಿಗಿಂತ ಮೊದಲು ಲೋಕಾಯುಕ್ತ ಇದ್ದಾಗ ಮಂಗಳೂರು ವಿಭಾಗದಲ್ಲಿ ೧೨ ಪ್ರಕರಣಗಳಿಗೆ ಶಿಕ್ಷೆ ವಿಧಿಸಲಾಗಿತ್ತು ಎಂದು ಮಾಹಿತಿ ನೀಡಿದರು. ಲೋಕಾಯುಕ್ತದ ಉಡುಪಿ ಡಿವೈಎಸ್ಪಿ ಜಗದೀಶ್, ಮಂಗಳೂರು ಡಿವೈಎಸ್ಪಿ ಚಲುವರಾಜು, ಕಲಾವತಿ, ಉಡುಪಿ ಪೊಲೀಸ್ ನಿರೀಕ್ಷಕರಾದ ಜಯರಾಮ ಡಿ. ಗೌಡ ಹಾಗೂ ಮಂಗಳೂರು ಪೊಲೀಸ್ ನಿರೀಕ್ಷಕ ಎನ್. ಅಮಾನುಲ್ಲಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here