‘ಅಮೂಲ್ಯ ಸೇವೆಯನ್ನು ಸಮಾಜಕ್ಕೆ ಅರ್ಪಿಸಿದವರನ್ನು ಗುರುತಿಸುವುದೇ ಮಹತ್ ಕಾರ್ಯ’ ; 20ನೇ ವರ್ಷದ ಪುತ್ತೂರು ದಸರಾ ಮಹೋತ್ಸವದಲ್ಲಿ ಶಾಸಕ ಸಂಜೀವ ಮಠಂದೂರು

0

  • ಪ್ರೀತಂ ಪುತ್ತೂರಾಯರೊಂದಿಗೆ ಹಲವಾರು ವರ್ಷದಿಂದ ಆತ್ಮೀಯ ಸಂಬಂಧ ಇದೆ. -ರವಿಕುಮಾರ್
  • ಸರಕಾರಿ ಕಛೇರಿಗಳಲ್ಲಿ ಸರಕಾರವೇ ಲಂಚ, ಭ್ರಷ್ಟಾಚಾರದ ವಿರುದ್ಧದ ಫಲಕ ಹಾಕಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ.-ಡಾ.ಯು.ಪಿ.ಶಿವಾನಂದ
  • ಎಲ್ಲ ಮಾಧ್ಯಮ ಸಂಸ್ಥೆ ಗಳು ಈ ಕ್ಷೇತ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಬೇಕು- -ಪ್ರೀತಂ ಪುತ್ತೂರಾಯ

ಪುತ್ತೂರು:ಐಟಿಬಿಟಿ ಯುಗದಲ್ಲೂ, ಆಧುನಿಕ ಶೋಕಿ ಜೀವನದಲ್ಲೂ ಇವತ್ತು ಧರ್ಮದ ಬಗ್ಗೆ ಕಾಳಜಿ ಇಟ್ಟುಕೊಂಡು ಸಮಾಜ ಮುನ್ನಡೆಯುತ್ತಿದೆ. ಸಮಾಜಮುಖಿಯಾಗಿ ಧರ್ಮನಿಷ್ಠರಾಗಿ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸ ಪುತ್ತೂರು ದಸರಾ ವೇದಿಕೆಯ ಮೂಲಕ ನಡೆಯುತ್ತಿದೆ.ಅಮೂಲ್ಯ ಸೇವೆಯನ್ನು ಸಮಾಜಕ್ಕೆ ಅರ್ಪಿಸಿದವರನ್ನು ಗುರುತಿಸುವುದು ಮಹತ್ ಕಾರ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ, ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ 11 ದಿನಗಳು ನಡೆಯುವ ೨೦ನೇ ವರ್ಷದ ಪುತ್ತೂರು ದಸರಾ ಮಹೋತ್ಸವದಲ್ಲಿ ಅನ್ನಪೂರ್ಣ ಸಭಾ ಭವನದಲ್ಲಿ ಸೆ.26ರಂದು ಸಂಜೆ ನಡೆದ ಧಾರ್ಮಿಕ ಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇವತ್ತಿನ ಪೀಳಿಗೆ ಮತ್ತೊಮ್ಮೆ ಆರಾಧನೆ ಮಾಡುವ ಮೂಲಕ ಆರಾಧನೆಯ ಜೊತೆ ಹಿಂದೂ ಸಮಾಜವನ್ನು ಒಟ್ಟು ಮಾಡುವ ಕೆಲಸ ಆಗುತ್ತಿದೆ.ತುಳುನಾಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೂ ಮಹತ್ವ ಇದೆ.ಇಂತಹ ಸಂದರ್ಭದಲ್ಲಿ ದಸರಾ ಹಬ್ಬದ ವಿಶೇಷತೆಯ ಮೆರುಗು ಕಂಡಿದೆ ಎಂದವರು ಹೇಳಿದರು.

