ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಗುಂಡ್ಲುಪೇಟೆಗೆ ತೆರಳಲಿರುವ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು

0

  • ಸೆ.30ರಂದು ಕರ್ನಾಟಕಕ್ಕೆ ಪ್ರವೇಶಿಸಲಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ

ಪುತ್ತೂರು: ‘ರಾಹುಲ್ ಗಾಂಧಿಯವರು ಭಾರತದಲ್ಲಿನ ಪ್ರಕ್ಷುಬ್ಧ ವಾತಾವರಣವನ್ನು ಮನಗೊಂಡು ಜನರಲ್ಲಿ ಐಕ್ಯತೆ ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಜಾಥಾವನ್ನು ನೂರೈವತ್ತು ದಿನಗಳಲ್ಲಿ ಕ್ರಮಿಸುವ ಕಾರ್ಯ ಕೈಗೊಂಡಿದ್ದಾರೆ. ಈ ಯಾತ್ರೆ ಸೆ.30ರಂದು ಕರ್ನಾಟಕ ಪ್ರವೇಶಿಸಲಿದ್ದು 22 ದಿನಗಳ ಕಾಲ ಕರ್ನಾಟಕದ ಮೂಲಕ ಈ ಯಾತ್ರೆ ಮುಂದುವರೆಯಲಿದೆ. ಸೆ.30ರಂದು ಗುಂಡ್ಲುಪೇಟೆಗೆ ಭಾರತ್ ಜೋಡೋ ಯಾತ್ರೆ ಆಗಮಿಸಲಿದ್ದು ಪುತ್ತೂರು ಬ್ಲಾಕ್ ನಿಂದ 15 ಬಸ್‌ಗಳಲ್ಲಿ ಸುಮಾರು 700ರಷ್ಟು ಕಾರ್ಯಕರ್ತರು ತೆರಳಲಿದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ಗುಂಡ್ಲುಪೇಟೆಯ ಅಂಬೇಡ್ಕರ್ ಭವನದಿಂದ ಬೇಗೂರಿನವರೆಗೆ 25 ಕಿ.ಮೀನಷ್ಟು ದೂರ ಭಾರತ್ ಜೋಡೋ ಯಾತ್ರೆಯಲ್ಲಿ ಸೇರಿಕೊಳ್ಳಲಿದ್ದೇವೆ” ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ.ರೈ ಹೇಳಿದರು.

 

ಅವರು ಸೆ.28ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಪ್ರಸ್ತುತ ದೇಶದಲ್ಲಿರುವ ನಿರುದ್ಯೋಗ, ಬೆಲೆಯೇರಿಕೆ, ಹೆಂಗಸರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಜಾತಿ-ಜಾತಿ ಹಾಗೂ ಧರ್ಮ-ಧರ್ಮಗಳ ಮಧ್ಯೆ ನಡೆಯುತ್ತಿರುವ ವೈಷಮ್ಯಗಳಂತಹ ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಜಾತ್ಯಾತೀತ ನೆಲೆಕಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಮುನ್ನಡೆಯಬೇಕಿದೆ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ.

150 ದಿನಗಳ ಕಾಲ 3570 ಕಿ.ಮೀ ಯಾತ್ರೆ ಸಾಗಿಬರಲಿದೆ.ದಿನನಿತ್ಯ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುವ ಯಾತ್ರೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಅವರೊಂದಿಗೆ 200 ಜನರ ತಂಡ ಯಾತ್ರೆಯಲ್ಲಿ ಭಾಗವಹಿಸಲಿದೆ.ಅವರೊಂದಿಗೆ ರಾಜ್ಯ ಹಾಗೂ ಸ್ಥಳೀಯ ನಾಯಕರು,ಕಾರ್ಯಕರ್ತರು ಪ್ರತಿನಿತ್ಯ ಸಾಗರೋಪಾದಿಯಲ್ಲಿ ಸೇರಿಕೊಳ್ಳುತ್ತಿದ್ದಾರೆ.ಸ್ಥಳೀಯ ಪ್ರಮುಖರೊಂದಿಗೆ ಚರ್ಚೆಯೂ ನಡೆಯುತ್ತದೆ.ಅದರಂತೆ ಸೆ.30ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ತಂಡವೂ ಯಾತ್ರೆಯಲ್ಲಿ ಪಾಲ್ಗೊಳ್ಳಲಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ವಕ್ತಾರ ಅಮಳ ರಾಮಚಂದ್ರ,ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ,ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಶ್ ಮಸ್ಕರೇನಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here