ಬೆಂಗಳೂರು ಪೂರ್ವ ತಹಸೀಲ್ದಾರ್ ಅಜಿತ್ ರೈ ಸೊರಕೆ ಕಚೇರಿಗೆ ಉಪ ಲೋಕಾಯುಕ್ತ ದಾಳಿ-ಕಡತ ವಶ

0

ಬೆಂಗಳೂರು:ಬೆಂಗಳೂರು ಪೂರ್ವ ತಾಲೂಕು ತಹಸಿಲ್ದಾರ್ ಆಗಿರುವ ಕೆಯ್ಯೂರು ಗ್ರಾಮದ ಅಜಿತ್ ರೈ ಸೊರಕೆ ಕಚೇರಿಗೆ ಉಪಲೋಕಾಯುಕ್ತ ನ್ಯಾ|ಫಣೀಂದ್ರ ಅವರ ನೇತೃತ್ವದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.ದಾಳಿ ಸಂದರ್ಭ ಅಜಿತ್ ರೈಯವರು ಕಚೇರಿಯಲ್ಲಿರಲಿಲ್ಲ. ಅವರ ಕಚೇರಿಗೆ ಸಂಬಂಧಪಟ್ಟ ಕಡತಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ನ್ಯಾ|ಫಣೀಂದ್ರ ಹಾಗೂ ಅಧಿಕಾರಿಗಳು ಬೆಂಗಳೂರು ಪೂರ್ವ ತಾಲೂಕು ಕಚೇರಿಗೆ ದಾಳಿ ನಡೆಸಿದ್ದರು.ಆದರೆ ಆ ವೇಳೆಗೆ ತಹಸೀಲ್ದಾರ್ ಅಜಿತ್ ರೈ ಸೊರಕೆ ಹಾಗೂ ವಿಶೇಷ ತಹಸೀಲ್ದಾರ್ ಸ್ಥಳದಲ್ಲಿ ಇರಲಿಲ್ಲ.ಅವರನ್ನು ರಾತ್ರಿ ವೇಳೆಗೆ ಕರೆಸಿಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.ತಹಸೀಲ್ದಾರ್ ಕೊಠಡಿ ಸೇರಿದಂತೆ ಎಲ್ಲಾ ವಿಭಾಗಗಳ ದಾಖಲೆಗಳನ್ನು ಲೋಕಾಯುಕ್ತ ಅಽಕಾರಿಗಳು ಪರಿಶೀಲನೆ ನಡೆಸಿದರು.ಅಲ್ಲದೇ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡರು.

ಸಾರ್ವಜನಿಕರ ದೂರು: ಕಡತಗಳು ವಿಲೇವಾರಿ ಆಗುತ್ತಿಲ್ಲ.ಪ್ರತಿ ಕಡತಗಳಿಗೂ ಲಂಚದ ಬೇಡಿಕೆ ಇಡುತ್ತಿದ್ದಾರೆ.ಲಂಚ ನೀಡಿದರೆ ಮಾತ್ರ ಕಡತಗಳು ವಿಲೇವಾರಿ ಆಗುತ್ತಿವೆ ಎಂದು ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಪರಿಶೀಲನೆ ಸಂದರ್ಭ ಸಾರ್ವಜನಿಕ ಅಹವಾಲು: ಒಂದೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಕಾರ್ಯಾಚರಣೆ ನಡೆಸುತ್ತಿದ್ದರೆ, ಇನ್ನೊಂದೆಡೆ ಸಾರ್ವಜನಿಕರು ತಹಸೀಲ್ದಾರ್ ಹಾಗೂ ತಾಲೂಕು ಕಚೇರಿ ಸಿಬ್ಬಂದಿಗಳ ವಿರುದ್ಧ ದೂರಿನ ಸುರಿಮಳೆಗೈದರು.ಇಲ್ಲಿ ಯಾವುದೇ ಕೆಲಸ ಆಗಬೇಕೆಂದರೂ ಹಣ ನೀಡಲೇಬೇಕು.ಮೊನ್ನೆಯಷ್ಟೇ ಖಾತಾ ತಿದ್ದುಪಡಿ ವಿಚಾರವಾಗಿ 10 ಸಾವಿರ ರೂ. ಲಂಚ ನೀಡಿದ್ದೇನೆ ಎಂದು ಸಾರ್ವಜನಿಕರೊಬ್ಬರು ಲೋಕಾಯುಕ್ತ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು ಪೂರ್ವ ತಾಲೂಕು ತಹಸಿಲ್ದಾರ್ ಕಚೇರಿಯಲ್ಲಿ ನಿಗದಿತ ವೇಳೆಯಲ್ಲಿ ಯಾವುದೇ ಕಡತಗಳನ್ನು ವಿಲೇವಾರಿ ಮಾಡುತ್ತಿಲ್ಲ, ಖಾತಾ, ಭೂ ಪರಿವರ್ತನೆ ಮಾಡಲು ಹಣದ ಬೇಡಿಕೆ ಅಲ್ಲದೇ ಸಿಬ್ಬಂದಿಗಳ ಕೊರತೆ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಬಂದಿದ್ದವು. ಕಚೇರಿಯ ಎಲ್ಲಾ ವಿಭಾಗದ ಕಡತಗಳನ್ನು ಪರಿಶೀಲಿಸಲಾಗಿದ್ದು ಎಲ್ಲವನ್ನೂ ಲೋಕಾಯುಕ್ತರ ಮುಂದಿಡಲಾಗುವುದು, ತದನಂತರ ಲೋಕಾಯುಕ್ತರು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ನ್ಯಾ|ಫಣೀಂದ್ರ, ಉಪಲೋಕಾಯುಕ್ತರು

LEAVE A REPLY

Please enter your comment!
Please enter your name here