ಸುದ್ದಿ ಬಿಡುಗಡೆ ರಾಜ್ಯಮಟ್ಟದ ಪತ್ರಿಕೆಗಿಂತಲೂ ಹೆಚ್ಚು ಸುದ್ದಿ ನೀಡುವ ಪತ್ರಿಕೆ: ನ್ಯೂಸ್ ಫಸ್ಟ್ ಚಾನೆಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಕುಮಾರ್ ಅವರು ಮಾತನಾಡಿ, ಪುತ್ತೂರಿನಂತಹ ಸ್ಥಳದಲ್ಲಿ ಉತ್ತಮವಾಗಿ ಬೆಳೆದಿರುವ ಸುದ್ದಿ ಬಿಡುಗಡೆ ಪತ್ರಿಕೆ ಯಾವ ರಾಜ್ಯಮಟ್ಟದ ಪತ್ರಿಕೆಗೂ ಕಡಿಮೆ ಇಲ್ಲ.ಬಹುತೇಕ ರಾಜ್ಯಮಟ್ಟದ ಪತ್ರಿಕೆಗಳು 8 ರಿಂದ 10 ಪುಟ ಮಾಡಲು ಕಷ್ಟ ಎಂದು ಹೇಳುತ್ತಾರೆ. ಅಂತಹದರಲ್ಲಿ ಪುತ್ತೂರಿನ ಸುದ್ದಿ ಪತ್ರಿಕೆ ಅದಕ್ಕಿಂತಲೂ ಹೆಚ್ಚು ಪುಟ ನೀಡುವ ಮೂಲಕ ರಾಜ್ಯಮಟ್ಟದ ಪತ್ರಿಕೆಗಿಂತ ಹೆಚ್ಚು ಸುದ್ದಿಯನ್ನು ಕವರ್ ಮಾಡುತ್ತಿದ್ದಾರೆ.ಇಂತಹ ಪತ್ರಿಕೆ ಬೇರೆ ಬೇರೆ ಜಿಲ್ಲೆಗಳಲ್ಲೂ ಇರಬೇಕಾದ ಅವಶ್ಯಕತೆ ಇದೆ ಎಂದು ಪತ್ರಿಕೆಯ ಪ್ರಧಾನ ಸಂಪಾದಕ ಡಾ. ಯು.ಪಿ.ಶಿವಾನಂದ ಅವರಿಗೆ ಅಭಿನಂದನೆ ಸಲ್ಲಿಸಿದರು.ಜೊತೆಗೆ, ಕಹಳೆ ನ್ಯೂಸ್ ಶ್ಯಾಮಸುದರ್ಶನ್ ಅವರ ಕಾರ್ಯಪ್ರವೃತ್ತಿಯೂ ಉತ್ತಮ ಸುದ್ದಿ ಬಿತ್ತರಿಸುವ ಮೂಲಕ ಮಹತ್ವದ ಪಾತ್ರ ನೀಡುತ್ತಿದೆ ಎಂದ ಅವರು ಇವತ್ತು ಪ್ರಮುಖ ಘಟನೆಗಳನ್ನು ಮಾತ್ರ ಲೈವ್ ಮಾಡುವ ರಾಜ್ಯಮಟ್ಟದ ಚಾನೆಲ್‌ಗಳಿಗಿಂತಲೂ ನಾಲ್ಕು ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಮಂದಿಯ ತಂಡವನ್ನು ಇಟ್ಟು ಕೊಂಡು ಸುದ್ದಿ ಮಾಡುವ ಜೊತೆಗೆ ಲೈವ್ ಮಾಡುವ ಕಹಳೆಯ ಕೆಲಸ ಶ್ಲಾಘನೀಯ ಎಂದರು.

