ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ, ಪ್ರಶಸ್ತಿ ಪ್ರದಾನದ ಪೂರ್ವಭಾವಿ ಸಭೆ

0

ಕಾರಂತ ಪ್ರಶಸ್ತಿಗೆ ಒಂದೆರಡು ದಿನಗಳೊಳಗೆ ಹೆಸರು ಅಂತಿಮ-ಮಠಂದೂರು

ಪುತ್ತೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ| ಶಿವರಾಮ ಕಾರಂತ ಬಾಲವನ ಹಾಗೂ ಸಹಾಯಕ ಆಯುಕ್ತರ ಕಚೇರಿ ಪುತ್ತೂರು ಉಪವಿಭಾಗದ ವತಿಯಿಂದ ಅ. 10 ರಂದು ಪರ್ಲಡ್ಕ ಶಿವರಾಮ ಕಾರಂತ ಬಾಲವನದಲ್ಲಿ ನಡೆಯುವ ಡಾ| ಶಿವರಾಮ ಕಾರಂತ ಜನ್ಮ ದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ 2ನೇ ಪೂರ್ವಭಾವಿ ಸಭೆಯು ಸೆ.26ರಂದು ಸಹಾಯಕ ಆಯುಕ್ತರ ಸಭಾಂಗಣದಲ್ಲಿ ನಡೆಯಿತು.

ಡಾ| ಶಿವರಾಮ ಕಾರಂತರ ನೆನಪಿನಲ್ಲಿ ನೀಡುವ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಗೆ ಸಂಬಂಧಿಸಿದಂತೆ ಐದು ಮಂದಿಯ ಸಮಿತಿಯನ್ನು ಮಾಡಲಾಗಿದ್ದು, ಸಮಿತಿಯ ಸದಸ್ಯರಾದ ಡಾ| ವರದರಾಜ ಚಂದ್ರಗಿರಿ ಅವರು ಪ್ರಶಸ್ತಿಗೆಂದು ಆಯ್ಕೆ ಮಾಡಿದ್ದ ಮೂವರ ಹೆಸರುಗಳಿದ್ದ ಮುಚ್ಚಿದ ಲಕೋಟೆಯನ್ನು ಸಮಿತಿ ಅಧ್ಯಕ್ಷರಾದ ಶಾಸಕರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ನ್ಯಾಯವಾದಿ ಡಾ. ಪುರಂದರ ಭಟ್ ಅವರು, ಸಾಹಿತಿ, ನಾಟಕಕಾರ, ಸಂಘಟಕ, ನೀನಾಸಂನ ಕಲಾವಿದ ಕೆ.ವಿ. ಅಕ್ಷರ ಅವರ ಹೆಸರನ್ನು ಸೂಚಿಸಿ, ಪರಿಗಣಿಸುವಂತೆ ವಿನಂತಿಸಿದರು. ಹಿರಿಯ ಸಾಹಿತಿ ಪ್ರೊ| ವಿ.ಬಿ. ಅರ್ತಿಕಜೆ ಅದನ್ನು ಅನುಮೋದಿಸಿದರು. ಸಮಿತಿಯು ಮಾಡಿದ ಆಯ್ಕೆ ಹಾಗೂ ಇತರ ಮೂಲಗಳಿಂದ ಸೂಚಿಸಿದವರನ್ನು ತುಲನೆ ಮಾಡಿ ಪ್ರಶಸ್ತಿಗೆ ಆಯ್ಕೆ ಮಾಡುವುದು ಉತ್ತಮ ಎಂದು ಸುದಾನ ಶಾಲಾ ಸಂಚಾಲಕ ರೆ| ವಿಜಯ ಹಾರ್ವಿನ್ ತಿಳಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಹಿರಿಯ ಸಾಹಿತಿಗಳು, ನಿವೃತ್ತ ಪ್ರಾಧ್ಯಾಪಕರಾಗಿರುವ ವಿ.ಬಿ ಅರ್ತಿಕಜೆಯವರನ್ನು ಪ್ರಶಸ್ತಿ ಆಯ್ಕೆ ಮಾಡುವಂತೆ ಸೂಚಿಸಿದರು. ಸಮಿತಿ ಆಯ್ಕೆ ಮಾಡಿದವರನ್ನು ಹಾಗೂ ಇತರ ಮೂಲಗಳಿಂದಲೂ ಪ್ರಶಸ್ತಿಗೆ ಪ್ರಸ್ತಾಪಿಸಲ್ಪಟ್ಟವರ ಕುರಿತು ಚರ್ಚೆ ನಡೆಸಿ ಒಂದೆರಡು ದಿನಗಳಲ್ಲಿ ಅಂತಿಮಗೊಳಿಸುವುದಾಗಿ ಶಾಸಕರು ಸಭೆಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ದಿನವಿಡೀ ಕಾರ್ಯಕ್ರಮವನ್ನು ಜೋಡಿಸುವುದು, ಬೆಳಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಮಧ್ಯಾಹ್ನ ಗೋಷ್ಠಿ, ಉಪಹಾರದ ಬಳಿಕ ಯಕ್ಷಗಾನ, ಅನಂತರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾರಂತರ ರಂಗಭೂಮಿ ಸಾಧನೆ ಕುರಿತು ವಿಚಾರ ಮಂಡನೆ ನಡೆಯಲಿದ್ದು, ಗೋಷ್ಠಿಯ ಅಧ್ಯಕ್ಷರಾಗಿ ಪ್ರಾಧ್ಯಾಪಕ, ಸಾಹಿತಿ ಡಾ. ಎಚ್. ಶ್ರೀಧರ್ ಅಧ್ಯಕ್ಷತೆ ವಹಿಸುವುದು. ವಿಚಾರ ಮಂಡನೆಗೆ ಸಂಪನ್ಮೂಲ ವ್ಯಕ್ತಿಯನ್ನು ಆಯ್ಕೆ ಮಾಡುವುದು. ಕಾರಂತರ ಸಂದೇಶವಿರುವ ವೇದಿಕೆ ನಿರ್ಮಾಣ, ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಡಾ. ಶಿವರಾಮ ಕಾರಂತರು ಮೇರು ಸಾಹಿತಿ. ಪುತ್ತೂರು ಬಾಲವನ ಅವರ ಕರ್ಮಭೂಮಿಯೂ ಆಗಿರುವುದರಿಂದ ಅವರ ಜನ್ಮದಿನೋತ್ಸವ ರಾಜ್ಯಮಟ್ಟದಲ್ಲಿ ಬಿಂಬಿಸ್ಪಡುವ ಕಾರ್ಯಕ್ರಮವೂ ಆಗಬೇಕು. ಈ ನಿಟ್ಟಿನಲ್ಲಿ ಅವರ ಹೆಸರಿನ ಪ್ರಶಸ್ತಿಗೆ ಅರ್ಹರು ಮತ್ತು ಹಿರಿಯರು, ಸಮಾಜಮುಖಿಗಳು, ಸಾಧಕರೂ ಆಗಿರಬೇಕು. ಕಾರಂತರ ಜನ್ಮದಿನದ ಅಂಗವಾಗಿ ನಡೆಯುವ ಕಾರ್ಯಕ್ರಮ ಸಾಹಿತ್ಯ ಆಸಕ್ತರ ಕಾರ್ಯಕ್ರಮವಾಗಲಿ. ರಾಜ್ಯಕ್ಕೆ ಸಂದೇಶ ನೀಡುವ ಕಾರ್ಯಕ್ರಮವಾಗಿ ಮೂಡಿಬರಲಿ ಎಂದು ಹೇಳಿದರು.