ಊರಿನ ಜನರಿಂದ ಗುರುತಿಸಿಕೊಳ್ಳುವುದು ಆತ್ಮೀಯತೆ ಬೆಳೆಸುತ್ತದೆ:

ಗೌರವ ಸಮರ್ಪಣೆ ಸ್ವೀಕರಿಸಿದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ ಮಾಧ್ಯಮದ ಎಲ್ಲಾ ಆಯಾಮಗಳಲ್ಲೂ ನಾವು ಇದ್ದೇವೆ. ಪುತ್ತೂರಿನ ಜನ ಗುರುತಿಸುವಾಗ ನಾವು ಗುರುತಿಸಿಕೊಳ್ಳಲು ಇಷ್ಟ ಪಡುತ್ತೇವೆ.ಯಾಕೆಂದರೆ ಪುತ್ತೂರಿನ ಜನ ನಮ್ಮನ್ನು ಮೆಚ್ಚಿ ಗುರುತಿಸುವ ಕಾರ್ಯಕ್ರಮ.ಹಾಗಾಗಿ ಈ ಗೌರವ ನನ್ನದಲ್ಲ. ನನ್ನ ಕೆಲಸವನ್ನು ಗುರುತಿಸಿ ನೀಡಿದ ಗೌರವ ಹಾಗಾಗಿ ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದರು.ಸುದ್ದಿ ಹಲವು ಆಯಾಮದಲ್ಲಿ ಕೆಲಸ ಮಾಡಿದೆ.ಬಲಾತ್ಕಾರದ ಬಂದ್ ವಿಚಾರ ಬಂದ್, ಸಾಮಾಜಿಕ ಜಾಲತಾಣದ ವಿಚಾರ ಬಂದಾಗ ಹಲವು ಆಯಾವನ್ನು ಎದುರಿಸಿದ್ದೇವೆ. ಈ ಅಭಿಯಾನಕ್ಕೆ ಪುತ್ತೂರಿನ ಜನ ಬೆಂಬಲ ನೀಡಿದ್ದಾರೆ. ಇತ್ತೀಚೆಗೆ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಆಂದೋಲನ ಕಳೆದ ಒಂದು ವರ್ಷದಿಂದ ನಡೆಸುತ್ತಿದ್ದೇವೆ.ಪ್ರತಿ ಮನೆಯಲ್ಲಿ ಈ ಫಲಕವನ್ನು ಅಳವಡಿಸುವ ಆಂದೋಲನ ಮಾಡಿದ್ದೇವೆ. ಇವತ್ತು ಸರಕಾರವೇ ಕಚೇರಿಗಳಲ್ಲಿ ಲಂಚ ಭ್ರಷ್ಟಾಚಾರದ ವಿರುದ್ಧ ಫಲಕ ಹಾಕಿಸುತ್ತಿರುವುದು ನನಗೆ ಸಿಗುವ ದೊಡ್ಡ ಸನ್ಮಾನ.ನಾವು ಮಾಡುವ ಕೆಲಸವನ್ನು ಪುತ್ತೂರಿನ ಜನರು ಗೌರವಿಸಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಡಾ.ಶಿವಾನಂದ್ ಹೇಳಿದರು.

ಸುದ್ದಿ ಬಿಡುಗಡೆ ಮಾದರಿ ಪತ್ರಿಕೆ:

ಚಲನಚಿತ್ರ ನಟ ಸುರೇಶ್ ರೈ ಸುಳ್ಯಪದವು ಅವರು ಮಾತನಾಡಿ ಕೋವಿಡ್‌ನಲ್ಲಿ ಮುಖಮುಚ್ಚಿ ಮಾಡಿದ ಕಾರ್ಯಕ್ರಮ ಇವತ್ತು ಕೋವಿಡ್ ಬಳಿಕ ಮುಖ ಬಿಚ್ಚಿ ಮಾಡಲು ಅವಕಾಶ ಸಿಕ್ಕಿದೆ.ಇದರ ಜೊತೆಗೆ ಧರ್ಮದ ಕಡೆ ಒಲವು ಕೂಡಾ ಎಲ್ಲರಿಗೂ ಹೆಚ್ಚಾಗಿದೆ. ಇದಕ್ಕೆ ಮೂಲ ಕಾರಣ ಕೋವಿಡ್ ಎಂದರು.ಪುತ್ತೂರಿನಲ್ಲಿ ನಮ್ಮ ಊರಿನ ತಾಜಾ ವರದಿ ನೀಡುವ ಪತ್ರಿಕೆ ಸುದ್ದಿ ಬಿಡುಗಡೆ ಒಂದು ಮಾದರಿ ಪತ್ರಿಕೆಯಾಗಿದೆ. ಅದೇ ರೀತಿ ಕಹಳೆ ನ್ಯೂಸ್ ತಕ್ಷಣದ ತುಳುನಾಡ ಮಾಹಿತಿ ನೀಡುತ್ತಿದೆ ಎಂದವರು ಹೇಳಿದರು.

ಪುತ್ತೂರಿನ ದಸರಾ ಮಹೋತ್ಸವ ಅರ್ಥಪೂರ್ಣವಾಗಿದೆ:

ಕಹಳೆ ನ್ಯೂಸ್ ಚಾನೆಲ್‌ನ ಸಂಪಾದಕ ಶ್ಯಾಮ ಸುದರ್ಶನ್ ಹೊಸಮೂಲೆ ಅವರು ಮಾತನಾಡಿ ಮೈಸೂರು, ಮಂಗಳೂರು, ಮಡಿಕೇರಿಯಲ್ಲಿ ವಿಜ್ರಂಭಣೆಯಿಂದ ದಸರಾ ಮಹೋತ್ಸವ ನಡೆಯುತ್ತದೆ. ಆದರೆ ಪುತ್ತೂರಿನಲ್ಲಿ ವಿಜ್ರಂಭಣೆಯಿಲ್ಲದಿದ್ದರೂ ಅರ್ಥಪೂರ್ಣ ಮತ್ತು ಶ್ರದ್ದೆಯಿಂದ ನಡೆಯುತ್ತಿದೆ ಎಂದು ಹೇಳಿದರು.

ಗೌರವ ಸನ್ಮಾನ:

ಲಂಚ, ಭ್ರಷ್ಟಾಚಾರದ ವಿರುದ್ಧದ ಹೋರಾಟ, ಬಲಾತ್ಕಾರದ ಬಂದ್, ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಹೋರಾಟ ಸೇರಿದಂತೆ ಪತ್ರಿಕಾ ಮಾಧ್ಯಮದ ಮೂಲಕ ಸಾಮಾಜಿಕ ಕಳಕಳಿ ಹೊಂದಿರುವ ಮತ್ತು ಸಮಾಜವನ್ನು ಜಾಗೃತಗೊಳಿಸುವ ಕೆಲಸಕ್ಕೆ ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರನ್ನು ನವದುರ್ಗರಾಧಾನಾ ಸಮಿತಿ ಪುತ್ತೂರು ಇದರ ಸಮಿತಿಯಿಂದ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನ್ಯೂಸ್ ಫಸ್ಟ್ ಚಾನೆಲ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಚಲನಚಿತ್ರ ನಟ ಸುರೇಶ್ ರೈ, ತುಳು ಚಲನಚಿತ್ರ ನಟಿ ನಿರೀಕ್ಷಾ ಶೆಟ್ಟಿ ಮತ್ತು ಮಡಿಕೇರಿಯ ಮಾಯಾ ಜಾದುಗಾರ್ ವಿಕ್ರಂ ಶೆಟ್ಟಿಯವರನ್ನು ಗೌರವಿಸಲಾಯಿತು.ಪುತ್ತೂರು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಕಾರ್ಯಾಧ್ಯಕ್ಷ ಯು.ಲೋಕೇಶ್ ಹೆಗ್ಡೆ ವಂದಿಸಿದರು. ಸಮಿತಿ ಕೋಶಾಽಕಾರಿ ಉದಯ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.ಮಂಜಪ್ಪ ರೈ ಬಾರಿಕೆ, ಸಂಘಟನಾ ಕಾರ್ಯದರ್ಶಿ ರಾಜೇಶ್ ಬನ್ನೂರು, ಜಯಂತ ಶೆಟ್ಟಿ ಕಂಬಳತ್ತಡ್ಡ, ಜೊತೆ ಕಾರ್ಯದರ್ಶಿ ಉಮೇಶ್ ಎಸ್.ಕೆ, ಕೋಶಾಧಿಕಾರಿ ಕೃಷ್ಣಪ್ಪ ಕೆ, ಸಾಂಸ್ಕೃತಿಕ ಸಮಿತಿಯ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಪುತ್ತೂರಿನ ಮಣ್ಣಿಗೆ ಪರೋಪಕಾರದ ಗುಣವಿದೆ. ಈ ಮಣ್ಣಿನ ದೇವರಲ್ಲಿ ಏನೋ ವಿಶೇಷ ಇದೆ. ಯಾಕೆಂದರೆ ಕೋವಿಡ್ ಸಂದರ್ಭದಲ್ಲಿ ನಮ್ಮ ಚಾನೆಲ್ ಆರಂಭಗೊಂಡಿತ್ತು. ಆಗ ಇದೇ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮತ್ತು ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಮಾಡಿದ್ದೆ. ಅದಾದ ಬಳಿಕ ನಮ್ಮ ಚಾನೆಲ್ 2 ವರ್ಷ ಯಶಸ್ವಿಯಾಗಿ ಪೂರೈಸಿದೆ.2 ವರ್ಷದ ಬಳಿಕ ಮತ್ತೆ ಪುತ್ತೂರು ಕ್ಷೇತ್ರಕ್ಕೆ ಭೇಟಿ ಮಾಡುವ ಅವಕಾಶ ಪುತ್ತೂರು ದಸರಾದ ಮೂಲಕ ಪ್ರಾಪ್ತಿಯಾಗಿದೆ. ಹಾಗಾಗಿ ಶಕ್ತಿ ಇಲ್ಲದೆ ಏನೂ ಇಲ್ಲ. 

ರವಿ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನ್ಯೂಸ್ ಫಸ್ಟ್ ಚಾನೆಲ್

20ನೇ ವರ್ಷಕ್ಕೆ 20 ಸಾಧಕರಿಗೆ ಗೌರವ

ಪುತ್ತೂರು ದಸರಾ ಮಹೋತ್ಸವ ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಆರಂಭಿಸಿ ಕಳೆದ 6 ವರ್ಷಗಳಿಂದ ಸಂಪ್ಯ ಶ್ರೀ ಕ್ಷೇತ್ರದಲ್ಲಿ ಪುತ್ತೂರು ದಸರಾ ಮಹೋತ್ಸವ ಆಚರಿಸಲಾಗುತ್ತಿದೆ. ಒಟ್ಟು 20 ವರ್ಷಗಳ ಈ ಆಚರಣೆಯಲ್ಲಿ 20 ಮಂದಿ ಆಯಾ ಕ್ಷೇತ್ರದ ಉತ್ತಮ ಸಾಧಕರನ್ನು ಗೌರಿವಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ ಎಂದರು. ಸಭೆಯ ಕೊನೆಯಲ್ಲಿ ವೇದಿಕೆಯಲ್ಲಿದ್ದ ಮೂರು ಮಾಧ್ಯಮ ಸಂಸ್ಥೆಗಳನ್ನು ಉದ್ಧೇಶಿಸಿ ಈ ಕ್ಷೇತ್ರದಲ್ಲಿ ಎಲ್ಲಾ ಮಾಧ್ಯಮದವರನ್ನು ಸೇರಿಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಕರೆ ನೀಡಿದರು.

LEAVE A REPLY

Please enter your comment!
Please enter your name here