ಸಹಾಯಕ ಆಯುಕ್ತ ಗಿರೀಶ್ ನಂದನ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಾಜೇಶ್, ತಹಶೀಲ್ದಾರ್ ನಿಸರ್ಗಪ್ರಿಯ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ಸದಸ್ಯೆ ದೀಕ್ಷಾ ಪೈ, ಪ್ರಮುಖರಾದ ಸವಣೂರು ಕೆ. ಸೀತಾರಾಮ ರೈ, ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ| ವರದರಾಜ್ ಚಂದ್ರಗಿರಿ, ಡಾ| ನರೇಂದ್ರ ರೈ ದೇರ್ಲ, ವಿಶ್ವನಾಥ ತೊಡಿಕಾನ, ಐತ್ತಪ್ಪ ನಾಯ್ಕ್, ಸಿಡಿಪಿಒ ಶ್ರೀಲತಾ, ಎಸಿಡಿಪಿಒ ಶಾಂತಿ ಟಿ. ಹೆಗ್ಡೆ, ಉಮೇಶ್ ನಾಯಕ್, ಡಾ| ಎಚ್. ಜಿ. ಶ್ರೀಧರ್, ವಿಜಯ ಹಾರ್ವಿನ್, ಡಾ| ಎಂ.ಕೆ. ಶ್ರೀಶ ಕುಮಾರ್, ತಾಲೂಕು ವೈದ್ಯಾಽಕಾರಿ ಡಾ. ದೀಪಕ್ ರೈ ಬಾಲವನದ ಅಶೋಕ್ ಮೊದಲಾದವರು ಭಾಗವಹಿಸಿ ಸಲಹೆಗಳನ್ನು ನೀಡಿದರು.

ಬಾಲವನ ಕಾರ್ಯಕ್ರಮ ಸಂಯೋಜಕ ಜಗನ್ನಾಥ ಅರಿಯಡ್ಕ ಸ್ವಾಗತಿಸಿ, ಸಂಯೋಜಕ ರಮೇಶ್ ಉಳಯ ವಂದಿಸಿದರು.

LEAVE A REPLY

Please enter your comment!
Please enter your name here